ಕನ್ನಡ ರಾಜ್ಯೋತ್ಸವ; ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಶೇ50 ರಿಯಾಯಿತಿ, ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ, ಇನ್ನೆಲ್ಲಿ ಎಷ್ಟು ರಿಯಾಯಿತಿ
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ; ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಶೇ50 ರಿಯಾಯಿತಿ, ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ, ಇನ್ನೆಲ್ಲಿ ಎಷ್ಟು ರಿಯಾಯಿತಿ

ಕನ್ನಡ ರಾಜ್ಯೋತ್ಸವ; ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಶೇ50 ರಿಯಾಯಿತಿ, ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ, ಇನ್ನೆಲ್ಲಿ ಎಷ್ಟು ರಿಯಾಯಿತಿ

ಕನ್ನಡ ರಾಜ್ಯೋತ್ಸವ; ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಶೇ50 ರಿಯಾಯಿತಿಯಲ್ಲಿ ಪುಸ್ತಕ ಮಾರಾಟವಾಗುತ್ತಿದೆ. ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ ಈಗಾಗಲೇ ಶುರುವಾಗಿದ್ದು, ರಿಯಾಯಿತಿ ದರದಲ್ಲಿ ಕನ್ನಡ ಪುಸ್ತಕ ಮಾರಾಟ ನಡೆಯುತ್ತಿದೆ. ಇನ್ನು ಆಯ್ದ ಮಳಿಗೆಗಳಲ್ಲಿ ಎಷ್ಟು ರಿಯಾಯಿತಿ ಇದೆ ಎಂಬ ಮಾಹಿತಿ ಇಲ್ಲಿದೆ.

ಕನ್ನಡ ರಾಜ್ಯೋತ್ಸವ; ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಶೇ50 ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ನಡೆಯುತ್ತಿದೆ. ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ ನಡೆಯುತ್ತಿದ್ದು, ಅಲ್ಲೂ ಶೇಕಡ 50ರ ತನಕ ರಿಯಾಯಿತಿ ಇದೆ.
ಕನ್ನಡ ರಾಜ್ಯೋತ್ಸವ; ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಶೇ50 ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ನಡೆಯುತ್ತಿದೆ. ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ ನಡೆಯುತ್ತಿದ್ದು, ಅಲ್ಲೂ ಶೇಕಡ 50ರ ತನಕ ರಿಯಾಯಿತಿ ಇದೆ.

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ (Karnataka Rajyotsava 2024)ದ ಸಂಭ್ರಮ ನಾಡೆಲ್ಲ ಪಸರಿಸಿದ್ದು, ಕನ್ನಡ ಪುಸ್ತಕಗಳ ಪ್ರದರ್ಶನ ಮಾರಾಟವೂ ಗಮನಸೆಳೆದಿದೆ. ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಪುಸ್ತಕ ಪ್ರದರ್ಶನ, ರಿಯಾಯಿತಿ ದರದಲ್ಲಿ ಮಾರಾಟ, ಕನ್ನಡ ಪುಸ್ತಕ ಹಬ್ಬ, ಪುಸ್ತಕ ಮೇಳ ಆಯೋಜನೆಯಾಗುತ್ತವೆ. ಈ ಬಾರಿ ಕೂಡ ಇಂತಹ ಮೇಳಗಳು ಆಯೋಜನೆಯಾಗಿವೆ ಮತ್ತು ಆಗುತ್ತಿವೆ. ರಿಯಾಯಿತಿ ದರದಲ್ಲಿ ಇಷ್ಟವಾದ ಕನ್ನಡ ಪುಸ್ತಕಗಳನ್ನು ಖರೀದಿಸಿ, ಓದಬಹುದು. ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ರಿಯಾಯಿತಿ ದರದ ಮಾರಾಟ ಯೋಜನೆಯನ್ನು ಪ್ರಕಟಿಸಿವೆ. ಪ್ರತಿ ವರ್ಷದಂತೆ ಈ ಬಾರಿ ರಾಷ್ಟ್ರೋತ್ಥಾನ ಪರಿಷತ್ ಕನ್ನಡ ಪುಸ್ತಕ ಹಬ್ಬ ಆಯೋಜಿಸಿದೆ. ವಿಶೇಷ ಎಂದರೆ ಕರ್ನಾಟಕ ರಾಜ್ಯೋತ್ಸವಕ್ಕೆ ನಾಲ್ಕು ದಿನ ಮೊದಲೇ ಈ ಹಬ್ಬ ಶುರುವಾಗಿದ್ದು, ಡಿಸೆಂಬರ್ 1ರ ತನಕ ನಡೆಯಲಿದೆ. ಇದಲ್ಲದೆ, ನವಕರ್ನಾಟಕ, ವೀರಲೋಕ, ಸ್ವಪ್ನಬುಕ್ ಹೌಸ್ ಸೇರಿ ಇತರೆ ಪುಸ್ತಕ ಮಳಿಗೆಗಳೂ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡುತ್ತಿವೆ.

ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ಶೇಕಡ 50 ರಿಯಾಯಿತಿ

ಕನ್ನಡ ರಾಜ್ಯೋತ್ಸವದ ನಿಮಿತ್ತ 2024ರ ನವೆಂಬರ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲ ಪುಸ್ತಕಗಳನ್ನು ಶೇ 50 ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ (ಸಂಪರ್ಕ ಸಂಖ್ಯೆ 080-22107705) ಹಾಗೂ ಎಲ್ಲ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಇದಲ್ಲದೆ, ಕನ್ನಡ ಪುಸ್ತಕ ಪ್ರಾಧಿಕಾರದ ಆನ್ ಲೈನ್ https://kpp.karnataka.gov.in (ಆನ್ಲೈನ್ ಪುಸ್ತಕ ಖರೀದಿಗೆ ವಿಭಾಗ ಇಲ್ಲಿ ವೀಕ್ಷಿಸಿ) ನಲ್ಲಿ ಕೂಡ ಈ ಶೇ 50 ರಿಯಾಯಿತಿ ಲಭ್ಯವಿದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಹೀಗೆ ಹತ್ತು ಹಲವು ಪ್ರಕಾರಗಳ ಸಾಹಿತ್ಯ ಕೃತಿಗಳು ಮಾರಾಟಕ್ಕೆ ಲಭ್ಯ ಇವೆ. ಸುಮಾರು 706 ಶೀರ್ಷಿಕೆಗಳ ಪುಸ್ತಕಗಳನ್ನು ಪ್ರಾಧಿಕಾರ ಪ್ರಕಟಿಸಿದ್ದು, ಅವುಗಳು ಜನಸಾಮಾನ್ಯರಿಗೆ ಈಗ ಕೈಗೆಟಕುವ ದರದಲ್ಲಿ ಲಭ್ಯ ಇವೆ ಎಂದು ಅವರು ಹೇಳಿದ್ಧಾರೆ.

ರಾಷ್ಟ್ರೋತ್ಥಾನ ಸಾಹಿತ್ಯದಿಂದ ಕನ್ನಡ ಪುಸ್ತಕ ಹಬ್ಬ

ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ತು ಈ ಬಾರಿ 4 ನೇ ಆವೃತ್ತಿಯ ಕನ್ನಡ ಪುಸ್ತಕ ಹಬ್ಬ ಆಯೋಜಿಸಿದ್ದು ಅಕ್ಟೋಬರ್ 26ಕ್ಕೆ ಶುರುವಾಗಿದೆ. ಇದು ಡಿಸೆಂಬರ್ 1 ರ ತನಕ ಒಟ್ಟು 37 ದಿನ ಕೆಂಪೇಗೌಡ ನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ನ ಕೇಶವ ಶಿಲ್ಪ ಸಭಾಂಗಣದಲ್ಲಿ ನಡೆಯಲಿದೆ. ಇಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕಗಳು ಮತ್ತು ಇತರೆ ಪ್ರಕಾಶನಗಳ ಸಾಹಿತ್ಯ ಪುಸ್ತಕಗಳು ಪ್ರದರ್ಶನವಾಗುತ್ತಿವೆ. ಎಲ್ಲ ಪುಸ್ತಕಗಳ ಮೇಲೂ ರಿಯಾಯಿತಿ ಇದ್ದು, ಶೇಕಡ 10 ರಿಂದ ಶೇಕಡ 50ರಷ್ಟು ರಿಯಾಯಿತಿಯನ್ನು ಘೋಷಿಸಿರುವುದಾಗಿ ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್‌ ಹೆಗ್ಡೆ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ನಿತ್ಯವೂ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆ ತನಕ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯುತ್ತದೆ. ಪ್ರತಿನಿತ್ಯ ಸಂಜೆ ಸಂಗೀತ, ನೃತ್ಯ, ಜಾನಪದ, ಏಕವ್ಯಕ್ತಿ ತಾಳಮದ್ದಲೆ, ಯಕ್ಷಗಾನ, ಹಾಸ್ಯ, ಮ್ಯಾಜಿಕ್‌, ವಿವಿಧ ವಾದ್ಯಗೋಷ್ಠಿಗಳು, ಹರಿಕಥೆ, ಗಮಕ, ಬೊಂಬೆಯಾಟ, ಅಷ್ಟಾವಧಾನ, ತಾಳವಾದ್ಯ ಕಛೇರಿ ಹೀಗೆ ನಾಡಿನ ನುರಿತ ಹೆಸರಾಂತ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಇದಲ್ಲದೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚರ್ಚಾಸ್ಪರ್ಧೆ, ಶಾಲಾ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪರಿಚಯ ಮತ್ತು ಲೇಖನ ಸ್ಪರ್ಧೆಗಳೂ ನಡೆಯುತ್ತಿದ್ದು, ನ.17ರಂದು ಅಂತಿಮ ಸುತ್ತು ಮತ್ತು ಬಹುಮಾನ ವಿತರಣೆ ಇರಲಿದೆ ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ಸಂಪಾದಕ ವಿಶ್ವೇಶ್ವರ ಭಟ್‌ ತಿಳಿಸಿದ್ದರು.

