Constipation Solution: ಮಲಬದ್ಧತೆಗೆ ಇಲ್ಲಿದೆ ಮನೆಮದ್ದು; ಮಲಗುವ ಮುನ್ನ ಈ ಪಾನೀಯಗಳನ್ನೊಮ್ಮೆ ಕುಡಿದು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Constipation Solution: ಮಲಬದ್ಧತೆಗೆ ಇಲ್ಲಿದೆ ಮನೆಮದ್ದು; ಮಲಗುವ ಮುನ್ನ ಈ ಪಾನೀಯಗಳನ್ನೊಮ್ಮೆ ಕುಡಿದು ನೋಡಿ

Constipation Solution: ಮಲಬದ್ಧತೆಗೆ ಇಲ್ಲಿದೆ ಮನೆಮದ್ದು; ಮಲಗುವ ಮುನ್ನ ಈ ಪಾನೀಯಗಳನ್ನೊಮ್ಮೆ ಕುಡಿದು ನೋಡಿ

Bed time drinks for constipation: ಮನೆಯಲ್ಲಿಯೇ ತಯಾರಿಸಬಹುದು ಜೀರ್ಣಕಾರಿ ಪಾನೀಯಗಳಿವು. ಮಲಗುವ ಮುನ್ನ ಸೇವಿಸಬಹುದಾದ ಈ ಪಾನಿಯಗಳು ಜೀರ್ಣಕಾರಿ ಸಮಸ್ಯೆ, ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್‌ ಮತ್ತು ಎಸಿಡಿಟಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವೂ ಈ ಪಾನಿಯಗಳನ್ನು ಪ್ರಯತ್ನಿಸಿ, ನಿಮ್ಮ ಸಮಸ್ಯೆ ದೂರಮಾಡಿಕೊಳ್ಳಿ. (ಬರಹ: ಅರ್ಚನಾ ವಿ. ಭಟ್‌)

ಮಲಬದ್ಧತೆಯೇ; ಈ ಪಾನೀಯಗಳನ್ನೊಮ್ಮೆ ಮಲಗುವ ಮೊದಲು ಕುಡಿದು ನೋಡಿ
ಮಲಬದ್ಧತೆಯೇ; ಈ ಪಾನೀಯಗಳನ್ನೊಮ್ಮೆ ಮಲಗುವ ಮೊದಲು ಕುಡಿದು ನೋಡಿ

ಮಲಬದ್ಧತೆ ಎಂದರೆ ವ್ಯಕ್ತಿಯು ಮಲವನ್ನು ವಿಸರ್ಜಿಸುವಾಗ ಅನುಭವಿಸುವ ತೊಂದರೆ. ಇದು ಸಾಮಾನ್ಯವಾಗಿ ಕರುಳಿನ ಚಲನೆ ಮತ್ತು ಒಣಗಿದ ಅಥವಾ ಗಟ್ಟಿಯಾದ ಸ್ಥಿತಿಯ ಮಲವನ್ನು ಹೊಂದಿರುವ ಸೂಚನೆ. ಇದಕ್ಕೆ ಕಾರಣ ಹಲವು. ಕಡಿಮೆ ನಾರಿನಾಂಶ ಅಂಶವಿರುವ ಆಹಾರ ಸೇವನೆ, ನೀರು ಅಥವಾ ದ್ರವಾಹಾರದ ಕೊರತೆ, ದೈಹಿಕ ಚಟುವಟಿಕೆಯನ್ನು ಮಾಡದಿರುವುದು, ಕೆಲವು ಔಷಧಿಗಳ ಪ್ರಭಾವ, ಹಾರ್ಮೋನ್‌ ಬದಲಾವಣೆ ಮತ್ತು ಆಹಾರಕ್ರಮದಲ್ಲಾದ ವ್ಯತ್ಯಾಸ ಮುಂತಾದವುಗಳಿಂದ ಮಲಬದ್ಧತೆ ಉಂಟಾಗುತ್ತದೆ.

