H Vishwanath Profile: ಒಂದಾವೃತಿ ಪಕ್ಷಾಂತರ; ಮತ್ತೆ ಕಾಂಗ್ರೆಸ್‌ ಕಡೆಗೆ ಮುಖ ಮಾಡಿರುವ ಎಚ್‌ ವಿಶ್ವನಾಥ್‌ ಪರಿಚಯ ಇಲ್ಲಿದೆ
ಕನ್ನಡ ಸುದ್ದಿ  /  ಕರ್ನಾಟಕ  /  H Vishwanath Profile: ಒಂದಾವೃತಿ ಪಕ್ಷಾಂತರ; ಮತ್ತೆ ಕಾಂಗ್ರೆಸ್‌ ಕಡೆಗೆ ಮುಖ ಮಾಡಿರುವ ಎಚ್‌ ವಿಶ್ವನಾಥ್‌ ಪರಿಚಯ ಇಲ್ಲಿದೆ

H Vishwanath Profile: ಒಂದಾವೃತಿ ಪಕ್ಷಾಂತರ; ಮತ್ತೆ ಕಾಂಗ್ರೆಸ್‌ ಕಡೆಗೆ ಮುಖ ಮಾಡಿರುವ ಎಚ್‌ ವಿಶ್ವನಾಥ್‌ ಪರಿಚಯ ಇಲ್ಲಿದೆ

H Vishwanath Profile: ರಾಜಕೀಯ ಮಹತ್ವಾಕಾಂಕ್ಷೆಯ ಕಾರಣ ದಶಕದಿಂದ ಇದ್ದ ಕಾಂಗ್ರೆಸ್‌ ಬಿಟ್ಟು, ಜೆಡಿಎಸ್‌, ಬಿಜೆಪಿ ಆಗಿ ಈಗ ಮತ್ತೆ ಕಾಂಗ್ರೆಸ್‌ ಕಡೆಗೆ ಮುಖಮಾಡಿದ್ದಾರೆ ಎಚ್.ವಿಶ್ವನಾಥ್.‌ ಒಂದಾವೃತಿ ಪಕ್ಷಾಂತರ ಮಾಡಿ ಏಳುಬೀಳುಗಳೊಂದಿಗೆ ರಾಜಕೀಯ ಮುಂದುವರಿಸಿರುವ ಎಚ್.ವಿಶ್ವನಾಥ್‌ ಅವರ ಕಿರುಪರಿಚಯ ಇಲ್ಲಿದೆ.

ಅಡಗೂರು ಎಚ್‌.ವಿಶ್ವನಾಥ್‌
ಅಡಗೂರು ಎಚ್‌.ವಿಶ್ವನಾಥ್‌ (Wikipedia)

ಹಳ್ಳಿಹಕ್ಕಿ ಎಂದೇ ಗುರುತಿಸಿಕೊಂಡಿರುವ ಅಡಗೂರು ಹುಚ್ಚೇಗೌಡ ವಿಶ್ವನಾಥ್‌ ಅವರು ಒಂದಾವೃತಿ ಪಕ್ಷಾಂತರ ಮುಗಿಸಿದ್ದಾರೆ. ಈಗ ಮತ್ತೆ ಕಾಂಗ್ರೆಸ್‌ ಪಕ್ಷದ ಕಡೆಗೆ ಮುಖಮಾಡಿರುವ ಕಾರಣ ಅವರ ಕಿರುಪರಿಚಯ ಇಲ್ಲಿದೆ.

ನಾಲ್ಕು ದಶಕ ಕಾಲ ಕಾಂಗ್ರೆಸ್‌ನಲ್ಲಿದ್ದ ಎಚ್‌.ವಿಶ್ವನಾಥ್‌, 2017ರಲ್ಲಿ ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಸೇರಿದರು. 2019ರಲ್ಲಿ ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಿದರು. ಎಂಎಲ್‌ಸಿಯಾಗಿರುವ ಅವರು ಈಗ ಮತ್ತೆ ಕಾಂಗ್ರೆಸ್‌ ಸೇರುವ ತವಕದಲ್ಲಿದ್ದಾರೆ. ಒಂದು ರೀತಿಯಲ್ಲಿ ಅವರ ಪಕ್ಷಾಂತರ ಒಂದಾವೃತಿ ಆದಂತೆ!

