Dharwad News: ಧಾರವಾಡದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ, ರಸ್ತೆ ಮಧ್ಯೆಯೆ ಫೈರಿಂಗ್; ನಾಲ್ವರು ಯುವಕರ ಬಂಧನ
ಶಿಕ್ಷಣ ಕಾಶಿ ಧಾರವಾಡದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರು ಗಲಾಟೆ ಮಾಡಿಕೊಂಡಿದ್ದು, ಈ ವೇಳೆ ಫೈರಿಂಗ್ ನಡೆದಿದೆ. ಈ ಸಂಬಂಧ ನಾಲ್ವರನ್ನು ಹುಬ್ಬಳ್ಳಿ ಧಾರವಾಡ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ: ತಡರಾತ್ರಿ ಮನೆಗೆ ಹೋಗುತ್ತಿದ್ದ ಸ್ಕೂಟಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದು ಗುಂಡು ಹಾರಿಸಿದ ಪ್ರಕರಣವೊಂದು ಧಾರವಾಡದ ಆರ್.ಎನ್.ಶೆಟ್ಟಿ ಮೈದಾನದ ಬಳಿ ಮಧ್ಯರಾತ್ರಿ 1 ಗಂಟೆಗೆ ನಡೆದಿದೆ. ಈ ವೇಳೆ ಎರಡೂ ಕಡೆಯವರ ನಡುವೆ ಗದ್ದಲ ಏರ್ಪಟ್ಟು ಮಧ್ಯರಾತ್ರಿ ಆತಂಕದ ವಾತಾವರಣವಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದೂ ಅಲ್ಲದೇ ಗದ್ದಲ ಎಬ್ಬಿಸಿದ ನಾಲ್ವರನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಧಾರವಾಡ ನಗರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು ಈ ಪ್ರಕರಣದಲ್ಲಿ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.
ಆಗಿದ್ದೇನು
ಧಾರವಾಡದ ಸಂಗಮ ಸರ್ಕಲ್‌ನಲ್ಲಿ ಪೈನಾನ್ಸ್ ನಡೆಸುತ್ತಿರುವ ಅಭಿಷೇಕ ಬಡ್ಡಿಮನಿ ಎಂಬ ಯುವಕ ಬೈಕ್‌ನಲ್ಲಿ ತನ್ನ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಪ್ರಜ್ವಲ ಕಲ್ಮೇಶ ಹಾವೇರಿಪೇಟ್, ಗಣೇಶ ಅರ್ಜುನ ಖೋಡೆ, ದಾನೇಶ ಮಹಾದೇವಪ್ಪ ಕಠಾರಿ ಎಂಬುವವರು ಇದ್ದ ಕಾರು ಆರ್ ಎನ್ ಶಟ್ಟಿ ಕ್ರೀಡಾಂಗಣ ಹತ್ತಿರ ಡಿಕ್ಕಿ ಹೊಡೆದ ಪರಿಣಾಮ ಗಲಾಟೆ ಆಗಿದೆ.
ಪ್ರಜ್ವಲ, ಗಣೇಶ ಮತ್ತು ದಿನೇಶ ಎಂಬುವವರು ಕಾರಿನಲ್ಲಿ ಬಂದು ಅಭಿಷೇಕನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಹಲ್ಲೆ ಮಾಡಲು ಯತ್ನಿಸಿದರು. ಅದಕ್ಕಾಗಿ ಜೀವ ರಕ್ಷಣೆಗೆ ಗುಂಡು ಹಾರಿಸಿರುವುದಾಗಿ ಅಭಿಷೇಕ ದೂರಿನಲ್ಲಿ ತಿಳಿಸಿದರೆ, ಪ್ರಜ್ವಲ ಮತ್ತು ಸ್ನೇಹಿತರು ತಾವು ಕಾರಿನಲ್ಲಿ ಬರುವಾಗ ಏಕಾಏಕಿ ಡಿಕ್ಕಿ ಹೊಡೆದು ಅಭಿಷೇಕ ಹಲ್ಲೆ ಮಾಡಲು ಬಂದನು. ಅಲ್ಲದೇ ಗುಂಡು ಹಾರಿಸಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.