ಮಲಗುವ ಮುನ್ನ ಪಾನೀಯಗಳನ್ನು ಸೇವಿಸುವುದರಿಂದ ನೇರವಾಗಿ ಮಲಬದ್ಧತೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಸಮರ್ಪಕ ಪರಿಹಾರ ನೀಡಲು ಸಹಾಯ ಮಾಡಬಲ್ಲದು. ನಾರಿನಾಂಶ ಅಂಶ ಅಧಿಕವಾಗಿರುವ ಪಾನೀಯಗಳು ಅಥವಾ ವಿರೇಚಕ ಗುಣಲಕ್ಷಣ ಹೊಂದಿರುವವು ಮಲವನ್ನು ಮೃದುಗೊಳಿಸಲು ಮತ್ತು ಕರುಳಿನ ಚಲನೆ ಉತ್ತೆಜಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿಯೇ ತಯಾರಿಸಿದ ಪಾನೀಯಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸಿ ಕರುಳಿನ ಆರೋಗ್ಯವನ್ನು ಕಾಪಾಡಲು, ಉರಿಯೂತ ಶಮನಗೊಳಿಸಲು ಮತ್ತು ದೇಹವನ್ನು ಡಿಟಾಕ್ಸ್‌ ಮಾಡಲು ಸಹಾಯ ಮಾಡುವುದು. ಜೊತೆಗೆ ಈ ಪಾನೀಯಗಳು ದೇಹಕ್ಕೆ ಅಗತ್ಯವಿರುವ ವಿಶ್ರಾಂತಿಯನ್ನು ಉತ್ತೇಜಿಸುವುದು.

ಉತ್ತಮ ಜೀರ್ಣಕ್ರಿಯೆಗಾಗಿ ಮಲಗುವ ಮುನ್ನ ಸೇವಿಸಬಹುದಾದ ಪಾನೀಯಗಳು

  • ಶುಂಠಿ ಟೀ

ಶುಂಠಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆಯುಬ್ಬರ, ವಾಕರಿಕೆ ನಿವಾರಿಸುತ್ತದೆ. ತಾಜಾ ಶುಂಠಿ ತೆಗೆದುಕೊಳ್ಳಿ. ತುರಿದು 10 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಕುದಿಸಿ. ನಂತರ ಸೋಸಿಕೊಂಡು ಕುಡಿಯಿರಿ.

  • ನಿಂಬೆ ನೀರು

ನಿಂಬೆ ಹಣ್ಣು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸಿ ದೇಹವನ್ನು ನಿರ್ವಿಷಗೊಳಿಸುತ್ತದೆ. ಬೆಚ್ಚಗಿನ ನೀರಿಗೆ ಅರ್ಧ ನಿಂಬೆ ರಸ ಬೆರೆಸಿ ಮಲಗುವ ಮೊದಲು ಕುಡಿಯಿರಿ.

  • ಪುದೀನಾ ಟೀ

ಪುದೀನಾ ಮೆಂಥಾಲ್‌ ಅನ್ನು ಹೊಂದಿರುತ್ತದೆ. ಜೀರ್ಣಾಂಗವ್ಯೂಹದ ಸ್ನಾಯುಗಳನ್ನು ಸಡಿಲಗೊಳಿಸಿ, ಜೀರ್ಣಕ್ರಿಯೆ ಸುಲಭವಾಗುವಂತೆ ಮಾಡುತ್ತದೆ. ಬಿಸಿ ನೀರಿಗೆ ಪುದೀನಾ ಟೀ ಬ್ಯಾಗ್‌ ಅನ್ನು ಹಾಕಿ, 5 ನಿಮಿಷಗಳ ನಂತರ ಕುಡಿಯಿರಿ.

  • ಸೋಂಪು (ಬಡೇ ಸೊಪ್ಪು) ಟೀ

ನಮಗೆಲ್ಲರಿಗೂ ತಿಳಿದಿರುವಂತೆ ಸೋಂಪು ಉತ್ತಮ ಜೀರ್ಣಕಾರಿ. ಇದು ಕರುಳಿನ ಸ್ನಾಯುಗಳನ್ನು ಸಡಿಲಗೊಳಿಸಿ ಗ್ಯಾಸ್‌ ಮತ್ತು ಹೊಟ್ಟೆಯುಬ್ಬುರವನ್ನು ನಿವಾರಿಸುತ್ತದೆ. 1 ರಿಂದ 2 ಚಮಚ ಸೋಂಪು ಕಾಳುಗಳನ್ನು ಪುಡಿಮಾಡಿ ಬಿಸಿ ನೀರಿಗೆ ಹಾಕಿ. 10 ನಿಮಿಷದ ನಂತರ ಸೊಸಿ ಆ ನೀರನ್ನು ಕುಡಿಯಿರಿ.

