ಗಂಗಾವತಿ, ಮುನಿರಾಬಾದ್, ಬಾಣಾಪುರ ರೈಲ್ವೆ ನಿಲ್ದಾಣಗಳಿಗೆ ಮರು ನಾಮಕರಣದ ಹಿಂದಿರುವ ಐತಿಹಾಸಿಕ, ಪೌರಾಣಿಕ ಕಾರಣಗಳಿವು
ಕೊಪ್ಪಳ ಜಿಲ್ಲೆಯ ಗಂಗಾವತಿ, ಮುನಿರಾಬಾದ್, ಬಾಣಾಪುರ ರೈಲ್ವೆ ನಿಲ್ದಾಣಗಳಿಗೆ ಇನ್ನು ಹೊಸ ಹೆಸರು ಬರಲಿದೆ. ಈ ನಿಲ್ದಾಣಗಳ ಮರು ನಾಮಕರಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ. ಮರು ನಾಮಕರಣದ ಹಿಂದಿರುವ ಐತಿಹಾಸಿಕ, ಪೌರಾಣಿಕ ಕಾರಣಗಳಿವು.
ಬೆಂಗಳೂರು: ಕೊಪ್ಪಳ ಜಿಲ್ಲೆಯ ಗಂಗಾವತಿ, ಮುನಿರಾಬಾದ್ ಮತ್ತು ಬಾಣಾಪುರ ರೈಲ್ವೆ ನಿಲ್ದಾಣಗಳಿಗೆ ಕ್ರಮವಾಗಿ ಅಂಜನಾದ್ರಿ (ಕಿಷ್ಕಿಂಧಾ), ಹುಲಿಗೆಮ್ಮ ದೇವಿ ಮತ್ತು ಮಹಾತ್ಮ ಗಾಂಧಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ. ರೈಲ್ವೆ ನಿಲ್ದಾಣಗಳ ಮರು ನಾಮಕರಣಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಲಾಗಿದೆ. ಅವರು ಆ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಿದ್ದಾರೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಮೂರು ರೈಲ್ವೆ ನಿಲ್ದಾಣಗಳು
ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಮೂರು ರೈಲ್ವೆ ನಿಲ್ದಾಣಗಳಿಗೆ ಮರು ನಾಮಕರಣ ಮಾಡುವುದರಿಂದ ಸ್ಥಳೀಯ ಜನರ ಭಾವನೆಗಳನ್ನು ಗೌರವಿಸಿದಂತಾಗುತ್ತದೆ. ಅಂಜನಾದ್ರಿಯು ರಾಮಾಯಣದಲ್ಲಿ ಬರುವ ಆಂಜನೇಯನ ಜನ್ಮಸ್ಥಳ. ಗಂಗಾವತಿ ಇಲ್ಲಿಗೆ ಸಮೀಪದ ರೈಲ್ವೆ ನಿಲ್ದಾಣವಾಗಿದ್ದು, ಅದರ ಹೆಸರನ್ನು ಅಂಜನಾದ್ರಿ ಎಂದು ಬದಲಾಯಿಸಲಾಗುತ್ತದೆ. ಅದೇ ರೀತಿ ಮುನಿರಾಬಾದ್ ರೈಲ್ವೆ ನಿಲ್ದಾಣ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಸಮೀಪದಲ್ಲಿದೆ. ಹೀಗಾಗಿ ಅದಕ್ಕೆ ಹುಲಿಗೆಮ್ಮ ದೇವಿ ಎಂದು ಮರು ನಾಮಕರಣ ಮಾಡಲಾಗುತ್ತದೆ. ಇನ್ನು ಮಹಾತ್ಮ ಗಾಂಧಿಯವರು ಭೇಟಿ ನೀಡಿದ ಸ್ಮರಣಾರ್ಥ ಬಾಣಾಪುರ ರೈಲ್ವೆ ನಿಲ್ದಾಣಕ್ಕೆ ಮಹಾತ್ಮ ಗಾಂಧಿ ರೈಲ್ವೆ ನಿಲ್ದಾಣ ಎಂದು ಮರು ನಾಮಕರಣ ಮಾಡಲಾಗುತ್ತದೆ ಎಂದು ಸಚಿವ ಎಂ ಬಿ ಪಾಟೀಲ ವಿವರಿಸಿದ್ದಾರೆ.
