ಮಹಿಳಾ ಉದ್ಯೋಗಿಗಳಿಗೆ ಗುಡ್‌ನ್ಯೂಸ್‌, ಇನ್ನು ಮುಂದೆ ವರ್ಷದಲ್ಲಿ 6 ದಿನ ಸಿಗುತ್ತೆ ವೇತನ ಸಹಿತ ಮುಟ್ಟಿನ ರಜೆ, ಖಾಸಗಿ ವಲಯಕ್ಕೂ ಅನ್ವಯ
ಕನ್ನಡ ಸುದ್ದಿ  /  ಕರ್ನಾಟಕ  /  ಮಹಿಳಾ ಉದ್ಯೋಗಿಗಳಿಗೆ ಗುಡ್‌ನ್ಯೂಸ್‌, ಇನ್ನು ಮುಂದೆ ವರ್ಷದಲ್ಲಿ 6 ದಿನ ಸಿಗುತ್ತೆ ವೇತನ ಸಹಿತ ಮುಟ್ಟಿನ ರಜೆ, ಖಾಸಗಿ ವಲಯಕ್ಕೂ ಅನ್ವಯ

ಮಹಿಳಾ ಉದ್ಯೋಗಿಗಳಿಗೆ ಗುಡ್‌ನ್ಯೂಸ್‌, ಇನ್ನು ಮುಂದೆ ವರ್ಷದಲ್ಲಿ 6 ದಿನ ಸಿಗುತ್ತೆ ವೇತನ ಸಹಿತ ಮುಟ್ಟಿನ ರಜೆ, ಖಾಸಗಿ ವಲಯಕ್ಕೂ ಅನ್ವಯ

ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ನೀಡಬೇಕು ಎಂದು ಮಹಿಳೆಯರು ಕೆಲವು ವರ್ಷಗಳಿಂದ ಪ್ರಸ್ತಾಪ ಮಾಡುತ್ತಲೇ ಇದ್ದಾರೆ. ಇದೀಗ ಅವರ ಕೂಗು ಸರ್ಕಾರದ ಕಿವಿ ತಲುಪಿದೆ. ರಾಜ್ಯದಲ್ಲಿ ಶೀಘ್ರದಲ್ಲೇ ವಾರ್ಷಿಕ ಆರು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ಜಾರಿಗೊಳಿಸುವುದಾಗಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದ್ದಾರೆ. ಏನಿದು ವರದಿ ನೋಡಿ (ವರದಿ: ಎಚ್.ಮಾರುತಿ)

ಕರ್ನಾಟಕದಲ್ಲಿ ಮುಟ್ಟಿನ ರಜೆ
ಕರ್ನಾಟಕದಲ್ಲಿ ಮುಟ್ಟಿನ ರಜೆ (PC: Canva)

ಬೆಂಗಳೂರು: ಮಹಿಳೆಯರಿಗೆ ವಾರ್ಷಿಕ 6 ದಿನಗಳ ಮುಟ್ಟಿನ ರಜೆ ನೀಡಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದ್ದು, ಸರ್ಕಾರಿ ಮತ್ತು ಖಾಸಗಿ ವಲಯದ ಲಕ್ಷಾಂತರ ಮಹಿಳಾ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಒಂದು ವೇಳೆ ಜಾರಿಯಾದರೆ ಈ ನೀತಿಯನ್ನು ಜಾರಿಗೊಳಿಸಿದ ನಾಲ್ಕನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಭಾಜನವಾಗಲಿದೆ. ಈಗಾಗಲೇ ಬಿಹಾರ, ಕೇರಳ ಮತ್ತು ಒಡಿಶಾ ಈ ನೀತಿಯನ್ನು ಅನುಷ್ಠಾನಗೊಳಿಸಿವೆ.

ರಾಜ್ಯ ಸರ್ಕಾರ ಕ್ರೈಸ್ಟ್‌ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕಿ ಎಸ್. ಸಪ್ನಾ ಅವರ ಅಧ್ಯಕ್ಷತೆಯಲ್ಲಿ 18 ಮಂದಿಯ ಸಮಿತಿ ರಚಿಸಿತ್ತು. ಈ ಸಮಿತಿ ಇತ್ತೀಚೆಗೆ ವರದಿ ಸಲ್ಲಿಸಿದೆ. ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಮಹಿಳೆಯರಿಗೆ ಮುಟ್ಟಿನ ರಜೆ ನೀಡಲು ಆಸಕ್ತಿ ವಹಿಸಿ ಈ ಸಮಿತಿ ರಚಿಸಿದ್ದರು. ಸಪ್ನಾ ಅವರ ತಂಡ ಅತ್ಯುತ್ತಮ ಕೆಲಸ ಮಾಡಿದೆ. ಈ ಸಮಿತಿ ವಾರ್ಷಿಕ ವೇತನ ಸಹಿತ 6 ಮುಟ್ಟಿನ ರಜೆಗಳನ್ನು ನೀಡಲು ಶಿಫಾರಸ್ಸು ಮಾಡಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಮಹಿಳೆಯರು ಮುಟ್ಟಿನ ದಿನಗಳಲ್ಲಿ ಅನುಭವಿಸುವ ನೋವು ಯಾತನೆ ಕುರಿತು ನನಗೆ ಅರಿವಿದೆ. ಅವರಲ್ಲಿ ಅನೇಕ ಜೈವಿಕ ಬದಲಾವಣೆಗಳಾಗಲಿದ್ದು, ಅವರಿಗೆ ವಿಶ್ರಾಂತಿಯ ಅಗತ್ಯ ಇರುತ್ತದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಕಡಿಮೆ ಎನ್ನುವುದು ಸ್ಪಷ್ಟ. ಇಂತಹ ನಿರ್ಧಾರಗಳಿಂದ ಮತ್ತಷ್ಟು ಮಹಿಳೆಯರು ಉದ್ಯೋಗಿಗಳಾಗಲು ಮುಂದೆ ಬರಲಿದ್ದಾರೆ ಎಂದು ಲಾಡ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಸಪ್ನಾ ಅವರ ಸಮಿತಿಯ ಜತೆ ಸಭೆ ನಡೆಸಲಿದ್ದೇನೆ. ನಂತರ ಸಮಿತಿಯ ಶಿಪಾರಸ್ಸುಗಳನ್ನು ಸಾರ್ವಜನಿಕರು, ಕಂಪನಿಗಳು ಮತ್ತು ಇತರ ಸಂಬಂಧಪಟ್ಟವರ ಚರ್ಚೆಗೆ ಬಿಡಲಾಗುತ್ತದೆ ಎಂದಿದ್ದಾರೆ.

ಈ ನೀತಿ ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳೆಲ್ಲರಿಗೂ ಅನ್ವಯವಾಗಲಿದೆ. ಚರ್ಚೆಗಳು ನಡೆದ ನಂತರ ಕಾನೂನು ರೂಪದಲ್ಲಿ ಹೊರ ಬರಲಿದೆ. ಮುಟ್ಟಿನ ರಜೆ ನೀಡಲು ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ನಿಯಮದಿಂದ ಮಹಿಳೆಯರಲ್ಲಿ ಕೆಲಸ ಮಾಡಲು ಮತ್ತಷ್ಟು ಹುರುಪು ನೀಡುತ್ತದೆ. ಹೆಚ್ಚು ಹೆಚ್ಚು ಮಹಿಳೆಯರು ಉದ್ಯೋಗಗಳಾಗಲು ಮುಂದೆ ಬರುತ್ತಾರೆ ಎಂದು ಒಂದು ವರ್ಗ ಬೆಂಬಲಿಸಿದರೆ ಮತ್ತೊಂದು ವರ್ಗ ಮಹಿಳೆಯರನ್ನು ನೇಮಿಸಿಕೊಳ್ಳಲು ಕಂಪನಿಗಳು ಹಿಂದೆ ಸರಿಯುತ್ತವೆ ಎಂದು ಅಭಿಪ್ರಾಯಪಡುವವರೂ ಇದ್ದಾರೆ.

ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮುಟ್ಟು ಅಂಗವೈಕಲ್ಯ ಎಂದು ಭಾವಿಸಿ ಮುಟ್ಟಿನ ರಜೆ ನೀಡಲು ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅನೇಕ ರಾಷ್ಟ್ರಗಳು ಮುಟ್ಟಿನ ರಜೆ ನೀಡುತ್ತಾ ಬಂದಿವೆ. 2023, ಫೆಬ್ರವರಿ 16ರಂದು ಸ್ಪೇನ್ ರಾಷ್ಟ್ರ ಮುಟ್ಟಿನ ರಜೆ ನೀಡಿದ ಮೊದಲ ಯುರೋಪಿಯನ್‌ ದೇಶ ಖ್ಯಾತಿಗೆ ಪಾತ್ರವಾಗಿದೆ. ನಂತರ ಇಂಡೋನೇಷ್ಯಾ, ಜಪಾನ್‌, ದಕ್ಷಿಣ ಕೊರಿಯಾ, ತೈವಾನ್‌ ಸೇರಿದಂತೆ ಅನೇಕ ದೇಶಗಳು ಮುಟ್ಟಿನ ರಜೆ ನೀಡುತ್ತಿವೆ.

ಅನೇಕ ಕಂಪನಿಗಳ ಪ್ರವರ್ತಕರು ಮುಟ್ಟಿನ ರಜೆ ನೀಡುವ ನಿಯಮವನ್ನು ಕಡ್ಡಾಯಗೊಳಿಸಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಕಡ್ಡಾಯಗೊಳಿಸಿದರೆ ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಕಂಪನಿಗಳು ಹಿಂದೆ ಸರಿಯುವ ಅಪಾಯವಿದೆ ಎಂದೂ ಹೇಳಲಾಗುತ್ತಿದೆ. ಮಹಿಳಾ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರುವ ಭಾರತದಲ್ಲಿ ಇಂತಹ ನೀತಿಗಳು ಪುರುಷ ಮತ್ತು ಮಹಿಳಾ ಉದ್ಯೋಗಿಗಳ ನಡುವೆ ಮತ್ತಷ್ಟು ಅಂತರ ನಿರ್ಮಾಣ ಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

Whats_app_banner