ಕನ್ನಡ ರಾಜ್ಯೋತ್ಸವ 2024: ಬ್ರಿಟಿಷರಿಗೆ ಕಪ್ಪ ಕೊಡಲು ನಿರಾಕರಿಸಿದ ಕಿತ್ತೂರು ಚೆನ್ನಮ್ಮ ಸೇರಿ ಕರ್ನಾಟಕದ 10 ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ 2024: ಬ್ರಿಟಿಷರಿಗೆ ಕಪ್ಪ ಕೊಡಲು ನಿರಾಕರಿಸಿದ ಕಿತ್ತೂರು ಚೆನ್ನಮ್ಮ ಸೇರಿ ಕರ್ನಾಟಕದ 10 ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ

ಕನ್ನಡ ರಾಜ್ಯೋತ್ಸವ 2024: ಬ್ರಿಟಿಷರಿಗೆ ಕಪ್ಪ ಕೊಡಲು ನಿರಾಕರಿಸಿದ ಕಿತ್ತೂರು ಚೆನ್ನಮ್ಮ ಸೇರಿ ಕರ್ನಾಟಕದ 10 ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ

ಕನ್ನಡ ರಾಜ್ಯೋತ್ಸವ 2024 (Karnataka Rajyotsava) ಪ್ರಯುಕ್ತ ಸ್ವಾತಂತ್ಯ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ 10 ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ (Freedom fighters of Karnataka) ವಿವರ ತಿಳಿದುಕೊಳ್ಳೋಣ.

Kannada Rajyotsava 2024: ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಉಲ್ಲಾಳ ರಾಣಿ ಅಬ್ಬಕ್ಕ
Kannada Rajyotsava 2024: ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಉಲ್ಲಾಳ ರಾಣಿ ಅಬ್ಬಕ್ಕ (PC: Wiki commons)

Freedom fighters of Karnataka: ಭಾರದಲ್ಲಿ ವ್ಯಾಪಾರ ಆರಂಭಿಸುವ ಉದ್ದೇಶದಿಂದ ಈಸ್ಟ್‌ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ಬ್ರಿಟಿಷರು ಕ್ರಮೇಣ ಭಾರತವನ್ನು ಸ್ವಲ್ಪ ಸ್ವಲ್ಪವೇ ಆಕ್ರಮಿಸಿಕೊಳ್ಳುತ್ತಾ ಬಂದರು. ಭಾರತೀಯರ ಮೇಲೆ ದಬ್ಬಾಳಿಕೆ ಆರಂಭಿಸಿದರು. ಕೆಂಪು ಮೂತಿಯ ಬ್ರಿಟಿಷರನ್ನು ಮತ್ತೆ ಭಾರತದಿಂದ ಹೊರ ದಬ್ಬಲು ಎಷ್ಟೋ ಹೋರಾಟಗಳು ನಡೆದವು. ಕೆಲವರು ಜೈಲಿಗೆ ಹೋದರೆ, ಕೆಲವರು ಪ್ರಾಣ ಕಳೆದುಕೊಂಡರು, ಬ್ರಿಟಿಷರ ಬಳಿ ಗಾಣದ ಎತ್ತುಗಳಾಗಿ ದುಡಿದರು. ಸ್ವಾತಂತ್ರ್ಯ ಗಳಿಸಲು ದೇಶದ ಪ್ರತಿ ರಾಜ್ಯದಲ್ಲೂ ಬ್ರಿಟಿಷರ ವಿರುದ್ಧ ಹೋರಾಟ ಶುರುವಾಯ್ತು. ಕರ್ನಾಟಕದಲ್ಲೂ ಅನೇಕರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ.

ಕರ್ನಾಟಕದ 10 ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇಲ್ಲಿದೆ ಮಾಹಿತಿ

 

