ಮತ್ತೊಂದು ಚಂಡಮಾರುತದ ಆತಂಕ, ಉತ್ತರ-ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ; ಕರ್ನಾಟಕದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕನ್ನಡ ಸುದ್ದಿ  /  ಕರ್ನಾಟಕ  /  ಮತ್ತೊಂದು ಚಂಡಮಾರುತದ ಆತಂಕ, ಉತ್ತರ-ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ; ಕರ್ನಾಟಕದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಮತ್ತೊಂದು ಚಂಡಮಾರುತದ ಆತಂಕ, ಉತ್ತರ-ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ; ಕರ್ನಾಟಕದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Heavy Rain In Karnataka: ಭಾನುವಾರವಾದ ಇಂದು (ಅಕ್ಟೋಬರ್ 20) ಕೂಡ ಹೆಚ್ಚಿನ ಮಳೆಯಾಗಲಿದ್ದು, ಬೆಂಗಳೂರು ಸೇರಿದಂತೆ ಒಟ್ಟು 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉತ್ತರ-ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ; ಕರ್ನಾಟಕದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಉತ್ತರ-ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ; ಕರ್ನಾಟಕದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (AP)

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 11 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇನ್ನೂ ನಾಲ್ಕೈದು ದಿನಗಳ ಕಾಲ ಗುಡುಗು ಸಹಿತ ಮಳೆಯಾಗಲಿದೆ ಎಂದು ಜನತೆಗೆ ಎಚ್ಚರಿಕೆ ನೀಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ತುಮಕೂರು, ಚಿತ್ರದುರ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಆದರೆ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಅಕ್ಟೋಬರ್ 19ರ ಶನಿವಾರ ಸಿಲಿಕಾನ್ ಸಿಟಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿತ್ತು. ಅದೇ ರೀತಿ ಇಂದು ಬೆಂಗಳೂರಿನಲ್ಲಿ ಮಳೆಯ ರೌದ್ರಾವತಾರಾ ಹೆಚ್ಚಿರಲಿದೆ. ಹಾಗಾಗಿ ನಗರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 48 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ. ಯಾವುದೇ ಕ್ಷಣದಲ್ಲಾದರೂ ಜೋರು ಮಳೆಯಾಗುವ ಸಾಧ್ಯತೆ ಇದೆ. ಶನಿವಾರವೂ ಮೋಡ ಕವಿದ ವಾತಾವರಣದ ಜೊತೆಗೆ ಆಗಾಗ್ಗೆ ಬಿಸಿಲಿನ ದರ್ಶನವೂ ಆಯಿತು. ಆದರೆ ವರುಣನ ಆಗಮನದಿಂದ ಅದರ ರಗಳೆಗೆ ಇಡೀ ಜನ ಜೀವನೇ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್​ ಮೊದಲ ಟೆಸ್ಟ್​ಗೂ ಮಳೆ ಕಾಟ ನೀಡುವ ಸಾಧ್ಯತೆ ಇದೆ.

ಮತ್ತೊಂದು ಚಂಡಮಾರುತದ ಆತಂಕ

ಸಮುದ್ರ ಮಟ್ಟದಿಂದ 5.8 ಕಿಲೋ ಮೀಟರ್​​ ಎತ್ತರದಲ್ಲಿ ವಾಯುಭಾರ ಕುಸಿತವಾಗಿದ್ದು, ನೈರುತ್ಯಕ್ಕೆ ವಾಲುತ್ತಿದೆ. ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಮತ್ತೊಂದು ಸೈಕ್ಲೋನ್ ಚುರುಕಾಗಿದೆ. ಇದು ದಕ್ಷಿಣ ಕರ್ನಾಟಕ, ರಾಯಲಸೀಮದ ಮೂಲಕ ಚಲಿಸಿ ಆಂಧ್ರಪ್ರದೇಶದ ಕೋಸ್ಟಲ್​​ ಕಡೆಗೆ ಸಾಗಲಿದೆ. ಇದರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಹಲವೆಡೆ ಪ್ರವಾಹ ಉಂಟಾಗುವ ನಿರೀಕ್ಷೆಯಿದೆ. ಇಂದು ಕೂಡ ಹಾವೇರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು, ಕೋಲಾರ ಜಿಲ್ಲೆಗಳಲ್ಲಿ ಭಾರೀ ವರ್ಷದಾರೆ ಇರಲಿದೆ.

ಉತ್ತರ ಒಳನಾಡು ಜಿಲ್ಲೆಗಳಿಗೆ ಅಕ್ಟೋಬರ್ 22 ರವರೆಗೆ ಚದುರಿದಿಂದ ಮತ್ತು ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆ, ಅಕ್ಟೋಬರ್ 23 ರಿಂದ ಮಳೆ ತೀವ್ರತೆ ಕಡಿಮೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ 26 ರಂದು ಉತ್ತರ ಒಳನಾಡು ಜಿಲ್ಲೆಗಳ ಉತ್ತರ ಭಾಗಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಅಕ್ಟೋಬರ್ 24 ರವರೆಗೆ ಚದುರಿದಿಂದ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ, ನಂತರ ಅಲ್ಲಲ್ಲಿ ಚದುರಿದಂತೆ ತುಂತುರು ಮಳೆಯಾಗುವ ನಿರೀಕ್ಷೆಯಿದೆ.

ಎಲ್ಲೆಲ್ಲಿ ಹೆಚ್ಚು ಮಳೆಯಾಗಿದೆ?

ಮಂಡ್ಯದ ನಾಗಮಂಗಲ, ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ 7 ಸೆಂಟಿ ಮೀಟರ್​ ಮಳೆ ದಾಖಲಾಗಿದೆ. ಬರಗೂರು, ನಾರಾಯಣಪುರ, ಕವಡಿಮಟ್ಟಿ, ಕಕ್ಕೇರಿ, ಹೆಸರುಘಟ್ಟ, ಬೆಳ್ಳೂರು, ಟಿ ಕುಣಿಗಲ್, ಕೆಂಬಾವಿ, ಬೇಲೂರು, ಕೃಷ್ಣರಾಜಪುರ, ಹುಣಸಗಿ, ರಾಯಚೂರು, ಮುರಗೋಡ, ಯಡವಾಡ, ಶಿರಹಟ್ಟಿ, ಎಲೆಕ್ಟ್ರಾನಿಕ್ಸ್ ಗಾರ್ಡ್ಸ್, ಶ್ರವಣಬೆಳಗೊಳ, ದೊಡ್ಡಬಳ್ಳಾಪುರ, ಹಾಸನ, ಚಿಕ್ಕಮಗಳೂರು, ಪರಶುರಾಂಪುರ, ಲೋಕಾಪುರ, ಗೋಕಾಕ, ಚಿಕ್ಕೋಡಿ, ಮಾಗಡಿ, ಗಂಗಾವತಿ ಸೇಡಂ, ಯಲಬುರ್ಗಾ, ಬಾದಾಮಿ, ಕುಡತಿನಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಧಾರಾಕಾರ ಮತ್ತು ಉತ್ತಮ ಮಳೆಯಾಗಿದೆ.

Whats_app_banner