ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ
ಬೆಂಗಳೂರು ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳವಾಗಿದ್ದು, ಪಾಲಕರು ಶುಲ್ಕ ನಿಯಂತ್ರಣ ಬೇಕೆನ್ನುತ್ತಿದ್ದಾರೆ. ಈ ಕುರಿತು ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿ ಪರಿಹಾರ ಒದಗಿಸುವಂತೆ ಆಗ್ರಹಿಸತೊಡಗಿದ್ದಾರೆ. ಇದಾವುದೂ ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಕೈಕಟ್ಟಿ ಕುಳಿತ ಸರ್ಕಾರ ಪಾಲಕರ ಅಸಮಾಧಾನದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಿದೆ. ಈ ವಿದ್ಯಮಾನದ10 ಮುಖ್ಯ ಅಂಶಗಳು.
ಬೆಂಗಳೂರು: ಹೊಸ ಶೈಕ್ಷಣಿಕ ವರ್ಷ ಇನ್ನೇನು ಶುರುವಾಗುತ್ತಿದೆ. ಶಾಲಾ ಮಕ್ಕಳ ಮರುಪ್ರವೇಶಾತಿ ನಡೆಯುತ್ತಿದ್ದು, ಖಾಸಗಿ ಶಾಲೆಗಳಲ್ಲಿ ಶುಲ್ಕ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆ ಶಾಲಾ ಮಕ್ಕಳ ಪಾಲಕರು ಚಿಂತಿತರಾಗಿದ್ದಾರೆ. ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಎಸ್‌ಎಸ್‌ಎಲ್‌ಸಿ ಬೋರ್ಡ್‌ಗೆ ಸಂಯೋಜಿತವಾಗಿರುವ ಖಾಸಗಿ ಶಾಲೆಗಳಲ್ಲಿ, ಒಂದೇ ಕಂತಿನಲ್ಲಿ ಶುಲ್ಕ ಪಾವತಿಸುವಂತೆ ಪಾಲಕರ ಮೇಲೆ ಆಡಳಿತ ಮಂಡಳಿಗಳು ಒತ್ತಡ ಹೇರುತ್ತಿರುವುದು ಅವರ ಚಿಂತೆಗೆ ಕಾರಣ.
ಕಳೆದ ಶೈಕ್ಷಣಿಕ ವರ್ಷದವರೆಗೆ, ಮೂರು ಕಂತುಗಳಲ್ಲಿ ಶುಲ್ಕವನ್ನು ಪಾವತಿಸುವ ಅವಕಾಶ ಇತ್ತು. ಕೆಲವು ವಿಶೇಷ ಸಂದರ್ಭ ಎಂದು ಪರಿಗಣಿಸಿ ಹೆಚ್ಚುವರಿ ಕಂತುಗಳನ್ನೂ ಪಾಲಕರಿಗೆ ಆಡಳಿತ ಮಂಡಳಿಗಳು ಕೊಡುತ್ತಿದ್ದವು. ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಬಹುತೇಕ ಎಲ್ಲ ಶಾಲೆಗಳಲ್ಲಿ ಕನಿಷ್ಠ ಶೇಕಡ 30 ರಿಂದ 40 ರಷ್ಟು ಶುಲ್ಕವನ್ನು ಹೆಚ್ಚಿಸಲಾಗಿದೆ. ಇದರಿಂದ ಕಳವಳಗೊಂಡಿರುವ ಅನೇಕ ಪಾಲಕರು ತಮ್ಮ ಶಾಲಾ ವ್ಯಾಪ್ತಿಯ ಬ್ಲಾಕ್ ಶಿಕ್ಷಣ ಅಧಿಕಾರಿಗಳನ್ನು (ಬಿಇಒ) ಸಂಪರ್ಕಿಸಿ, ಪರಿಹಾರ ಒದಿಸುವಂತೆ ಕೋರಿದ್ದಾರೆ.
ಖಾಸಗಿ ಶಾಲಾ ಶುಲ್ಕ ಸಂಗ್ರಹ; ಏನಿದು ಸಮಸ್ಯೆ
ಖಾಸಗಿ ಶಾಲೆಗಳ ಶುಲ್ಕ ನಿಗದಿ ವಿಚಾರವಾಗಿ ಸರ್ಕಾರ ಯಾವುದೇ ರೀತಿ ಹಸ್ತಕ್ಷೇಪ ಮಾಡುವಂತೆ ಇಲ್ಲ. ಅದು ಆಯಾ ಶಾಲೆಗೆ ಸಂಬಂಧಿಸಿದ್ದು ಎಂದು ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ತೀರ್ಪು ನೀಡಿತ್ತು. ಇದು ಖಾಸಗಿ ಶಾಲೆಗಳಿಗೆ ವರದಾನವಾದಂತೆ ಇದೆ. ಹೀಗಾಗಿ ಈ ಬಾರಿ ಶೇಕಡ 30 ರಿಂದ 40ರಷ್ಟು ಶುಲ್ಕ ಏರಿಕೆ ಮಾಡಿದ್ದೂ ಅಲ್ಲದೆ, ಒಂದೆ ಕಂತಿನಲ್ಲಿ ಶುಲ್ಕ ಪಾವತಿಸಲು ಹೇಳುತ್ತಿರುವುದು ಪಾಲಕರ ಸಂಕಟಕ್ಕೆ ಕಾರಣ.
ಶಾಲಾ ಆಡಳಿತ ಮಂಡಳಿ ಶಾಲೆಯ ಸಿಬ್ಬಂದಿಗೆ ವಾರ್ಷಿಕವಾಗಿ ವೇತನ ನೀಡುವುದು ಅಲ್ಲವಲ್ಲ. ವರ್ಷ ಪ್ರಾರಂಭವಾಗುವ ಮೊದಲೇ ಪಾಲಕರ ಬಳಿ ಇಡುಗಂಟಿನಂತೆ ದೊಡ್ಡ ಮೊತ್ತ ಶುಲ್ಕ ಪಾವತಿಸುವಂತೆ ಕೇಳುವುದು ಯಾಕೆ? ಈ ಹಿಂದಿನಂತೆ ಕಮತಿನಲ್ಲಿ ಪಾವತಿಸಲು ಅವಕಾಶ ನೀಡಬೇಕು. ಕೋವಿಡ್ ಸಂಕಷ್ಟದ ಬಳಿಕ ಶಾಲಾ ಶುಲ್ಕ ಗಣನೀಯವಾಗಿ ಏರಿಕೆಯಾಗಿದೆ ಎಂದು ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪಾಲಕರ ಸಂಘಗಳ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಎನ್.ಯೋಗಾನಂದ ಹೇಳಿದ್ದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ; 10 ಮುಖ್ಯ ಅಂಶಗಳು
1) ಕರ್ನಾಟಕದಲ್ಲಿರುವ ಶೇಕಡ 90 ರಷ್ಟು ಶಾಲೆಗಳು ಶುಲ್ಕದ ಮೊತ್ತವನ್ನು ಸ್ಪಷ್ಟವಾಗಿ ವಿಭಜಿಸಿಲ್ಲ ಅಥವಾ ಶುಲ್ಕ ರಚನೆಯ ನಿಯತಾಂಕಗಳ ಬಗ್ಗೆ ಪಾಲಕರಿಗೆ ಮನವರಿಕೆ ಮಾಡಿಕೊಡುವ ವಿವರವನ್ನು ಒದಗಿಸಿಲ್ಲ. ಈ ಕುರಿತು ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪಾಲಕರ ಸಂಘಗಳ ಸಮನ್ವಯ ಸಮಿತಿ ಸದಸ್ಯರು ಬೆಂಗಳೂರು ದಕ್ಷಿಣ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು (ಡಿಡಿಪಿಐ) ಮತ್ತು ಈ ಭಾಗದ ಬಿಇಒಗಳನ್ನು ಭೇಟಿ ಮಾಡಿ ಚರ್ಚಿಸಿತು.
2) ಬೆಂಗಳೂರಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ (2024-25)ಕ್ಕೆ ಒಂದು ಮಗುವಿಗೆ ವಾರ್ಷಿಕ ಶುಲ್ಕ 1.5 ಲಕ್ಷ ರೂಪಾಯಿ. ಅಗತ್ಯ ವಸ್ತುಗಳ ವೆಚ್ಚಗಳು ಏರುತ್ತಿರುವಾಗ, ಹಣದುಬ್ಬರ ಪ್ರಮಾಣಕ್ಕೆ ಸರಿಯಾಗಿ ವೇತನ / ಆದಾಯ ಹೆಚ್ಚಳವಾಗದೇ ಇರುವಾಗ, ಕೋವಿಡ್ ನಂತರ ಕೆಟ್ಟು ಹೋಗಿರುವ ಆರ್ಥಿಕ ಪರಿಸ್ಥಿತಿಯ ನಡುವೆ ಬಡ ಮಧ್ಯಮ ಕುಟುಂಬದವರು ಇಷ್ಟು ದುಬಾರಿ ಶಾಲಾ ಶುಲ್ಕ ಪಾವತಿಸುವುದು ಹೇಗೆ ಎಂಬುದು ಪಾಲಕರ ಅಹವಾಲು.