  1. ಕಿತ್ತೂರು ರಾಣಿ ಚೆನ್ನಮ್ಮ

ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ. 1778ರಲ್ಲಿ ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಸಣ್ಣ ಹಳ್ಳಿಯಲ್ಲಿ ಚೆನ್ನಮ್ಮ ಜನಿಸಿದರು. ಚಿಕ್ಕ ವಯಸ್ಸಿನಿಂದಲೇ ಕುದುರೆ ಸವಾರಿ, ಕತ್ತಿ ವರಸೆಯನ್ನು ಕಲಿತು ಧೈರ್ಯಗಾರ್ತಿ ಎನಿಸಿಕೊಂಡರು. 15 ನೇ ವಯಸ್ಸಿನಲ್ಲಿ ರಾಜಾ ಮಲ್ಲಸರ್ಜನನ್ನು ಚೆನ್ನಮ್ಮ ಮದುವೆ ಆದರು. ಆ ಸಮಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಆರಂಭವಾಗಿತ್ತು. ಕಪ್ಪ ಕೇಳಲು ಬಂದ ಬ್ರಿಟಿಷರಿಗೆ ಕಪ್ಪ? ಯಾರನ್ನು ಕೇಳುತ್ತಿದ್ದೀ ಕಪ್ಪ ಕೊಡಲು! ಯಾತಕ್ಕೆ ಕೇಳುತ್ತಿ? ಮೋಡ ಮಳೆ ಸುರಿಸುತ್ತದೆ, ಭೂಮಿ ಬೆಳೆಯುತ್ತದೆ, ನಿನಗೇಕೆ ಕೊಡಬೇಕು ಕಪ್ಪ? ನೀವೇನು ನೆಂಟರೆ, ಸೋದರರೇ, ದಾಯಾದಿಗಳೇ? ನಿಮಗೇಕೆ ಕೊಡಬೇಕು ಕಪ್ಪ? ನೀವೇನು ಉತ್ತಿರಾ, ಬಿತ್ತಿರಾ, ಬೆಳೆದಿರಾ, ನೀರು ಹಾಯಿಸಿ ಕಳೆಕಿತ್ತಿರಾ? ನಿಮಗೇಕೆ ಕೊಡಬೇಕು ಕಪ್ಪ? ಎಂದು ಪ್ರಶ್ನಿಸಿ ಹಿಮ್ಮೆಟ್ಟಿಸಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ

2. ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯಲ್ಲಿ 1798 ರಲ್ಲಿ ಜನಿಸಿದರು. ಬಾಲ್ಯದಲ್ಲೇ ಹೋರಾಟದ ಮನೋಭಾವ ಬೆಳೆಸಿಕೊಂಡಿದ್ದ ಸಂಗೊಳ್ಳಿ ರಾಯಣ್ಣ, ಕ್ರಮೇಣ ಕಿತ್ತೂರು ಸಾಮ್ರಾಜ್ಯದ ಮಿಲಿಟರಿಗೆ ಸೇರಿ ಹಿರಿಯ ಕಮಾಂಡರ್ ಸ್ಥಾನಕ್ಕೆ ಏರಿದರು. ಭಾರತದಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ದಂಗೆ ಎದ್ದರು . ಏಪ್ರಿಲ್ 1830 ರಲ್ಲಿ, ರಾಯಣ್ಣನನ್ನು ಬ್ರಿಟಿಷರು ಸೆರೆ ಹಿಡಿದರು, ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿ ಮರಣದಂಡನೆ ವಿಧಿಸಿದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಸಂಗೊಳ್ಳಿ ರಾಯಣ್ಣ ನೀಡಿದ ಕೊಡುಗೆಯ ನೆನಪಿಗಾಗಿ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ.

3. ಉಲ್ಲಾಳ ರಾಣಿ ಅಬ್ಬಕ್ಕ

ರಾಣಿ ಅಬ್ಬಕ್ಕ ಚೌಟ ರಾಜವಂಶಕ್ಕೆ ಸೇರಿದವಳು, ಪೋರ್ಚುಗೀಸರ ವಿರುದ್ಧ ಹೋರಾಡಿದ ಉಳ್ಳಾಲದ ಮೊದಲ ತುಳುವ ರಾಣಿ. ಮಂಗಳೂರಿನ ಲಕ್ಷ್ಮಪ್ಪ ಅರಸನನ್ನು ಅಬ್ಬಕ್ಕ ಮದುವೆ ಆದಳು. ಅದರೆ ಇವರ ವೈವಾಹಿಕ ಜೀವನ ಹೆಚ್ಚು ದಿನ ಉಳಿಯಲಿಲ್ಲ. ನಂತರ ಅಬ್ಬಕ್ಕ ಮಂಗಳೂರನ್ನು ಬಿಟ್ಟು ಉಲ್ಲಾಳಕ್ಕೆ ಹಿಂತಿರುಗಿದಳು. ಸ್ವತ: ಅಬ್ಬಕ್ಕನ ಪತಿ, ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ಹೂಡಿ ಪೋರ್ಚುಗೀಸರೊಂದಿಗೆ ಸೇರಿದನು. ಉಲ್ಲಾಳವನ್ನು ವಶಪಡಿಸಿಕೊಳ್ಳಲು ಬಂದ ಪೋರ್ಚುಗೀಸರನ್ನು ಅಬ್ಬಕ್ಕ ಅನೇಕ ಬಾರಿ ಹಿಮ್ಮೆಟ್ಟಿಸಿದಳು. ಅಬ್ಬಕ್ಕನ ನೆನಪಿಗಾಗಿ ಇಂದಿಗೂ ಉಲ್ಲಾಳದಲ್ಲಿ ಪ್ರತಿ ವರ್ಷ ವೀರ ರಾಣಿ ಅಬ್ಬಕ್ಕ ಉತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಪ್ರತಿಷ್ಠಿತ ಮಹಿಳೆಯರಿಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ನೀಡಲಾಗುತ್ತದೆ. 2003 ರಂದು, ಭಾರತೀಯ ಅಂಚೆ ಇಲಾಖೆ ರಾಣಿ ಅಬ್ಬಕ್ಕನ ಚಿತ್ರವಿರುವ ಸ್ಟಾಂಪ್‌ ಬಿಡುಗಡೆ ಮಾಡಿದೆ.

4. ಕಾರ್ನಾಡ್‌ ಸದಾಶಿವರಾವ್‌

ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ಪ್ರಮುಖ ರಸ್ತೆಗಳಿಗೆ ಇಡಲಾಗುತ್ತದೆ. ಅದೇ ರೀತಿ ಬೆಂಗಳೂರಿನಲ್ಲಿರುವ ಸದಾಶಿವ ನಗರಕ್ಕೆ, ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್‌ ಸದಾಶಿವರಾವ್‌ ಅವರ ನೆನಪಿಗಾಗಿ ಇಡಲಾಯ್ತು. ಸದಾಶಿವರಾವ್‌ 1881ರಲ್ಲಿ ಮಂಗಳೂರಿನ ಕಾರ್ನಾಡ್ ಎಂಬಲ್ಲಿ ಜನಿಸಿದರು. ಶ್ರೀಮಂತ ಮನೆತನ, ವಕೀಲ ವೃತ್ತಿ ಇದ್ದರೂ ಕಾರ್ನಾಡರು ಹೋರಾಟದ ಹಾದಿ ಹಿಡಿದರು. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಕರೆ ಸದಾಶಿವರಾವ್‌ ಅವರಿಗೆ ಪ್ರೇರಣೆ ಆಯ್ತು. ಕ್ರಮೇಣ ಸ್ವತಃ ಸದಾಶಿವರಾವ್ ಕಾರ್ನಾಡರ ಮನೆಯೇ ಕಾಂಗ್ರೆಸ್ ಚಟುವಟಿಕೆಯ ಕೇಂದ್ರಸ್ಥಾನವಾಯಿತು. ಸ್ವಾತಂತ್ರ್ಯ ಹೋರಾಟ ಮಾತ್ರವಲ್ಲದೆ ಸಮಾಜ ಸುಧಾರಕರಾಗಿ ಕೂಡಾ ಸದಾಶಿವರಾವ್‌ ಹೆಸರು ಗಳಿಸಿದ್ದಾರೆ.

5. ಉಮಾಬಾಯಿ ಕುಂದಾಪುರ

ಉಮಾಬಾಯಿ 1892ರಂದು ಕುಂದಾಪುರ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಕ್ರಮೇಣ ಕುಟುಂಬದ ಜೊತೆ ಮುಂಬೈಗೆ ತೆರಳಿದ ಉಮಾಬಾಯಿ ಸಂಜೀವರಾವ್ ಕುಂದಾಪುರ್ ಅವರನ್ನು ಮದುವೆಯಾದರು. 1920ರಲ್ಲಿ ಬಾಲಗಂಗಾಧರ್‌ ತಿಲಕರು ಮೃತರಾದರು. ಅವರ ಮೃತದೇಹದ ಭವ್ಯ ಮೆರವಣಿಗೆಯನ್ನು ನೋಡಿದ ಉಮಾಬಾಯಿಯವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲು ಪ್ರೇರಣಿ ನೀಡಿತು. 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಸಂಘಟನೆಯ ರಾಷ್ಟ್ರೀಯ ಸಮ್ಮೇಳನ ನಡೆದ ಸಂದರ್ಭದಲ್ಲಿ ರಾಜ್ಯಾದ್ಯಂತ ತಿರುಗಿ ಸುಮಾರು 150ಕ್ಕೂ ಹೆಚ್ಚು ಮಹಿಳೆಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು.

