ನರೇಗಾ ಖಾತರಿ ಯೋಜನೆ: ಆನ್ಲೈನ್ನಲ್ಲೂ ಸಲ್ಲಿಸಿ ಬೇಡಿಕೆ, ಕ್ಯೂ ಆರ್ ಕೋಡ್ ಬಳಸಿ ನಮೂದಿಸಿ ಹೆಸರು!
Nrega Work Project: ನರೇಗಾ ಖಾತರಿ ಯೋಜನೆ ಅಡಿಯಲ್ಲಿ 2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿಗೆ ವೈಯಕ್ತಿಕ ಮತ್ತು ಸಾರ್ವಜನಿಕ ಕಾಮಗಾರಿ ಕೈಗೊಳ್ಳುವವರು ಗ್ರಾಮ ಪಂಚಾಯತಿಗೆ ಅಥವಾ ಆನ್‌ಲೈನ್ ಮೂಲಕ ಬೇಡಿಕೆ ಸಲ್ಲಿಸಬಹುದು. (ವರದಿ-ಹರೀಶ್ ಮಾಂಬಾಡಿ)

ಮಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (Nrega Work Project) ಅಡಿ 2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿಗೆ ವೈಯಕ್ತಿಕ ಮತ್ತು ಸಾರ್ವಜನಿಕ ಕಾಮಗಾರಿ ಕೈಗೊಳ್ಳುವವರು ಗ್ರಾಮ ಪಂಚಾಯತಿಗೆ ಅಥವಾ ಆನ್‌ಲೈನ್ ಮೂಲಕ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕನ್ನಡ-ಆಂಗ್ಲ ಭಾಷೆಯಲ್ಲಿ ಮಾಹಿತಿ ನೀಡಲಾಗಿದ್ದು, ಬೇಡಿಕೆ ಸಲ್ಲಿಸಲಾಗುವ ಕಾಮಗಾರಿ ಆಯ್ಕೆ ಮಾಡಿ ಬೇಡಿಕೆ ಸಲ್ಲಿಸಲು ಅವಕಾಶ ಇದೆ. ಯೋಜನೆಯಡಿ ಪುರುಷರು ಮತ್ತು ಮಹಿಳೆಯರಿಗೆ 349 ರೂಪಾಯಿ ದಿನಗೂಲಿ ಹಾಗೂ ಗ್ರಾಮೀಣ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಉದ್ಯೋಗ ಅವಕಾಶವಿದೆ. ಒಂದು ಕುಟುಂಬಕ್ಕೆ ಜೀವಿತಾವಧಿಗೆ 5 ಲಕ್ಷ ರೂ.ವರೆಗೆ ಪಡೆಯಬಹುದು.
ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ
ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದಡಿ ವೈಯಕ್ತಿಕ ಕಾಮಗಾರಿಗಳಾದ ತೆರೆದ ಬಾವಿ, ದನದ ಹಟ್ಟಿ ಮೇಕೆ/ಕುರಿ ಶೆಡ್, ಹಂದಿ ಶೆಡ್, ಕೋಳಿ ಶೆಡ್, ಕೊಳವೆ ಬಾವಿ ಮರುಪೂರಣ ಘಟಕ, ದ್ರವತ್ಯಾಜ್ಯ ಗುಂಡಿ, ಎರೆಹುಳು ಗೊಬ್ಬರ ಘಟಕ, ಬಯೋಗ್ಯಾಸ್, ಕೃಷಿ ಹೊಂಡ ರಚನೆ, ಗೊಬ್ಬರ ಗುಂಡಿ, ಇಂಗುಗುಂಡಿ , ಅಡಿಕೆ ಕೃಷಿ, ತೆಂಗು ಕೃಷಿ, ಚಿಕ್ಕು, ಕಾಳುಮೆಣಸು, ಕ್ಕೊಕ್ಕೋ, ವೀಳ್ಯದೆಲೆ, ಮಾವು, ಗುಲಾಬಿ, ತಾಳೆ, ಗೇರು, ಮಲ್ಲಿಗೆ ಅಂಗಾಂಶ ಬಾಳೆ, ಪಪ್ಪಾಯ, ನುಗ್ಗೆ ಕೃಷಿ, ರಂಬೂಟನ್, ಪೇರಳೆ, ಪೌಷ್ಟಿಕ ತೋಟ ರಚನೆ, ಬಸಿಗಾಲುವೆ(ಉಜಿರ್ ಕಣಿ) ರಚನೆ, ಡ್ರ್ಯಾಗನ್ ಫ್ರೂಟ್ ಬೆಳೆಯಲು ಇತರೆ ಕಾಮಗಾರಿಗೆ ಆರ್ಥಿಕ ಸಹಾಯಧನ ಪಡೆಯಬಹುದು.