  • ಅರಿಶಿಣ ಹಾಲು

ಅರಿಶಿಣವು ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವುದರಿಂದ ಕರುಳಿನ ಉರಿಯೂತವನ್ನು ಶಮನಗೊಳಿಸುತ್ತದೆ. ಒಂದು ಚಮಚ ಅರಿಶಿನ ಪುಡಿ ಮತ್ತು ಒಂದು ಚಿಟಿಕೆ ಕರಿಮೆಣಸಿ ಪುಡಿಯನ್ನು ಬೆಚ್ಚಗಿನ ಹಾಲಿಗೆ ಸೇರಿಸಿ ಮಲಗುವ ಮುನ್ನ ಕುಡಿಯಿರಿ.

  • ಅಲೋವೆರಾ ಜ್ಯೂಸ್‌

ಅಲೋವೆರಾ ಜೆಲ್‌ ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ತಾಜಾ ಅಲೋವೆರಾ ಜೆಲ್‌ ಅನ್ನು ನೀರು ಅಥವಾ ಯಾವುದಾದರೂ ಜ್ಯೂಸ್‌ನೊಂದಿಗೆ ಮಿಶ್ರಣ ಮಾಡಿ ಮಲಗುವ ಮುನ್ನ ಸೇವಿಸಿ.

  • ಪಪ್ಪಾಯ ಸ್ಮೂಥಿ

ಪಪ್ಪಾಯಿ ಹಣ್ಣಿನ್ಲಲಿ ಪಪ್ಪೈನ್‌ ಕಿಣ್ವಗಳಿದ್ದು ಅವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ತಾಜಾ ಪಪ್ಪಾಯಿಯ ಹಣ್ಣಿನ ತುಂಡುಗಳನ್ನು ತೆಗೆದುಕೊಂಡು ಅದಿಕ್ಕೆ ನೀರು ಅಥವಾ ತೆಂಗಿನ ಹಾಲು ಸೇರಿಸಿ ಮಿಶ್ರಣ ಮಾಡಿ. ಅದನ್ನು ಮಲಗುವ ಮುನ್ನ ಕುಡಿಯಿರಿ.

  • ಕ್ಯಾಮೊಮೈಲ್‌ ಟೀ

ಉರಿಯೂತ ಶಮನಕಾರಿಯಾಗಿರುವ ಕ್ಯಾಮೊಮೈಲ್‌ ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ಜೀರ್ಣ ಸಮಸ್ಯೆ ಕಡಿಮೆ ಮಾಡುತ್ತದೆ. ಬಿಸಿ ನೀರಿನಲ್ಲಿ ಕ್ಯಾಮೊಮೈಲ್‌ ಟೀ ಚೀಲ ಅದ್ದಿ ಮಲಗುವ ಮೊದಲು ಆ ಟೀ ಕುಡಿಯಿರಿ.

ಈ ಪಾನೀಯಗಳ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ದೀರ್ಘಕಾಲದ ಅಥವಾ ತೀವ್ರ ಸಮಸ್ಯೆಯ ಮಲಬದ್ಧತೆಯನ್ನು ನಿವಾರಿಸಿಕೊಳ್ಳಲು ತಜ್ಞ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಸಮತೋಲನ ಆಹಾರ, ಸಾಕಷ್ಟು ನೀರು ಕುಡಿಯುವುದು ಮತ್ತು ನಿಯಮಿತ ವ್ಯಾಯಾಮ ಮಲಬದ್ಧತೆಯನ್ನು ತಡೆಗಟ್ಟುವ ಪ್ರಮುಖ ಅಂಶಗಳಾಗಿವೆ.

Whats_app_banner