Free bus Karnataka: ಶಕ್ತಿ ಪ್ರಯಾಣಕ್ಕೆ ಹೆಚ್ಚಿದ ಬೇಡಿಕೆ, ವಾರದಲ್ಲೇ 3.12 ಕೋಟಿ ಮಹಿಳೆಯರ ಪ್ರಯಾಣ; 4 ಸಾವಿರ ಹೊಸ ಬಸ್‌ ಅನಿವಾರ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  Free Bus Karnataka: ಶಕ್ತಿ ಪ್ರಯಾಣಕ್ಕೆ ಹೆಚ್ಚಿದ ಬೇಡಿಕೆ, ವಾರದಲ್ಲೇ 3.12 ಕೋಟಿ ಮಹಿಳೆಯರ ಪ್ರಯಾಣ; 4 ಸಾವಿರ ಹೊಸ ಬಸ್‌ ಅನಿವಾರ್ಯತೆ

Free bus Karnataka: ಶಕ್ತಿ ಪ್ರಯಾಣಕ್ಕೆ ಹೆಚ್ಚಿದ ಬೇಡಿಕೆ, ವಾರದಲ್ಲೇ 3.12 ಕೋಟಿ ಮಹಿಳೆಯರ ಪ್ರಯಾಣ; 4 ಸಾವಿರ ಹೊಸ ಬಸ್‌ ಅನಿವಾರ್ಯತೆ

ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ ಬಸ್‌ ಸೇವೆ ಶಕ್ತಿ ಯೋಜನೆ ಆರಂಭವಾಗಿ ಒಂದು ವಾರ ಕಳೆದಿದೆ. ಮೂರು ಕೋಟಿಗೂ ಅಧಿಕ ಮಹಿಳೆಯರು ಇದರ ಉಪಯೋಗ ಪಡೆದಿದ್ದಾರೆ. ಈ ಯೋಜನೆಯಿಂದ ಆಗುವ ಲಾಭ, ನಷ್ಟದ ಲೆಕ್ಕಾಚಾರವೇನು ಎಂದು ಇಲ್ಲಿ ವಿಶ್ಲೇಷಣೆ ಮಾಡಲಾಗಿದೆ.

ಕರ್ನಾಟಕದಲ್ಲಿ ಆರಂಭಗೊಂಡಿರುವ ಉಚಿತ ಬಸ್‌ ಸೇವೆ ಶಕ್ತಿ ಯೋಜನೆಗೆ ನಿರೀಕ್ಷೆ ಮೀರಿ ಪ್ರತಿಕ್ರಿಯೆ ಲಭಿಸಿದೆ.
ಕರ್ನಾಟಕದಲ್ಲಿ ಆರಂಭಗೊಂಡಿರುವ ಉಚಿತ ಬಸ್‌ ಸೇವೆ ಶಕ್ತಿ ಯೋಜನೆಗೆ ನಿರೀಕ್ಷೆ ಮೀರಿ ಪ್ರತಿಕ್ರಿಯೆ ಲಭಿಸಿದೆ.

ಬೆಂಗಳೂರು: ಸರ್ಕಾರಿ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಗೆ ಬಂದು ಒಂದು ವಾರ ಕಳೆದಿದ್ದು, ಕೋಟ್ಯಂತರ ಮಹಿಳೆಯರು ಪ್ರಯಾಣ ಕೈಗೊಂಡಿದ್ದಾರೆ. ತವರು ಮನೆ, ಗಂಡನ ಮನೆ, ಬಂಧು ಬಳಗ ಸ್ನೇಹಿತರ ಊರು, ಪ್ರವಾಸಿ ತಾಣ ಮತ್ತು ಪುಣ್ಯ ಕ್ಷೇತ್ರಗಳಲ್ಲಿ ದೇವರ ದರ್ಶನ ಮಾಡಿದ್ದಾರೆ.

ಒಂದು ವಾರದಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಮೂಲಕ 3,12,21,241 ಮಹಿಳೆಯರು ಪ್ರಯಾಣ ಮಾಡಿದ್ದು ಇದರ ಮೌಲ್ಯ ರೂಪಾಯಿ 70.28 ಕೋಟಿ ಎಂದು ಸಾರಿಗೆ ಇಲಾಖೆ ಮೂಲಗಳು ಹೇಳುತ್ತವೆ. ಧನಾತ್ಮಕವಾಗಿ ನೋಡುವುದಾದರೆ ಹೆಣ್ಣು ಮಕ್ಕಳ ಬಳಿ 70 ಕೋಟಿ ರೂಪಾಯಿ ಉಳಿತಾಯವಾಗಿದೆ.

ವಾರದಲ್ಲಿ ಸಂಚರಿಸಿದ 3.12 ಕೋಟಿ ಮಹಿಳೆಯರು

ಉಚಿತ ಪ್ರಯಾಣದ ಶಕ್ತಿ ಯೋಜನೆ ಆರಂಭಗೊಂಡ ಜೂನ್‌ 11 ರಂದು ಅರ್ಧ ದಿನದಲ್ಲಿ 5,71,023 ಮಹಿಳಾ ಪ್ರಯಾಣಿಕರು ಸಂಚಾರ ಕೈಗೊಂಡಿದ್ದರು. ಇದರ ಒಟ್ಟು ಮೌಲ್ಯ 1,40,22,878 ರು. ನಷ್ಟಾಗಿತ್ತು. ಜೂನ್‌ 12ರಂದು 41,34,726 ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದು ಪ್ರಯಾಣದ ಮೌಲ್ಯ 8,83,53,434 ರು.ಗಳಷ್ಟಿದೆ.