3) ಖಾಸಗಿ ಶಾಲೆಗಳ ಆಡಳಿತ ಮಂಡಳಿ ಪ್ರತಿ ವರ್ಷ ಶುಲ್ಕ ಹೆಚ್ಚಳ ಮಾಡುತ್ತವೆ. ಇದು ಹೊಸದಲ್ಲ. ಆದರೆ, ಈ ಬಾರಿ ಶೇ. 30ರಿಂದ 40ರಷ್ಟು ಶುಲ್ಕ ಏರಿಕೆ ಮಾಡಿವೆ. ಆಡಳಿತ ಮಂಡಳಿ ಏಕಾಕಿ ಈ ಪ್ರಮಾಣದಲ್ಲಿ ಶುಲ್ಕ ಏರಿಕೆ ಮಾಡಿರುವುದನ್ನು ಸಮರ್ಥಿಸಿಕೊಳ್ಳುವ ಕಾರಣ ನೀಡುತ್ತಿಲ್ಲ ಎಂಬುದು ಪಾಲಕರ ಅಸಮಾಧಾನವನ್ನು ಹೆಚ್ಚಿಸಿದೆ.
4) ಶುಲ್ಕ ನಿಯಂತ್ರಣ ಅಧಿಕಾರ ಸರ್ಕಾರದ್ದು. ಆದರೆ, ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕಾಗಿ ಕೆಲವು ಸಂಘ-ಸಂಸ್ಥೆಗಳು ಕಳದೆ ಜನವರಿಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಖಾಸಗಿ ಶಾಲೆಗಳ ಶುಲ್ಕವನ್ನು ಸರ್ಕಾರ ನಿಯಂತ್ರಿಸಲು ಸಾಧ್ಯವಿಲ್ಲ. 1983ರ ಕರ್ನಾಟಕ ಶಿಕ್ಷಣ ಕಾಯ್ದೆ ಅಡಿಯಲ್ಲಿ ಸರ್ಕಾರ, ಶುಲ್ಕಗಳು ಮತ್ತು ಮಕ್ಕಳ ಸುರಕ್ಷತಾ ಮಾನದಂಡಗಳನ್ನು ಸಾಂವಿಧಾನಿಕವಾಗಿ ಸೂಚಿಸಬಹುದು, ಆದರೆ ನೇರವಾಗಿ ಶುಲ್ಕ ನಿಯಂತ್ರಣ ಮಾಡುವಂತಿಲ್ಲ ಎಂದು ಹೇಳಿದೆ.
5) ಈ ಹಿಂದಿನಂತೆಯೇ ಶುಲ್ಕ ಏರಿಕೆ ಮಾಡುವ ಬಗ್ಗೆ ಖಾಸಗಿ ಶಾಲಾ ಆಡಳಿತ ಮಂಡಳಿ ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದು ಅನುಮತಿ ಪಡೆಯಬೇಕು. ಇಲಾಖೆ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿದರೆ ಮಾತ್ರ ಮಾಡಬೇಕು. ಇಲ್ಲದಿದ್ದರೆ ಹಿಂದಿನ ವರ್ಷದ ಶುಲ್ಕವನ್ನೇ ಮುಂದುವರೆಸಬೇಕು. ಆದರೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಮಾತ್ರ ತಮಗೆ ತೋಚಿದಂತೆ ಶುಲ್ಕ ಏರಿಕೆ ಮಾಡುತ್ತಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
6) ಕರ್ನಾಟಕದಲ್ಲಿ ಖಾಸಗಿ ಶಾಲೆಗಳ ಸಂಘಗಳು ಶೇ.10ರಿಂದ 15ರಷ್ಟು ಮಾತ್ರ ಶುಲ್ಕ ಏರಿಕೆ ಮಾಡಬೇಕು ಎಂಬ ಸ್ವಯಂ ನಿಯಂತ್ರಣ ಹೇರಿಕೊಂಡಿವೆ. ಆದರೆ ಇದನ್ನು ಬಹುತೇಕ ಖಾಸಗಿ ಶಾಲೆಗಳು ಅನುಸರಿಸುತ್ತಿಲ್ಲ. ಹೀಗಾಗಿ ಪಾಲಕರು ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
7) ಶುಲ್ಕದ ಕಂತುಗಳ ನಿರ್ಧಾರವನ್ನು ಪ್ರತ್ಯೇಕ ಶಾಲೆಗಳು ಮತ್ತು ಅವುಗಳ ಆಡಳಿತ ಮಂಡಳಿಗಳು ತೆಗೆದುಕೊಳ್ಳುತ್ತವೆ. ತಾಂತ್ರಿಕವಾಗಿ ಶಾಲೆಗಳು ಒಂದೇ ಬಾರಿ ಶುಲ್ಕ ಸಂಗ್ರಹಿಸುವುದನ್ನು ನಿರ್ಬಂಧಿಸುವ ಯಾವುದೇ ಆದೇಶವಿಲ್ಲ ಎಂದು ಕರ್ನಾಟಕ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಸ್ಕೂಲ್ಸ್ ಇನ್ ಕರ್ನಾಟಕ (ಕೆಎಎಂಎಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಡಿ ಹೇಳಿದ್ದಾಗಿ ವರದಿ ಹೇಳಿದೆ
