ಕಾಡಿನ ಕಥೆಗಳು: ಹವಾಮಾನ ವೈಪರಿತ್ಯ ಪರಿಣಾಮ ಎಲ್ಲಿಗೆ ಬಂತು ನೋಡಿ, ಆಫ್ರಿಕಾದಲ್ಲಿ ಆನೆ ಮಾತ್ರವಲ್ಲ ನೀರಾನೆ, ಜೀಬ್ರಾ, ಕಾಡು ಕೋಣದ ಆಹಾರವೂ ರೆಡಿ-forest tales human made climate change effect in african country facing sevier drought culling wild animals for food kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಡಿನ ಕಥೆಗಳು: ಹವಾಮಾನ ವೈಪರಿತ್ಯ ಪರಿಣಾಮ ಎಲ್ಲಿಗೆ ಬಂತು ನೋಡಿ, ಆಫ್ರಿಕಾದಲ್ಲಿ ಆನೆ ಮಾತ್ರವಲ್ಲ ನೀರಾನೆ, ಜೀಬ್ರಾ, ಕಾಡು ಕೋಣದ ಆಹಾರವೂ ರೆಡಿ

ಕಾಡಿನ ಕಥೆಗಳು: ಹವಾಮಾನ ವೈಪರಿತ್ಯ ಪರಿಣಾಮ ಎಲ್ಲಿಗೆ ಬಂತು ನೋಡಿ, ಆಫ್ರಿಕಾದಲ್ಲಿ ಆನೆ ಮಾತ್ರವಲ್ಲ ನೀರಾನೆ, ಜೀಬ್ರಾ, ಕಾಡು ಕೋಣದ ಆಹಾರವೂ ರೆಡಿ

ಹವಾಮಾನ ವೈಪರಿತ್ಯದ ಪರಿಣಾಮವಾಗಿ ಸೃಷ್ಟಿಯಾಗಿರುವ ಭೀಕರ ಬರಗಾಲ ಆಫ್ರಿಕಾದ ಕಾಡು ಹಾಗೂ ಕಾಡು ಪ್ರಾಣಿಗಳನ್ನು ತಟ್ಟುತ್ತಿದೆ. ಆನೆ ಸಹಿತ ಹಲವು ವನ್ಯಜೀವಿಗಳನ್ನು ಆಹಾರವಾಗಿ ನೀಡುವುದಾಗಿ ಅಲ್ಲಿನ ದೇಶಗಳು ಹೇಳುತ್ತಿವೆ. ಏನಿದರ ಹಿಂದಿರುವ ಮರ್ಮ ಎನ್ನುವುದು ಈ ವಾರದ ಕಾಡಿನ ಕಥೆಗಳ ಸಾರ.

ಹಲವು ದೇಶಗಳಿಗೆ ಆನೆಗಳೇ ಆಹಾರವಾಗುವ ಸನ್ನಿವೇಶ ಎದುರಾಗಿದೆ.
ಹಲವು ದೇಶಗಳಿಗೆ ಆನೆಗಳೇ ಆಹಾರವಾಗುವ ಸನ್ನಿವೇಶ ಎದುರಾಗಿದೆ.

