ಕನ್ನಡ ಸುದ್ದಿ  /  Karnataka  /  Lok Sabha Election 2024 Bagalkot Ls Constituency Watch P C Gaddigoudar Expecting 5th Victory Bjp Congress Smu

ಲೋಕಸಭೆ ಚುನಾವಣೆ; ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ್ 5ನೇ ಸಲ ಕಣಕ್ಕೆ, ಈ ಸಲ ಗೆದ್ದರೆ ಅದುವೇ ದಾಖಲೆ

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣೆ ಮೇ 7ರಂದು ನಡೆಯಲಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪಿಸಿ ಗದ್ದಿಗೌಡರ್ ಕಣಕ್ಕೆ ಇಳಿದಿದ್ದಾರೆ. 5ನೇ ಸಲ ಕಣಕ್ಕೆ ಇಳಿದಿರುವ ಅವರು ಈ ಸಲ ಗೆದ್ದರೆ ಅದುವೇ ದಾಖಲೆ. ಈ ಕುರಿತ ವಿಶೇಷ ವರದಿ ಇಲ್ಲಿದೆ. (ವಿಶೇಷ ವರದಿ - ಸಮೀವುಲ್ಲಾ ಉಸ್ತಾದ)

ಲೋಕಸಭೆ ಚುನಾವಣೆ; ಬಾಗಲಕೋಟೆಯಲ್ಲಿ 5 ನೇ ಬಾರಿ ಕಣಕ್ಕೆ ಇಳಿದು ದಾಖಲೆ ನಿರ್ಮಿಸಲು ಹೊರಟ ಸಂಸದ ಪಿಸಿ ಗದ್ದಿಗೌಡರ್
ಲೋಕಸಭೆ ಚುನಾವಣೆ; ಬಾಗಲಕೋಟೆಯಲ್ಲಿ 5 ನೇ ಬಾರಿ ಕಣಕ್ಕೆ ಇಳಿದು ದಾಖಲೆ ನಿರ್ಮಿಸಲು ಹೊರಟ ಸಂಸದ ಪಿಸಿ ಗದ್ದಿಗೌಡರ್

ಬಾಗಲಕೋಟೆ: ಕೋಟೆ ನಾಡು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಮಹಿಮೆ ಸಹ ವಿಭಿನ್ನ. ಇಲ್ಲಿಯವರೆಗೆ ನಡೆದ ಚುನಾವಣೆಯಲ್ಲಿ ಇಬ್ಬರು ನಾಯಕರು ನಾಲ್ಕು ಬಾರಿ ಆಯ್ಕೆಯಾಗಿದ್ದು ಬಿಟ್ಟರೆ ಯಾರೊಬ್ಬರು ಈ ಕ್ಷೇತ್ರದಿಂದ ಹ್ಯಾಟ್ರಿಕ್ ಸಾಧನೆ ಮಾಡಿಲ್ಲ.

ಪ್ರಸ್ತುತ 8 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರ ಈ ಹಿಂದೆ ವಿಜಯಪುರ ವ್ಯಾಪ್ತಿಗೆ ಒಳಪಟ್ಟಿತ್ತು. 1951 ರಿಂದ ಸಾರ್ವತ್ರಿಕ ಚುನಾವಣೆ ಆರಂಭಗೊಂಡಾಗ ಈ ಕ್ಷೇತ್ರ ವಿಜಯಪುರ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಆಗ ದಿ.ರಾಮಪ್ಪ ಬಿದರಿ ಅವರು ಗೆಲುವು ಸಾಧಿಸಿದರು. 1957ರ ಚುನಾವಣೆಯಲ್ಲಿಯೂ ಪುನರಾಯ್ಕೆಯಾಗಿದ್ದರು.

1962 ರವರೆಗೂ ಸಹ ವಿಜಯಪುರ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಇದ್ದ ಬಾಗಲಕೋಟೆ 1967 ರಲ್ಲಿ ಪ್ರತ್ಯೇಕ ಲೋಕಸಭಾ ಕ್ಷೇತ್ರವಾಗಿ ರಚನೆಯಾಯಿತು. ಆಗ ನಡೆದ ಚುನಾವಣೆಯಲ್ಲಿ ಎಸ್.ಬಿ. ಪಾಟೀಲ ಆಯ್ಕೆಯಾದರು. ತದನಂತರ ಸತತ ನಾಲ್ಕು ಬಾರಿ ಅಂದರೆ 1962, 1967, 1971, 1977 ಚುನಾವಣೆಯಲ್ಲಿ ಎಸ್.ಬಿ. ಪಾಟೀಲ ಆಯ್ಕೆಯಾಗುವ ಮೂಲಕ ದಾಖಲೆ ಸೃಷ್ಟಿ ಮಾಡಿದರು.

ಕಾಂಗ್ರೆಸ್ ಭದ್ರಕೋಟೆಗೆ ಬಿಜೆಪಿ ಲಗ್ಗೆ

1951 ರಿಂದ 1996 ರವರೆಗೂ ಬಾಗಲಕೋಟೆ ಕಾಂಗ್ರೆಸ್ ಭದ್ರಕೋಟೆಯಾಗಿಯೇ ಇತ್ತು. 1996 ರ ಚುನಾವಣೆಯಲ್ಲಿ ಹಾಲಿ ಕಾಂಗ್ರೆಸ್ ಶಾಸಕರಾಗಿರುವ ಎಚ್.ವೈ. ಮೇಟಿ ಅಂದು ಜನತಾದಳದಿಂದ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಬಾಗಲಕೋಟೆಯ ಕಾಂಗ್ರೇಸೇತರ ಸಂಸದರಾಗಿ ಲೋಕಸಭೆ ಪ್ರವೇಶಿಸಿದರು. 1998 ರಲ್ಲಿ ಲೋಕಜನಶಕ್ತಿಯಿಂದ ಅಜಯಕುಮಾರ ಸರನಾಯಕ ಆಯ್ಕೆಯಾದರು.

