Indian Railways: ಮುರ್ಡೇಶ್ವರ, ಕುಂದಾಪುರ, ಉಡುಪಿಯಿಂದ ತಿರುಪತಿಗೆ ರೈಲು: ಮಂಗಳೂರು ರೈಲು ಸೇವೆ ವಿಸ್ತರಣೆಗೆ ಸಮ್ಮತಿ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಮುರ್ಡೇಶ್ವರ, ಕುಂದಾಪುರ, ಉಡುಪಿಯಿಂದ ತಿರುಪತಿಗೆ ರೈಲು: ಮಂಗಳೂರು ರೈಲು ಸೇವೆ ವಿಸ್ತರಣೆಗೆ ಸಮ್ಮತಿ

Indian Railways: ಮುರ್ಡೇಶ್ವರ, ಕುಂದಾಪುರ, ಉಡುಪಿಯಿಂದ ತಿರುಪತಿಗೆ ರೈಲು: ಮಂಗಳೂರು ರೈಲು ಸೇವೆ ವಿಸ್ತರಣೆಗೆ ಸಮ್ಮತಿ

ಕರಾವಳಿಯ ಮಂಗಳೂರಿನಿಂದ ತಿರುಪತಿ ಮಾರ್ಗವಾಗಿ ಕಾಚಿಗುಡಕ್ಕೆ ತೆರಳುವ ರೈಲು ಇನ್ನು ಮುಂದೆ ಮುರ್ಡೇಶ್ವರ, ಕುಂದಾಪುರ, ಉಡುಪಿಗೂ ವಿಸ್ತರಣೆಯಾಗಲಿದೆ. ಇದರಿಂದ ಈ ಭಾಗದವರು ತಿರುಪತಿಗೆ ಹೋಗಲು ನೆರವಾಗಲಿದೆ.

ಮಂಗಳೂರು ಕಾಚಿಗುಡ ರೈಲು ಮುರ್ಡೇಶ್ವರದಿಂದ ಆರಂಭವಾಗಲಿದ್ದು, ಕುಂದಾಪುರ, ಉಡುಪಿ ಭಾಗದವರಿಗೂ ತಿರುಪತಿಗೆ ನೇರ ಸಂಪರ್ಕ ಕಲ್ಪಿಸಲಿದೆ.
ಮಂಗಳೂರು ಕಾಚಿಗುಡ ರೈಲು ಮುರ್ಡೇಶ್ವರದಿಂದ ಆರಂಭವಾಗಲಿದ್ದು, ಕುಂದಾಪುರ, ಉಡುಪಿ ಭಾಗದವರಿಗೂ ತಿರುಪತಿಗೆ ನೇರ ಸಂಪರ್ಕ ಕಲ್ಪಿಸಲಿದೆ.

ಉಡುಪಿ: ಕರ್ನಾಟಕದ ಕರಾವಳಿಯ ಪ್ರಮುಖ ಯಾತ್ರಾ ಸ್ಥಳ ಮುರ್ಡೇಶ್ವರ, ಪ್ರವಾಸಿ ತಾಣ ಕುಂದಾಪುರ, ಕೃಷ್ಣ ನಗರಿ ಉಡುಪಿಯಿಂದ ಇನ್ನು ಮುಂದೆ ನೇರವಾಗಿ ತಿರುಪತಿಗೆ ರೈಲು ಸಂಚರಿಸಲಿದೆ.ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾದ ತಿರುಪತಿ ರೈಲು ಸೇವೆ ವಿಸ್ತರಣೆಗೆ ಕೇಂದ್ರ ರೈಲ್ವೆ ಸಚಿವರು ಅನುಮತಿ ನೀಡಿದ್ದು. ಸದ್ಯದಲ್ಲಿಯೇ ಮುರ್ಡೇಶ್ವರ, ಕುಂದಾಪುರದಿಂದ ತಿರುಪತಿಗೆ ನೇರ ಸಂಪರ್ಕ ರೈಲು ಸೇವೆ ಲಭ್ಯವಾಗಲಿದೆ. ಉಡುಪಿ- ಚಿಕ್ಕಮಗಳೂರು ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ಅವರ ಬೇಡಿಕೆಗೆ ಸ್ಪಂದನೆ ದೊರೆತಿದೆ.

ಈಗಾಗಲೇ ಮಂಗಳೂರಿಂದ ಕಾಚಿಗುಡ ಎಕ್ಸ್‌ಪ್ರೆಸ್‌ ರೈಲು ಸಂಚಾರ ಇದ್ದರೂ ಅದು ಉಡುಪಿ, ಕುಂದಾಪುರ, ಮುರ್ಡೇಶ್ವರಕ್ಕೆ ಸೇವೆ ಇರಲಿಲ್ಲ. ಕಾಚಿಗುಡ ರೈಲು ತಿರುಪತಿ ಸಮೀಪದ ರೇಣಿಗುಂಟ ನಿಲ್ದಾಣದ ಮೂಲಕ ಹೈದ್ರಾಬಾದ್‌ಗೆ ತೆರಳಲಿದೆ. ಈ ರೈಲು ಸೇವೆಯನ್ನು ಕರಾವಳಿಯ ಇತರೆ ಭಾಗಕ್ಕೂ ವಿಸ್ತರಿಸಿ ಎನ್ನುವ ಕೋರಿಕೆ ಹಿಂದಿನಿಂದಲೂ ಇತ್ತು. ಅದು ಈಡೇರಿರಲಿಲ್ಲ.