ಎಚ್‌. ವಿಶ್ವನಾಥ್ ಅವರು 1970 ರ ದಶಕದಲ್ಲಿ ಆಗಿನ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ನೇತೃತ್ವದಲ್ಲಿ ಯುವ ನಾಯಕರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದವರು. ಪ್ರಮುಖ ಕುರುಬ ನಾಯಕರಾಗಿದ್ದ ಅವರು 1978ರಲ್ಲಿ ಮೊದಲ ಬಾರಿಗೆ ಕೆಆರ್ ನಗರ ಶಾಸಕರಾಗಿ ಆಯ್ಕೆಯಾದರು. ಹಾಗೆ ಪ್ರಾರಂಭವಾದ ಅವರ ರಾಜಕೀಯ ಬದುಕು ರಾಜಕೀಯ ಮಹತ್ವಾಕಾಂಕ್ಷೆಯ ಕಾರಣ ಸೈದ್ಧಾಂತಿಕವಾದ ತಲ್ಲಣಗಳನ್ನು ಎದುರಿಸಿದೆ. ಈಗ ಅವರು ವಿಧಾನ ಪರಿಷತ್‌ನ ನಾಮನಿರ್ದೇಶಿತ ಸದಸ್ಯರು.

ವಿಶ್ವನಾಥ್ ಸ್ಪರ್ಧಿಸಿದ್ದ 10 ವಿಧಾನಸಭಾ ಚುನಾವಣೆಗಳ ಪೈಕಿ ನಾಲ್ಕು ಗೆದ್ದಿದ್ದಾರೆ. ಕೆ.ಆರ್.ನಗರ ಕ್ಷೇತ್ರದಿಂದ 1978, 1989, 1999ರಲ್ಲಿ ಗೆದ್ದು, 1983, 1985, 1994, 2004, 2008ರಲ್ಲಿ ಸೋತರು. ವಿಶ್ವನಾಥ್ ಅವರು 1989 ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು ಮತ್ತು 1999 ರಲ್ಲಿ ಶಿಕ್ಷಣ ಸಚಿವರಾಗಿದ್ದರು. ನಂತರ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರಕ್ಕೆ ತೆರಳಿ 2009ರಲ್ಲಿ ಗೆದ್ದು 2014ರಲ್ಲಿ ಸೋತಿದ್ದರು. 2018 ರಲ್ಲಿ, ಅವರು ಹುಣಸೂರಿನಿಂದ ಗೆದ್ದರು. ಬಿಜೆಪಿ ಸರ್ಕಾರ ರಚನೆಗೆ ಅನುಕೂಲ ಮಾಡಿಕೊಡಲು ರಾಜೀನಾಮೆ ನೀಡಿದರು. ಆದರೆ 2019 ರ ಉಪಚುನಾವಣೆಯಲ್ಲಿ ಅದೇ ಕ್ಷೇತ್ರದಲ್ಲಿ ಸೋತರು.

ಪಕ್ಷಾಂತರದ ಹಾದಿ...

ದಶಕಗಳಿಂದ ಕಾಂಗ್ರೆಸ್‌ನಲ್ಲಿದ್ದ ಎಚ್.ವಿಶ್ವನಾಥ್‌ 2017ರ ತನಕವೂ ಜೆಡಿಎಸ್‌ನ ನಾಯಕರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಅವರ ಪುತ್ರರಾದ ಎಚ್‌.ಡಿ.ರೇವಣ್ಣ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕಟು ಟೀಕಾಕಾರರಾಗಿದ್ದರು. 2017ರಲ್ಲಿ ಅವರು ಜೆಡಿಎಸ್‌ ನಾಯಕರ ಸೆಳೆತಕ್ಕೆ ಒಳಗಾಗಿ ಪಕ್ಷ ಬಿಡುವ ನಿರ್ಧಾರಕ್ಕೆ ಬಂದ ನಂತರದಲ್ಲಿ ಸಿದ್ದರಾಮಯ್ಯ ಅವರ ಕಟುಟೀಕಾಕಾರರಾದರು.

