Hassan Accident: ಹಾಸನ ಜಿಲ್ಲೆಯಲ್ಲಿ ಅಪಘಾತ, ಮಗು ಸೇರಿ ಆರು ಮಂದಿ ದುರ್ಮರಣ
ಕನ್ನಡ ಸುದ್ದಿ  /  ಕರ್ನಾಟಕ  /  Hassan Accident: ಹಾಸನ ಜಿಲ್ಲೆಯಲ್ಲಿ ಅಪಘಾತ, ಮಗು ಸೇರಿ ಆರು ಮಂದಿ ದುರ್ಮರಣ

Hassan Accident: ಹಾಸನ ಜಿಲ್ಲೆಯಲ್ಲಿ ಅಪಘಾತ, ಮಗು ಸೇರಿ ಆರು ಮಂದಿ ದುರ್ಮರಣ

ಮಂಗಳೂರಿನಿಂದ ಬರುತ್ತಿದ್ದ ಕಾರು ಹಾಗೂ ಟ್ಯಾಂಕರ್‌ ನಡುವೆ ಡಿಕ್ಕಿ ಸಂಭವಿಸಿ ಆರು ಮಂದಿ ಮೃತಪಟ್ಟಿರುವ ಘಟನೆ ಹಾಸನ ಹೊರ ವಲಯದಲ್ಲಿ ನಡೆದಿದೆ.

ಹಾಸನ ಹೊರ ವಲಯದಲ್ಲಿ ಸಂಭವಿಸಿದ ಭೀಕರ ಅಪಘಾತದ ಸನ್ನಿವೇಶ.
ಹಾಸನ ಹೊರ ವಲಯದಲ್ಲಿ ಸಂಭವಿಸಿದ ಭೀಕರ ಅಪಘಾತದ ಸನ್ನಿವೇಶ.

ಹಾಸನ: ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಕರೊಬ್ಬರನ್ನು ಭೇಟಿ ಮಾಡಿಕೊಂಡು ವಾಪಾಸ್‌ ಬರುವಾಗ ಕಾರು ಹಾಗೂ ಕಂಟೈನರ್‌ನಡುವೆ ಭೀಕರ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮಗು, ಮೂವರು ಮಹಿಳೆಯರು ಸೇರಿ ಆರು ಮಂದಿ ದುರ್ಮರಣಕ್ಕೀಡಾದ ಘಟನೆಯಿದು. ಇದು ನಡೆದಿರುವುದು ಹಾಸನ ನಗರದ ಹೊರ ವಲಯದ ಈಚನಹಳ್ಳಿ ಬಳಿ. ಮೃತಪಟಟವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹಾಗೂ ದೇವನಹಳ್ಳಿ ತಾಲ್ಲೂಕಿನವರು. ಘಟನೆಯ ಭೀಕರತೆ ಎಷ್ಟಿತ್ತು ಎಂದರೆ ಕಾರಿನೊಳಗೆ ಸಿಲುಕಿದ್ದ ದೇಹಗಳನ್ನು ತೆಗೆಯಲು ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸಪಡಬೇಕಾಯಿತು.

ಮೃತರನ್ನು ಹೊಸಕೋಟೆ ತಾಲೂಕು ಅಂದರಹಳ್ಳಿ ಮತ್ತು ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದ ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರಾ, ಬಾಲಕ ಚೇತನ್ ಎಂದು ಗುರುತಿಸಲಾಗಿದೆ.

ಚಾಲಕ ರಾಕೇಶ್ ಕೂಡ ಮೃತಪಟ್ಟಿದ್ದಾನೆ.ಕಂಟೈನರ್(MH46BM3875 ) ಮತ್ತು ಕಾರು(KA53C1419) ನಡುವೆ ಅಪಘಾತ ನಡೆದಿದೆ.

ಚಿಕ್ಕಬಳ್ಳಾಪುರದ ಕಾರಿನಲ್ಲಿ ನಾರಾಯಣಪ್ಪ ಹಾಗೂ ರವಿಕುಮಾರ್‌ ಕುಟುಂಬದವರು ಎರಡು ದಿನದ ಹಿಂದೆ ಮಂಗಳೂರಿಗೆ ಹೋಗಿದ್ದರು. ಆಸ್ಪತ್ರೆಗೆ ಸೇರಿದ್ದವರನ್ನು ನೋಡಿಕೊಂಡು ಊರಿಗೆ ವಾಪಾಸ್‌ ಬರುತ್ತಿದ್ದರು. ರಾತ್ರಿಯೇ ಮಂಗಳೂರು ಕಡೆಯಿಂದ ಹೊರಟಿದ್ದು ಬೆಳಿಗ್ಗೆ 7ರ ಹೊತ್ತಿಗೆ ಇನ್ನೇನು ಹಾಸನ ಮುಟ್ಟಬೇಕು ಎನ್ನುವಾಗ ಈಚನಹಳ್ಳಿ ಬಳಿ ನಿದ್ರೆ ಮಂಪರಿನಲ್ಲಿ ಚಾಲಕ ರಾಕೇಶ್‌ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ.

ಎರಡು ವಾಹನಗಳು ವೇಗದಲ್ಲಿದ್ದುದರಿಂದ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಹೋಗಿದೆ. ನಿದ್ರೆಯಲ್ಲಿದ್ದವರು ಡಿಕ್ಕಿ ಹೊಡೆದ ವೇಗಕ್ಕೆ ಅದರಲ್ಲಿಯೇ ಸಿಲುಕಿಕೊಂಡಿದ್ದರು. ಕೂಡಲೇ ಹಾಸನ ಸಂಚಾರ ಠಾಣೆ ಪೊಲೀಸರು ಧಾವಿಸಿದರು. ರಸ್ತೆಯಲ್ಲಿನ ಸಂಚಾರ ಸರಿಪಡಿಸಿದರು. ಕಾರಿನಲ್ಲಿ ಸಿಲುಕಿದ್ದವರನ್ನು ಹೊರ ತೆಗೆಯಲು ಕಷ್ಟಪಡಬೇಕಾಯಿತು. ಈ ವೇಳೆ ಮೃತರ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದನ್ನು ಕಂಡು ಅಲ್ಲಿದ್ದವರು ಮರುಗಿದರು.

ಘಟನಾ ಸ್ಥಳಕ್ಕೆ ಎಸ್ಪಿ ಮೊಹಮ್ಮದ್‌ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಪಟ್ಟವರು ಚಿಕ್ಕಬಳ್ಳಾಪುರ ಕಡೆಯವರು ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಅಧಿಕಾರಿಗಳಿಗೆ ಕರೆ ಮಾಡಿ ವಿವರ ಪಡೆದುಕೊಂಡರು.

ಹಾಸನ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner