ಕನ್ನಡ ಸುದ್ದಿ  /  ಕರ್ನಾಟಕ  /  Hd Kumaraswamy: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಹೆಚ್​​ಡಿ ಕುಮಾರಸ್ವಾಮಿ ಅವಿರೋಧ ಆಯ್ಕೆ; ಚನ್ನಪಟ್ಟಣ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ

HD Kumaraswamy: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಹೆಚ್​​ಡಿ ಕುಮಾರಸ್ವಾಮಿ ಅವಿರೋಧ ಆಯ್ಕೆ; ಚನ್ನಪಟ್ಟಣ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ

HD Kumaraswamy: ವಿಧಾನಸಭೆ ಸಭಾಧ್ಯಕ್ಷರ ಕಚೇರಿಯಲ್ಲಿ ಹಂಗಾಮಿ ಸ್ಪೀಕರ್ ಆರ್ ವಿ ದೇಶಪಾಂಡೆ ಅವರಿಂದ ಚನ್ನಪಟ್ಟಣದ ನೂತನ ಶಾಸಕರಾಗಿ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದರು.

ಸ್ಪೀಕರ್​ ಕಚೇರಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ
ಸ್ಪೀಕರ್​ ಕಚೇರಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy)ಅವರು ಮತ್ತೊಮ್ಮೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಕಳೆದ ವಿಧಾನಸಭೆ ಅವಧಿಯಲ್ಲೂ ಕುಮಾರಸ್ವಾಮಿ ಅವರೇ ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕರಾಗಿ ಸದನದಲ್ಲಿ ಪಕ್ಷವನ್ನು ಮುನ್ನಡೆಸಿದ್ದರು.

ವಿಧಾನಸಭೆ ಸಭಾಧ್ಯಕ್ಷರ ಕಚೇರಿಯಲ್ಲಿ ಹಂಗಾಮಿ ಸ್ಪೀಕರ್ ಆರ್ ವಿ ದೇಶಪಾಂಡೆ ಅವರಿಂದ ಚನ್ನಪಟ್ಟಣದ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಮ್ಮನ್ನು ಗೆಲ್ಲಿಸಿದ ಚನ್ನಪಟ್ಟಣ ಕ್ಷೇತ್ರದ ಜನತೆಗೆ ಧನ್ಯವಾದ ಅರ್ಪಸಿದರು. ಬಳಿಕ ಹೆಚ್​ಡಿಕೆ ತಮ್ಮ ಅಧ್ಯಕ್ಷತೆಯಲ್ಲಿ ಈ ಅವಧಿಯ ಮೊದಲ ಶಾಸಕಾಂಗ ಪಕ್ಷದ ಸಭೆ ನಡೆಸಿದರು.

ಈ ಸಭೆಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಸೇರಿದಂತೆ ಪಕ್ಷದ ಎಲ್ಲ 19 ನೂತನ ಶಾಸಕರು, ವಿಧಾನ ಪರಿಷತ್​​ನ ಎಲ್ಲಾ ಸದಸ್ಯರು ಹಾಜರಿದ್ದರು.

ಟ್ರೆಂಡಿಂಗ್​ ಸುದ್ದಿ

ಸದನದಲ್ಲಿ ವಿಷಯಾಧಾರಿತ ಹೋರಾಟ:

ವಿಧಾನಮಂಡಲದಲ್ಲಿ ಜನಪರವಾಗಿ, ವಿಷಯಾಧಾರಿತವಾಗಿ ಹೋರಾಟ ಮಾಡುವ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪಕ್ಷವು ಚುನಾವಣೆಯಲ್ಲಿ ಸೋತಿದೆ. ಸೋತಿದೆ ಎಂದಾಕ್ಷಣ ಎದೆಗುಂದುವ ಅಗತ್ಯ ಇಲ್ಲ. ಇನ್ನೂ ಕೆಚ್ಚೆದೆಯಿಂದ ಪಕ್ಷವನ್ನು ಕಟ್ಟಬೇಕಿದೆ. ತಳಮಟ್ಟದಲ್ಲಿ ಸಂಘಟನೆಯನ್ನು ಬಲಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಚುನಾಯಿತ ಶಾಸಕರು, ಸ್ಪರ್ಧೆ ಮಾಡಿದ್ದ ಎಲ್ಲಾ ಅಭ್ಯರ್ಥಿಗಳು ಕೆಲಸ ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ವಿಧಾನಸೌಧದ ಮೂರನೇ ಮಹಡಿಯ ಕನಸು ಕಾಣುತ್ತಿದ್ದ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಕನಸು ನುಚ್ಚು ನೂರಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದ ಚನ್ನಪಟ್ಟಣದಿಂದ ಹೆಚ್​ಡಿಕೆ ಗೆದ್ದರಾದರೂ ತಮ್ಮ ಜೆಡಿಎಸ್​ ಪಕ್ಷ ಕೇವಲ 19 ಸ್ಥಾನಗಳಿಗೆ ತೃಪ್ತಿಪಡೆದುಕೊಳ್ಳಬೇಕಾಯಿತು.

ಚುನಾವಣೆಗೆ ಹಲವು ತಿಂಗಳು ಬಾಕಿ ಇರುವಾಗಲೇ ಪಂಚರತ್ನ ರಥಯಾತ್ರೆ ಆರಂಭಿಸಿ ಪಕ್ಷವನ್ನು ಮತ್ತೆ ಸಂಘಟನೆ ಮಾಡಲು ಮುಂದಾದರು. ಕಾಂಗ್ರೆಸ್‌ನಲ್ಲಿದ್ದ ಸಿ.ಎಂ. ಇಬ್ರಾಹಿಂ ಅವರನ್ನು ಜೆಡಿಎಸ್‌ಗೆ ಕರೆತಂದು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಅಲ್ಪಸಂಖ್ಯಾತರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡಿದರು. ಕಳೆದ ಡಿಸೆಂಬರ್‌ನಲ್ಲಿಯೇ ಜೆಡಿಎಸ್‌ನಿಂದ ಸುಮಾರು 90ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಚುನಾವಣೆಗೆ ಅಣಿಗೊಳಿಸಿದರು. ಆದರೆ ಅವರ ಎಲ್ಲಾ ಪ್ರಯತ್ನ ವಿಫಲವಾಯಿತು. ಮೈತ್ರಿ ಮಾಡಿಕೊಳ್ಳಲು ಅವಕಾಶ ಸಿಗದ ರೀತಿಯಲ್ಲಿ ಕಾಂಗ್ರೆಸ್​ ಪಕ್ಷ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿದೆ.