ಕನ್ನಡ ಸುದ್ದಿ  /  Karnataka  /  Karnataka News Former Prime Minister Hd Deve Gowda Says Which Party Join Hands With Bjp Political News In Kannada Pcp

HD Deve gowda: ಬಿಜೆಪಿ ಜತೆ ಕೈ ಜೋಡಿಸದಿರುವ ಪಕ್ಷ ಯಾವುದಿದೆ? ಮಾಜಿ ಪ್ರಧಾನಿ ಎಚ್‌ಡಿ ‌ದೇವೇಗೌಡ ಮಾರ್ಮಿಕ ಪ್ರಶ್ನೆ

ದೇಶದಲ್ಲಿ ಬಿಜೆಪಿ ಜತೆ ಕೈಜೋಡಿಸದೇ ಇರುವ ಯಾವುದಾದರೂ ಒಂದು ಪಕ್ಷವನ್ನು ತೋರಿಸಿ. ಆ ನಂತರ ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡುವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.‌ದೇವೇಗೌಡ ಮಾರ್ಮಿಕವಾಗಿ ಹೇಳಿದ್ದಾರೆ.

HD Deve gowda: ಬಿಜೆಪಿ ಜತೆ ಕೈಜೋಡಿಸದೇ ಇರುವ ಪಕ್ಷ ಯಾವುದಿದೆ? ಮಾಜಿ ಪ್ರಧಾನಿ ಎಚ್‌ಡಿ ‌ದೇವೇಗೌಡ ಮಾರ್ಮಿಕ ಪ್ರಶ್ನೆ
HD Deve gowda: ಬಿಜೆಪಿ ಜತೆ ಕೈಜೋಡಿಸದೇ ಇರುವ ಪಕ್ಷ ಯಾವುದಿದೆ? ಮಾಜಿ ಪ್ರಧಾನಿ ಎಚ್‌ಡಿ ‌ದೇವೇಗೌಡ ಮಾರ್ಮಿಕ ಪ್ರಶ್ನೆ

ಬೆಂಗಳೂರು: ದೇಶದಲ್ಲಿ ಬಿಜೆಪಿ ಜತೆ ಕೈಜೋಡಿಸದೇ ಇರುವ ಯಾವುದಾದರೂ ಒಂದು ಪಕ್ಷವನ್ನು ತೋರಿಸಿ. ಆ ನಂತರ ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡುವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.‌ದೇವೇಗೌಡ ಮಾರ್ಮಿಕವಾಗಿ ಹೇಳಿದ್ದಾರೆ. ಪಕ್ಷದ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

2024ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಉತ್ಸುಕವಾಗಿದೆ ಎಂಬ ಚರ್ಚೆ ಆರಂಭವಾಗಿರುವ ಬೆನ್ನಲ್ಲೇ ಎಚ್.ಡಿ.ದೇವೇಗೌಡ ಅವರು ಈ ಮೂಲಕ ಬಿಜೆಪಿ ಜತೆ ಮೈತ್ರಿ ಸಾಧ್ಯತೆಯ ಮುನ್ಸೂಚನೆ ನೀಡಿದ್ದಾರೆ ಎಂದು ಊಹಿಸಲಾಗಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದು, ಜೆಡಿಎಸ್‌ ಬೆಂಬಲ ನೀಡಲಿದೆಯೇ ಎಂಬ ಪ್ರಶ್ನೆಗೆ ದೇವೇಗೌಡರು ಎಲ್ಲ ಪಕ್ಷಗಳೂ ಬಿಜೆಪಿ ಜತೆ ನೇರವಾಗಿ ಅಥವಾ ಪರೋಕ್ಷವಾಗಿ ಕೈಜೋಡಿಸಿವೆ. ಕಾಂಗ್ರೆಸ್ ಪಕ್ಷದ‌ ಕೆಲವು ನಾಯಕರೂ ಅವರಲ್ಲಿ ಸೇರಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ಜೆಡಿಎಸ್ ಚಿಂತಿಸುವುದಿಲ್ಲ. ಸಧ್ಯದಲ್ಲೇ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆಗಳು ಬರಲಿವೆ. ಈ ಚುನಾವಣೆಗಳಲ್ಲಿ ಪಕ್ಷ ಪಡೆಯುವ ಜನ ಬೆಂಬಲ ಆಧರಿಸಿ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಮತ್ತು ಯಾವ ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ನನಗೀಗ 91 ವರ್ಷ ವಯಸ್ಸು. ಈಗ‌ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಯಾರು ಅಭ್ಯರ್ಥಿ ಆಗಬೇಕು ಎಂಬುದನ್ನು ಪಕ್ಷ ನಿರ್ಧಾರ ಮಾಡುತ್ತದೆ. ವಿಧಾನಸಭಾ ಚುನಾವಣೆಯ ಸೋಲಿನಿಂದ ಕಾರ್ಯಕರ್ತರು ಹತಾಶರಾಗಬೇಕಿಲ್ಲ. ಪ್ರತಿಯೊಂದು ಹಂತದಲ್ಲಿಯೂ ಪಕ್ಷದ ಸಂಘಟನೆಯಲ್ಲಿ ಬದಲಾವಣೆಗಳನ್ನು ಮಾಡಲಾಗುವುದು. ಪಕ್ಷವನ್ನು ಮತ್ತೆ ಬಲವಾಗಿ ಕಟ್ಟುವುದು ತಮ್ಮ ಮುಂದಿನ ಗುರಿ ಎಂದು ಹೇಳಿದ್ದಾರೆ.

ಈ ನಡುವೆ 2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ಪ್ರಕಟವಾಗಿವೆ. ತಾನು ಗೆಲ್ಲಬಹುದಾದ 15 ರಿಂದ 18 ಕ್ಷೇತ್ರಗಳತ್ತ ಮಾತ್ರ ಗಮನ ಹರಿಸಿ, 5-6 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಬಿಜೆಪಿ ಚಿಂತನೆ ನಡೆಸುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದು, ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮಕ ಜನಮನ್ನಣೆ ಗಳಿಸುತ್ತಿದೆ. ಇದು ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿದ್ದು, 2024ರ ಚುನಾವಣೆಯಲ್ಲಿ ಅಷ್ಟೇ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಬಿಜೆಪಿಗೂ ಇಲ್ಲ. ಹೀಗಾಗಿ ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಬಹುದು ಎನ್ನುವುದು ಬಿಜೆಪಿಯ ಒಂದು ಗುಂಪಿನ ನಾಯಕರು ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮೇಲಾಗಿ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಸೇರಿದಂತೆ ಪ್ರಭಾವಿ ಮುಖಂಡರು ನೇಪಥ್ಯಕ್ಕೆ ಸರಿದಿದ್ದಾರೆ. ಶೆಟ್ಟರ್, ಸವದಿ ಅಂತಹ ಪ್ರಭಾವಿ ಮುಖಂಡರು ಕಾಂಗ್ರೆಸ್ ಸೇರಿರುವುದು ಬಿಜೆಪಿ ಹಿನ್ನೆಡೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮೈತ್ರಿ ಸಾಧ್ಯತೆ ಕುರಿತು ಲಾಭ ನಷ್ಟಗಳ ಪರಾಮರ್ಶೆಯಲ್ಲಿ ತೊಡಗಿದೆ.

ವರದಿ: ಮಾರುತಿ ಎಚ್‌.

IPL_Entry_Point