ಸಾಹಿತ್ಯ ಸಮ್ಮೇಳನಕ್ಕೆ ಬೆಂಗಳೂರು-ಮೈಸೂರಿಂದ ವಿಶೇಷ ಬಸ್ ವ್ಯವಸ್ಥೆ; ಸಂಚಾರಿ ಮಾರ್ಗ ಬದಲಾವಣೆ, ಮಂಡ್ಯಕ್ಕೆ ಹೀಗೆ ಬನ್ನಿ
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಇದೇ ವೇಳೆ ಬೆಂಗಳೂರು ಹಾಗೂ ಮೈಸೂರಿನಿಂದಲೂ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಇರಲಿದೆ. ಕನ್ನಡ ಹಬ್ಬಕ್ಕೆ ಬರುವವರಿಗಾಗಿ ಸಂಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಯೋಜಿಸಲಾಗಿದೆ.
ಸಕ್ಕರೆ ನಾಡು ಮಂಡ್ಯ ಕನ್ನಡ ಹಬ್ಬಕ್ಕೆ ಸಜ್ಜಾಗಿದೆ. ಡಿಸೆಂಬರ್ 20 ರಿಂದ 22ರವರೆಗೆ ಮೂರು ದಿನಗಳ ಕಾಲ ಮಂಡ್ಯ ನಗರದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (87th Kannada Sahitya Sammelana) ನಡೆಯಲಿದೆ. ಕನ್ನಡ ಸಾಹಿತ್ಯ ಹಬ್ಬಕ್ಕೆ ಮಂಡ್ಯ ನಗರ ಆತಿಥ್ಯ ವಹಿಸುತ್ತಿದ್ದು, ಎಲ್ಲಾ ಸಿದ್ಧತೆಗಳು ಅಂತಿಮ ಹಂತಕ್ಕೆ ಬಂದಿದೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ನಗರದ ಹೊರವಲಯದಲ್ಲಿ 70 -80 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದ್ದು, 40000 ಜನರು ಕುಳಿತುಕೊಳ್ಳಲು ಸಾಧ್ಯವಾಗುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸಾಹಿತ್ಯಾಸಕ್ತರು ಬರುವ ನಿರೀಕ್ಷೆ ಇದೆ. ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗುವ ಕನ್ನಡಿಗರನ್ನು ಆದರದಿಂದ ಸ್ವಾಗತಿಸಲು ಮಂಡ್ಯ ಜಿಲ್ಲೆ ಸಜ್ಜಾಗಿದೆ.
ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುವವರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಮಂಡ್ಯದಲ್ಲಿ ಚಲುವರಾಯಸ್ವಾಮಿ ಹೇಳಿದರು.
ಮೂರು ದಿನಗಳ ಕಾಲ ಜಿಲ್ಲೆಯ 7 ತಾಲೂಕು ಕೇಂದ್ರಗಳಿಂದ ಸಮ್ಮೇಳನ ನಡೆಯುವ ಸ್ಥಳಕ್ಕೆ ಬಸ್ ಸೌಲಭ್ಯವಿದೆ. ಬಸ್ ಸೇರಿದಂತೆ 105 ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮಂಡ್ಯ ಮಾತ್ರವಲ್ಲದೆ, ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದಲೂ ಪ್ರತಿ 30 ನಿಮಿಷಕ್ಕೆ ಒಂದರಂತೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಸಂಚಾರಿ ಮಾರ್ಗದಲ್ಲಿ ಬದಲಾವಣೆ
ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಸಂಚಾರಿ ಮಾರ್ಗದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಸಮ್ಮೇಳನ ನಡೆಯುವ ಮೂರು ದಿನಗಳ ಕಾಲ, ಅಂದರೆ ಡಿಸೆಂಬರ್ 20ರ ಬೆಳಗ್ಗೆ 5ರಿಂದ 23ರ ಬೆಳಗ್ಗೆ 6ರವರೆಗೆ ಹೆದ್ದಾರಿ ಸಂಚಾರ ಬದಲಾವಣೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.
ಸಾಹಿತ್ಯ ಸಮ್ಮೇಳನಕ್ಕೆ ಹೀಗೆ ಬನ್ನಿ
ಬೆಂಗಳೂರಿನಿಂದ ರಾಮನಗರ ಮಾರ್ಗವಾಗಿ ತುಮಕೂರು, ಮದ್ದೂರು, ಮಳವಳ್ಳಿಯಿಂದ ಎಕ್ಸ್‌ಪ್ರೆಸ್‌ವೇನಲ್ಲಿ ಬರುವವರು ಹೊಸಬೂದನೂರು ಬಳಿ ಎಕ್ಸಿಟ್ ಮಡೆದು ಸರ್ವಿಸ್ ರಸ್ತೆಗೆ ಬರಬಹುದು. ಸಮ್ಮೇಳನದ ಮುಖ್ಯ ದ್ವಾರದ ಮೂಲಕವಾಗಿ ಸಾಹಿತ್ಯ ಸಮ್ಮೇಳನ ಸ್ಥಳ ತಲುಪಬಹುದು.
ಅತ್ತ ಮೈಸೂರು, ಶ್ರೀರಂಗಪಟ್ಟಣ, ಪಾಂಡವಪುರದಿಂದಾಗಿ ಎಕ್ಸ್‌ಪ್ರೆಸ್ ವೇನಲ್ಲಿ ಬರುವವರು ಶಶಿಕಿರಣ ಕನ್ವೆನ್ಷನ್ ಹಾಲ್ ಬಳಿ ಎಕ್ಸಿಟ್ ಪಡೆದು, ಹೊಸಬೂದನೂರು ಅಂಡರ್‌ಪಾಸ್ ಬಳಿ ಸರ್ವಿಸ್ ರಸ್ತೆಯಲ್ಲಿ ಯೂಟರ್ನ್ ಪಡೆದು ಬ್ಯಾಂಕರ್ಸ್ ಕಾಲೊನಿ ಮೂಲಕವಾಗಿ ಸಮ್ಮೇಳನಕ್ಕೆ ಬರಬಹುದು. ಈ ಕಾರಣಕ್ಕಾಗಿ ಚಿಕ್ಕಮಂಡ್ಯದಿಂದ ಹನಕೆರೆಯವರೆಗೆ ಸರ್ವಿಸ್ ರಸ್ತೆಯಲ್ಲಿ ದ್ವಿಮುಖ ಸಂಚಾರ ನಿಷೇಧಿಸಲಾಗಿದೆ.
2 ದಿನ ಮಂಡ್ಯದ ಶಾಲಾ-ಕಾಲೇಜುಗಳಿಗೆ ರಜೆ
ಸಮ್ಮೇಳನಕ್ಕೆ ನೋಂದಾವಣೆ ಮಾಡಿಕೊಂಡಿರುವ ಪ್ರತಿನಿಧಿಗಳು ಹಾಗೂ ಸಾಹಿತ್ಯಸಾಕ್ತರಿಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಡಿಸೆಂಬರ್ 20 ಹಾಗೂ 21ರಂದು ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.