ದಶಕಗಳಿಂದ ಇದ್ದ ಪಕ್ಷವನ್ನು ಬಿಡುವಂತಾಗಲು ಸಿದ್ದರಾಮಯ್ಯ ಕಾರಣ ಎಂದು ಹೇಳತೊಡಗಿದರು. ಈ ನಡುವೆ, 2017ರ ಜುಲೈ 4ರಂದು ಅವರು ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಸೇರಿದರು. ಅಲ್ಲಿ ಅವರನ್ನು ಪಕ್ಷದ ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದರು. ಮತ್ತು 2018ರ ಆಗಸ್ಟ್‌ 5ರಂದು ಅದರ ರಾಜ್ಯಾಧ್ಯಕ್ಷರಾದರು. ಇದರ ಬೆನ್ನಿಗೆ 2008 ಮತ್ತು 2013ರಲ್ಲಿ ವಿಶ್ವನಾಥ್ ಅವರನ್ನು ಎರಡು ಬಾರಿ ಸೋಲಿಸಿದ್ದ ಶಾಸಕ ಸಾ.ರಾ ಮಹೇಶ್ ಅವರು ಜೆಡಿಎಸ್‌ಗೆ ಎಂಟ್ರಿ ಕೊಟ್ಟಿದ್ದರು. ಕುಮಾರಸ್ವಾಮಿಯವರ ಆಪ್ತವಲಯ ಸೇರಿದ ಸಾ.ರಾ.ಮಹೇಶ್‌ ಜತೆಗೆ ವಿಶ್ವನಾಥ್‌ ಅವರ ಭಿನ್ನಾಭಿಪ್ರಾಯ ಹೆಚ್ಚಾಯಿತು. ಮುಂದೆ 2019ರ ಜೂನ್‌ 4ರಂದು ಪಕ್ಷದ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜ್ಯ ರಾಜಕೀಯದಲ್ಲಿ ಆಗ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಬೇಕಾದ ವೇದಿಕೆ ಸಿದ್ಧವಾಗಿತ್ತು. ಹೀಗಾಗಿ ಅವರನ್ನು ಬೆಂಬಲಿಸಲು 2019ರ ಜುಲೈ 6ರಂದು ಹುಣಸೂರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದರು ವಿಶ್ವನಾಥ್‌.

ಆಗ ವಿಶ್ವನಾಥ್ ಸೇರಿ 14 ಶಾಸಕರನ್ನು, ಅಂದಿನ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರು ಜುಲೈ 28 ರಂದು ಅನರ್ಹಗೊಳಿಸಿದರು. ಆದಾಗ್ಯೂ, ನ್ಯಾಯಾಲಯವು ನವೆಂಬರ್‌ 13ರಂದು ನೀಡಿದ ತೀರ್ಪಿನಲ್ಲಿ ಡಿಸೆಂಬರ್ 5 ರಂದು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶ ಮಾಡಿಕೊಟ್ಟಿತು

ಮುಂದೆ 2019ರ ನವೆಂಬರ್‌ 14ರಂದು ಎಚ್.ವಿಶ್ವನಾಥ್‌ ಬಿಜೆಪಿ ಸೇರಿದರು. ಅದೇ ವರ್ಷ ಡಿಸೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿದರು. ಡಿ.9ರಂದು ಫಲಿತಾಂಶ ಪ್ರಕಟವಾದಾಗ ಅವರು ಸೋಲು ಕಂಡಿದ್ದರು.