ನಮ್ಮಲ್ಲಿ ವಿಪರೀತ ಬರ. ಆಹಾರವೂ ಇಲ್ಲ. ನೀರು ಇಲ್ಲ. ಜನರಿಗೆ ಆಹಾರ ಕೊಡಲು ಆನೆ ಸಹಿತ ಹಲವು ವನ್ಯಜೀವಿಗಳನ್ನು ಕೊಲ್ಲದೇ ಪರ್ಯಾಯ ಮಾರ್ಗವೇ ಇಲ್ಲ. ಇದರಿಂದ ಆನೆ, ಕಾಡೆಮ್ಮೆ, ಜೀಬ್ರಾಗಳನ್ನು ಕೊಂದು ಆಹಾರವಾಗಿ ಬಳಸಬಹುದು.. ಹೀಗೊಂದು ಆದೇಶ ನಮೀಬಿಯಾ ದೇಶಗಳಲ್ಲಿ ಕೆಲ ದಿನಗಳ ಹಿಂದೆ ಹೊರ ಬಿದ್ದಿತು. ಇದನ್ನು ಗಮನಿಸಿದ ಜಿಂಬಾಬ್ವೆ ದೇಶ ಕೂಡ ಇದೇ ಹಾದಿ ಹಿಡಿಯಿತು. ಇಂತಹ ಆದೇಶಗಳು ಹೊರ ಬಿದ್ದಿರುವುದು ಆಫ್ರಿಕಾದ ದೇಶಗಳಲ್ಲಿ. ನಮೀಬಿಯಾದಲ್ಲಿ ಸೆಪ್ಟಂಬರ್‌ ಆರಂಭದಲ್ಲಿಯೇ ಆನೆಗಳ ಹತ್ಯೆ ಮಾಡಿ ಆಹಾರವಾಗಿ ಬಳಸುವ ಆದೇಶ ಪ್ರಕಟವಾಯಿತು. ಈಗ ಜಿಂಬಾಬ್ವೆ ಸರದಿ. ನಮೀಬಿಯಾದಲ್ಲಿ 700 ವನ್ಯಪ್ರಾಣಿಗಳನ್ನು ಕೊಲ್ಲಲು ಅನುಮತಿ ಕೊಡಲಾಗಿದೆ. ಗಿ 83 ಆನೆಗಳು, 30 ನೀರಾನೆ, 60 ಎಮ್ಮೆ, 50 ಕೃಷ್ಣಮೃಗ, 100 ಕಾಡೆಮ್ಮೆ ಮತ್ತು 300 ಜೀಬ್ರಾಗಳನ್ನು ಕೊಂದು ಆಹಾರವನ್ನು ಬಳಕೆ ಮಾಡಲಾಗುತ್ತಿದೆ. ಈಗ ಜಿಂಬಾಬ್ವೆ ಕೂಡ ನಮೀಬಿಯಾ ಹಾದಿ ಹಿಡಿದಿದೆ. ಅಲ್ಲಿಯೂ ಕಾಡಾನೆಗಳು ಸೇರಿ ಹಲವು ವನ್ಯಜೀವಿಗಳನ್ನು ಕೊಲ್ಲಲು ಸೂಚಿಸಲಾಗಿದೆ.

ಇಂತಹ ಪರಿಸ್ಥಿತಿ ಬರೀ ನಮೀಬಿಯಾ, ಜಿಂಬಾಬ್ವೆಯಲ್ಲಿ ಮಾತ್ರ ಇಲ್ಲ. ಆಫ್ರಿಕಾದ ಹಲವು ದೇಶಗಳು ಇಂತಹ ಸನ್ನಿವೇಶವನ್ನು ಎದುರಿಸುತ್ತಿವೆ. ಜಾಂಬಿಯಾ, ಬೋಟ್ಸ್ವಾನದಲ್ಲೂ ಕೂಡ ಇದೇ ಹಾಡಿ ಹಿಡಿಯುತ್ತಿವೆ. ಮಾನವ ನಿರ್ಮಿತ ಪ್ರಕೃತಿ ವಿಕೋಪಗಳ ಪರಿಣಾಮ ಹವಾಮಾನ ವೈಪರಿತ್ಯ ರೂಪದಲ್ಲಿ ನಮ್ಮನ್ನು ಕಾಡುತ್ತಿವೆ. ಮನುಷ್ಯ ಇದರ ಫಲವನ್ನು ಉಣ್ಣುತ್ತಿದ್ದಾನೆ. ವನ್ಯಜೀವಿಗಳನ್ನೂ ಬಿಡುವ ಸ್ಥಿತಿಯಲ್ಲಿ ಇಲ್ಲ.

ಮಾನವ ನಿರ್ಮಿತ ರಣ ಭೀಕರ ಬರ

ಹಾಗೆ ನೋಡಿದರೆ ಆಫ್ರಿಕಾ ದೇಶಗಳು ಆನೆಯನ್ನು ಮಾಂಸವಾಗಿ ಬಳಸುವುದು ಹೊಸದೇನೂ ಅಲ್ಲ. ಅಲ್ಲಿನ ನಾಗರೀಕತೆ ಇರುವಾಗಿನಿಂದಲೂ ಆಹಾರವಾಗಿ ಬಳಕೆ ಮಾಡಲಾಗುತ್ತದೆ. ಆ ದೇಶಗಳ ಪ್ರಮುಖ ಆಹಾರಗಳಲ್ಲಿ ಆನೆಯೂ ಕೂಡ ಒಂದು. ಇದನ್ನು ಹೊರ ದೇಶಗಳಿಗೂ ರಫ್ತು ಮಾಡುವ ದೊಡ್ಡ ಜಾಲವೇ ಅಲ್ಲಿದೆ. ಈಗ ಬೇಟೆ ನಿಷೇಧವಾಗಿರುವುದರಿಂದ ಮಾಂಸವನ್ನು ಮುಕ್ತವಾಗಿ ಬಳಸುವಂತಿಲ್ಲ. ಆದರೂ ಅಕ್ರಮ ಬೇಟೆಯಿಂದ ಆನೆಗಳನ್ನು ಕೊಲ್ಲುವ ಪ್ರಮಾಣವೇನೂ ಆಫ್ರಿಕಾದ ದೇಶಗಳಲ್ಲಿ ಕಡಿಮೆಯಾಗಿಲ್ಲ. ಈಗಲೂ ಒಂದು ಕೆಜಿಗೆ ಒಂದು ಸಾವಿರ ರೂ.ಗೂ ಅಧಿಕ ಬೆಲೆ ಆನೆ ಮಾಂಸಕ್ಕೆ ಇದೆ. ಅದನ್ನು ಹಲವು ರೂಪದ ಖಾದ್ಯಗಳಾಗಿ ಬಳಕೆ ಮಾಡುವ ದೊಡ್ಡ ಸಂಖ್ಯೆಯೇ ಆಫ್ರಿಕಾ ದೇಶಗಳಲ್ಲಿ ಇದೆ. ಬೇಟೆ ಪ್ರಮಾಣ ಹೆಚ್ಚಾಗಿ ಆನೆ ಸಂತತಿಯೇ ತಗ್ಗಬಹುದು ಎನ್ನುವ ಆತಂಕದಿಂದ ಅಲ್ಲಿನ ದೇಶಗಳು ಬೇಟೆ ನಿಷೇಧಿಸಿವೆ. ಬರದ ಸನ್ನಿವೇಶ ಎದುರಾದಾಗಲೂ ಹೀಗೆ ಅಧಿಕೃತ ಮಾಂಸ ಸೇವನೆಗೆ ಅವಕಾಶ ನೀಡಿರಲಿಲ್ಲ.

ಈಗ ಪರಿಸ್ಥಿತಿ ಹೇಗಿದೆ ಎಂದರೆ ಸುಮಾರು ನೂರು ವರ್ಷ ಅವಧಿಯಲ್ಲಿಯೇ ಕಂಡು ಕೇಳರಿಯದ ಭೀಕರ ಬರಗಾಲ ನಮೀಬಿಯಾ ಸಹಿತ ಹಲವು ದೇಶಗಳಲ್ಲಿದೆ. ಅಲ್ಲಿ ಆಹಾರಕ್ಕೂ ತತ್ವಾರ, ನೀರಿನ ಪರಿಸ್ಥಿತಿ ಕೇಳುವ ಹಾಗಿಲ್ಲ. ಪ್ರಾಕೃತಿಕ ವ್ಯತ್ಯಾಸಗಳಿಗೆ ಸರ್ಕಾರವೂ ಏನು ಮಾಡದ ಸ್ಥಿತಿಗೆ ತಲುಪಿದ್ದರೆ, ಜನ ತಮಗೆ ನೀರು, ಆಹಾರ ಸಿಕ್ಕರೆ ಸಾಕು ಎನ್ನುವ ಹಪಹಪಿತನದಲ್ಲಿದ್ದಾರೆ. ಇದರಿಂದ ಆನೆಗಳನ್ನಾದರೂ ತಿಂದು ಬದುಕುತ್ತೇವೆ ಎನ್ನುವ ಹಂತಕ್ಕೂ ಬಂದಿದ್ದಾರೆ. ಇದು ದೊಡ್ಡ ದುರಂತಕ್ಕೆ ಕಾರಣವಾಗಬಾರದು ಎಂದು ಅಲ್ಲಿನ ಸರ್ಕಾರಗಳೇ ಆನೆಗಳನ್ನು ಕೊಲ್ಲುವ ನಿರ್ಧಾರವನ್ನು ಪ್ರಕಟಿಸಿ ಕುಳಿತಿವೆ.

