ಸಫಾರಿ ವಾಹನದ ಮೇಲೆ ಎಗರಿದ ಚಿರತೆ ವೀಡಿಯೋ ವೈರಲ್; ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಭಯಗೊಂಡ ಪ್ರವಾಸಿಗರು video
ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಹೊರಟಿದ್ದವರ ವಾಹನದ ಮೇಲೆ ಚಿರತೆ ದಾಳಿ ಮಾಡಿರುವ ಘಟನೆಯ ವೀಡಿಯೋ ವೈರಲ್ ಆಗಿದೆ. ಯಾವುದೇ ಅನಾಹುತಗಳು ಆಗಿಲ್ಲ. ಅದರ ವಿವರ ಇಲ್ಲಿದೆ.
ಬೆಂಗಳೂರು: ಅವರು ವಾಹನದಲ್ಲಿ ಸಫಾರಿ ಹೊರಟಿದ್ದರು. ಅರಣ್ಯದಲ್ಲಿ ವಾಹನ ಹೋಗುತ್ತಿತ್ತು. ಸಫಾರ ಮಧ್ಯೆ ಚಿರತೆಯೊಂದು ವಾಹನದತ್ತಲೇ ಬರುತ್ತಿತ್ತು. ಇದನ್ನು ಗಮನಿಸಿದ ಪ್ರವಾಸಿಗರೂ ಪುಳಕಿತರಾದರು. ಅದಾದ ಒಂದೇ ಕ್ಷಣದಲ್ಲಿ ಚಿರತೆ ಸಫಾರಿ ವಾಹನದ ಮೇಲೆ ಎಗರೇ ಬಿಟ್ಟಿತು. ಅದೂ ಕಿಟಕಿಯ ಕಡೆ ಹತ್ತಿ ಒಳನುಗ್ಗಲೂ ಪ್ರಯತ್ನಿಸಿತು. ಅಲ್ಲಿದ್ದವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಅಷ್ಟೇ ಅಲ್ಲದೇ ಜೋರಾಗಿ ಕೂಗಿಕೊಂಡರು. ಸಫಾರಿ ವಾಹನದಲ್ಲಿ ಕುಳಿತದವರು ಭಯಗೊಂಡು ಜೋರಾಗಿಯೇ ಕೂಗಿಕೊಳ್ಳತೊಡಗಿದರು. ಒಂದು ಕ್ಷಣ ಅಲ್ಲಿ ಏನಾಗುತ್ತಿದೆ ಎನ್ನುವುದೇ ತಿಳಿಯುವ ಹಂತಕ್ಕೂ ಹೋಯಿತು. ಚಿರತೆ ಕಿಟಕಿಯಿಂದ ಒಳ ನುಗ್ಗೆ ಬಿಡಬಹುದು ಎನ್ನುವ ಭಯವೂ ಅಲ್ಲಿದ್ದವರನ್ನು ಆವರಿಸಿತ್ತು. ಚಾಲಕ ನಿಧಾನವಾಗಿ ಮುಂದಕ್ಕೆ ಓಡಿಸಿದ. ಅದೃಷ್ಟವಶಾತ್ ಚಿರತೆ ವಾಹನದಿಂದ ಇಳಿದು ಓಡಿತು.
ಇದು ನಡೆದದ್ದು ಬೆಂಗಳೂರು ಹೊರ ವಲಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ. ಚಿರತೆ ದಾಳಿಯ ವೀಡಿಯೋ ಕೂಡ ವೈರಲ್ ಆಗಿದೆ.
ಇದು ಕೆಲ ದಿನಗಳ ಹಿಂದೆ ನಡೆದಿದ್ದರೂ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆಯುತ್ತಿದೆ.
ಕರ್ನಾಟಕ ಪ್ರವಾಸೋದ್ಯಮ ಎನ್ನುವ ಹೆಸರಿನಡಿ ಕರ್ನಾಟಕ ಅರಣ್ಯ ಇಲಾಖೆಯೇ ಚಿರತೆ ಸಫಾರಿಯನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜಿಸುತ್ತಿದೆ. ಮೂರು ತಿಂಗಳ ಹಿಂದೆಯಷ್ಟೇ ಈ ಸಫಾರಿಯನ್ನು ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಿದ್ದರು. ವಿಶಾಲವಾದ ಜಾಗದಲ್ಲಿ ಸಫಾರಿಗೆ ವ್ಯವಸ್ಥೆ ಮಾಡಲಾಗಿದ್ದು. ಈ ಭಾಗದಲ್ಲಿ ಸಾಕಷ್ಟು ಚಿರತೆಗಳೂ ಇವೆ.
