Hassan Scandal: ಹಾಸನ ರಿಪಬ್ಲಿಕ್‌ ಮಾಡಿಕೊಂಡಿರುವ ರೇವಣ್ಣ ಕುಟುಂಬ ಪಾಳೆಗಾರಿಕೆ ಕೊನೆಗಾಣಿಸಿ; ಹೋರಾಟಗಾರರ ಆಗ್ರಹ-hassan news hassan mp prajwal revanna scandal protester cal for end revanna family republic in hassan kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ಹಾಸನ ರಿಪಬ್ಲಿಕ್‌ ಮಾಡಿಕೊಂಡಿರುವ ರೇವಣ್ಣ ಕುಟುಂಬ ಪಾಳೆಗಾರಿಕೆ ಕೊನೆಗಾಣಿಸಿ; ಹೋರಾಟಗಾರರ ಆಗ್ರಹ

Hassan Scandal: ಹಾಸನ ರಿಪಬ್ಲಿಕ್‌ ಮಾಡಿಕೊಂಡಿರುವ ರೇವಣ್ಣ ಕುಟುಂಬ ಪಾಳೆಗಾರಿಕೆ ಕೊನೆಗಾಣಿಸಿ; ಹೋರಾಟಗಾರರ ಆಗ್ರಹ

Prajwal Revanna ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಹಾಸನದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

ಹಾಸನದಲ್ಲಿ ಗುರುವಾರ ಪ್ರತಿಭಟನೆ ಆಯೋಜನೆಗೊಂಡಿತ್ತು.
ಹಾಸನದಲ್ಲಿ ಗುರುವಾರ ಪ್ರತಿಭಟನೆ ಆಯೋಜನೆಗೊಂಡಿತ್ತು.

ಹಾಸನ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಗುರುವಾರ ಆಯೋಜಿಸಲಾಗಿದ್ದ ಹಾಸನ ಚಲೋ( Hassan Chalo) ಯಶಸ್ವಿಯಾಯಿತು. ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಹೋರಾಟಗಾರರು. ಚಿಂತಕರು, ಮಹಿಳೆಯರ ಆಕ್ರೋಶದ ದನಿ ಜೋರಾಗಿಯೇ ಇತ್ತು. ಹಾಸನ ರಿಪಬ್ಲಿಕ್‌ ಮಾಡಿಕೊಂಡಿರುವ ಎಚ್.ಡಿ.ರೇವಣ್ಣ ಅವರ ಪಾಳೆಗಾರಿಕೆಯನ್ನು ಜನ ಕೊನೆಗಾಣಿಸಬೇಕು. ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ನೀಡಬೇಕು.ಸಂತ್ರಸ್ತೆಯರಿಗೆ ಪರಿಹಾರವನ್ನೂ ನೀಡಬೇಕು ಎನ್ನುವ ಅಭಿಪ್ರಾಯವೂ ಹಾಸನ ಸಮಾವೇಶದಲ್ಲಿ ಕೇಳಿ ಬಂದಿತು.

ಹೋರಾಟಗಾರ ಎಸ್.ಆರ್. ಹಿರೇಮಠ ಮಾತನಾಡಿಹಾಸನವನ್ನು ರಿಪಬ್ಲಿಕ್ ಮಾಡಿಕೊಂಡು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಕುಟುಂಬದವರು , ಪಾಳೆಗಾರಿಕೆ ನಡೆಸುತ್ತಿದ್ದಾರೆ. ಈ ಪಾಳೆಗಾರಿಕೆಯನ್ನು ಕೊನೆಗಾಣಿಸಲು ವ್ಯವಸ್ಥಿತ ಹೋರಾಟವನ್ನು ಮುಂದುವರೆಸಬೇಕು. ಈಗಾಗಲೇ ಹೋರಾಟದಿಂದಲೇ ಬಳ್ಳಾರಿಯಲ್ಲಿನ ಪಾಳೆಗಾರಿಕೆಯನ್ನು ಮುರಿದು ಹಾಕಿದ್ದೇವೆ. ಹಾಸನದಲ್ಲಿರುವ ಪಾಳೆಗಾರಿಕೆಯನ್ನು ಕೊನೆಗಾಣಿಸುವ ತೀರ್ಮಾನ ಮಾಡಬೇಕು ಎಂದು ಹೇಳಿದರು.