ಈ ವಿದ್ಯಮಾನದ ನಡುವೆ ವಿಶ್ವನಾಥ್ ಅವರು ಬಿಜೆಪಿಗೆ ಸೇರ್ಪಡೆಯಾದಾಗಿನಿಂದ ಅವರ ಅಸಮಾಧಾನ ಹೊಗೆಯಾಡಲು ಆರಂಭಿಸದ್ದವು. ಅವರು ಸರ್ಕಾರ, ಸಚಿವರು ಮತ್ತು ಸಹ ಶಾಸಕರ ಬಗ್ಗೆ ಅಸಮಾಧಾನ ಹೊಂದಿದ್ದರು ಮತ್ತು ಅದನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದರು. ಆರಂಭದಲ್ಲಿ 2019ರಲ್ಲಿ ಹುಣಸೂರಿನಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿದ ಬಳಿಕ ಪಕ್ಷದ ಮುಖಂಡರು ಹಾಗೂ ಸಚಿವರ ಮೇಲೆ ಸಿಟ್ಟು ತೋರಿದರು. ಪ್ರಚಾರದ ನಂತರ ಸೋಲಿನ ಬಗ್ಗೆ ಪಕ್ಷದ ನಾಯಕರನ್ನೇ ದೂಷಿಸಿದರು.

ಕೊಟ್ಟ ಭರವಸೆಯಂತೆ ಸಚಿವ ಸ್ಥಾನ ಸಿಗಲಿಲ್ಲ ಎಂದು ತೀವ್ರ ಅಸಮಾಧಾನ ತೋರಿದರು. ಕೊನೆಗೆ 2020ರ ಜುಲೈ 22ರಂದು ಲೇಖಕರ ಕೋಟಾದಲ್ಲಿ ಎಚ್.ವಿಶ್ವನಾಥ್‌ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಮನಿರ್ದೇಶನ ಮಾಡಿದರು.

ಮರಳಿ ಕಾಂಗ್ರೆಸ್‌ ಕಡೆಗೆ….

ಬಿಜೆಪಿ ಆಡಳಿತಾವಧಿ ಮುಗಿದು ಚುನಾವಣೆ ಸಮೀಪಿಸುತ್ತಿದೆ ಎನ್ನುವಾಗ, ಬಿ.ಎಸ್.ಯಡಿಯೂರಪ್ಪ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದರು. ಹೀಗಾಗಿ ಬಿಎಸ್‌ವೈ ಅವರನ್ನು ಬೆಂಬಲಿಸಿ ಬಂದ ಮತ್ತು ಅವರ ಬಳಗದಲ್ಲಿದ್ದವರು ಒಂದು ರೀತಿಯ ಭ್ರಮನಿರಸನಕ್ಕೆ ಒಳಗಾಗಿರುವುದು ಕಂಡುಬಂದಿದೆ. ಎಚ್‌.ವಿಶ್ವನಾಥ್‌ ಕೂಡ ಅದೇ ಬಳಗದಲ್ಲಿದ್ದು, ಈಗ ಮತ್ತೆ ಸಿದ್ದರಾಮಯ್ಯ ಅವರಂತಹ ನಾಯಕರ ಜತೆ ಹೊಂದಾಣಿಕೆ ಮಾಡಿಕೊಂಡು ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಂತಹ ನಾಯಕರೊಂದಿಗೆ ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳತೊಡಗಿದ್ದಾರೆ.

ಕಿರುಪರಿಚಯ

ಎಚ್‌.ವಿಶ್ವನಾಥ್‌ (ಅಡಗೂರು ಹುಚ್ಚೇಗೌಡ ವಿಶ್ವನಾಥ್‌)

ಜನನ - 15.12.1949

ಹುಟ್ಟೂರು - ಕೃಷ್ಣರಾಜನಗರ (ಮೈಸೂರು ಪ್ರಾಂತ್ಯ)

ಪತ್ನಿ -ಶಾಂತಮ್ಮ

ಮಕ್ಕಳು - ನಾಲ್ವರು ( ಪುತ್ರ ಪೂರ್ವಜ್‌ ರಾಜಕೀಯ ಆಸಕ್ತ)

Whats_app_banner