ನಮೀಬಿಯಾದಲ್ಲಿ ಬರಗಾಲದ ಕಾರಣ ಈ ವರ್ಷದ ಆಗಸ್ಟ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ . 14 ಲಕ್ಷ ಜನಸಂಖ್ಯೆ ಇರುವ ನಮೀಬಿಯಾ ದೇಶದ ಅರ್ಧದಷ್ಟು ಜನರು ಆಹಾರವಿಲ್ಲದೇ ಕಂಗಲಾಗಿದ್ದಾರೆ. ಅಲ್ಲಿನ ಅರಣ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಕಾಡುಪ್ರಾಣಿಗಳಿದ್ದು, ಅವುಗಳನ್ನು ಕೊಲ್ಲುವುದರಿಂದ ಜಲಮೂಲಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಆಹಾರವೂ ಸಿಗಲಿದೆ ಎನ್ನುವ ಲೆಕ್ಕಾಚಾರ ಈ ಆದೇಶದ ಹಿಂದೆ ಇದ್ದಂತಿದೆ.

ಬೋಟ್ಸ್ವಾನಾದಲ್ಲಿ 1,30,000 ಆನೆಗಳಿದ್ದರೆ, ಸರ್ಕಾರವು 2014 ರಲ್ಲಿ ಆನೆ ಬೇಟೆಯನ್ನು ನಿಷೇಧಿಸಿತ್ತು. ಆದರೆ, ಬರಪೀಡಿತ ಸ್ಥಳೀಯರ ತೀವ್ರ ಒತ್ತಡದಿಂದಾಗಿ 2019 ರಲ್ಲಿ ಬೇಟೆ ನಿಷೇಧ ಆದೇಶವನ್ನು ತೆಗೆದುಹಾಕಲಾಯಿತು. ದಕ್ಷಿಣ ಆಫ್ರಿಕಾ ಭಾಗದಲ್ಲಿಯೇ 2 ಲಕ್ಷಕ್ಕೂ ಹೆಚ್ಚು ಆನೆಗಳಿವೆ. ಕಳೆದ ವರ್ಷ ಜಲಮೂಲಗಳು ಬತ್ತಿ ಹೋಗಿದ್ದರಿಂದ ನೂರಾರು ಆನೆಗಳು ಅಲ್ಲಿ ಜೀವ ಬಿಟ್ಟಿದ್ದವು. ಈಗಾಗಲೇ 150 ಕ್ಕೂ ಹೆಚ್ಚು ಅರಣ್ಯ ಪ್ರಾಣಿಗಳನ್ನು ಸರ್ಕಾರದಿಂದಲೇ ಕೊಂದು ಮಾಂಸವನ್ನು ದೇಶದ ಬರ ಪೀಡಿತ ಪ್ರದೇಶಗಳಿಗೆ ಆಹಾರಕ್ಕಾಗಿ ವಿತರಣೆ ಮಾಡಿದ್ದೂ ಆಗಿದೆ. ಇದು ಇನ್ನಷ್ಟು ಹೆಚ್ಚುವ ಸಾಧ್ಯತೆಗಳೂ ಅಧಿಕವಾಗಿದೆ.

ಏಷ್ಯಾದಲ್ಲಿ ಹಾಗಿಲ್ಲ

ಕಾಡಾನೆಗಳಲ್ಲಿ ಎರಡು ವಿಧ. ಅದು ಆಫ್ರಿಕನ್‌ ಆನೆ ಹಾಗೂ ಏಷಿಯನ್‌ ಆನೆ. ಆಫ್ರಿಕನ್‌ ಆನೆಗಳು ಆಫ್ರಿಕಾದ ಹೆಚ್ಚಿನ ದೇಶಗಳಲ್ಲಿವೆ. ಕೆಲವು ದೇಶಗಳಲ್ಲಿ ಲಕ್ಷಕ್ಕೂ ಮಿಗಿಲಾಗಿದ್ದರೆ ಇನ್ನಷ್ಟು ಕಾಡುಗಳಲ್ಲಿ ಕೊಂಚ ಕಡಿಮೆ ಇವೆ. ನಮೀಬಿಯಾ, ಜಿಂಬಾಬ್ವೆ ಕೂಡ ಹೆಚ್ಚು ಆನೆಗಳ ಸಾಂಧ್ರತೆ ಇರುವ ದೇಶಗಳೇ. ಆದರೆ ಏಷಿಯನ್‌ ಆನೆಗಳ ಪ್ರಮಾಣ ಕಡಿಮೆಯೇ. ಅದರಲ್ಲೂ ಭಾರತ, ಶ್ರೀಲಂಕಾ, ಕಾಂಬೋಡಿಯಾದಲ್ಲಿ ಏಷಿಯನ್‌ ಆನೆಗಳಿವೆ. ಭಾರತದಲ್ಲಿ ಅಂದಾಜು 25 ಸಾವಿರ ಆನೆಗಳು ಇದ್ದರೆ ಹೆಚ್ಚು. ದಕ್ಷಿಣ ಭಾರತದಲ್ಲಿ ಹತ್ತು ಸಾವಿರ, ಈಶಾನ್ಯ ರಾಜ್ಯಗಳಲ್ಲಿ ಹದಿನಾರು ಸಾವಿರಕ್ಕೂ ಹೆಚ್ಚು ಆನೆಗಳು ನೆಲೆಗೊಂಡಿವೆ. ಇಡೀ ದೇಶದಲ್ಲಿ ಕರ್ನಾಟಕ ಬಿಟ್ಟರೆ ಹೆಚ್ಚು ಆನೆಗಳಿರುವುದು ಅಸ್ಸಾಂನಲ್ಲಿ.

ಆಫ್ರಿಕಾ ದೇಶಗಳಿಗೆ ಆನೆ ಆಹಾರ ಸಂಸ್ಕೃತಿಯಾದರೆ ಭಾರತ ಸಹಿತ ಹಲವು ದೇಶಗಳಿಗೆ ಆನೆ ದೈವದ ಸಂಕೇತ. ಆನೆಯನ್ನು ಗಣೇಶನ ರೂಪ ಎಂದು ನೋಡುವುದರಿಂದ ಇಲ್ಲಿ ಆಹಾವಾಗಿ ಆನೆಗಳನ್ನು ಬಳಸುವುದಿಲ್ಲ. ಕರ್ನಾಟಕ, ಕೇರಳ ಸೇರಿ ದಕ್ಷಿಣ ಭಾರತದ ನಾಲ್ಕೈದು ರಾಜ್ಯಗಳಲ್ಲೂ ಈ ಭಾವನೆಯಿದೆ. ಈಶಾನ್ಯ ಭಾರತದ ಅಸ್ಸಾಂನಲ್ಲಂತೂ ಆನೆ ಹಾಗೂ ಘೇಂಡಾ ಮೃಗಗಳನ್ನು ದೇವರ ರೂಪದಲ್ಲಿಯೇ ನೋಡಲಾಗುತ್ತದೆ. ಆಹಾರವಾಗಿ ಎಂದಿಗೂ ಬಳಸಿದ ಉದಾಹರಣೆ ಇಲ್ಲ. ಇದು ಈಗಲೂ ಭಾರತದಲ್ಲಿದೆ. ಆದರೆ ಏಷ್ಯಾದ ಕಾಂಬೋಡಿಯಾ, ಬರ್ಮಾದಲ್ಲಿ ಹಿಂದೆಲ್ಲಾ ಆನೆ ಬೇಟೆ, ಆಹಾರ ಬಳಕೆ ಇತ್ತಾದರೂ ಈಗ ಅದೂ ನಿಷೇಧವಾಗಿದೆ. ಶ್ರೀಲಂಕಾದಲ್ಲೂ ಇಂತಹ ಸಂಪ್ರದಾಯ ಇಲ್ಲ.

