Karnataka Rains: ಕರಾವಳಿ ಜಿಲ್ಲೆಗಳಲ್ಲಿಂದು ಭಾರಿ ಮಳೆ ಸಾಧ್ಯತೆ; ದಕ್ಷಿಣ ಒಳನಾಡಿನಲ್ಲೂ ತಂಪೆರೆಯಲಿದ್ದಾನೆ ವರುಣ; ಇಂದಿನ ಹವಾಮಾನ ವರದಿ
Karnataka weather updates: ಆಗಸ್ಟ್ ತಿಂಗಳಿಡೀ ಮಳೆ ಕೊರತೆ ಕಾಡಿದ್ದು ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ರಾಜ್ಯದ ಹಲವೆಡೆ ಮಳೆಯಾಗಿದೆ. ಗುರುವಾರವು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಸೆಪ್ಟೆಂಬರ್ 11ರ ವರೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ವರದಿ ತಿಳಿಸಿದೆ.
ಬೆಂಗಳೂರು: ಕಳೆದೊಂದು ವಾರದಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಗುರುವಾರು ರಾಜ್ಯದ ಹಲವು ಕಡೆ ಒಳೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿ ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜನರು ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆರಾಯನ ಆಗಮನದಿಂದ ಕೊಂಚ ನಿರಾಳರಾಗಿದ್ದಾರೆ. ಇಂದು ಕರಾವಳಿಯ ದಕ್ಷಿಣಕನ್ನಡ, ಉತ್ತರಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ನಿರೀಕ್ಷೆ ಇದ್ದು ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಸೆಪ್ಟೆಂಬರ್ 11ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲೂ ಮಳೆ ಬರುವ ಸಾಧ್ಯತೆ ಇದು ಎಂದು ಐಎಂಡಿ ವರದಿ ತಿಳಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ
ಕರಾವಳಿ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಮಳೆಯ ಪ್ರಮಾಣ ಜೋರಾಗಿದೆ. ಇಂದು ಕೂಡ ಕರಾವಳಿಯ ದಕ್ಷಿಣಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ. ಸೆಪ್ಟೆಂಬರ್ 12ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿರಲಿದೆ ಎಂದು ಹವಾಮಾನ ವರದಿ ತಿಳಿಸಿದೆ.
ಉತ್ತರ ಒಳನಾಡಿನ ವರದಿ
ಸೆಪ್ಟೆಂಬರ್ ತಿಂಗಳ ಆರಂಭದಿಂದ ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ಇಂದು ಕೂಡ ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಅಲ್ಲಲ್ಲಿ ಗುಡುಗು ಮಿಂಚು ಕೂಡ ಕಾಣಿಸಲಿದೆ ಎಂದು ಐಎಂಡಿ ವರದಿ ತಿಳಿಸಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಗದಗ, ಹಾವೇರಿ, ಕಲಬುರ್ಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಬಾಗಲಕೋಟೆ, ಧಾರಾವಾಡ, ಕೊಪ್ಪಳ, ವಿಜಯಪುರದಲ್ಲಿ ಒಣಹವೆ ಇರಲಿದೆ.
ದಕ್ಷಿಣ ಒಳನಾಡಿನಲ್ಲೂ ಮಳೆ
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಇಂದು ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಮಿಂಚಿನ ಎಚ್ಚರಿಕೆಯನ್ನು ಐಎಂಡಿ ವರದಿ ತಿಳಿಸಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡುಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲೂ ಮಳೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇನ್ನು ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಮಳೆಯಾಗಲಿದೆ ಎನ್ನಲಾಗುತ್ತಿದೆ. ಆದರೆ ನೈರುತ್ಯ ಮುಂಗಾರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಭಾರಿ ಮಳೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.