ನಾಲ್ಕು ತಿಂಗಳ ಹಿಂದೆ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಕುರಿತು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌, ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದರು. ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ರೈಲ್ವೇ ಸಚಿವಾಲಯ ಮಂಗಳೂರುವರೆಗೆ ಸಂಚರಿಸುತ್ತಿರುವ ಕಾಚಿಗುಡ ರೈಲು ಸೇವೆಯನ್ನು (ರೈಲು ಗಾಡಿ ಸಂಖ್ಯೆ 12789/12790) ಮುರ್ಡೇಶ್ವರದವರೆಗೆ ವಿಸ್ತರಿಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ.

ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕರಾವಳಿ ಭಾಗದಿಂದ ತಿರುಪತಿಗೆ ಸಂಪರ್ಕಿಸುವ ರೈಲು ಯೋಜನೆಯ ಬಗ್ಗೆ ಬೇಡಿಕೆ ಕೇಳಿಬಂದಿತ್ತು.ಸಂಸದನಾದ ನೂರು ದಿನದೊಳಗೆ ಈ ಕೆಲಸ ಮಾಡಿಕೊಡುವೆ ಎಂದು ಭರವಸೆ ನೀಡಿದ್ದೆ. ಈ ಬಗ್ಗೆ ಕೇಂದ್ರ ರೈಲ್ವೆ ಇಲಾಖೆಯ ಸಚಿವರಾದ ಆಶ್ವಿನಿ ವೈಷ್ಣವ್‌ ಹಾಗೂ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣರ ಬಳಿ ವಿಸ್ತೃತವಾದ ವಿವರಣೆಯೊಂದಿಗೆ ಮನವಿ ಸಲ್ಲಿಸಿದ್ದೆ.‌ ಇದೀಗ ನಮ್ಮ ಬೇಡಿಕೆ ಈಡೇರಿದೆ. ಇನ್ನುಮುಂದೆ ಮುರುಡೇಶ್ವರ, ಕುಂದಾಪುರ, ಉಡುಪಿ, ಮೂಲ್ಕಿ ಭಾಗದಿಂದಲೂ ತಿರುಪತಿಗೆ ತೆರಳಲು ರೈಲು ಬಳಸಬಹುದು. ನಮ್ಮ ಬೇಡಿಕೆಯನ್ನು ಗೌರವಿಸಿ ಆದೇಶ ಹೊರಡಿಸಿದ ಕೇಂದ್ರ ಸಚಿವರುಗಳು ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಕೋಟಾ ಶ್ರೀನಿವಾಸಪೂಜಾರಿ ಎಕ್ಸ್‌ ಮೂಲಕ ಮಾಹಿತಿ ನೀಡಿದ್ದಾರೆ.

ಈ ರೈಲು ಬುಧವಾರ ಮತ್ತು ಶನಿವಾರ ಮುರ್ಡೇಶ್ವರದಿಂದ ಮಧ್ಯಾಹ್ನ 3.20ಕ್ಕೆ ಹೊರಡಲಿದ್ದು, ಕುಂದಾಪುರಕ್ಕೆ ಸಂಜೆ 4.40, ಮಂಗಳೂರು ರಾತ್ರಿ 8, ತಿರುಪತಿ ಬಳಿಯ ರೇಣಿಗುಂಟಕ್ಕೆ ಮರುದಿನ ಬೆಳಗ್ಗೆ 11.45 ಹಾಗೂ ಹೈದರಾಬಾದಿನ ಕಾಚಿಗುಡ ನಿಲ್ದಾಣಕ್ಕೆ ಸಂಜೆ 6ಕ್ಕೆ ತಲುಪಲಿದೆ. ಬಳಿಕ ಮರಳಿ ಕಾಚಿಗುಡದಿಂದ ಬೆಳಗ್ಗೆ 6ಕ್ಕೆ ಹೊರಡಲಿದ್ದು, ತಿರುಪತಿ ಸಮೀಪದ ರೇಣಿಗುಂಟಕ್ಕೆ ಸಂಜೆ 5, ಮಂಗಳೂರಿಗೆ ಮರುದಿನ ಬೆಳಗ್ಗೆ 9.30, ಕುಂದಾಪುರಕ್ಕೆ 11.59 ಹಾಗೂ ಮುರ್ಡೇಶ್ವರಕ್ಕೆ ಮಧ್ಯಾಹ್ನ 2 ಗಂಟೆಗೆ ತಲುಪಲಿದೆ ಎಂದು ಮಾಹಿತಿ ನೀಡಲಾಗಿದೆ.

ಈ ರೈಲು ಮುರ್ಡೇಶ್ವರದಿಂದ ಹೊರಟು ಉಡುಪಿ, ಮಂಗಳೂರು, ಕೇರಳದ ಪಾಲಕ್ಕಾಡ್‌, ತಮಿಳುನಾಡಿನ ಕೊಯಮತ್ತೂರು, ಈರೋಡ್‌, ಸೇಲಂ, ಆಂಧ್ರದ ರೇಣಿಗುಂಟ, ಕರ್ನೂಲು, ತೆಲಂಗಾಣದ ಮೆಹಬೂಬ್‌ ನಗರ ಮಾರ್ಗವಾಗಿ ಕಾಚಿಗುಡ ತಲುಪಲಿದೆ.

 

Whats_app_banner