6. ಎನ್‌ಎಸ್‌ ಹರ್ಡಿಕರ್‌

ನಾರಾಯಣ ಸುಬ್ಬರಾವ್ ಹರ್ಡಿಕರ್ 1889 ರಲ್ಲಿ ಧಾರವಾಡದಲ್ಲಿ ಜನಿಸಿದರು. ಯುಎಸ್‌ನಲ್ಲಿ ಉನ್ನತ ಶಿಕ್ಷಣ ಪದವಿಗೆ ತೆರಳಿದ ಎನ್‌ಎಸ್‌ ಹರ್ಡಿಕರ್‌, ಕೆಲವು ವರ್ಷಗಳ ಕಾಲ ಅಲ್ಲೇ ನೆಲೆಸಿದ್ದರು. ಅಲ್ಲಿ ಲಾಲಾ ಲಜಪತ್ ರಾಯ್ ಅವರನ್ನು ಭೇಟಿಯಾದರು. ಅಮೆರಿಕದಲ್ಲಿ ಅನೇಕ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. 1921 ರಲ್ಲಿ ಭಾರತಕ್ಕೆ ಮರಳಿದ ಅವರು ಇಲ್ಲಿಯೂ ಅನೇಕ ಹೋರಾಟಕ್ಕೆ ನಾಂದಿ ಹಾಡಿದರು. ಸ್ವಾತಂತ್ರ್ಯ ಹೋರಾಟಗಾರರಾಗಿ ಮಾತ್ರವಲ್ಲದೆ ಕಾಂಗ್ರೆಸ್ ರಾಜಕಾರಣಿಯಾಗಿ ಕೂಡಾ ಹರ್ಡಿಕರ್‌ ಗುರುತಿಸಿಕೊಂಡಿದ್ದಾರೆ. 1952 ರಿಂದ 1962 ರವರೆಗೆ ಎರಡು ಬಾರಿ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ.

7. ನಿಟ್ಟೂರು ಶ್ರೀನಿವಾಸ್‌ ರಾವ್‌

ನಿಟ್ಟೂರು ಶ್ರೀನಿವಾಸ್‌ ರಾವ್‌ ಅಪ್ಪಟ ಗಾಂಧಿವಾದಿ. ಬೆಂಗಳೂರಿನಲ್ಲಿ ಜನಿಸಿದ ಇವರು ಸೆಂಟ್ರಲ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದು ನ್ಯಾಷನಲ್ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ನಂತರ ಕಾನೂನು ಪದವಿ ಪಡೆದರು. ವಕೀಲ ವೃತ್ತಿ ಆರಂಭಿಸಿದ ಶ್ರೀನಿವಾಸರಾವ್‌, 1961ರಲ್ಲಿ ರಾಜ್ಯ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆಗಿ ನೇಮಕವಾದರು. 18ನೇ ವಯಸ್ಸಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿ ಚಳವಳಿಯಲ್ಲಿ ಭಾಗವಹಿಸಿದರು. ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು.

8. ಕಮಲಾದೇವಿ ಚಟ್ಟೋಪಾಧ್ಯಾಯ

ಕಮಲಾದೇವಿ ಚಟ್ಟೋಪಾಧ್ಯಾಯ 1903ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ಶಾಲೆಯಲ್ಲಿ ಓದುವಾಗಲೇ ಮದುವೆ ಆದ ಕಮಲಾದೇವಿ ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡರು. ಕೆಲವು ವರ್ಷಗಳ ನಂತರ ಕವಿ, ಹಾಗೂ ನಾಟಕಕಾರರಾದ ಹರೀಂದ್ರನಾಥ ಚಟ್ಟೋಪಾಧ್ಯಾಯ ಅವರ ಕೈ ಹಿಡಿದು ಲಂಡನ್‌ಗೆ ತೆರಳಿದರು. ಅಲ್ಲಿಂದ ವಾಪಸ್‌ ಬಂದ ನಂತರ ದಂಪತಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಕಾರಣಾಂತರಗಳಿಂದ ಪತಿಯಿಂದ ವಿಚ್ಛೇದನ ಪಡೆದು ಸಂಪೂರ್ಣ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು. ಸ್ವಾತಂತ್ರ್ಯ ಹೋರಾಟ, ಸಮಾಜ ಸೇವೆಗೆ ನೀಡಿದ ಕೊಡುಗೆಗಾಗಿ ಕಮಲಾದೇವಿ ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ, ರಾಮೊನ್‌ ಮ್ಯಾಗ್ಸೆಸ್‌ ಪ್ರಶಸ್ತಿ ದೊರೆತಿದೆ.