ಮೋಜಿನ ಬೇಟೆ ಅವ್ಯಾಹತ

ಇನ್ನು ಆಫ್ರಿಕಾದ ದೇಶಗಳಲ್ಲಿ ಆನೆಗಳನ್ನು ಬೇಟೆಯಾಡಿ ಕೊಲ್ಲುವ ಮೋಜಿನ ದಂಧೆ ಈಗಲೂ ಇದೆ. ಯೂರೋಪ್‌ ದೇಶದ ಜನರಿಗೆ ಟ್ರೋಫಿ ಹಂಟಿಂಗ್‌ ಎನ್ನುವ ಬೇಟೆ ಈಗಲೂ ಪ್ರಮುಖ ಹವ್ಯಾಸವೇ. ಇದಕ್ಕಾಗಿ ಲಕ್ಷಗಟ್ಟಲೇ ಖರ್ಚು ಮಾಡಿಕೊಂಡು ಪ್ರವಾಸ ಹೋಗಿ ಬೇಟೆಯಾಡಿ ಬರುವವರೂ ಇದ್ದಾರೆ. ಹಲವಾರು ದೇಶಗಳಲ್ಲಿ ಇದು ಅಕ್ರಮವಾಗಿ ಈಗಲೂ ಮುಂದುವರಿದಿದೆ.

ಭಾರತದಲ್ಲೂ ಇಂತಹ ಟ್ರೋಫಿ ಹಂಟಿಂಗ್‌ ಹವ್ಯಾಸ ಪ್ರಬಲವಾಗಿಯೇ ಇತ್ತು. ಮೈಸೂರು ಮಹಾರಾಜರ ಕಾಲದಲ್ಲಿ ವಿದೇಶಿ ಅತಿಥಿಗಳು ನಾಗರಹೊಳೆ, ಬಂಡೀಪುರ ಕಾಡಿಗೆ ಇದಕ್ಕೆ ಬರುತ್ತಿದ್ದರು. ಇಲ್ಲಿ ತಂಗಿ ಬೇಟೆಯಾಡಿ ಹೋಗೋರು. ಆನಂತರ ಅವರು ಬೇಟೆಯಾಡಿದ ಪ್ರಾಣಿಯನ್ನು ಸ್ಟಫ್ಫಿಂಗ್‌ ಮೂಲಕ ಟ್ರೋಫಿ ಮಾದರಿಯಲ್ಲಿ ಅವರಿಗೆ ಉಡುಗೊರೆಯಾಗಿ ನೀಡಲಾಗುತಿತ್ತು. ಈಗಲೂ ಮೈಸೂರು ಅರಮನೆಯಲ್ಲಿ ಮಹಾರಾಜರು ಬೇಟೆಯಾಡಿದ ಆನೆ, ಕಾಡೆಮ್ಮೆ, ಚಿರತೆ, ಜಿಂಕೆ, ಕಡವೆ ಸಹಿತ ಹಲವಾರು ಪ್ರಾಣಿಗಳ ಟ್ರೋಫಿಗಳ ಸಂಗ್ರಹವೇ ಇದೆ. ಅರಮನೆಗಳಲ್ಲಿ ಅವುಗಳನ್ನು ಅಲಂಕಾರಿಕವಾಗಿ ಬಳಕೆ ಮಾಡುವುದು ಹಿಂದೆಲ್ಲಾ ಇತ್ತು. ಈಗಲೂ ಕೆಲವರು ಉಳಿಸಿಕೊಂಡಿದ್ದಾರೆ.

ಆಹಾರವಾಗಿ ಕಾಡು ಪ್ರಾಣಿಗಳು

ಆಹಾರವಾಗಿ ಕಾಡು ಪ್ರಾಣಿಗಳನ್ನು ಬಳಸುವುದು ಬೇರೆ ದೇಶ ಮಾತ್ರವಲ್ಲ. ಭಾರತದಲ್ಲೂ ಈಗಲೂ ಗಟ್ಟಿಯಾಗಿದೆ. ಕಾಡು ಕೋಳಿ, ಮೊಲ, ಬೆಕ್ಕು, ಜಿಂಕೆ ಬೇಟೆಯಾಡುವುದು ನಿಂತಿಲ್ಲ. ಮೂರು ಕೆಜಿಯಷ್ಟು ಮಾಂಸ ತೂಗುವ ಪ್ರಾಣಿಗಳನ್ನು ಕೊಂದು ಆಯಾ ದಿನದ ಮಟ್ಟಿಗೆ ಊಟ ಮಾಡಿ ಮುಗಿಸುವುದು ನಡೆದೇ ಇದೆ. ಆಹಾರಕ್ಕಾಗಿ ಕಾಡುಕೋಣ, ಜಿಂಕೆ, ಕಡವೆ, ಕಾಡೆಮ್ಮೆಯಂತಹ ಪ್ರಾಣಿಗಳ ಬೇಟೆಯೂ ಅವ್ಯಾಹತವಾಗಿ ನಡೆದಿದೆ. ವರ್ಷಕ್ಕೆ ಒಂದೆರಡು ಸಾವಿರಕ್ಕೂ ಅಧಿಕ ಪ್ರಕರಣಗಳು ಅರಣ್ಯ ಇಲಾಖೆಯಲ್ಲಿ ಪ್ರಾಣಿ ಬೇಟೆಯ ಮೇಲೆಯೇ ದಾಖಲಾಗುತ್ತವೆ. ಮೋಜಿಗಾಗಿ ಹೋಗಿ ಬೇಟೆಯಾಡಿ ಸಿಕ್ಕಿ ಹಾಕಿಕೊಂಡ ಅದೆಷ್ಟೋ ಉದಾಹರಣೆಗಳೂ ಇವೆ. ಇದರಲ್ಲಿ ಚಲನಚಿತ್ರ ನಟರು, ಸೆಲೆಬ್ರೆಟಿಗಳ ಪಟ್ಟಿಯೇ ದೊಡ್ಡದು.

ಭಾರತದಲ್ಲಿ ಕಾಡು ಪ್ರಾಣಿಗಳ ಬೇಟೆ, ಆಹಾರವಾಗಿ ಬಳಸುವುದು ಒಂದು ರೀತಿಯಲ್ಲಿ ಆದರೆ ಆಫ್ರಿಕಾದಲ್ಲಿ ಮಾತ್ರ ಪರಿಸ್ಥಿತಿ ಭಿನ್ನವೇ. ನಮ್ಮಲ್ಲಿ ಬರದ ವಾತಾವರಣ ಅಲ್ಲಲ್ಲಿ ಕಾಣಿಸಿಕೊಂಡರೂ ಆಹಾರದ ಕೊರತೆ ಇಲ್ಲ. ಬೇಟೆಯಿದ್ದರೂ ವಿಚಕ್ಷಣೆಯೂ ಅಷ್ಟೇ ಗಟ್ಟಿಯಾಗಿದೆ. ಸರ್ಕಾರವೇ ವನ್ಯಜೀವಿಗಳನ್ನು ಕೊಂದು ಆಹಾರವಾಗಿ ನೀಡುತ್ತೇವೆ ಎನ್ನುವ ಮಟ್ಟಿಗಂತೂ ತಲುಪಿಲ್ಲ. ನಮ್ಮಲ್ಲಿ ಕೆಲವು ಪ್ರಾಣಿಗಳು ಹಿಂದೆಯೇ ಅವ್ಯಾಹತ ಬೇಟೆಗೆ ಸಿಲುಕಿ ಕಣ್ಮರೆಯಾಗಿವೆ ಕೂಡ. ಇನ್ನಷ್ಟು ಪ್ರಾಣಿಗಳ ಸಂಖ್ಯೆಯಂತೂ ಚೆನ್ನಾಗಿಯೇ ಇದೆ.