8) ರಾಜ್ಯ ಸರ್ಕಾರ ಪ್ರತಿ ನೀರು, ಕರೆಂಟ್ ಬಿಲ್, ತೆರಿಗೆ ಹಾಗೂ ನೋಂದಣಿ ಶುಲ್ಕವನ್ನು ಏರಿಕೆ ಮಾಡುತ್ತಿದೆ. ಪ್ರತಿ ವರ್ಷವೂ ಹೊಸ ಹೊಸ ಶಾಲೆಗಳನ್ನು ಶುರುಮಾಡಲು ಅನುಮತಿ ನೀಡುತ್ತದೆ. ಶಾಲೆಗಳು ಹೆಚ್ಚಾದಂತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಆದರೆ ಸರ್ಕಾರದ ತೆರಿಗೆಗಳು ಮಾತ್ರ ಕಡಿಮೆಯಾಗುವುದಿಲ್ಲ. ಅನಿವಾರ್ಯವಾಗಿ ಶಾಲೆಗಳು ಪ್ರತಿ ವರ್ಷ ಶುಲ್ಕವನ್ನು ಏರಿಕೆ ಮಾಡುತ್ತಿವೆ ಎಂದು ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾಗಿ ವರದಿ ಹೇಳಿದೆ.
9) ಭಾರತದಲ್ಲಿ ತಮಿಳುನಾಡು, ದೆಹಲಿ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ಸೇರಿ 17 ರಾಜ್ಯಗಳಲ್ಲಿ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ಅಲ್ಲಿನ ರಾಜ್ಯ ಸರ್ಕಾರಗಳು ಕಾಯ್ದೆಗಳನ್ನು ರೂಪಿಸಿವೆ. ಆದರೆ ಕರ್ನಾಟಕದಲ್ಲಿ ಶುಲ್ಕ ನಿಯಂತ್ರಣಕ್ಕೆ ಯಾವುದೇ ಕಾಯ್ದೆಯನ್ನು ಜಾರಿಗೊಳಿಸಿಲ್ಲ. ರಾಜ್ಯದಲ್ಲೂ ಶುಲ್ಕ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು. ಆ ರಾಜ್ಯಗಳ ಕಾನೂನುಗಳನ್ನು ಅಧ್ಯಯನ ಮಾಡುವುದರ ಕಡೆಗೆ ಸರ್ಕಾರ ಗಮನಹರಿಸಬೇಕು. ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಕೈಕಟ್ಟಿ ಕುಳಿತುಕೊಳ್ಳಬಾರದು ಎಂಬುದು ಪಾಲಕರ ಆಗ್ರಹ.
10) ಕಳೆದ ವರ್ಷ (2023) ಜನವರಿ 5 ರಂದು ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ ಮತ್ತು ಇತರ ಶಾಲಾ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್, ಖಾಸಗಿ ಶಾಲೆಗಳ ಶುಲ್ಕ ನಿಗದಿ ಅಧಿಕಾರ ರಾಜ್ಯಕ್ಕಿಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕೆಲವು ಸೆಕ್ಷನ್‌ಗಳು ಅಸಾಂವಿಧಾನಿಕ ಎಂದು ತೀರ್ಪು ನೀಡಿದ್ದರು. ಅದರ ಪ್ರಕಾರ ಖಾಸಗಿ ಅನುದಾನ ರಹಿತ ಶಾಲೆಗಳ ಶುಲ್ಕ ನಿರ್ಧಾರ ಮತ್ತು ಅದನ್ನು ಉಲ್ಲಂಘಿಸಿದಾಗ ಶಿಕ್ಷೆ ವಿಧಿಸುವ ಅಧಿಕಾರದ ಅಂಶ ಅಸಾಂವಿಧಾನಿಕವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ವಿವರ ಓದಿಗೆ - Private School Fees: ಖಾಸಗಿ ಶಾಲೆಗಳ ಶುಲ್ಕ ನಿಗದಿ ಅಧಿಕಾರ ರಾಜ್ಯಕ್ಕಿಲ್ಲ; ಶಿಕ್ಷಣ ಕಾಯ್ದೆಯ ಕೆಲ ಸೆಕ್ಷನ್ ಅಸಾಂವಿಧಾನಿಕ ಎಂದ ಕೋರ್ಟ್
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.