Madikeri Dasara 2024: ಮಡಿಕೇರಿ ದಸರಾದ ದಶ ಮಂಟಪಗಳ ಮೆರವಣಿಗೆ ಸಕಲ ಸಿದ್ದತೆ, ಸಂಜೆಯಾಗುತ್ತಲೇ ವೈಭವ ಶುರು
ಕನ್ನಡ ಸುದ್ದಿ  /  ಕರ್ನಾಟಕ  /  Madikeri Dasara 2024: ಮಡಿಕೇರಿ ದಸರಾದ ದಶ ಮಂಟಪಗಳ ಮೆರವಣಿಗೆ ಸಕಲ ಸಿದ್ದತೆ, ಸಂಜೆಯಾಗುತ್ತಲೇ ವೈಭವ ಶುರು

Madikeri Dasara 2024: ಮಡಿಕೇರಿ ದಸರಾದ ದಶ ಮಂಟಪಗಳ ಮೆರವಣಿಗೆ ಸಕಲ ಸಿದ್ದತೆ, ಸಂಜೆಯಾಗುತ್ತಲೇ ವೈಭವ ಶುರು

Madikeri Dasara 2024: ಕೊಡಗಿನ ಮಡಿಕೇರಿ ದಸರಾಕ್ಕೆ ಸಿದ್ದತೆಗಳು ಆಗುತ್ತಿದ್ದು, ಶನಿವಾರ ಸಂಜೆ ದಶಮಂಟಪಗಳ ಮೆರವಣಿಗೆ ಆರಂಭವಾಗಲಿದೆ. ಇದರ ಹಿನ್ನೆಲೆಯ ವಿವರ ಇಲ್ಲಿದೆ.

ಮಡಿಕೇರಿಯಲ್ಲಿ ದಶಮಂಟಪಗಳ ಮೆರವಣಿಗೆ ಸಿದ್ದತೆ ಕೊನೆಯ ಹಂತದಲ್ಲಿದೆ.
ಮಡಿಕೇರಿಯಲ್ಲಿ ದಶಮಂಟಪಗಳ ಮೆರವಣಿಗೆ ಸಿದ್ದತೆ ಕೊನೆಯ ಹಂತದಲ್ಲಿದೆ.

ಉಮೆಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ಹತ್ತು ದಿನಗಳಿಂದ ನಡೆಯುತ್ತಿದ್ದ ದಸರಾದ ಪ್ರಮುಖ ಭಾಗವಾದ ದಶಮಂಟಪಗಳ ಮೆರವಣಿಗೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಮಡಿಕೇರಿ ದಸರಾ ಎಂದರೆ ಅದು ಕರಗ ಮಹೋತ್ಸವದ ಮೆರವಣಿಗೆಯೊಂದಿಗೆ ಆರಂಭಗೊಂಡು ದಶ ಮಂಟಪಗಳ ಮೆರವಣಿಗೆ ಮೂಲಕ ತೆರೆ ಕಾಣುವುದು ವಿಶೇಷ. ಶನಿವಾರ ರಾತ್ರಿ ಆರಂಭಗೊಂಡು ಭಾನುವಾರದವರೆಗೂ ನಡೆಯುವ ದಶ ಮಂಟಪಗಳ ಮೆರವಣಿಗೆಗೆ ತಂಡಗಳು ಸಿದ್ದತೆ ಮಾಡಿಕೊಂಡಿವೆ. ದೇವರ ಮೂರ್ತಿಗಳೊಂದಿಗೆ ಬಗೆಬಗೆಯ ಅಲಂಕಾರದ ಜತೆಗೆ ಮೆರವಣಿಗೆ ಅಣಿಯಾಗಿದೆ. ಇದನ್ನು ಕಣ್ತುಂಬಿಕೊಳ್ಳಲು ಹಲವರು ಮಡಿಕೇರಿಗೆ ಈಗಾಗಲೇ ಆಗಮಿಸಿದ್ದಾರೆ. ಮೈಸೂರು ದಸರಾ ಮುಗಿಸಿಕೊಂಡು ಮಡಿಕೇರಿಯತ್ತರಲೂ ಜನರು ಆಗಮಿಸುವುದರಿಂದ ಪ್ರವಾಸಿಗರ ದಟ್ಟಣೆ ಮಡಿಕೇರಿ ದಸರಾದ ಕೊನೆಯ ದಿನ ಹೆಚ್ಚಲಿದೆ.

ಮಡಿಕೇರಿ ದಸರಾಕ್ಕೆ ತನ್ನದೇ ಆದ ಇತಿಹಾಸವಿದ್ದು, ನಗರದ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವದ ಪಾತ್ರವೇ ಇಲ್ಲಿ ಪ್ರಮುಖ ಆಕರ್ಷಣೆ.

ಮಹಾಲಯ ಅಮಾವಾಸ್ಯೆಯ ನಂತರದ ದಿನಗಳಲ್ಲಿ ನಾಲ್ಕೂ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಕರಗ ಕಟ್ಟಲು ಪಂಪಿನ ಕೆರೆಗೆ ತೆರಳಲಾಗುತ್ತದೆ. ಅಲ್ಲಿ ಹೂವಿನ ಅಲಂಕಾರವಾದ ನಂತರ ಶಾಸ್ತ್ರೋಕ್ತವಾಗಿ ಪೂಜೆ ಪುರಸ್ಕಾರ ಮುಗಿಸಿ ನಾಲ್ಕು ಕರಗಗಳು ನಗರ ಸಂಚಾರ ಆರಂಭಿಸುತ್ತವೆ.

ಆನಂತರ ವಿಜಯದಶಮಿಯಂದು ಶ್ರೀ ಪೇಟೆ ರಾಮಮಂದಿರದ ಕಲಶ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಹೊರಟು ಶ್ರೀ ಚೌಟಿ ಮಾರಿಯಮ್ಮ ದೇವಾಲಯವನ್ನು ತಲುಪಿ ಅಲ್ಲಿ ಕರಗ ಪೂಜೆ ಸ್ವೀಕರಿಸಿ, ನಂತರ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಪೂಜೆ ಸ್ವೀಕರಿಸುತ್ತದೆ. ಇದು ದಸರಾ ಆರಂಭದ ಭಾಗ. ಶ್ರೀ ದಂಡಿನ ಮಾರಿಯಮ್ಮ ದೇವಾಲಯಕ್ಕೆ ಬಂದಾಗ ಅದೇ ಸಮಯದಲ್ಲಿ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಕರಗ ಹೊರಟು ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ಶ್ರೀ ಪೇಟೆ ರಾಮಮಂದಿರದ ಕಲಶ ಪೂಜೆಗೆ ಒಳಗಾಗುತ್ತದೆ.

ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳು ನಾಡಿನಲ್ಲಿ ತಲೆದೋರಿದ್ದ ಸಾಂಕ್ರಾಮಿಕ ರೋಗವನ್ನು ದೂರ ಮಾಡಿ ಆರೋಗ್ಯಕರ ವಾತಾವರಣ ಮೂಡಿಸಿದ್ದರಿಂದ ಸಂಪ್ರೀತಗೊಂಡು ಕರಗವನ್ನು ಮುಂದುವರೆಸಿಕೊಂಡು ಬಂದರು.

ಮಡಿಕೇರಿ ದಸರಾ ಜನೋತ್ಸವದಲ್ಲಿ ಶಕ್ತಿ ದೇವತೆಗಳ ಕರಗೋತ್ಸವದ ಪರಂಪರೆ ಹಿಂದಿನಿಂದಲೂ ರೂಢಿಯಲ್ಲಿದ್ದದ್ದು. ದಸರಾ ಆರಂಭವಾಗುವುದೇ ಕರಗಪೂಜೆಯಿಂದ. ಮಡಿಕೇರಿಯ ದಸರಾ ವಿಶ್ವವಿಖ್ಯಾತಿಗಳಿಸಿ ಜನರ ಉತ್ಸವವಾಗಿ ಮಾರ್ಪಟ್ಟಿದೆ.

ಕೊಡಗಿನ ಕೇಂದ್ರ ಸ್ಥಾನವಾದ ಮಡಿಕೇರಿ ಹಲವು ಕಾರಣಗಳಿಗೆ ವಿಶೇಷತೆ ಪಡೆದಿದೆ. ಅದರಲ್ಲೂ ದಸರಾ ಕೂಡ ಒಂದು. ಆರು ದಶಕಗಳಿಂದ ಮಡಿಕೇರಿ ದಸರಾದ ದಶ ಮಂಟಪದ ವೈಭವ ನಡೆದುಕೊಂಡು ಬಂದಿದೆ. 1958ರಲ್ಲಿ ರಾಜಸ್ತಾನದಿಂದ ಮಡಿಕೇರಿಗೆ ವ್ಯಾಪಾರಕ್ಕಾಗಿ ಬಂದು ಇಲ್ಲಿಯೇ ನೆಲೆನಿಂತ ದೈವಭಕ್ತ ಭೀಮ್‌ಸಿಂಗ್ ದೇಚೂರಿನ ರಘುರಾಮ ಮಂಟಪವನ್ನು ಮೊದಲು ಹುಟ್ಟು ಹಾಕಿದರು.

ಈ ಮಂಟಪ ಪೇಟೆ ಶ್ರೀ ರಾಮಮಂದಿರ ಮಂಟಪದ ನಂತರ ಸಾಗುತ್ತಿತ್ತು. ದಸರಾ ಆಚರಣಾ ಕ್ರಮಕ್ಕೆ ಒಂದು ಉತ್ತಮ ಧಾರ್ಮಿಕ ಶಿಸ್ತನ್ನು ರೂಪಿಸಿದ್ದರಲ್ಲಿ ಮಡಿಕೇರಿ ಕಾಲೇಜು ರಸ್ತೆಯ ಶ್ರೀ ರಾಮ ಮಂದಿರದ ಪಾಲು ದೊಡ್ಡದಿದೆ. ಈಗಲೂ ಅದೇ ವೈಭವದೊಂದಿಗೆ ದಸರಾ ದಶಮಂಟಪ ಮೆರವಣಿಗೆ ನಡೆಯುತ್ತಿದ್ದು. ಈ ವರ್ಷವೂ ಅದೇ ಉತ್ಸಾಹ ಕಂಡು ಬಂದಿದೆ.

Whats_app_banner