Bangalore Mysore Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವಾಹನ ವೇಗಕ್ಕೆ ಮಿತಿ, ಎಐ ತಂತ್ರಜ್ಞಾನ ಬಳಕೆ ನಂತರ ಅಪಘಾತ ಪ್ರಕರಣ ಇಳಿಕೆ
Highway News ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಈ ವರ್ಷ ಅಪಘಾತ ಸಾವಿನ ಸಂಖ್ಯೆ ಬಹುತೇಕ ತಗ್ಗಿದೆ.
ಬೆಂಗಳೂರು: ಬೆಂಗಳೂರು ಹಾಗೂ ಮೈಸೂರು ಎಕ್ಸ್‌ಪ್ರೆಸ್ ವೇ ನಲ್ಲಿ ಅಪಘಾತಗಳದ್ದೇ ತಲೆನೋವು. ಹೆದ್ದಾರಿ ವಿಸ್ತರಣಗೊಂಡ ನಂತರ ವೇಗ ಮಿತಿಯೂ ಜಾಸ್ತಿಯಾಗಿ ಸಾಕಷ್ಟು ಅಪಘಾತಗಳು ಸಂಭವಿಸಿ ಜನ ಜೀವ ಕಳೆದುಕೊಂಡರು. ಈ ಕಾರಣದಿಂದ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿತು. ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕರ್ನಾಟಕ ಪೊಲೀಸರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಸಹಯೋಗದಲ್ಲಿ ಕಣ್ಗಾವಲು ಹೆಚ್ಚಿಸಿದೆ. ಆರು ತಿಂಗಳಿನಿಂದ ಕೈಗೊಂಡ ಕ್ರಮಗಳು ಈಗ ಫಲ ನೀಡುತ್ತಿವೆ. ಆಗಸ್ಟ್ ತಿಂಗಳಿನಲ್ಲಿ ಲಭ್ಯ ಇರುವ ಅಂಕಿಗಳು ಅಪಘಾತ ಸಂಖ್ಯೆ ಹಾಗೂ ಸಾವಿನ ಪ್ರಮಾಣವೂ ಗಣನೀಯವಾಗಿ ಇಳಿಕೆ ಕಂಡಿರುವುದನ್ನು ತೋರುತ್ತಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಲ್ಲಿ ಮಾರಣಾಂತಿಕ ಸಾವುಗಳು ಕೆಲ ಸಮಯದಿಂದ ಸುದ್ದಿಯಲ್ಲಿವೆ. ಈ ವರ್ಷ ಮೊದಲ ಬಾರಿಗೆ, ಈ ಸಂಪೂರ್ಣ ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಆಗಸ್ಟ್ ತಿಂಗಳಲ್ಲಿ ಸಾವಿನ ಸಂಖ್ಯೆಗಳು ಎರಡಕ್ಕೆ ಇಳಿಕೆಯಾಗಿದೆ. ಇದು ಕಳೆದ ಎಂಟು ತಿಂಗಳಲ್ಲಿ ಸಂಭವಿಸಿದ ಅತ್ಯಂತ ಕಡಿಮೆ ಸಾವುನೋವುಗಳಾಗಿವೆ ಎನ್ನುವುದು ಪೊಲೀಸರ ವಿವರಣೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಯಲ್ಲಿ ಅತಿಯಾದ ವೇಗಕ್ಕಾಗಿ 80,000 ಕ್ಕೂ ಹೆಚ್ಚು ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕರ್ನಾಟಕ ಸಂಚಾರ ಮತ್ತು ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಹಂಚಿಕೊಂಡಿದ್ದಾರೆ.
ಅವರೇ ನೀಡಿರುವ ಮಾಹಿತಿಯ ಪ್ರಕಾರ, ಆಗಸ್ಟ್ ತಿಂಗಳಲ್ಲಿ ರಸ್ತೆಯಲ್ಲಿ ಸಂಭವಿಸಿದ 10 ಅಪಘಾತಗಳಲ್ಲಿ ಕೇವಲ ಎರಡು ಸಾವುಗಳು ಮಾತ್ರ ದಾಖಲಾಗಿವೆ. ಜುಲೈನಲ್ಲಿ, ದಕ್ಷಿಣ ಭಾರತದ ಮೊದಲ ಎಕ್ಸ್‌ಪ್ರೆಸ್ ವೇ ನಲ್ಲಿ ಸಂಭವಿಸಿದ 10 ಅಪಘಾತಗಳಲ್ಲಿ ಆರು ಜನರು ಸಾವನ್ನಪ್ಪಿದ್ದರು. ಜನವರಿಯ ಅಂಕಿಅಂಶಗಳಿಗೆ ಹೋಲಿಸಿದರೆ ಅಪಘಾತಗಳು ಮತ್ತು ಸಾವುಗಳ ಸಂಖ್ಯೆ ಕಡಿಮೆಯಾಗಿದೆ. ಆಗ 14 ಅಪಘಾತಗಳಲ್ಲಿ12 ಜನರು ಸಾವನ್ನಪ್ಪಿದ್ದರು. ಕಳೆದ ವರ್ಷ ಎಂಟು ತಿಂಗಳಲ್ಲಿ 147 ಮಂದಿ ಮೃತಪಟ್ಟಿದ್ದರೆ. ಈ ವರ್ಷದ ಎಂಟು ತಿಂಗಳಲ್ಲಿ ಅಪಘಾತ ಸಂಭವಿಸಿ 50 ಮಂದಿ ಮೃತಪಟ್ಟಿದ್ದಾರೆ. ಅಂದರೆ ಬಹುತೇಕ ಮೂರು ಪಟ್ಟು ಸಾವಿನ ಸಂಖ್ಯೆ ಇಳಿಕೆಯಾಗಿದೆ.
