ಕನ್ನಡ ಸುದ್ದಿ  /  ಜೀವನಶೈಲಿ  /  ಋತುಸ್ರಾವ ಎಂದರೇನು? ಗರ್ಭಧಾರಣೆ ಬಯಸುವವರು ಮುಟ್ಟಿನ ಪ್ರಕ್ರಿಯೆ ತಿಳಿದುಕೊಳ್ಳಿ, ಐವಿಎಫ್‌ ಯಶಸ್ಸಿಗೂ ಬೇಕು ಸಮರ್ಪಕ ಋತುಚಕ್ರ

ಋತುಸ್ರಾವ ಎಂದರೇನು? ಗರ್ಭಧಾರಣೆ ಬಯಸುವವರು ಮುಟ್ಟಿನ ಪ್ರಕ್ರಿಯೆ ತಿಳಿದುಕೊಳ್ಳಿ, ಐವಿಎಫ್‌ ಯಶಸ್ಸಿಗೂ ಬೇಕು ಸಮರ್ಪಕ ಋತುಚಕ್ರ

ಇತ್ತೀಚಿನ ದಿನಗಳಲ್ಲಿ ಮಕ್ಕಳಾಗದ ಸಮಸ್ಯೆಯನ್ನು ಹಲವರು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣಗಳು ಏನೇ ಇರಬಹುದು, ಆದರೆ ಗರ್ಭ ಧರಿಸಲು ಯೋಚಿಸುವ ಮುನ್ನ ಮುಟ್ಟಿನ ಪ್ರಕ್ರಿಯೆಗಳ ಬಗ್ಗೆ ದೀರ್ಘವಾಗಿ ಯೋಚಿಸುವುದು ಬಹಳ ಮುಖ್ಯವಾಗುತ್ತದೆ. ಇದರೊಂದಿಗೆ ಐವಿಎಫ್‌ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ್ದಾರೆ ಡಾ. ಮಹೇಶ್ ಕೋರೆಗೋಳ.

ಋತುಸ್ರಾವ ಎಂದರೇನು? ಗರ್ಭಧಾರಣೆ ಬಯಸುವವರು ಮುಟ್ಟಿನ ಪ್ರಕ್ರಿಯೆ ತಿಳಿದುಕೊಳ್ಳಿ
ಋತುಸ್ರಾವ ಎಂದರೇನು? ಗರ್ಭಧಾರಣೆ ಬಯಸುವವರು ಮುಟ್ಟಿನ ಪ್ರಕ್ರಿಯೆ ತಿಳಿದುಕೊಳ್ಳಿ

ಮುಟ್ಟು ಎನ್ನುವುದು ಸ್ತ್ರೀ ಸಂತಾನೋತ್ಪತ್ತಿ ಚಕ್ರದ ಪ್ರಮುಖ ಭಾಗ. ಮುಟ್ಟು ಫಲೀಕರಣ ಅಥವಾ ಗರ್ಭಧಾರಣೆ ಪ್ರಕ್ರಿಯೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ಕಾರಣದಿಂದಲೇ ಈ ಪ್ರಕ್ರಿಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಬಂಜೆತನ ಅಥವಾ ಮಕ್ಕಳನ್ನು ಪಡೆಯಲು ಬಯಸುವವರು ಮತ್ತು ವಿಟ್ರೋ ಫರ್ಟಿಲೈಸೇಷನ್ (ಐವಿಎಫ್) ಚಿಕಿತ್ಸೆಯನ್ನು ಪಡೆಯುವ ಕುರಿತು ಆಲೋಚನೆ ಮಾಡುತ್ತಿರುವವರು ಈ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಲೇಬೇಕು. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಮುಟ್ಟು ಹಾಗೂ ಮುಟ್ಟಿನ ಹಂತಗಳು

ಮಹಿಳೆಯರು ಸಾಮಾನ್ಯವಾಗಿ 28 ದಿನಗಳ ಅವಧಿಯ ಋತುಚಕ್ರ ಹೊಂದಿರುತ್ತಾರೆ. ಕೆಲವು ಮಹಿಳೆಯರಲ್ಲಿ ಈ ಅವಧಿ ಆಚೀಚೆಯಾಗಬಹುದು. ಮಹಿಳೆಯರ ದೇಹದಲ್ಲಿ ಆಗುವ ಬದಲಾವಣೆಗಳನ್ನು ಮುಟ್ಟು ತಿಳಿಸುತ್ತದೆ. ಅದರಲ್ಲೂ ಸಂಭಾವ್ಯ ಗರ್ಭಧಾರಣೆಯ ಪ್ರಕ್ರಿಯೆಯನ್ನು ಕೂಡ ಮುಟ್ಟು ಸೂಚಿಸಬಲ್ಲದು. ಅದನ್ನು ವಿವರವಾಗಿ ತಿಳಿಯೋಣ.

