ಸಾಲು ಸಾಲು ರಜೆ; ಮೆಜೆಸ್ಟಿಕ್‌ ಸುತ್ತಮುತ್ತ ಟ್ರಾಫಿಕ್‌ ಸಮಸ್ಯೆ, ಬೆಂಗಳೂರಿನ ಹಲವು ರಸ್ತೆಗಳಲ್ಲಿ ಆಮೆವೇಗದಲ್ಲಿ ವಾಹನ ಸಂಚಾರ
ಕನ್ನಡ ಸುದ್ದಿ  /  ಕರ್ನಾಟಕ  /  ಸಾಲು ಸಾಲು ರಜೆ; ಮೆಜೆಸ್ಟಿಕ್‌ ಸುತ್ತಮುತ್ತ ಟ್ರಾಫಿಕ್‌ ಸಮಸ್ಯೆ, ಬೆಂಗಳೂರಿನ ಹಲವು ರಸ್ತೆಗಳಲ್ಲಿ ಆಮೆವೇಗದಲ್ಲಿ ವಾಹನ ಸಂಚಾರ

ಸಾಲು ಸಾಲು ರಜೆ; ಮೆಜೆಸ್ಟಿಕ್‌ ಸುತ್ತಮುತ್ತ ಟ್ರಾಫಿಕ್‌ ಸಮಸ್ಯೆ, ಬೆಂಗಳೂರಿನ ಹಲವು ರಸ್ತೆಗಳಲ್ಲಿ ಆಮೆವೇಗದಲ್ಲಿ ವಾಹನ ಸಂಚಾರ

ಹಬ್ಬಗಳು ಬಂದರೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿರುತ್ತದೆ. ಅದರಲ್ಲೂ ವಾರಾಂತ್ಯದಲ್ಲಿ ಹಬ್ಬಗಳು ಬಂದರೆ ನಗರದಿಂದ ಹೊರ ಹೋಗುವುದೇ ಒಂದು ಸಾಹಸ. ಸಂಜೆ ಮೆಜೆಸ್ಟಿಕ್‌ ಸುತ್ತ ಮುತ್ತ ಒಂದು ಸುತ್ತು ಹಾಕಿದರೆ ವಾಹನಗಳು ಇರುವೆ ಸಾಲಿನಂತೆ ಸಾಗುತ್ತಿರುವುದು ಗೋಚರಿಸುತ್ತದೆ. (ವರದಿ: ಎಚ್‌. ಮಾರುತಿ)

ಹಬ್ಬದ ಖರೀದಿಗೆ ರಸ್ತೆಗಿಳಿದ ಜನ; ಬೆಂಗಳೂರು ನಗರದ ಹಲವು ಬಡಾವಣೆಗಳಲ್ಲಿ ಸಂಚಾರ ದಟ್ಟಣೆ
ಹಬ್ಬದ ಖರೀದಿಗೆ ರಸ್ತೆಗಿಳಿದ ಜನ; ಬೆಂಗಳೂರು ನಗರದ ಹಲವು ಬಡಾವಣೆಗಳಲ್ಲಿ ಸಂಚಾರ ದಟ್ಟಣೆ

ಕರ್ನಾಟಕದಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಸೆಪ್ಟೆಂಬರ್ 6ರ ಶುಕ್ರವಾರವಾದ ಇಂದು ಎಲ್ಲೆಡೆ ಗೌರಿ ಹಬ್ಬ. ನಾಳೆ (ಸೆಪ್ಟೆಂಬರ್‌ 7ರ ಶನಿವಾರ) ಗಣೇಶ ಚತುರ್ಥಿ. ಹಬ್ಬದ ಖರೀದಿಗಾಗಿ ಜನರು ಉದ್ಯಾನ ನಗರಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಸೇರಿದ್ದಾರೆ. ಅತ್ತ, ಹಬ್ಬದ ರಜೆ ಇರುವುದರಿಂದ ತಮ್ಮ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಕೂಡಾ ಹೆಚ್ಚಿದೆ. ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಬೆಂಗಳೂರು ಟ್ರಾಫಿಕ್‌ ಪೊಲೀಸರು ಸಲಹೆ ನೀಡಿದ್ದಾರೆ.

ಈ ಬಾರಿ ಶನಿವಾರ ಭಾನುವಾರ ಸೇರಿ ಸಾಲು ಸಾಲು ರಜೆ. ಶುಕ್ರವಾರ ಗೌರಿ ಹಬ್ಬ ಮುಗಿದಿದ್ದು ಗಣೇಶ ಹಬ್ಬದ ಪ್ರಯುಕ್ತ ಶನಿವಾರ ಸರ್ಕಾರಿ ರಜೆ. ಮರುದಿನ ಭಾನುವಾರ. ಹೀಗಾಗಿ ತಮ್ಮ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚು. ಇನ್ನೂ ಕೆಲವರು ಪ್ರವಾಸಿ ತಾಣ, ರೆಸಾರ್ಟ್‌ ಹೊರ ರಾಜ್ಯಗಳಿಗೆ ಕುಟುಂಬ ಸಮೇತ ತೆರಳುವವರಿಗೇನೂ ಕಡಿಮೆ ಇರಲಿಲ್ಲ. ಒಟ್ಟಾರೆ ಶುಕ್ರವಾರ ಸಂಜೆಯಿಂದಲೇ ಟ್ರಾಫಿಕ್‌ ನಿಯಂತ್ರಿಸುವಲ್ಲಿ ಸಂಚಾರಿ ಪೊಲೀಸರು ಹೈರಾಣಾಗಿದ್ದಾರೆ. ರಾಜ್ಯದ ಬೀದರ್‌ನಿಂದ ಹಿಡಿದು ಮಂಗಳೂರು, ಚಾಮರಾಜನಗರದವರೆಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿಲಾಗಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳಿಗೂ ವಿಶೇಷ ಬಸ್‌ ಗಳನ್ನು ವ್ಯವಸ್ಥೆ ಮಾಡಿದೆ.