ಗಾಯಗೊಂಡವರಿಗೆ ಚಿಕಿತ್ಸೆ
ಆತನ ದೂರಿನ ಮೇರೆಗೆ ಎದುರುಗಾರರಾದ ಪ್ರಜ್ವಲ, ಗಣೇಶ ಮತ್ತು ದಾನೇಶ ಇವರನ್ನು ವಶಕ್ಕೆ ಪಡೆಯಲಾಗಿದೆ.ಅಭಿಷೇಕ ಬಡ್ಡಿಮನಿಯನ್ನು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್‌ಗೆ ದಾಖಲಿಸಲಾಗಿದೆ
ಎಸಿಪಿ ಪ್ರಶಾಂತ ಸಿದ್ದನಗೌಡ್ರ, ಸಿಪಿಐಗಳಾದ ಎನ್.ಎಸ್.ಕಾಡದೇವರ, ಸಂಗಮೇಶ ದಿಡಿಗಿನಾಳ, ಶಿವರಾಜ ಕಡಕಬಾವಿ ತನಿಖೆ ಕೈಗೊಂಡಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಈಗಾಗಲೇ ಹುಬ್ಬಳ್ಳಿ ಧಾರವಾಡದಲ್ಲಿ ಬಡ್ಡಿ ವಹಿವಾಟು ವಿಚಾರದಲ್ಲಿ ಸಾಕಷ್ಟು ಗಲಾಟೆಗಳು ಆಗುತ್ತಿದ್ದು. ಈಗ ಇಂತಹ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ. ಆದರೂ ಪೊಲೀಸರು ಇಂತಹವ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಅನವಶ್ಯಕ ಆಯುಧ : ಲೈಸೆನ್ಸ್ ನವೀಕರಣ ವೇಳೆ ಪರಿಶೀಲನೆ
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿನ ಕೆಲವರು ಅನವಶ್ಯಕ ಆಯುಧ ಹೊಂದಿರುವುದನ್ನು ಪರವಾನಗಿ ನವೀಕರಣ ಸಂದರ್ಭದಲ್ಲಿ ಪುನರ್ ಪರಿಶೀಲಿಸು ವುದಾಗಿ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದರು.
ಕೆಲವು ಹದಿವಯದ ಯುವಕರು ಅನವಶ್ಯಕವಾಗಿ ಆಯುಧಗಳನ್ನು ಹೊಂದುತ್ತಿರು ವುದು ಗಮನಕ್ಕೆ ಬಂದಿದೆ. ಆತ್ಮ ಸಂರಕ್ಷಣೆ, ಆಸ್ತಿ ರಕ್ಷಣೆ ಉದ್ದೇಶದಿಂದ ಪರವಾನಗಿ ಸಹಿತ ಆಯುಧಗಳನ್ನು ಪಡೆಯುವುದು ಸ್ವಾಭಾವಿಕ. ಆದರೆ, ಇತ್ತೀಚಿನ ದಿನಗಳಲ್ಲಿ ಯಾವುದೇ ಗಂಭೀರ ಉದ್ದೇಶ ಇಲ್ಲದ ಯುವಕರು ಪರವಾನಗಿ ಪಡೆಯುತ್ತಿದ್ದಾರೆ. ಇದರಿಂದ ಆಯುಧಗಳ ದುರುಪಯೋಗ ಆಗುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಆಯುಧಗಳನ್ನು ಹೊಂದುವ ಉದ್ದೇಶವನ್ನು ಪರವಾನಗಿ ನವೀಕರಣ ಸಂದರ್ಭದಲ್ಲಿ ಪುನರ್ ಪರಿಶೀಲಿಸುವುದಾಗಿ ಆಯುಕ್ತರು ಮಾಹಿತಿ ನೀಡಿದರು.