ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾದ ದರ್ಶನ್, ಚಿಕಿತ್ಸೆ ಆರಂಭ; ಸದ್ಯಕ್ಕೆ ಪ್ರಾಥಮಿಕ ಚಿಕಿತ್ಸೆ, 2 ದಿನ ಆಸ್ಪತ್ರೆ ಫಿಕ್ಸ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಡಿ ಬಂಧನಕ್ಕೊಳಗಾಗಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.ವರದಿ: ಎಚ್. ಮಾರುತಿ, ಬೆಂಗಳೂರು
ಬೆಂಗಳೂರು: ಬೆನ್ನು ಹುರಿಯ ಸಮಸ್ಯೆಗೆ ಚಿಕಿತ್ಸೆ ಪಡೆಯಬೇಕೆಂದು ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ಚಿತ್ರನಟ ದರ್ಶನ್ ಬೆಂಗಳೂರಿನ ಉತ್ತರಹಳ್ಳಿ ರಸ್ತೆಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಲಿದ್ದಾರೆ. ಖ್ಯಾತ ನರರೋಗ ತಜ್ಞ ಡಾ.ನವೀನ್ ಅವರು ದರ್ಶನ್ ಚಿಕಿತ್ಸೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಈಗಾಗಲೇ ಅವರಿಗೆ ಚಿಕಿತ್ಸೆಯನ್ನು ಆರಂಭಿಸಲಾಗಿದೆ. ದರ್ಶನ್ ಆರೋಗ್ಯ ಕುರಿತು ಮಾಹಿತಿ ನೀಡಿರುವ ಡಾ. ನವೀನ್ ಅಪ್ಪಾಜಿಗೌಡ, ಬಿಪಿ, ಶುಗರ್, ಇಸಿಜಿ, ರಕ್ತ ಪರೀಕ್ಷೆ ಮೊದಲಾದ ಪ್ರಾಥಮಿಕ ಪರೀಕ್ಷೆಗಳನ್ನು ಮಾಡಲಾಗಿದೆ. ಬೆನ್ನು ಮೂಳೆಯ ಎಂಆರ್ ಐ ಸ್ಕ್ಯಾನ್ ಮಾಡಲಾಗಿದೆ, ಎಲ್ಲ ಪರೀಕ್ಷೆಗಳ ವರದಿ ಬಂದ ನಂತರವಷ್ಟೇ ಶಸ್ತ್ರಚಿಕಿತ್ಸೆ ಬೇಕೇ ಬೇಡವೇ ಎಂದು ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಆರಂಭದಲ್ಲಿ ಫಿಸಿಯೋಥೆರಪಿ ಮೂಲಕವೇ ಗುಣಪಡಿಸಲು ಪ್ರಯತ್ನಿಸಲಾಗುತ್ತದೆ. ಅದಕ್ಕೂ ಗುಣವಾಗದಿದ್ದರೆ ಮುಂದಿನ ಹಂತ ಕುರಿತು ತೀರ್ಮಾನಿಸಲಾಗುತ್ತದೆ. ಬೆನ್ನು ನೋವಿನ ಜೊತೆಗೆ ಅವರಿಗೆ ಎಡ ಕಾಲಿನ ನೋವೂ ಇದೆ. ಎಲ್ಲ ಪರೀಕ್ಷೆಗಳನ್ನು ನಡೆಸಿದ್ದು, 48 ಗಂಟೆಗಳಲ್ಲಿ ವರದಿಗಳು ಬರಲಿವೆ. ಸಧ್ಯಕ್ಕೆ ದರ್ಶನ್ ಎರಡು ದಿನ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಎಂದು ಡಾ.ನವೀನ್ ಹೇಳಿದ್ದಾರೆ.
2013ರಲ್ಲಿ ಬೃಂದಾವನ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಕುದುರೆ ಮೇಲಿಂದ ಬಿದ್ದಿದ್ದರಿಂದ ದರ್ಶನ್ ಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಇದೀಗ ಮತ್ತೊಮ್ಮೆ ಆ
ನೋವು ತೀವ್ರವಾಗಿ ಕಾಡುತ್ತಿದೆ. ಮೊದಲ ಭಾರಿ ಬೆನ್ನು ನೋವು ಕಾಣಿಸಿಕೊಂಡಾಗ ದರ್ಶನ್ ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಇದೀಗ ಮತ್ತೊಮ್ಮೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದರಾದರೂ ಹೈಕೋರ್ಟ್ ಬೆಂಗಳೂರು ಬಿಟ್ಟು ಹೊರಹೋಗುವಂತಿಲ್ಲ ಎಂದು ಷರತ್ತು ವಿಧಿಸಿದ್ದರಿಂದ ಬಿಜಿಎಸ್ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಲ್ಯ ಮತ್ತು ಅಪೊಲೋ ಆಸ್ಪತ್ರೆಗಳನ್ನು ಪರಿಗಣಿಸಿದ್ದರಾದರೂ ಅಂತಿಮವಾಗಿ ಬಿಜಿಎಸ್ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜಿಎಸ್ ಆಸ್ಪತ್ರೆ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಎಸಿಪಿ ಬಸವರಾಜ್ ತೇಲಿ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. ದರ್ಶನ್ ಕಾರು ಆಸ್ಪತ್ರೆಗೆ ಬರುತ್ತಿದ್ದಂತೆ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಘೋಷಣೆ ಕೂಗುತ್ತಿದ್ದರು.
ವಿಷಯ ತಿಳಿದ ಅಭಿಮಾನಿಗಳು ಆಸ್ಪತ್ರೆ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ದರ್ಶನ್ ಬುಧವಾರ ಸಂಜೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ ಅವರು ರಾಜರಾಜೇಶ್ವರಿ ನಗರದ ತಮ್ಮ ಮನೆಗೆ ಹೋಗದೆ ಪತ್ನಿ ವಾಸಿಸುತ್ತಿರುವ ಜೆಪಿ ನಗರದ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದರು. ಗುರುವಾರ ಪುತ್ರ ವಿನೀಶ್ ಹುಟ್ಟು ಹಬ್ಬ ಆಚರಿಸಿ ವಿಶ್ರಾಂತಿ ಪಡೆದುಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಾದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಲ್ಲಿ ಆರೋಪಿ ನಂ 2 ಆಗಿದ್ದ ದರ್ಶನ್ ಗೆ ಹೈಕೋರ್ಟ್ ಕೇವಲ 6 ವಾರಗಳ ಮಧ್ಯಂತರ ಜಾಮೀನು ನೀಡಿದೆ. ಪ್ರತಿ ವಾರ ತಾನು ಪಡೆಯುತ್ತಿರುವ ಚಿಕಿತ್ಸೆಯ ವಿವರಗಳನ್ನು ಹೈಕೋರ್ಟ್ ಗೆ ಸಲ್ಲಿಸಬೇಕಾಗಿದೆ.
ಜೂನ್ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11 ರಂದು ದರ್ಶನ್ ಮತ್ತಿತರ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿ ನಂ 2 ಆಗಿದ್ದರೆ ಇವರ ಸ್ನೇಹಿತೆ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದಾರೆ.
ವರದಿ: ಎಚ್.ಮಾರುತಿ, ಬೆಂಗಳೂರು