Voters List Update: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ವೇಳಾಪಟ್ಟಿ ಪ್ರಕಟ, ನಿಮ್ಮ ಹೆಸರು ಸೇರಿಸಲು ಏನು ಮಾಡಬೇಕು
ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಸೇರ್ಪಡೆಯ ಅಭಿಯಾನದ ವಿವರ ಪ್ರಕಟಿಸಿದೆ. ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಇಲ್ಲಿದೆ ಮಾರ್ಗೋಪಾಯಗಳು.
ಬೆಂಗಳೂರು: ಭಾರತ ಚುನಾವಣಾ ಆಯೋಗವು ಪ್ರತೀ ವರ್ಷ ಜನವರಿ, 01 ನ್ನು ಅರ್ಹತಾ ದಿನಾಂಕವಾಗಿ ನಿಗಧಿಪಡಿಸಿಕೊಂಡು ‘ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಕಾರ್ಯ’ವನ್ನು ಕೈಗೊಳ್ಳಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಅಕ್ಟೋಬರ್, 29 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ನವೆಂಬರ್, 28 ರವರೆಗೆ ಸರಿಪಡಿಸಿಕೊಳ್ಳಲು/ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ನವೆಂಬರ್, 09, 10, 23 ಮತ್ತು 24 ರಂದು ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ವಿಶೇಷ ಅಭಿಯಾನ ನಡೆಯಲಿದೆ.
ಡಿಸೆಂಬರ್, 24 ರಂದು ಮನವಿ/ ಆಕ್ಷೇಪಣೆಗಳ ಸರಿಪಡಿಸುವ ಕಾರ್ಯ ನಡೆಯಲಿದೆ. 2025 ರ ಜನವರಿ, 01 ರಂದು ಅಂತಿಮ ಮತದಾರರ ಪಟ್ಟಿ ಪರಿಶೀಲನಾ ಕಾರ್ಯ ನಡೆಯಲಿದೆ. 2025 ಜನವರಿ, 06 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಈ ಸಂಬಂಧ ತಮ್ಮ ತಮ್ಮ ಹಂತದಲ್ಲಿ ಮಾಹಿತಿ ನೀಡುವಂತೆ ರಾಜಕೀಯ ಪಕ್ಷಗಳ ಮುಖಂಡರಿಗೆ ಅಧಿಕಾರಿಗಳು ಸೂಚಿಸಿದ್ಧಾರೆ.
ಕರಡು ಮತದಾರರ ಪಟ್ಟಿಯನ್ನು https://ceo.karnataka.gov.in ನಲ್ಲಿಯೂ ಸಹ ಪರಿಶೀಲಿಸುವ ಮೂಲಕ ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕರಡು ಮತದಾರರ ಪಟ್ಟಿಯ ಪ್ರಕಟಣೆ ದಿನದಿಂದ ಅಂದರೆ ಅಕ್ಟೋಬರ್, 29 ರಿಂದ ನವೆಂಬರ್, 28 ರವರೆಗೆ 2025 ರ ಜನವರಿ, 01, 2025 ರ ಏಪ್ರಿಲ್, 01, 2025 ರ ಜುಲೈ, 01 ಮತ್ತು 2025 ರ ಅಕ್ಟೋಬರ್, 01 ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಕ, ಯುವತಿಯರು ಮತ್ತು 18 ವರ್ಷ ಮೇಲ್ಪಟ್ಟ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನಮೂನೆ-6 ರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ
ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವ ಮತದಾರರು ಮೃತ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ತೆಗೆಯಲು ನಮೂನೆ-7 ರಲ್ಲಿ ಆಕ್ಷೇಪಣೆ ಅರ್ಜಿಯನ್ನು ವೇಳಾಪಟ್ಟಿ ದಿನಾಂಕದಲ್ಲಿ ಪಡೆದುಕೊಳ್ಳಲಾಗುತ್ತದೆ
ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ಹಾಗೂ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ನಮೂನೆ-8 ರಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.
ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6ಎ ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನಮೂನೆ-6, 6ಎ, 7 ಮತ್ತು 8ರ ಅರ್ಜಿಗಳನ್ನು ಭಾರತ ಚುನಾವಣಾ ಆಯೋಗವು ಅಭಿವೃದ್ಧಿ ಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮತದಾರರ ಸಹಾಯವಾಣಿ ಆಪ್ (VOTER HELPLINE APP) ಹಾಗೂ https://voters.eci.gov.in/ / VOTERS’ SERVICE PORTAL ಮೂಲಕ ಅನ್‍ಲೈನ್‍ನಲ್ಲಿ ನೇರವಾಗಿ ಸಲ್ಲಿಸಬಹುದಾಗಿದೆ.
ಮತದಾರರ ಪಟ್ಟಿ ಮತ್ತು ಚುನಾವಣೆಯ ಕುರಿತು ಮತದಾರರಿಗೆ ಮಾಹಿತಿಯನ್ನು ನೀಡುವ ಸಲುವಾಗಿ ಭಾರತ ಚುನಾವಣಾ ಆಯೋಗವು ಮತದಾರರ ಸಹಾಯವಾಣಿ ಆಪ್ (VOTER HELPLINE APP) ಅನ್ನು ಅಭಿವೃದ್ಧಿಪಡಿಸಿದ್ದು. ಎಲ್ಲಾ ಮತದಾರರು / ನಾಗರಿಕರು ತಮ್ಮ ಮೊಬೈಲ್‍ನಲ್ಲಿ ಮತದಾರರ ಸಹಾಯವಾಣಿ ಆಪ್ (VOTER HELPLINE APP) ಅನ್ನು ಡೌನ್‍ಲೋಡ್ ಮಾಡಿಕೊಳ್ಳುವುದು.
ನವೆಂಬರ್, 9, 10, 23 ಮತ್ತು 24 ರಂದು ಮತಗಟ್ಟೆಗಳಲ್ಲಿ ವಿಶೇಷ ನೋಂದಣಿ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು ಇದರ ಉಪಯೋಗವನ್ನು ಪಡೆದುಕೊಂಡು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬಹುದು. ನೋಂದಣಿ ಆಗದೆ ಇದ್ದಲ್ಲಿ ನಮೂನೆ-6 ರಲ್ಲಿ ಅರ್ಜಿಯನ್ನು ಸ್ಥಳದಲ್ಲಿಯೇ ನೀಡಬಹುದಾಗಿದೆ ಎನ್ನುವುದು ಕೊಡಗು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರ ವಿವರಣೆ.
.