Janotsava postponed: ಉಮೇಶ್​ ಕತ್ತಿ ನಿಧನ; ಸತತ ಮೂರನೇ ಬಾರಿಗೆ ಬಿಜೆಪಿ ಸರ್ಕಾರದ ಜನೋತ್ಸವ ಮುಂದೂಡಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  Janotsava Postponed: ಉಮೇಶ್​ ಕತ್ತಿ ನಿಧನ; ಸತತ ಮೂರನೇ ಬಾರಿಗೆ ಬಿಜೆಪಿ ಸರ್ಕಾರದ ಜನೋತ್ಸವ ಮುಂದೂಡಿಕೆ

Janotsava postponed: ಉಮೇಶ್​ ಕತ್ತಿ ನಿಧನ; ಸತತ ಮೂರನೇ ಬಾರಿಗೆ ಬಿಜೆಪಿ ಸರ್ಕಾರದ ಜನೋತ್ಸವ ಮುಂದೂಡಿಕೆ

ಸಚಿವ ಉಮೇಶ್​ ಕತ್ತಿ ನಿಧನ ಹಿನ್ನೆಲೆ ನಾಳೆ (ಸೆ.8) ನಡೆಯಬೇಕಿದ್ದ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮವನ್ನು ಭಾನುವಾರ (ಸೆ.11)ಕ್ಕೆ ಮುಂದೂಡಲಾಗಿದೆ.

<p>ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ&nbsp;</p>
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ&nbsp;

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿರಿಸುವ ಪ್ರಯತ್ನಕ್ಕೆ ಸಾಲು ಸಾಲು ಅಡ್ಡಿಗಳು ಎದುರಾಗುತ್ತಿವೆ. ಸಚಿವ ಉಮೇಶ್​ ಕತ್ತಿ ನಿಧನ ಹಿನ್ನೆಲೆ ನಾಳೆ (ಸೆ.8) ನಡೆಯಬೇಕಿದ್ದ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮವನ್ನು ಭಾನುವಾರ (ಸೆ.11)ಕ್ಕೆ ಮುಂದೂಡಲಾಗಿದೆ. ಈ ಮೂಲಕ ಸತತ ಮೂರನೇ ಬಾರಿಗೆ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆಯಾದಂತಾಗಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜುಲೈ 28 ರಂದು ಜನೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದ ಮೂಲಕ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಲು ತೀರ್ಮಾನಿಸಲಾಗಿತ್ತು.

ಆಗಸ್ಟ್‌ 12 ರಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯನವರ ಹುಟ್ಟುಹಬ್ಬ. ಈ ವರ್ಷ ಅವರಿಗೆ 75 ವರ್ಷ ತುಂಬಿದ್ದರಿಂಧ ಅವರ ಜನ್ಮದಿನವನ್ನು ಸಿದ್ದರಾಮೋತ್ಸವ ಎಂದು ಕಾಂಗ್ರೆಸ್​ ಆಚರಣೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಯಶಸ್ವಿಯಾಗಿಸಿದ್ದರು. ಸಿದ್ದರಾಮೋತ್ಸವಕ್ಕೂ ಮುನ್ನ ಅಂದರೆ ಜುಲೈ 28 ರಂದು ಜನೋತ್ಸವ ಆಚರಿಸಿ ಕಾಂಗ್ರೆಸ್​​ಗೆ ಸಡ್ಡು ಹೊಡೆಯಲು ಬಿಜೆಪಿ ಮುಂದಾಗಿತ್ತು.

ಆದರೆ, ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ನಾಯಕ ಪ್ರವೀಣ್​ ನೆಟ್ಟಾರು ಹತ್ಯೆಯಾಗಿತ್ತು. ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್‌ ಬಳಿ ಕೋಳಿ ಮಾಂಸದಂಗಡಿ ಹೊಂದಿರುವ ಪ್ರವೀಣ್‌ ನೆಟ್ಟಾರು ಅವರು ಜುಲೈ 26ರ ರಾತ್ರಿ ಅಂಗಡಿಗೆ ಬಾಗಿಲು ಹಾಕುತ್ತಿರುವಾಗ ಬೈಕೊಂದರಲ್ಲಿ ಮೂವರು ದುಷ್ಕರ್ಮಿಗಳು ಬಂದು ಮಾರಾಕಾಸ್ತ್ರಗಳಿಂದ ಏಕಾಏಕೆ ದಾಳಿ ಮಾಡಿ ಹತ್ಯೆ ಮಾಡಿದ್ದರು.

ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷನ ಕೊಲೆ ಬಳಿಕ ಪ್ರವೀಣ್​ ಕೊಲೆ ರಾಜ್ಯದ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಂತೆ ಮಾಡಿತ್ತು. ಬಿಜೆಪಿ ಕಾರ್ಯಕರ್ತರೇ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿ ಬಿದ್ದು, ಅನೇಕ ಬಿಜೆಪಿ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂತಹ ಸಮಯದಲ್ಲಿ ಜನೋತ್ಸವ ಆಚರಿಸುವುದು ಸೂಕ್ತವಲ್ಲ ಎಂದು ಮನಗಂಡ ರಾಜ್ಯ ಸರ್ಕಾರ ಈ ಕಾರ್ಯಕ್ರಮವನ್ನು ರದ್ದು ಮಾಡಿತ್ತು.

ಆದರೆ ಅದೇ ದಿನ (ಜುಲೈ 28) ಮಾಧ್ಯಮಗಳ ಮುಂದೆ ಮಾತನಾಡಿದ್ದ ಸಿಎಂ ಬೊಮ್ಮಾಯಿ, ಆತ್ಮಸಾಕ್ಷಿಯಾಗಿ ನಿರ್ಣಯ ಕೈಗೊಂಡು ಬ್ಯಾಂಕ್ವೆಟ್ ಹಾಲಿನಲ್ಲಿ ಮತ್ತು ಪಕ್ಷದ ವತಿಯಿಂದ ದೊಡ್ಡಬಳ್ಲಾಪುರದಲ್ಲಿ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಈ ನಿರ್ಣಯದ ಬಗ್ಗೆ ಹಲವಾರು ವ್ಯಾಖ್ಯಾನಗಳು ಆಗಿವೆ. ಆದರೆ. ಮೊನ್ನೆಯ ಘಟನೆಯ ಬಗ್ಗೆ ಯೋಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಕಾರ್ಯಕರ್ತರು ಹಾಗೂ ಜಿಲ್ಲಾ ಮಂತ್ರಿಗಳೊಂದಿಗೆ ಜೊತೆಗೆ ಚರ್ಚೆ ಮಾಡಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದರು.

ಪ್ರವೀಣ್​ ನೆಟ್ಟಾರು ಹತ್ಯೆಯಿಂದಾಗಿ ರದ್ದುಗೊಂಡಿದ್ದ ಜನೋತ್ಸವವನ್ನು ಮತ್ತೆ ಆಚರಿಸಲು ಬಿಜೆಪಿ ಮುಂದಾಗಿತ್ತು. ಆಗಸ್ಟ್ 28ಕ್ಕೆ ದೊಡ್ಡಬಳ್ಳಾಪುರದಲ್ಲಿ ಸರ್ಕಾರದ ಸಾಧನೆಯ ಜನೋತ್ಸವವನ್ನು ಆಚರಿಸಲು ನಿರ್ಧರಿಸಿತ್ತು. ಸಕಲ ವ್ಯವಸ್ಥೆಯೂ ಆಗಿತ್ತು. ಆದರೆ ಕಾರಣಾಂತರಗಳಿಂದ ಮತ್ತೆ ಜನೋತ್ಸವವನ್ನು ಸೆಪ್ಟೆಂಬರ್​ 8ಕ್ಕೆ ಮುಂದೂಡಲಾಗಿತ್ತು.

ಸೆಪ್ಟೆಂಬರ್ 8 ರಂದು ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನೋತ್ಸವ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಜಿಲ್ಲೆಗಳಿಂದ 3 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವುದಾಗಿ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದರು. ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಒಟ್ಟು 1500 ಬಸ್ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಸಿಎಂ ಯಡಿಯೂರಪ್ಪ, ಸಂಪುಟ ಸಹೋದ್ಯೋಗಿಗಳು ಭಾಗವಹಿಸಲಿದ್ದಾರೆ. ಈ ಮೂಲಕವೇ ಚುನಾವಣೆ ಕಾವು ಏರಲಿದೆ ಎಂದು ಹೇಳಿದ್ದರು.

ಆದರೆ ನಿನ್ನೆ (ಸೆ.6) ಹೃದಯಾಘಾತದಿಂದ ಅರಣ್ಯ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್​ ಕತ್ತಿ ನಿಧನರಾಗಿದ್ದು, ಈ ಹಿನ್ನೆಲೆ ಇದೀಗ ಮತ್ತೆ ಜನೋತ್ಸವವನ್ನು ಸೆಪ್ಟೆಂಬರ್​ 11ಕ್ಕೆ ಮುಂದೂಡಿಕೆ ಮಾಡಲಾಗಿದೆ.

Whats_app_banner