ಎಂದಿನಂತೆ ವಾಹನ ಪ್ರವಾಸಿಗರೊಂದಿಗೆ ಸಫಾರಿಗೆ ಹೊರಟಿದೆ. ಮಾರ್ಗ ಮಧ್ಯೆದಲ್ಲಿಯೇ ಸಫಾರಿಗೆ ಹೋಗುವಾಗ ಏಕಾಏಕಿ ಚಿರತೆಯೊಂದು ಅಲ್ಲಿ ಕಾಣಿಸಿಕೊಂಡು ವಾಹನದತ್ತ ಧಾವಿಸಿದೆ. ಅಷ್ಟೇ ಅಲ್ಲದೇ ವಾಹನದ ಒಳಗೆ ಪ್ರವೇಶಿಸಲು ಕಿಟಕಿಯನ್ನು ಏರಿದೆ. ಕಿಟಕಿಯಲ್ಲಿ ಬಾಯಿ ಹಾಕಲೂ ಪ್ರಯತ್ನಿಸಿದೆ. ಈ ವೇಳೆ ಸಫಾರಿ ವಾಹನದ ಕಿಟಕಿ ಕೂಡ ತೆಗೆದಿತ್ತು. ಆಗ ಅಲ್ಲಿದ್ದವರು ಭಯಗೊಂಡು ಕಿರುಚತೊಡಗಿದ್ದರಲ್ಲದೇ ಅಲ್ಲಿಂದ ಹೊರಡುವಂತೆ ಚಾಲಕನಿಗೆ ಹೇಳುತ್ತಲೇ ಇದ್ದರು. ಕೆಲವೇ ಸೆಕೆಂಡ್‌ಗಳಲ್ಲಿ ಸಫಾರಿ ವಾಹನದಲ್ಲಿದ್ದವರಲ್ಲಿ ಚಿರತೆ ಭಯ ಹುಟ್ಟಿಸಿತು.
ಇನ್ನೊಂದು ವಾಹನದಲ್ಲಿದ್ದವರು ಇದನ್ನು ಗಮನಿಸಿ ವೀಡಿಯೋ ಮಾಡಿದ್ದು ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಇದು ಭಾರೀ ವೈರಲ್ ಆಗಿದೆ.
ಪ್ರವಾಸಿಗರು 20 ಹೆಕ್ಟೇರ್ (49.5 ಎಕರೆ) ಎಲೆಯುದುರುವ ಅರಣ್ಯದಲ್ಲಿ ಹರಡಿರುವ ನೈಸರ್ಗಿಕ ಪರಿಸರದಲ್ಲಿ ಚಿರತೆಗಳನ್ನು ನೋಡಬಹುದು, ಇದರಲ್ಲಿ ಎಂಟು ಚಿರತೆಗಳನ್ನು ಬಿಡುಗಡೆ ಮಾಡಲಾಗಿದೆ.ಈ ಪ್ರದೇಶವನ್ನು ರೈಲ್ವೆ ಬ್ಯಾರಿಕೇಡ್ ಮತ್ತು 4.5 ಮೀಟರ್ ಎತ್ತರದ ಚೈನ್ ಲಿಂಕ್ ಬೇಲಿಯಿಂದ ರಕ್ಷಿಸಲಾಗಿದೆ. ಈ ಪ್ರದೇಶಕ್ಕೆ ಪ್ರತ್ಯೇಕ ಸಫಾರಿ ವಲಯವನ್ನು ಗುರುತಿಸಿ ಚಿರತೆ ಸಫಾರಿಯಾಗಿ ರೂಪಿಸಲಾಗಿದೆ.ಇದಲ್ಲದೆ, ಪ್ರಾಣಿಗಳು ತಪ್ಪಿಸಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು 1.5 ಮೀಟರ್ ಲೋಹದ ಹಾಳೆಗಳನ್ನು 30 ಡಿಗ್ರಿ ಇಳಿಜಾರಿನೊಂದಿಗೆ ನಿರ್ಮಿಸಲಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲಾಗಿದೆ.
ಸಾಕಷ್ಟು ಸುರಕ್ಷತೆ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದೆ. ಹೀಗಿದ್ದರೂ ಚಿರತೆ ಮೊದಲ ಬಾರಿಗೆ ಈ ರೀತಿ ಸಫಾರಿ ವಾಹನದ ಮೇಲೆ ದಾಳಿ ಮಾಡಿದ್ದು. ಯಾವುದೇ ಅನಾಹುತವಾಗಿಲ್ಲ ಎಂದು ಬನ್ನೇರುಘಟ್ಟ ವಿಭಾಗದ ಅಧಿಕಾರಿಯೊಬ್ಬರು ಹೇಳುತ್ತಾರೆ.
ಯಾರೇ ಆಗಲಿ ದೂರದಿಂದ ವನ್ಯಜೀವಿ ಕಂಡಾಗ ಪುಳಕಿತರಾಗುತ್ತಾರೆ. ಅದೂ ಸಫಾರಿಯಲ್ಲಿ ಹೆಚ್ಚು. ಹತ್ತಿರವೇ ಬಂದಾಗ ಭಯ ಆಗುವುದು ಸಹಜ. ಬನ್ನೇರಘಟ್ಟದಲ್ಲಿ ಹೀಗೆ ಚಿರತೆ ವಾಹನದ ಮೇಲೆ ಎರಗಿರುವುದು ಕಂಡು ಬಂದಿದೆ. ಪ್ರವಾಸಿಗರು ಭಯಗೊಂಡರೂ ಯಾವುದೇ ಅನಾಹುತ ಆಗಿಲ್ಲ. ಇಂತ ವೇಳೆ ಆದಷ್ಟು ಪ್ರವಾಸಿಗರು ಗಲಾಟೆಗೆ ಅವಕಾಶ ಮಾಡಿಕೊಡಬಾರದು. ಕಿಟಕಿ ಮುಚ್ಚಿಕೊಂಡರೆ ಸುರಕ್ಷಿತವಾಗಿರಬಹುದು ಎನ್ನುವುದು ಅಧಿಕಾರಿಗಳು ನೀಡುವ ಸಲಹೆ.