ಹಬ್ಬದ ಖರೀದಿಗೆ ಹೆಚ್ಚಿನ ಜನರು ರಸ್ತೆಗೆ ಬಂದಿರುವುದರಿಂದ ಬೆಂಗಳೂರಿನ ಕೆಆರ್ ಮಾರುಕಟ್ಟೆ, ಲಾಲ್‌ಬಾಗ್, ವೈಟ್‌ಫೀಲ್ಡ್‌, ಗಾಂಧಿ ಬಜಾರ್, ಮಲ್ಲೇಶ್ವರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಜನರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ವಾಹನ ದಟ್ಟಣೆಯೂ ಹೆಚ್ಚಿದೆ. ಪ್ರಮುಖ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ.

ಗಣೇಶನ ಹಬ್ಬ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಇದೆ. ಹೀಗಾಗಿ ಸಿಲಿಕಾನ್‌ ಸಿಟಿಯಿಂದ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿರುವವರ ಸಂಖ್ಯೆ ಕೂಡಾ ಹೆಚ್ಚಾಗಿದೆ. ತಮ್ಮ ಖರೀದಿಗಳನ್ನು ಮುಗಿಸಿಕೊಂಡು, ಜನರು ತಮ್ಮ ಊರುಗಳತ್ತ ಮರಳುತ್ತಿದ್ದಾರೆ. ಹೀಗಾಗಿ ಮೆಜೆಸ್ಟಿಕ್‌ನಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಇದೇ ವೇಳೆ ಹೆಬ್ಬಾಳ, ಯಶವಂತಪುರ, ಎಲೆಕ್ಟ್ರಾನಿಕ್ ಸಿಟಿ, ಕೆಆರ್‌ ಪುರಂ ಮಾರ್ಗದಲ್ಲಿ ವಾಹನಗಳು ಸಾಲುಗಟ್ಟಿವೆ.

ಸಂಚಾರ ನಿಯಮ ಪಾಲಿಸುವಂತೆ ಸಲಹೆ

ನಗರದ ಒಳಗೆ ಹಬ್ಬದ ಖರೀದಿಗೆ ಬರುವವರು ಹಾಗೂ ನಗರದಿಂದ ತಮ್ಮ ತಮ್ಮ ಊರುಗಳಿಗೆ ಹೋಗುವವರ ಸಂಖ್ಯೆಯಿಂದ ಸಹಜವಾಗಿ ವಾಹನಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಬೆಂಗಳೂರಿನ ವಿಜಯನಗರ ಸಂಚಾರ ಪೊಲೀಸರು ಜನರಿಗೆ ಸಂಚಾರ ನಿಯಮ ಪಾಲಿಸುವಂತೆ ಸಲಹೆ ನೀಡಿದ್ದಾರೆ.

ಗುರುವಾರವೂ ವಾಹನ ದಟ್ಟಣೆ ಹೆಚ್ಚಾಗಿಯೇ ಇತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡವಾಗಿ ಆಸನಗಳನ್ನು ಬುಕ್‌ ಮಾಡುವ ವ್ಯವಸ್ಥೆ ಮಾಡಲಾಗಿದ್ದರೂ ಒಂದು ದಿನ ಮುಂಚಿತವಾಗಿ ಬುಕ್ಕಿಂಗ್‌ ಮುಗಿದು ಹೋಗಿತ್ತು. ಶುಕ್ರವಾರ ಸಂಜೆ ಏಕಾಏಕಿ ಬಸ್‌ ನಿಲ್ದಾಣಕ್ಕೆ ಆಗಮಿಸಿದ ಬಹುತೇಕ ಪ್ರಯಾಣಿಕರು ಬಸ್‌ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಕ್ಕಳು ಮತ್ತು ವಯೋವೃದ್ಧರು ಸೀಟು ಸಿಗದೆ ಪರದಾಡುವ ದೃಶ್ಯಗಳು ಸಾಮಾನ್ಯವಾಗಿದ್ದವು.