ಸಾರ್ವಜನಿಕ ಕಾಮಗಾರಿಗಳಾದ ಸಾರ್ವಜನಿಕ ತೋಡಿನ ಹೂಳೆತ್ತುವಿಕೆ, ಇಂಗುಗುಂಡಿ ನಿರ್ಮಾಣ, ಕಾಂಕ್ರಿಟ್ ರಸ್ತೆ ನಿರ್ಮಾಣ, ಶಾಲೆ ಆವರಣ ಗೋಡೆ, ಶಾಲಾ ಆಟದ ಮೈದಾನ, ಸಮಗ್ರ ಕೆರೆ ಅಭಿವೃದ್ಧಿ, ಶಾಲಾ ಅಡುಗೆ ಕೋಣೆ ನಿರ್ಮಾಣ, ಕಚ್ಚಾ ರಸ್ತೆ, ಸಮುದಾಯ ಸೋಕ್ಪಿಟ್ (ಅಂಗನವಾಡಿ, ಸರ್ಕಾರಿ ಶಾಲೆ, ಕಾಲೋನಿಗಳಲ್ಲಿ), ಅಂಗನವಾಡಿ, ಸರ್ಕಾರಿ ಶಾಲೆ ಆವರಣದಲ್ಲಿ ಪೌಷ್ಟಿಕ ತೋಟ ರಚನೆ ಸೇರಿ ವಿವಿಧ ಕಾಮಗಾರಿಗಳಿಗೆ ಅರ್ಜಿಯನ್ನು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಇಲ್ಲವೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪರಿಶಿಷ್ಟ ಜಾತಿ/ಪಂಗಡ, ಅಲೆಮಾರಿ ಪಂಗಡಗಳು, ಪ್ರಕಟಣೆಯಿಂದ ಹೊರಗಿಟ್ಟ ಬುಡಕಟ್ಟು ಜನಾಂಗದವರು, ಬಿಪಿಎಲ್ ಕುಟುಂಬ, ಮಹಿಳಾ ಪ್ರಧಾನ ಕುಟುಂಬ, ಭೂ ಸುಧಾರಣಾ ಫಲಾನುಭವಿಗಳು, ವಸತಿ ಯೋಜನೆಯ ಫಲಾನುಭವಿಗಳು, ವಿಕಲಚೇತನ ಪ್ರಧಾನ ಕುಟುಂಬಗಳು, ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮ 2006 (2007ರ 2) ರಡಿಯ ಫಲಾನುಭವಿಗಳು, ಸಣ್ಣ ಮತ್ತು ಅತೀ ಸಣ್ಣ ರೈತರು ವೈಯಕ್ತಿಕ ಕಾಮಗಾರಿ ಕೈಗೊಳ್ಳಬಹುದು.
ಕ್ಯೂ ಆರ್ ಕೋಡ್ ಮೂಲಕ ಅರ್ಜಿ ಸಲ್ಲಿಕೆ
ಉದ್ಯೋಗ ಚೀಟಿ, ಬಿಪಿಎಲ್ ಕಾರ್ಡ್ ಪ್ರತಿ, ಎಪಿಎಲ್ ಆಗಿದ್ದಲ್ಲಿ ಸಣ್ಣ ರೈತ ಪ್ರಮಾಣ ಪತ್ರ, ಪ.ಜಾತಿ/ಪಂಗಡದ ಜಾತಿ ಪ್ರಮಾಣ ಪತ್ರ, ಆರ್‌ಟಿಸಿ ಪ್ರತಿ, ಹಕ್ಕುಪತ್ರ ಇದ್ದಲ್ಲಿ ಅದರ ಪ್ರತಿ ದಾಖಲೆ ಇರಬೇಕು. ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿ ಬೇಡಿಕೆ ಸ್ವೀಕರಿಸುತ್ತಿದ್ದು, ಕಾಮಗಾರಿ ಬೇಡಿಕೆ ಪೆಟ್ಟಿಗೆಯನ್ನೂ ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಅಳವಡಿಸಲಾಗಿದೆ. ಈ ಬಾರಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಲಿಂಕ್ ಅಥವಾ ಕ್ಯೂ ಆರ್ ಕೋಡ್ ಮೂಲಕ ಅರ್ಜಿ ಸಲ್ಲಿಸಬಹುದು.
2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿ ಸಲುವಾಗಿ ಜನರು ಗ್ರಾಮ ಪಂಚಾಯತಿಗೆ ಬಂದು ಅರ್ಜಿ ಸಲ್ಲಿಸಬಹುದು. ಮೊಬೈಲ್‌ನಲ್ಲಿ ಲಿಂಕ್ ಟೈಪ್ ಮಾಡಿ ಆನ್‌ಲೈನ್ ಮೂಲಕ ಬೇಡಿಕೆ ಸಲ್ಲಿಸಲು ಅವಕಾಶವಿದೆ. ಕಾಮಗಾರಿ ಬೇಡಿಕೆ ಬಂದ ನಂತರ ಕ್ರಿಯಾ ಯೋಜನೆ ತಯಾರಾಗುತ್ತದೆ. ವೈಯಕ್ತಿಕ ಇಲ್ಲವೇ ಸಾರ್ವಜನಿಕ ಕಾಮಗಾರಿ ಬೇಡಿಕೆ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್.