ಹಾಸನ, ಹೊಳೆನರಸೀಪುರ, ಮೈಸೂರು ಭಾಗದಲ್ಲಿ ಅತ್ಯಾಚಾರ, ಅನ್ಯಾಯ ಮಾಡಿದವರ ವಿರುದ್ಧ ಸಂತ್ರಸ್ತ ಮಹಿಳೆಯರು ಹೋರಾಟ ನಡೆಸಲು ಮುಂದೆ ಬರಬೇಕು. ತಮ್ಮ ಮೇಲಾದ ದೌರ್ಜನ್ಯಗಳ ಕುರಿತು ಗಟ್ಟಿ ದನಿಯಲ್ಲಿಯೇ ಮಾತನಾಡುವಂತಾಗಬೇಕು. ಸರ್ಕಾರ ನಡೆಸುತ್ತಿರುವ ಪ್ರಮುಖರು ಹಾಸನಕ್ಕೆ ಆಗಮಿಸಿ ಸಂತ್ರಸ್ತೆಯರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ನ್ಯಾಯ ಕೊಡಿಸುವ ಭರವಸೆ ಕೊಟ್ಟು ಇಡೀ ಪ್ರಕರಣದಲ್ಲಿರುವ ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೇವೇಗೌಡರು ಕಾಳಜಿ ವಹಿಸಲಿ

ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮಿ ಮಾತನಾಡಿ, ಭಾರತದಲ್ಲಿ ಮಹಿಳಾ ಮೀಸಲಾತಿ ವಿಚಾರ ಬಂದಾಗ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು, ನಮಗೂ ಮಹಿಳೆಯರ ಮೇಲೆ ಕಾಳಜಿ ಇದೆ ಎಂದು ಸಂಸತ್ತಿನಲ್ಲಿ ಹೇಳಿದ್ದರು. ಈಗ ಹಾಸನದಲ್ಲಿ ಆಗಿರುವ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಸಂತ್ರಸ್ತೆಯರ ಪರವಾಗಿ ಅವರು ಯಾಕೆ ಕಾಳಜಿ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ನಮ್ಮ ಹೋರಾಟ ಯಾರ ವಿರುದ್ದವೂ ಅಲ್ಲ. ಆದರೆ ವ್ಯವಸ್ಥೆಯಲ್ಲಿ ಮಹಿಳೆಯರಿಗೆ, ದೀನ ದಲಿತರಿಗೆ ಅನ್ಯಾಯವಾದರೆ ಹೋರಾಟ ಮಾಡಲೇಬೇಕಾಗುತ್ತದೆ. ಅದರಲ್ಲೂ ಹಾಸನದಲ್ಲಿ ನಡೆದಿರುವ ಘಟನೆಗಳು ಇಡೀ ಹೆಣ್ಣು ಮಕ್ಕಳು ಮಾತ್ರವಲ್ಲದೇ ಇಡೀ ಸಮಾಜವೇ ತಲೆ ತಗ್ಗಿಸುವ ರೀತಿ ಇದೆ. ಸಮಾಜದಲ್ಲಿ ಹೆಣ್ಣಿನ ಘನತೆ ಕುಗ್ಗಿಸಿರುವ ವ್ಯಕ್ತಿ ವಿರುದ್ದ ಕಠಿಣ ಶಿಕ್ಷೆ ಆಗಲೇಬೇಕು. ಇಂತವರಿಗೆ ಶಿಕ್ಷೆ ನೀಡುವುದು ಇತರರಿಗೂ ಎಚ್ಚರಿಕೆಯ ಗಂಟೆಯಾಗಬೇಕು ಎಂದು ಹೇಳಿದರು.

ಸರ್ಕಾರ ನುಣುಚಿಕೊಳ್ಳದಿರಲಿ

ಕರ್ನಾಟಕ ಜನಶಕ್ತಿಯ ಮಲ್ಲಿಗೆ ಸಿರಿಮನೆ ಮಾತನಾಡಿ, ಹಾಸನದ ಪ್ರಕರಣ ಹೊರ ಬರುತ್ತಿದ್ದಂತೆ ಕಾರವಾದ ಪ್ರತಿಕ್ರಿಯೆಗಳು ಬಂದರೂ ಆನಂತರ ಪೆನ್‌ಡ್ರೈವ್‌ ಹಂಚಿದವರ ವಿರುದ್ದ ಇದನ್ನು ತಿರುಗಿಸುವ ಪ್ರಯತ್ನವೂ ಆಯಿತು. ಮಹಿಳೆಯರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸಗಳೂ ಆದವು. ಸರ್ಕಾರವು ಇದರಲ್ಲಿ ನಮ್ಮ ಪಾತ್ರ ಇಲ್ಲ ಎನ್ನುವ ರೀತಿಯೇ ವರ್ತಿಸಿತು. ಮಹಿಳೆಯರು ಬಡ್ತಿ ಇಲ್ಲವೇ ಸಣ್ಣ ಪುಟ್ಟ ಕೆಲಸಕ್ಕೆ ಹೋದಾಗ ಈ ರೀತಿ ಲೈಂಗಿಕವಾಗಿ ಬಳಸಿಕೊಂಡಿರುವುದು ನಿಜಕ್ಕೂ ಹೇಸಿಗೆ ತರುವಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುಹೆಯಿಂದ ಹೊರ ಬಂದು ಮೈತ್ರಿಕೂಟದ ಸಂಸದನ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

( ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

mysore-dasara_Entry_Point