ಶುಕ್ರವಾರ ಸಂಜೆ ಬೆಂಗಳೂರು ತುಮಕೂರು ರಸ್ತೆಯಲ್ಲಿ ವಾಹನ ದಟ್ಟಣೆ ವಿಪರೀತವಾಗಿತ್ತು. ಸುಮಾರು 20 ಜಿಲ್ಲೆಗಳಿಗೆ ಈ ರಸ್ತ ಮಾರ್ಗವಾಗಿಯೇ ವಾಹನಗಳು ಸಂಚರಿಸಬೇಕು. ಹಾಗಾಗಿ ಯಶವಂತಪುರ, ದಾಸರಹಳ್ಳಿ, ಪೀಣ್ಯ ಜಂಕ್ಷನ್‌ ಎಂಟನೇ ಮೈಲಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮೈಸೂರು, ಹಾಸನ ರಸ್ತೆ, ಕನಕಪುರ ಕೋಲಾರ ದೊಡ್ಡಬಳ್ಳಾಪುರ ರಸ್ತೆಗಳಲ್ಲೂ ಟ್ರಾಪಿಕ್‌ ಸಮಸ್ಯೆ ಎದ್ದು ಕಾಣುತ್ತಿತ್ತು.

ಬೆಂಗಳೂರು ಸಂಚಾರಿ ಪೊಲೀಸ್‌ ಇಲಾಖೆ, ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾಲು ರಜೆ ಇರುವ ಕಾರಣ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ಬಸ್‌ ಗಳ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ ಸುತ್ತಮುತ್ತ ಸಂಚಾರ ದಟ್ಟಣೆಯಾಗುವ ಕಾರಣ ಸಾರ್ವಜನಿಕರು ಬದಲಿ ರಸ್ತೆಗಳನ್ನು ಬಳಸುವಂತೆ ಎಕ್ಸ್‌ ಮೂಲಕ ಮನವಿ ಮಾಡಿಕೊಂಡಿತ್ತು.

ಹೆಚ್ಚುವರಿ ಬಸ್‌ ವ್ಯವಸ್ಥೆ

ಹಬ್ಬದ ರಜಾ ದಿನಗಳು ಮಗಿದ ನಂತರ ಸಾರಿಗೆ ಸಂಸ್ಥೆ ಮರಳಿ ಬೆಂಗಳೂರಿಗೆ ಹಿಂತಿರುಗಿ ಬರಲು ಬಸ್‌ಗಳ ವ್ಯವಸ್ಥೆ ಮಾಡಿದೆ. ಸೆಪ್ಟಂಬರ್‌ 8 ಮತ್ತು 9ರಂದು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ತದನಂತರವೂ ಹೆಚ್ಚುವರಿ ಬಸ್‌ ಗಳನ್ನು ಬಿಡಲು ಸಿದ್ದ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.

ಸರ್ಕಾರಿ, ಖಾಸಗಿ ಬಸ್‌ಗಳ ಜತೆಗೆ ಕಾರುಗಳ ಸಂಖ್ಯೆಯೂ ವಿಪರೀತವಾಗಿತ್ತು. ಎಕ್ಸ್‌ನಲ್ಲಿ ಪ್ರಯಾಣಿಕರೊಬ್ಬರು ಹೀಗೆ ಬರೆದುಕೊಂಡಿದ್ದಾರೆ. ನನ್ನ ಕಣ್ಣ ಮುಂದೆ ಒಬ್ಬೊಬ್ಬರೇ ಕಾರನ್ನು ಚಾಲನೆ ಮಾಡಿಕೊಂಡು ಸಾಗುತ್ತಿರುವ ನೂರಾರು ಕಾರುಗಳು ಕಣ್ಣಿಗೆ ಗೋಚರಿಸುತ್ತಿವೆ. ನೂರು ಕಾರುಗಳು ಒಂದು ಬಿಎಂಟಿಸಿ ಬಸ್‌ಗೆ ಸಮ ಎಂದು ಬರೆದುಕೊಂಡಿದ್ದಾರೆ. ಇನ್ನು ರಜಾದಿನಗಳು ಬಂದರೆ ಖಾಸಗಿ ಟ್ರಾವೆಲ್ಸ್‌ ಬಸ್‌ಗಳ ಸುಲಿಗೆ ಮಿತಿ ಮೀರುತ್ತದೆ. ದುಪ್ಪಟ್ಟು, ಮೂರು ಪಟ್ಟು ಪ್ರಯಾಣ ದರ ಏರಿಕೆ ಮಾಡಿದರೂ ಸಾರಿಗೆ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಪ್ರಯಾಣಿಕರು ಆರೋಪ ಮಾಡುತ್ತಿದ್ದಾರೆ. ಅಧಿಕಾರಿಗಳು ಮಾತ್ರ ದೂರುಗಳು ಬಂದರೆ ಕ್ರಮ ಜರುಗಿಸುವುದಾಗಿ ಭರವಸೆ ನೀಡುತ್ತಲೇ ಇದ್ದಾರೆ. ಪ್ರತಿ ಬಾರಿಯೂ ಇಂತಹ ಸಿದ್ದ ಉತ್ತರ ನೀಡುತ್ತಾರೆ ಎಂದು ಪ್ರಯಾಣಿಕರು ಆರೋಪ ಮಾಡುತ್ತಲೇ ಇದ್ದರು.

Whats_app_banner