ಅಂಜನಾದ್ರಿ ಬೆಟ್ಟ ಮತ್ತು ಹುಲಿಗೆಮ್ಮ ದೇವಿ ಸ್ಥಳ ಪುರಾಣ
ಕೊಪ್ಪಳ ಜಿಲ್ಲೆಯ ಹನುಮನಹಳ್ಳಿಯ ಅಂಜನಾದ್ರಿ ಬೆಟ್ಟ ಐತಿಹಾಸಿಕ ಮತ್ತು ಪೌರಾಣಿಕ ಪ್ರಾಮುಖ್ಯ ಹೊಂದಿರುವ ಸ್ಥಳ. ಅಂಜನಾದ್ರಿ ಬೆಟ್ಟದ ತುದಿಯಲ್ಲಿ ಹನುಮಂತನ ದೇವಾಲಯವಿದೆ. ಅಲ್ಲಿಗೆ ಹೋಗಲು 575 ಮೆಟ್ಟಿಲು ಏರಬೇಕು. ಅಲ್ಲಿ ರಾಮ ಮತ್ತು ಸೀತಾ ಮಾತೆಯ ದೇವಾಲಯಗಳೂ ಇವೆ. ಇದಲ್ಲದೆ, ಹನುಮಂತನ ತಾಯಿ ಅಂಜನಾ ದೇವಿ ದೇವಾಲಯವೂ ಇದೆ. ಪುರಾಣ ಕಥೆಗಳಲ್ಲಿ ಈ ಪ್ರದೇಶಕ್ಕೆ ಕಿಷ್ಕಿಂದೆ ಎಂಬ ಹೆಸರಿದೆ.
ಇನ್ನು ಹುಲಿಗೆಮ್ಮ ದೇವಿ ಈ ಭಾಗದ ಪ್ರಸಿದ್ಧ ಜನಪದ ಐತಿಹ್ಯವಿರುವ ದೇವಿ. ಹುಲಿಗಿ (ಮುನಿರಾಬಾದ್) ಎಂಬ ಹಳ್ಳಿಯಲ್ಲಿ ಈ ದೇವಾಲಯವಿದೆ. ರೇಣುಕಾ ಯೆಲ್ಲಮ್ಮ ದೇವಿಯ ಶಕ್ತಿರೂಪವಾದ ದೇವಿಯನ್ನು ಇಲ್ಲಿ ಹುಲಿಗೆಮ್ಮ ದೇವಿ ಎಂದು ಆರಾಧಿಸಲಾಗುತ್ತಿದೆ. ಇದು ತುಂಗಭದ್ರಾ ನದಿ ದಂಡೆಯಲ್ಲಿದ್ದು, 13ನೇ ಶತಮಾನದ ದೇವಾಲಯ ಎಂದು ಹೇಳಲಾಗುತ್ತಿದೆ.
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಇತಿಹಾಸವನ್ನು ಗಮನಿಸಿದರೆ, ಸುಮಾರು ಎಂಟು ನೂರು ವರ್ಷಗಳಷ್ಟು ಹಳೆಯ ವಿಚಾರಗಳು ಗಮನಸೆಳೆಯುತ್ತವೆ. ಹುಲಿಗೆಮ್ಮ ದೇವಿಯು ರೇಣುಕಾ ಯೆಲ್ಲಮ್ಮ ದೇವಿಯ ಅವತಾರವೆಂಬ ನಂಬಿಕೆ ಈ ಭಾಗದ ಜನರಲ್ಲಿದೆ. ಪುರಾಣಗಳ ಪ್ರಕಾರ, ಹುಲಿಗಿಯಲ್ಲಿ ನೆಲೆಸಿರುವ ನಾಗಜೋಗಿ ಮತ್ತು ಬಸವಜೋಗಿ ಎಂಬ ರೇಣುಕಾ ಯೆಲ್ಲಮ್ಮ ದೇವಿಯ ಇಬ್ಬರು ಭಕ್ತರು ಪ್ರತಿ ಹುಣ್ಣಿಮೆಯಂದು ರೇಣುಕಾ ಯೆಲ್ಲಮ್ಮ ದೇವಿಯ ದರ್ಶನಕ್ಕೆ ಬರುತ್ತಿದ್ದರು.
ಒಂದು ಹುಣ್ಣಿಮೆಯ ದಿನ ಭಾರೀ ಮಳೆಯ ಕಾರಣ ಈ ಭಕ್ತರು ಯೆಲ್ಲಮನಗುಡ್ಡವನ್ನು ತಲುಪಲು ಸಾಧ್ಯವಾಗಲಿಲ್ಲ. ಅವರು ಇಡೀ ರಾತ್ರಿ ಯೆಲ್ಲಮ್ಮ ದೇವಿಯ ನಾಮಸ್ಮರಣೆ ಮಾಡುತ್ತ ಮಳೆಯಲ್ಲಿ ನೆನೆದರು. ತಾಯಿ ರೇಣುಕಾ ಯೆಲ್ಲಮ್ಮ ತನ್ನ ಭಕ್ತರಾದ ನಾಗಜೋಗಿ ಮತ್ತು ಬಸವಜೋಗಿಯ ಮುಂದೆ ಕಾಣಿಸಿಕೊಂಡು, ಇನ್ನು ಹುಣ್ಣಿಮೆ ದಿನ ಯೆಲ್ಲಮನಗುಡ್ಡಕ್ಕೆ ಹೋಗಬೇಕಾಗಿಲ್ಲ. ಇಲ್ಲೇ ನೆಲೆಸುವೆ ಎಂದು ಅಭಯ ನೀಡಿ ಹುಲಿಗಿಯಲ್ಲಿ ಸಾಲಿಗ್ರಾಮ ಮತ್ತು ಶ್ರೀಚಕ್ರವಾಗಿ ಅವತರಿಸಿದಳು ಎಂಬುದು ಐತಿಹ್ಯ.