Prof M K Sridhar: ಸಹಸ್ರಪದಿಗೆ ಪದ್ಮಶ್ರೀ; ಪ್ರೊಫೆಸರ್ ಎಂಕೆ ಶ್ರೀಧರ್ ಅವರ ವ್ಯಕ್ತಿಚಿತ್ರಣ ಕಟ್ಟಿಕೊಟ್ಟ ಲೇಖಕಿ ತನ್ಮಯೀ ಪ್ರೇಮ್‌ಕುಮಾರ್
ಭಾರತದ ಶಿಕ್ಷಣ ವಲಯದಲ್ಲಿ ಪ್ರೊಫೆಸರ್ ಎಂಕೆಎಸ್ ಎಂದೂ, ಆಪ್ತ ವಲಯದಲ್ಲಿ ಎಂಕೆಎಸ್ ಎಂದೂ ಗುರುತಿಸಿಕೊಂಡಿರುವ ಪ್ರೊಫೆಸರ್ ಎಂ ಕೆ ಶ್ರೀಧರ್ ಅಪ್ರತಿಮ ಚಿಂತಕ, ಶಿಕ್ಷಣ ತಜ್ಞ. ಈ ಸಲದ ಪದ್ಮ ಪ್ರಶಸ್ತಿ ಅವರಿಗೆ ಒಲಿದಿದ್ದು, ಇದೇ ನೆಪವಾಗಿ ಅವರ ವ್ಯಕ್ತಿಚಿತ್ರಣವನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕಿ ತನ್ಮಯೀ ಪ್ರೇಮ್‌ಕುಮಾರ್.
ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳ ಪ್ರೀತಿಯ ಪ್ರೊಫೆಸರ್ ಎಂಕೆಎಸ್, ಆಪ್ತರ ಎಂಕೆಎಸ್ ಅವರಿಗೆ ಈ ಸಲದ ಪದ್ಮ ಪುರಸ್ಕಾರ ಒಲಿದುಬಂದಿದೆ. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಪ್ರೊಫೆಸರ್ ಎಂ ಕೆ ಶ್ರೀಧರ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ದೊಡ್ಡ ಪ್ರಮಾಣದ್ದು.
ಎಂಕೆಎಸ್ ಅವರಿಂದ ಕಲಿಯಬೇಕಾದ ಅಂಶಗಳು ಹಲವು. ಪದ್ಮಶ್ರೀ ಒಲಿದು ಬಂದ ಸಂದರ್ಭದಲ್ಲಿ ಅವರ ವ್ಯಕ್ತಿಚಿತ್ರಣವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕಿ ತನ್ಮಯೀ ಪ್ರೇಮ್‌ಕುಮಾರ್.
ಸಹಸ್ರಪದಿಗೆ ಪದ್ಮಶ್ರೀ ಸಮ್ಮಾನ!
ಪ್ರೊಫೆಸರ್ ಎಂ.ಕೆ.ಶ್ರೀಧರ್ ಸರ್‌ಗೆ ಪದ್ಮಪ್ರಶಸ್ತಿ ಒಲಿದು ಬಂದಿದೆ. ನಿಜಕ್ಕೂ ಇದು ಕನ್ನಡ ನಾಡು ಸಂಭ್ರಮಿಸುವಂತಹ ವಿಷಯ. ಶಿಕ್ಷಣ ತಜ್ಞರಾಗಿ ಅವರ ಕೊಡುಗೆ ಚಿರಸ್ಮರಣೀಯ!
ರಾಷ್ಟ್ರೀಯ ಶಿಕ್ಷಣ ನೀತಿ, ಜ್ಞಾನ ಆಯೋಗ, ಯುಜಿಸಿ, ಎಐಸಿಟಿಇ, ಸೆಸ್ ಹೀಗೆ ಅವರು ಹೋದೆಡೆಯೆಲ್ಲ ಬದಲಾವಣೆಯ ಹೊಸ ಕ್ರಾಂತಿಯನ್ನೇ ತಂದವರು. ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ದುಡಿಯುತ್ತಿರುವ ಇವರು ಬದುಕಿದ ರೀತಿಯೇ ಒಂದು ಪಾಠ. ಸ್ವತಃ ತಾವು ಪೋಲಿಯೋದ ಕಾರಣಕ್ಕೆ ವೀಲ್‌ಚೇರಿನಲ್ಲಿದ್ದರೂ ಸಾವಿರಾರು ಮಕ್ಕಳು ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಿದವರು, ಮಾಡುತ್ತಿರುವವರು ಎಂಕೆಎಸ್!
ವಿದ್ಯಾರ್ಥಿ ದೆಸೆಯಿಂದಲೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆ ಸಕ್ರಿಯವಾಗಿದ್ದ ಎಂಕೆಎಸ್ ಸಾರ್ವಜನಿಕವಾಗಿ ಸದಾ ಕ್ರಿಯಾಶೀಲವಾಗಿದ್ದವರು. ಕಾಲೇಜು ದಿನಗಳಲ್ಲಿ ವೀಲ್‌ಚೇರಿನ ಜೊತೆಯೇ ಬೈಠಕ್, ಪ್ರವಾಸ ಇತ್ಯಾದಿ ಮಾಡುತ್ತಿದ್ದರು. ಬೆಂಗಳೂರಿನ ವಿಜಯಾ ಕಾಲೇಜಿನಿಂದ ಶುರುವಾದ ಅವರ ಶಿಕ್ಷಣ ಕ್ಷೇತ್ರದೊಂದಿಗಿನ ಪಯಣ ದೇಶದ ಶಿಕ್ಷಣ ನೀತಿಯನ್ನು ರೂಪಿಸುವವರೆಗೂ ಮುಟ್ಟಿದ ಪರಿ ಮೂರು ಹೆಜ್ಜೆಗೆ ಬೆಳೆದ ವಾಮನನಿಗಿಂತಲೂ ತುಸು ಹೆಚ್ಚೇ!
ಅವರ ಸಾಧನೆಯ ಶಿಖರ ಒಂದೆಡೆಯಾದರೆ ಅವರ ಅಂತಃಕರಣದ ಆಳ ಮತ್ತೊಂದು ರೀತಿಯ ಸೋಜಿಗ. ಹೆಚ್ಚು ತಿಂದರೆ ತಮ್ಮನ್ನು ವೀಲ್‌ಚೇರಿನಲ್ಲಿ ಕರೆದುಕೊಂಡು ಹೋಗುವವರಿಗೆ ತೊಂದರೆಯಾಗುತ್ತದೇನೋ ಎಂದು ಕಡಿಮೆ ಊಟ ಮಾಡುವ ಮಮಕಾರದ ಜೀವ ಇವರದ್ದು. ಅದೊಂದು ಬಾರಿ ವಿಶಿಷ್ಟ ಚೇತನರ ಸಮ್ಮೇಳನವನ್ನು ನಡೆಸುವ ಸಂದರ್ಭದಲ್ಲಿ ಸರಕಾರದಿಂದ ಅಂಗವಿಕಲರಿಗೆ ಏನೇನು ಸೌಲಭ್ಯ ಕೇಳಬೇಕು ಎನ್ನುವುದಕ್ಕಿಂತ ಅಂಗವಿಕಲರಾದ ನಾವು ಸಮಾಜಕ್ಕೆ ಹೇಗೆ, ಏನನ್ನು ಕೊಡಬೇಕು ಎಂಬುದನ್ನು ಸಮ್ಮೇಳನದಲ್ಲಿ ಚರ್ಚಿಸಬೇಕು ಎಂಬುದು ಇವರ ಆಗ್ರಹವಾಗಿತ್ತು!