ಋತುಚಕ್ರಕ್ಕೆ ನಾಲ್ಕು ಹಂತಗಳಿವೆ. ಹಂತ 1- ಮುಟ್ಟಿನ ಹಂತ, ಹಂತ 2- ಫೋಲಿಕ್ಯುಲರ್ ಹಂತ, ಹಂತ 3- ಅಂಡೋತ್ಪತ್ತಿ ಹಂತ ಮತ್ತು ಹಂತ 4- ಲೂಟಿಯಲ್ ಹಂತ.

ಮೊದಲ ಹಂತ ಮುಟ್ಟಿನ ಹಂತ. ಒಬ್ಬ ಮಹಿಳೆಯ ಗರ್ಭಧಾರಣೆ ಆಗದಿದ್ದ ಸಂದರ್ಭದಲ್ಲಿ ಆಕೆಯ ಗರ್ಭಾಶಯದ ಒಳಪದರ ಮಾಸಿಕವಾಗಿ ಹೊರಹೋಗುತ್ತದೆ. ಅದನ್ನೇ ನಾವು ಮುಟ್ಟು ಎಂದು ಕರೆಯುತ್ತೇವೆ. ಮುಟ್ಟಾದರೆ ಗರ್ಭಧಾರಣೆ ಆಗಿಲ್ಲ ಎಂದೇ ಅರ್ಥ. ಇನ್ನು ಎರಡನೇ ಹಂತ ಅಂದ್ರೆ ಫೋಲಿಕ್ಯುಲರ್ ಹಂತದಲ್ಲಿ ಮಹಿಳೆಯ ಪಿಟ್ಯುಟರಿ ಗ್ರಂಥಿಯು ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ (ಎಫ್ಎಸ್ಎಚ್) ಅನ್ನು ಸ್ರವಿಸುತ್ತದೆ. ಈ ಹಾರ್ಮೋನ್‌ಗಳು ಅಂಡಾಶಯದಲ್ಲಿ ಕೋಶಕಗಳು ಅಂದ್ರೆ ಫಾಲಿಕಲ್‌ಗಳು ಸೃಷ್ಟಿಯಾಗುವಂತೆ ಮಾಡುತ್ತವೆ. ಪ್ರತಿಯೊಂದು ಫಾಲಿಕಲ್ ಕೂಡ ಒಂದೊಂದು ಮೊಟ್ಟೆಯನ್ನು ಹೊಂದಿರುತ್ತವೆ, ವಿಶೇಷವೆಂದರೆ ಅದರಲ್ಲಿ ಒಂದು ಪ್ರಬಲವಾಗಿರುವ ಕೋಶಕ ಮಾತ್ರ ಸಂಪೂರ್ಣವಾಗಿ ಪಕ್ವವಾಗುತ್ತದೆ.

ಋತುಚಕ್ರವು ಅರ್ಧ ಅವಧಿ ಪೂರ್ತಿಗೊಳಿಸುವ ವೇಳೆಯಲ್ಲಿ ಅಂಡೋತ್ಪತ್ತಿ ಉಂಟಾಗುತ್ತದೆ. ಅಂಡೋತ್ಪತ್ತಿ ಹಂತ ಎಂದರೆ ಅಂಡಾಶಯದಲ್ಲಿರುವ ಪಕ್ವವಾದ ಮೊಟ್ಟೆಯನ್ನು ಕೋಶಕವು ಫಾಲೋಪಿಯನ್ ಟ್ಯೂಬಿಗೆ ಸೇರಿಸುತ್ತದೆ. ಅಲ್ಲಿ ಆ ಮೊಟ್ಟೆ ಮತ್ತು ಪುರುಷನ ವೀರ್ಯ ಪರಸ್ಪರ ಸಂಧಿಸುತ್ತದೆ. ಇದರಿಂದ ಫಲೀಕರಣ ಸಂಭವಿಸಬಹುದು ಅಂದರೆ ಪ್ರಕ್ರಿಯೆಯಿಂದ ಮಹಿಳೆಯು ಗರ್ಭಧರಿಸಬಹುದಾಗಿದೆ. ಒಂದು ವೇಳೆ ಫಲೀಕರಣ ಉಂಟಾದರೆ ಆಗ ಲೂಟಿಯಲ್ ಹಂತ ಶುರುವಾಗುತ್ತದೆ. ಈ ಹಂತದಲ್ಲಿ ಮಹಿಳೆಯ ಗರ್ಭಕೋಶದಲ್ಲಿ ಇರುವ ಭ್ರೂಣವನ್ನು ಸೂಕ್ತವಾಗಿ ಸಂರಕ್ಷಿಸಲು ಗರ್ಭಾಶಯದ ಒಳಪದರ ದಪ್ಪವಾಗುತ್ತದೆ. ದುರದೃಷ್ಟಕರವಾಗಿ ಮೊಟ್ಟೆಯು ಫಲವತ್ತಾಗದಿದ್ದರೆ ಹಾರ್ಮೋನ್ ಮಟ್ಟವು ಕುಸಿಯುತ್ತೆ. ಗರ್ಭಕೋಶದ ಒಳಪದರ ಮತ್ತು ಫಲತ್ತಾಗದ ಮೊಟ್ಟೆ ಎಲ್ಲವೂ ಸೇರಿ ದೇಹದ ಆಚೆ ಹೋಗುತ್ತದೆ. ಅದನ್ನೇ ಮುಟ್ಟು ಎನ್ನಲಾಗುತ್ತದೆ. ನಂತರ ಋತು ಚಕ್ರವು ಮತ್ತೆ ಪ್ರಾರಂಭವಾಗುತ್ತದೆ. ಮತ್ತದೇ ಪ್ರಕ್ರಿಯೆ ನಡೆಯುತ್ತಲಿರುತ್ತದೆ.

ಬಂಜೆತನಕ್ಕೆ ಪ್ರಮುಖ ಕಾರಣಗಳು

ಮಹಿಳೆಯರಿಗೆ ಋತುಚಕ್ರದ ಯಾವುದೇ ಹಂತದಲ್ಲಿ ಎದುರಾಗಬಹುದಾದ ಯಾವುದೇ ಅಡಚಣೆಯಿಂದಾಗಿ ಗರ್ಭಧರಿಸಲು ಸಾಧ್ಯವಾಗದೇ ಹೋಗಬಹುದು. ಬಂಜೆತನ ಉಂಟಾಗಬಹುದು. ಈ ಸಂದರ್ಭದಲ್ಲಿ ಮಹಿಳೆಯು ಎದುರಿಸಬಹುದಾದ ಅತಿ ಸಾಮಾನ್ಯ ಸಮಸ್ಯೆಗಳೆಂದರೆ ಅನಿಯಮಿತ ಅಂಡೋತ್ಪತ್ತಿ, ಹಾರ್ಮೋನ್ ಅಸಮತೋಲನ ಮತ್ತು ಸಂತಾನೋತ್ಪತ್ತಿಯಾಗುತ್ತಿರುವ ಅಂಗಗಳಲ್ಲಿ ಅಸಹಜ ಅಂಗರಚನೆ. ಇನ್ನು ಮಹಿಳೆಯರ ಫಲವತ್ತತೆಗೆ ಅಡ್ಡಿಪಡಿಸುವ ಕೆಲವು ರೋಗಗಳನ್ನು ಹೆಸರಿಸಬಹುದಾದರೆ, ಅವು ಹೀಗಿವೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್), ಎಂಡೊಮೆಟ್ರಿಯೊಸಿಸ್ ಮತ್ತು ಪ್ರೀಮೆಚ್ಯೂರ್ ಒವೇರಿಯನ್ ಫೇಲ್ಯೂರ್. (ಅಕಾಲಿಕ ಅಂಡಾಶಯ ವೈಫಲ್ಯ)

ಮಕ್ಕಳಿಲ್ಲದ ನೋವು ಅಥವಾ ಬಂಜೆತನವನ್ನು ಅನುಭವಿಸುತ್ತಿರುವ ಮಹಿಳೆಯರು ಋತುಚಕ್ರದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಒಂದು ಸಲ ಪ್ರಕ್ರಿಯೆ ಅರ್ಥ ಆದರೆ ಮೂಲ ಸಮಸ್ಯೆಗಳನ್ನು ಗುರುತಿಸಲು ಸುಲಭವಾಗುತ್ತದೆ. ಸಮಸ್ಯೆ ಗೊತ್ತಾದರೆ ಉತ್ತಮ ಚಿಕಿತ್ಸಾ ವಿಧಾನವನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.