ಹವಾಮಾನ ವೈಪರಿತ್ಯದ ಪರಿಣಾಮ

ಮಾನವ ನಿರ್ಮಿತ ಹವಾಮಾನ ವೈಪರಿತ್ಯಗಳು ಆಫ್ರಿಕಾ ದೇಶಗಳಲ್ಲಿ ಹೆಚ್ಚಾಗಿ ಮಳೆ ಪ್ರಮಾಣ ಕಡಿಮೆಯಾಗಿ ಬಿಕ್ಕಟ್ಟು ಭೀಕರಗೊಂಡಿದೆ. ತಾಪಮಾನವೂ ಏರಿಕೆ ಕಂಡು ನೀರಿಲ್ಲದೇ ಬೆಳೆಗಳು ಒಣಗಿ ಆಹಾರ ಉತ್ಪಾದನೆ ಕುಂಠಿತಗೊಂಡಿವೆ. ಇದರಿಂದಾಗಿ ಈ ಭಾಗದ ಲಕ್ಷಾಂತರ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅವರು ಇತರ ದೇಶಗಳು ನೀಡುವ ಸಹಾಯ ಹಸ್ತಕ್ಕಾಗಿ ಕಾದು ಕುಳಿತಿದ್ದಾರೆ. ಲಭ್ಯ ಇರುವ ಯಥೇಚ್ಛ ವನ್ಯಜೀವಿಗಳನ್ನೇ ಆಹಾರವನ್ನಾಗಿ ಒದಗಿಸುವ ಹಂತಕ್ಕೂ ಆ ದೇಶಗಳು ತಲುಪಿವೆ. ಇದು ಮೇಲ್ನೋಟಕ್ಕೆ ಬರದ ಸಮಸ್ಯೆಯಂತೆ ಕಂಡರೂ ಜನರಿಗೂ ಆನೆ ಆಹಾರ ಸೇವನೆ ಅಧಿಕೃತಕವಾಗಿ ಬೇಕಾಗಿದೆ. ಆದರೆ ಅಲ್ಲಿನ ಸರ್ಕಾರಗಳು ಜಗತ್ತಿನ ಗಮನ ಸೆಳೆದು ಬರಕ್ಕೆ ಹೆಚ್ಚಿನ ಪರಿಹಾರಗಳನ್ನು ಪಡೆದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿವೆ. ಆನೆ ಸಹಿತ ವನ್ಯಜೀವಿಗಳನ್ನು ಕೊಂದು ಊಟ ಹಾಕುವ ಸ್ಥಿತಿ ಬಂದಿದೆ ಎನ್ನುವುದನ್ನು ತೋರುವುದೂ ಸರ್ಕಾರಗಳ ಉದ್ದೇಶ ಇರುವುದನ್ನೂ ತಳ್ಳಿ ಹಾಕುವಂತಿಲ್ಲ.

ಸರ್ಕಾರಗಳೇ ವನ್ಯಜೀವಿಗಳನ್ನು ಕೊಂದು ಆಹಾರ ನೀಡುವಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿದೆ. ಜಾಗತಿಕವಾಗಿ ಹಲವು ಭಾಗಗಳಲ್ಲಿ ಹವಾಮಾನ ವೈಪರಿತ್ಯದ ಬಿಸಿ ಮನುಷ್ಯನಿಗೆ ಮಾತ್ರವೇ ತಟ್ಟಿಲ್ಲ. ಮನುಷ್ಯನ ಅಟಾಟೋಪಗಳ ಫಲ ಕಾಡು ಉಳಿಸುವ ವನ್ಯಜೀವಿಗಳಿಗೂ ತಟ್ಟಿರುವುದು ಸುಳ್ಳಲ್ಲ.

mysore-dasara_Entry_Point