ಜೂನ್‌ 13ರಂದು 51,52,769 ಪ್ರಯಾಣಿಕರು ಬಸ್ ಸಂಚಾರ ಮಾಡಿದ್ದು, ಪ್ರಯಾಣ ಮೌಲ್ಯ 10,82,02,191 ರು.ಗಳಾಗಿದೆ. ಜೂನ್‌ 14ರಂದು 50,17,174 ಪ್ರಯಾಣಿಕರು( ಪ್ರಯಾಣ ಮೊತ್ತ 11,51,08,324 ರೂಪಾಯಿ), ಜೂನ್‌ 15ರಂದು 54,05,629 ಪ್ರಯಾಣಿಕರು,(ಪ್ರಯಾಣ ಮೊತ್ತ 12,37,89,585 ರೂಪಾಯಿ), ಜೂನ್‌ 16ರಂದು 55,09,770 ಪ್ರಯಾಣಿಕರು, (ಪ್ರಯಾಣ ಮೊತ್ತ 12,45,19,262 ರೂಪಾಯಿ), ಜೂನ್‌ 17ರಂದು 54,30,150 ಪ್ರಯಾಣಿಕರು, (ಪ್ರಯಾಣ ಮೊತ್ತ 12,88,81,618 ರೂಪಾಯಿ)ಎಂದು ಸಾರಿಗೆ ಸಂಸ್ಥೆ ಮೂಲಗಳು ಖಚಿತಪಡಿಸಿವೆ.

ನಷ್ಟದ ಅಂದಾಜು ಶುರು

ಈ ಶಕ್ತಿ ಯೋಜನೆ ಮುಂದುವರೆದರೆ ಸಾರಿಗೆ ಸಂಸ್ಥೆಗಳಿಗೆ ವಾರ್ಷಿಕವಾಗಿ ಅಂದಾಜು 4,221 ಕೋಟಿ ರೂಪಾಯಿ ನಷ್ಟ ಅಗಬಹುದು.

ವಾರ್ಷಿಕ ಕೆಎಸ್‌ಆರ್ ಟಿಸಿಗೆ 1,608.24 ಕೋಟಿ ರೂಪಾಯಿ, ಬಿಎಂಟಿಸಿಗೆ 770.16 ಕೋಟಿ ರೂಪಾಯಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ರೂಪಾಯಿ 954.12 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ರೂಪಾಯಿ 888.36 ಕೋಟಿ, ಆರ್ಥಿಕ ಹೊರೆ ತಗುಲಲಿದೆ ಎಂದು ಸಾರಿಗೆ ಸಂಸ್ಥೆಗಳ ಮೂಲಗಳು ತಿಳಿಸಿವೆ.

ನಷ್ಟದ ಬಾಬತ್ತು ಇಲ್ಲಿಗೆ ನಿಲ್ಲುವುದಿಲ್ಲ. ಸ್ಮಾರ್ಟ್ ಕಾರ್ಡ್ ವಿತರಣೆ, ಹೆಚ್ಚುವರಿ ಬಸ್ ಮತ್ತು ಸಿಬ್ಬಂದಿ ನೇಮಕ, ಬಸ್ ಗಳ ನಿರ್ವಹಣಾ ವೆಚ್ಚ, ಹೆಚ್ಚುತ್ತಿರುವ ಡೀಸೆಲ್ ಬೆಲೆ ಹೀಗೆ ಪಟ್ಟಿ ಬೆಳೆಯುತ್ತದೆ. ಯೋಜನೆ ಈಗಷ್ಟೇ ಆರಂಭವಾಗಿದೆ. ಮೂರ್ನಾಲ್ಕು ತಿಂಗಳು ಕಳೆದರೆ ಅಂದಾಜು ಪ್ರಯಾಣಿಕರ ಸಂಖ್ಯೆ ತಿಳಿಯುತ್ತದೆ. ಅದರ ಆಧಾರದ ಮೇಲೆ ನಷ್ಟ ಎಷ್ಟು ಎಂದು ತಿಳಿದು ಬರಲಿದೆ.

ಎಷ್ಟು ಬಸ್- ಸಿಬ್ಬಂದಿ ಬೇಕು?

ಈ ಯೋಜನೆಯಿಂದ ಕೇವಲ ಪ್ರಯಾಣ ಮೊತ್ತ ಮಾತ್ರ ನಷ್ಟ ಎಂದು ಹೇಳುವಂತಿಲ್ಲ. ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ಸಿಬ್ಬಂದಿಯೂ ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗುತ್ತದೆ. ಬಸ್ ಗಳು, ಚಾಲಕ ಮತ್ತು ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಅಂದಾಜು

ಇದಕ್ಕಾಗಿ 4,000 ಹೊಸ ಬಸ್ ಗಳು ಮತ್ತು 13,800 ಸಿಬ್ಬಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳಬೇಕಿದೆ.

ಕೆಎಸ್‌ಆರ್ ಟಿಸಿಗೆ 1,820 ಬಸ್ ಗಳ ಅವಶ್ಯಕತೆ ಎದುರಾಗಿದೆ. ಹಾಗೆಯೇ ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 1,400, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 760 ಸೇರಿದಂತೆ ಅಂದಾಜು 4,000 ಹೊಸ ಬಸ್ ಗಳನ್ನು ಖರೀದಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಅದೇ ರೀತಿ ಕೆಎಸ್‌ಆರ್ ಟಿಸಿಗೆ 5,190, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 2,435, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 2,440, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 3,790 ಸೇರಿ ಅಂದಾಜು 13,800 ಸಿಬ್ಬಂದಿ ಬೇಕಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

(ವಿಶೇಷ ವರದಿ: ಎಚ್‌ಮಾರುತಿ ಬೆಂಗಳೂರು)

ಇದನ್ನೂ ಓದಿರಿ..

Whats_app_banner