9. ಹೆಚ್‌ಎಸ್‌ ದೊರೆಸ್ವಾಮಿ

ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ 1918ರಲ್ಲಿ ಜನಿಸಿದರು. ಪತ್ರಕರ್ತನಾಗಿ, ಭಾರತೀಯ ಸ್ವಾತಂತ್ರ್ಯ ಚಳವಳಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ. 1942 ರಲ್ಲಿ ಶಿಕ್ಷಣ ಮುಗಿಸಿದ ಹೆಚ್‌ಎಸ್‌ ದೊರೆಸ್ವಾಮಿ ಬೆಂಗಳೂರಿನಲ್ಲಿ ಪ್ರೌಢಶಾಲೆ ಶಿಕ್ಷಕರಾಗಿ ನೇಮಕಗೊಂಡರು. ಜೊತೆ ಜೊತೆಗೆ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು. ಕಮ್ಯುನಿಸ್ಟ್ ಯೂನಿಯನ್ ನಾಯಕರಾದ ಎನ್‌ಡಿ ಶಂಕರ್ ಅವರೊಂದಿಗೆ ರಾಜಾ, ಮಿನರ್ವ ಮತ್ತು ಬಿನ್ನಿ ಮಿಲ್‌ಗಳಲ್ಲಿ 14 ದಿನಗಳ ಸಾರ್ವತ್ರಿಕ ಮುಷ್ಕರವನ್ನು ಸಂಘಟಿಸುವಲ್ಲಿ ಸಹಕರಿಸಿದರು. ಈ ಸಂಘಟನೆಯಲ್ಲಿ ಸುಮಾರು 8,000 ಕಾರ್ಮಿಕರು ಭಾಗವಹಿಸಿದ್ದರು. ಸ್ವಾತಂತ್ರ್ಯ ಹೋರಾಟದಿಂದ ಜೈಲುಶಿಕ್ಷೆ ಅನುಭವಿಸಿರುವ ದೊರೆಸ್ವಾಮಿಯವರು ಸ್ವಾತಂತ್ಯ್ರ ನಂತರ ಭೂದಾನ ಚಳುವಳಿ ಮತ್ತು ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಕೂಡಾ ಭಾಗವಹಿಸಿದ್ದಾರೆ.

10. ಹರ್ಡೇಕರ್‌ ಮಂಜಪ್ಪ

ಹರ್ಡೇಕರ್‌ ಮಂಜಪ್ಪ ಕರ್ನಾಟಕದ ಗಾಂಧಿ ಎಂದೇ ಹೆಸರಾಗಿದ್ದರು. 1886ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಜನಿಸಿದರು. ಶಿಕ್ಷಕ ವೃತ್ತಿ ಆರಂಭಿಸಿ ಕೆಲವು ವರ್ಷಗಳ ನಂತರ ಪತ್ರಿಕೋದ್ಯಮದಲ್ಲಿ ಸಕ್ರಿಯರಾದರು. ರಾಷ್ಟ್ರೀಯ ನಾಯಕರಿಂದ ಪ್ರಭಾವಿತರಾದ ಮಂಜಪ್ಪನವರು ಬಾಲಗಂಗಾಧರ್‌ ತಿಲಕ್‌ ಅವರನ್ನು ಭೇಟಿಯಾಗಿ ಖಾದಿವ್ರತ ಕೈಗೊಂಡರು. ಸಾಬರಮತಿಗೆ ಹೋಗಿ ಗಾಂಧೀಜಿಯವರ ಜೊತೆಗೆ ಕೆಲ ದಿನ ಇದ್ದರು. ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು. 1934ರಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಬಂದಾಗ ಮಂಜಪ್ಪನವರು ಅವರ ಜೊತೆ ರಾಜ್ಯದ ಮೂಲೆ ಮೂಲೆಗೂ ತೆರಳಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.

 

Whats_app_banner