ವೀರಲೋಕ ಬುಕ್ಸ್‌, ನವಕರ್ನಾಟಕ ಮತ್ತು ಇತರೆ ಮಳಿಗೆಗಳಲ್ಲೂ ರಿಯಾಯಿತಿ

ವೀರಲೋಕ ಬುಕ್ಸ್ ಮಳಿಗೆ ಆಯ್ದ ಕೃತಿಗಳ ಮೇಲೆ ಶೇಕಡ 30ರ ತನಕ ರಿಯಾಯಿತಿ ಘೋಷಿಸಿದೆ. ವೀರಲೋಕ ಪ್ರಕಟಣೆಗಳಾದರೆ ಶೇಕಡ 20 ಮತ್ತು ಇತರೆ ಪ್ರಕಾಶನಗಳ ಪುಸ್ತಕಗಳ ಮೇಲೆ ಶೇ 10 ರಿಂದ 15 ರಿಯಾಯಿತಿ ಲಭ್ಯ ಇದೆ. 5000 ರೂಪಾಯಿಗಿಂತ ಹೆಚ್ಚು ಮೌಲ್ಯದ ಪುಸ್ತಕ ಖರೀದಿಸಿದರೆ ಟೀ-ಶರ್ಟ್ ಉಚಿತವಾಗಿ ಕೊಡುವುದಾಗಿ ವೀರಲೋಕ ಬುಕ್ಸ್ ಪ್ರಕಟಿಸಿದೆ.

ವೀರಲೋಕ ಪುಸ್ತಕ ಸಂತೆ - ೦೨: ವೀರಲೋಕ ಸಂಸ್ಥೆಯ ಎರಡನೇ ಪುಸ್ತಕ ಸಂತೆ ನವೆಂಬರ್ 15, 16, 17 ರಂದು ಜಯನಗರದ ಶಾಲಿನಿ ಮೈದಾನದಲ್ಲಿ ನಡೆಯಲಿದೆ. ಇದರಲ್ಲಿ ರಾಜ್ಯದ 100ಕ್ಕೂ ಹೆಚ್ಚು ಪ್ರಕಾಶಕರು ತಮ್ಮ ಕನ್ನಡ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ. ಈ ಸಂತೆಯಲ್ಲಿ ಪುಸ್ತಕೇತರ ಮಳಿಗೆಗಳು (ಆಹಾರ, ಆರೋಗ್ಯ, ವಸ್ತ್ರ, ಚಿತ್ರಕಲೆ, ಸಣ್ಣ ಕೈಗಾರಿಕೆಗಳಿಗೆ ಸಂಬಂಧಿಸಿದ ಮಳಿಗೆಗಳು) ಕೂಡ ಇರಲಿವೆ. ವಿಶೇಷವಾಗಿ ಸಂಜೆ ಜಾನಪದ ಸಂಜೆ, ಭಾವಗೀತೆ ಸಂಜೆ, ಚಲನಚಿತ್ರಗೀತೆ ಸಂಜೆ ಎಂಬ ಸಂಗೀತ ಕಾರ್ಯಕ್ರಮಗಳು ಆಯೋಜನೆಯಾಗಿವೆ. ವೀರಲೋಕ ಪ್ರಕಟಣೆಯ ವಿವಿಧ ಪ್ರಕಾರಗಳ ಇಪ್ಪತ್ತು ಪುಸ್ತಕಗಳು ಲೋಕಾರ್ಪಣೆಯಾಗಲಿವೆ ಎಂದು ಸಂಸ್ಥೆಯ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ಬೆಂಗಳೂರಿನ ನವಕರ್ನಾಟಕ ಪ್ರಕಾಶನವೂ ರಿಯಾಯಿತಿ ನೀಡುತ್ತಿದ್ದು, ಎಲ್ಲ ಕೃತಿಗಳಿಗೂ ಶೇಕಡ 20 ರಿಯಾಯಿತಿ ಇದೆ ಎಂದು ಪ್ರಕಾಶನದ ಪ್ರತಿನಿಧಿ ಆನಂದ್ ಎಂಬುವವರು ತಿಳಿಸಿದ್ದಾರೆ. ಸಪ್ನ ಬುಕ್‌ ಹೌಸ್‌ನಲ್ಲೂ ನವೆಂಬರ್ ತಿಂಗಳು ಪೂರ್ತಿ ಕನ್ನಡ ಪುಸ್ತಕಗಳಿಗೆ ಶೇಕಡ 50ರ ತನಕ ರಿಯಾಯಿತಿ ಲಭ್ಯವಿದೆ.

Whats_app_banner