ಅವರನ್ನು ಯಾವುದೋ ಸಮಾರಂಭದಲ್ಲಿ ನೋಡಿದಾಗ ನಾನಿನ್ನೂ ಚಿಕ್ಕವಳು, ಪಕ್ಕ ಕೂತವರಿಗೆ ಕೇಳಿದ್ದೆ ಅವರಿಗೆ ಯಾಕೆ ಕಾಲಿಲ್ಲ ಅಂತ - ಪಕ್ಕದಲ್ಲಿ ಕೂತಿದ್ದವರು ತಮ್ಮ ಬಾಯಿನ ಮೇಲೆ ಬೆರಳಿಟ್ಟು ಹೇಳಿದ್ದರು - " ಶ್..! ಹಾಗಲ್ಲ ಮರಿ, ದೇವರು ಅವರಿಗೆ ಕಾಲಿನ ಬದಲು ರೆಕ್ಕೆ ಕೊಟ್ಟಿದಾನೆ. ಅವರು ನಮಗಿಂತ ಸಾವಿರ ಪಟ್ಟು ಜಾಸ್ತಿ ಕೆಲಸ ಮಾಡುವ ಏಂಜಲ್ಸ್" ಅಂತ ಅಂದಿದ್ದರು. ಅವರು ಹೇಳಿದ್ದು ಇವತ್ತಿಗೂ ಮನಸ್ಸಲ್ಲಿ ಹಾಗೇ ಇದೆ. ತಾವು ನಂಬಿದ ವಿಚಾರಕ್ಕಾಗಿ,ತಮ್ಮ ಸುತ್ತಲಿದ್ದ ಸಮಾಜ ಹೇಗೇ ಕಂಡರೂ ಕೂಡ ಅದರ ಒಳಿತಿಗಾಗಿ,ಉದ್ಧಾರಕ್ಕಾಗಿ ನಿರಂತರವಾಗಿ ತಮ್ಮ ಬಲಹೀನತೆಯನ್ನೇ ಸಾತ್ವಿಕ ಶಕ್ತಿಯಾಗಿ ಪರಿವರ್ತಿಸಿ ಕೆಲಸ ಮಾಡುವ ಇವರನ್ನು ಪ್ರತಿ ಬಾರಿ ಕಂಡಾಗಲೂ ಆ ಮಾತು ನಿಜ ಎನಿಸುತ್ತದೆ.
ಇವರನ್ನು ಮಾತಾಡಿಸಿದಾಗಲೆಲ್ಲ ಹೊಸ ಚೈತನ್ಯ,ಉತ್ಸಾಹ ಹೊರಹೊಮ್ಮುತ್ತದೆ. ಇವರ ಧೀಶಕ್ತಿಗೆ, ಶಿಕ್ಷಣ ಕ್ಷೇತ್ರದ ಸೇವೆಗೆ, ಎಲ್ಲಕಿಂತ ಹೆಚ್ಚಾಗಿ ಅವರ ಸಮರ್ಪಣೆಗೆ ಹೃದಯ ತುಂಬುತ್ತದೆ, ಅವರ ಬದುಕಿನ ಉದಾಹರಣೆಯಿಂದ ಮಾಡಹೊರಟಿರುವ ನಮ್ಮ ಕೆಲಸಕ್ಕೆ ಕಸುವು ಮೂಡುತ್ತದೆ.
ಎಂದಿಗಾದರೂ ಬದುಕಲ್ಲಿ ಕುಗ್ಗಿ ಹೋದಾಗ ಅವರ ಆತ್ಮ ಚರಿತ್ರೆ 'ಸಹಸ್ರಪದಿ' ಯನ್ನು ತಿರುವಿ ಹಾಕಿ, ಹೊಸ ಸ್ಪೂರ್ತಿ ಸಿಗದಿದ್ದರೆ ನನ್ನಾಣೆ! ( ಹಿರಿಯ ಪತ್ರಕರ್ತರಾದ ರವೀಂದ್ರಭಟ್ಟ ಅವರು ನಿರೂಪಿಸಿರುವ ಸಹಸ್ರಪದಿ ಪುಸ್ತಕವು ರಾಷ್ಟ್ರೋತ್ಥಾನ ಸಾಹಿತ್ಯದಲ್ಲಿ ಲಭ್ಯವಿದೆ) ಇಂತಹ ಹಿರಿಯರಿಗೆ ಗೌರವಪೂರ್ವಕ ನಮನಗಳು, ನಿಮ್ಮ ಕರ್ತೃತ್ವ ಶಕ್ತಿ ಈ ನಾಡಿನ ಬೆಳಕಾಗಿ ನಮ್ಮನ್ನು ಮುನ್ನಡೆಸಲಿ ಎಂಬುದಷ್ಟೇ ನಮ್ಮ ಆಶಯ!
- ತನ್ಮಯೀ ಪ್ರೇಮ್‌ಕುಮಾರ್