ಏನಿದು ಇನ್-ವಿಟ್ರೊ ಫರ್ಟಿಲೈಸೇಷನ್ (ಐವಿಎಫ್)?

ಚಿಕಿತ್ಸೆ ಪಡೆಯಲು ಆಲೋಚಿಸುವವರು ಇನ್-ವಿಟ್ರೊ ಫರ್ಟಿಲೈಸೇಷನ್ (ಐವಿಎಫ್) ಚಿಕಿತ್ಸೆ ಪಡೆಯಬಹುದು. ಐವಿಎಫ್ ವಿಧಾನದಲ್ಲಿ ಅಂಡಾಶಯದಲ್ಲಿ ಹಲವಾರು ಮೊಟ್ಟೆಗಳನ್ನು ಸೃಷ್ಟಿ ಮಾಡಲಾಗುತ್ತದೆ. ನಂತರ ಈ ಮೊಟ್ಟೆಗಳನ್ನು ಹೊರತೆಗೆದು ಪ್ರಯೋಗಾಲಯದಲ್ಲಿ ವೀರ್ಯದೊಂದಿಗೆ ಸೇರಿಸಲಾಗುತ್ತದೆ. ಅಲ್ಲಿ ಮಹಿಳೆಯ ಮೊಟ್ಟೆ ಮತ್ತು ಪುರುಷನ ವೀರ್ಯವನ್ನು ಫಲವತ್ತಾಗಿಸಿ ಅದರ ಪರಿಣಾಮವಾಗಿ ಉಂಟಾದ ಭ್ರೂಣಗಳನ್ನು ಮರಳಿ ಗರ್ಭಾಶಯಕ್ಕೆ ಸೇರಿಸಲಾಗುತ್ತದೆ.

ವಿಶೇಷವಾಗಿ ಐವಿಎಫ್ ಚಿಕಿತ್ಸೆಯ ಸಮಯದಲ್ಲಿ ಋತುಚಕ್ರವನ್ನು ನಿಗಾ ವಹಿಸುವುದು ಬಹಳ ಮುಖ್ಯ. ಅದರಿಂದ ಫಲೀಕರಣದ ಔಷಧ ಸೇವನೆ, ಮೊಟ್ಟೆ ಮರುಪಡೆಯುವಿಕೆಯ ವೇಳಾಪಟ್ಟಿ ಮತ್ತು ಭ್ರೂಣ ವರ್ಗಾವಣೆ ಸ್ಥಿತಿಯ ಉತ್ತಮ ಸಮಯ ತಿಳಿಯಲು ಸಹಾಯ ಆಗುತ್ತದೆ. ಋತುಚಕ್ರದ ಮೇಲೆ ನಿಗಾ ವಹಿಸುವ ಮೂಲಕ ಫಲೀಕರಣ ತಜ್ಞರು (ಫರ್ಟಿಲಿಟಿ ಎಕ್ಸ್‌ಪರ್ಟ್‌ಗಳು) ಯಶಸ್ವಿ ಗರ್ಭಧಾರಣೆ ಕೈಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಕೊನೆಯದಾಗಿ ಹೇಳುವುದಾದರೆ ಮಕ್ಕಳಿಲ್ಲದೆ ನೋವು ಅನುಭವಿಸುತ್ತಿರುವವರು, ಬಂಜೆತನ ಅನುಭವಿಸುತ್ತಿರುವವರು ಮುಟ್ಟಿನ ಬಗ್ಗೆ ಮತ್ತು ಫಲೀಕರಣ ಪ್ರಕ್ರಿಯೆಯ ಮೇಲೆ ಮುಟ್ಟಿನ ಪರಿಣಾಮದ ಕುರಿತು ತಿಳಿದಿರಬೇಕು. ಋತುಚಕ್ರದ ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಸಮಸ್ಯೆಗಳನ್ನು ಗುರುತಿಸಲು ಮತ್ತು ಐವಿಎಫ್‌ನಂತಹ ಚಿಕಿತ್ಸೆಗಳ ಮೂಲಕ ಫಲೀಕರಣ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.

(ಲೇಖನ: ಡಾ. ಮಹೇಶ್ ಕೋರೆಗೋಳ, ಫರ್ಟಿಲಿಟಿ ಕನ್ಸಲ್ಟೆಂಟ್ ನೋವಾ ಐವಿಎಫ್ ಫರ್ಟಿಲಿಟಿ, ಕೋರಮಂಗಲ, ಬೆಂಗಳೂರು)