ದುಡುಕಿನ ಮತ್ತು ಅತೀ ವೇಗದ ಚಾಲನೆಯು ಈ ಹೆದ್ದಾರಿಯಲ್ಲಿ ರಸ್ತೆ ಅಪಘಾತಗಳಿಗೆ ಕಾರಣವಾಗುವ ಏಕೈಕ ಪ್ರಮುಖ ಅಂಶವಾಗಿತ್ತು. ಇದನ್ನೇ ಗಮನದಲ್ಲಿಟ್ಟುಕೊಂಡು ಪೊಲೀಸ್ ವಿಚಕ್ಷಣೆ ಹೆಚ್ಚಿಸಿತ್ತು.ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು ಪೊಲೀಸರ ಸಹಕಾರದೊಂದಿಗೆ ಜನ ಜಾಗೃತಿ ಮೂಡಿಸುವ ಪ್ರಯತ್ನ ಆರಂಭವಾಗಿತ್ತು. ವೇಗವಾಗಿ ಓಡಿಸುವ ವಾಹನಗಳ ಮಾಲೀಕರಿಗೆ ದಂಡವನ್ನೂ ವಿಧಿಸಲಾಯಿತು. ಎಐ ತಂತ್ರಜ್ಞಾನ ಬಳಸಿ ವೇಗಕ್ಕೆ ಮಿತಿ ಹೇರುವ ಪ್ರಯತ್ನವೂ ಆಯಿತು. ಕ್ಯಾಮರಾ ಕಣ್ಣಿಗೆ ಸಿಲುಕಿ ದಂಡ ಕಟ್ಟಿದವರು ಇದ್ದಾರೆ. ವೇಗ ಮಿತಿಯನ್ನು ಕಡ್ಡಾಯಗೊಳಿಸಿದ್ದರ ಜಾಗೃತಿಯನ್ನೂ ಮೂಡಿಸಿದ್ದು ನಿಧಾನವಾಗಿ ಉಪಯೋಗ ಕಂಡಿದೆ.
ವೇಗವಾಗಿ ಚಲಿಸುವ ವಾಹನಗಳನ್ನು ಹಿಡಿಯಲು ಕರ್ನಾಟಕ ಪೊಲೀಸ್ ಇಲಾಖೆ ಮೈಸೂರಿನ ಕಣಿಮಣಿಕೆ ಟೋಲ್ ಗೇಟ್ ನಲ್ಲಿ ಪೊಲೀಸ್ ಸಿಬ್ಬಂದಿಯ ತಂಡವನ್ನೇ ನಿಯೋಜಿಸಲಿದೆ. ಹೆದ್ದಾರಿ ಉದ್ದಕ್ಕೂ ಅಳವಡಿಸಲಾಗಿರುವ ಎಎನ್ ಪಿಆರ್ ಕ್ಯಾಮೆರಾಗಳ ಮೂಲಕ ದಂಡ ವಿಧಿಸಲಾಗಿದ್ದರೂ, ಆನ್ ಲೈನ್ ನಲ್ಲಿ ವಿತರಿಸಿದಾಗ ಉಲ್ಲಂಘಿಸುವವರು ಅವುಗಳನ್ನು ಪಾವತಿಸುತ್ತಿಲ್ಲ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಅತಿ ವೇಗದಲ್ಲಿ ವಾಹನ ಚಲಾಯಿಸುವುದು ಕಂಡುಬಂದರೆ ಸ್ಥಳದಲ್ಲೇ ದಂಡ ವಿಧಿಸುವುದನ್ನು ಹೆಚ್ಚಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಇದು ಇನ್ನಷ್ಟು ವೇಗ ತಗ್ಗಿ ಅಪಘಾತ ಪ್ರಕರಣ ಕಡಿಮೆಯಾಗಲು ದಾರಿಯಾಗಬಹುದು.
ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕರ್ನಾಟಕ ಪೊಲೀಸರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು (ಎನ್ಎಚ್ಎಐ) ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಯಲ್ಲಿ ಕಣ್ಗಾವಲು ಹೆಚ್ಚಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆಹಚ್ಚಲು ಹೆದ್ದಾರಿಯಾದ್ಯಂತ ಅನೇಕ ಎಐ ಚಾಲಿತ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದ್ದು ಇವೆಲ್ಲವೂ ನಾವು ಎಚ್ಚರಿಕೆಯಿಂದ ವಾಹನ ಮಾಡುವಂತೆ ಮಾಡಿದೆ ಎಂದು ಚಾಲಕರು ಹೇಳುತ್ತಾರೆ.