ನಂತರ ಮೂರೇ ವರ್ಷಗಳಲ್ಲಿ ಕಾಂಗ್ರೆಸ್ ಮತ್ತೆ ತನ್ನ ಕೋಟೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಂತೆ 1999 ರಲ್ಲಿ ಆರ್.ಎಸ್. ಪಾಟೀಲ ಆಯ್ಕೆಯಾದರು. ಆದರೆ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಪಿ.ಸಿ. ಗದ್ದಿಗೌಡರ 2004 ರಿಂದ ಇಲ್ಲಿಯವರೆಗೆ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಕೋಟೆಯನ್ನು ಛಿದ್ರ ಮಾಡಿ ಬಿಜೆಪಿ ಭದ್ರಕೋಟೆಯನ್ನಾಗಿಸಿದರು.

ಮತದಾರರ ವಿವರ:

ಒಟ್ಟು ಮತದಾರರು: 17,90,118

ಪುರುಷ ಮತದಾರರು: 8,87,780

ಮಹಿಳಾ ಮತದಾರರು: 9,02,239

ಇತರೆ: 99

ಗಮನ ಸೆಳೆದ ರಣಕಣ: ಬಾಗಲಕೋಟೆ ಲೋಕಸಭಾ ಕ್ಷೇತ್ರ ಮಾಜಿ ಮುಖ್ಯಮಂತ್ರಿ ವಿರೇಂದ್ರ ಪಾಟೀಲರನ್ನು ಲೋಕಸಭೆಗೆ ಕಳುಹಿಸಿದ ಶ್ರೇಯಸ್ಸು ಹೊಂದಿದೆ. 1980 ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ವಿರೇಂದ್ರ ಪಾಟೀಲರು ಲೋಕಸಭೆ ಪ್ರವೇಶಿಸಿದ್ದರು.

ನಂತರ ಇಡೀ ರಾಜ್ಯದ ಗಮನ ಸೆಳೆದದ್ದು 1991 ರ ಚುನಾವಣೆ. ಅಜಾತಶತ್ರು ಎಂದೇ ಹೆಸರುವಾಸಿಯಾಗಿದ್ದ ರಾಮಕೃಷ್ಣ ಹೆಗಡೆ ಈ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ಬ್ಯಾರೇಜ್ ಹೀರೋ ಎಂದೇ ಹೆಸರಾಗಿದ್ದ ಯುವಕ ಸಿದ್ಧು ನ್ಯಾಮಗೌಡ ಗೆಲುವು ಸಾಧಿಸಿದರು. ಜೊತೆಗೆ ಕೇಂದ್ರ ಸಚಿವರಾಗಿಯೂ ಮಿಂಚಿದರು.

ಗದ್ದಿಗೌಡರ ಗೆದ್ದರೆ ಐತಿಹಾಸಿಕ ದಾಖಲೆ

ಬಾಗಲಕೋಟೆ ಲೋಕಸಭಾ ಕ್ಷೇತ್ರ ಇಬ್ಬರು ನಾಯಕರಿಗೆ ನಾಲ್ಕು ಬಾರಿ ಲೋಕಸಭೆಗೆ ಕಳುಹಿಸಿದ ಇತಿಹಾಸವಿದೆ. ಆದರೆ ಇಬ್ಬರು ಹೊರತುಪಡಿಸಿ ಉಳಿದವರು ಯಾರು ಹ್ಯಾಟ್ರಿಕ್ ಸಹ ಸಾಧನೆ ಮಾಡಿಲ್ಲ.

ಬಾಗಲಕೋಟೆ ಸಂಸದರ ಪಟ್ಟಿ

1967 - ಎಸ್.ಬಿ.ಪಾಟೀಲ - ಕಾಂಗ್ರೆಸ್

1971 - ಎಸ್.ಬಿ.ಪಾಟೀಲ - ಕಾಂಗ್ರೆಸ್

1977 - ಎಸ್.ಬಿ.ಪಾಟೀಲ - ಕಾಂಗ್ರೆಸ್

1980 - ವಿರೇಂದ್ರ ಪಾಟೀಲ - ಕಾಂಗ್ರೆಸ್ (ಐ)

1984 - ಹನಮಂತಗೌಡ ಪಾಟೀಲ - ಕಾಂಗ್ರೆಸ್

1989 - ಸುಭಾಸ್ ಪಾಟೀಲ - ಕಾಂಗ್ರೆಸ್

1991 - ಸಿದ್ದಪ್ಪ ನ್ಯಾಮಗೌಡರ - ಕಾಂಗ್ರೆಸ್

1996 - ಹುಲ್ಲಪ್ಪ ಮೇಟಿ - ಜನತಾ ದಳ

1998 - ಅಜಯಕುಮಾರ ಸರನಾಯಕ - ಎಲ್.ಎಸ್

1999 - ಆರ್.ಎಸ್.ಪಾಟೀಲ - ಕಾಂಗ್ರೆಸ್

2004 - ಪಿ.ಸಿ.ಗದ್ದಿಗೌಡರ - ಬಿಜೆಪಿ

2009 - ಪಿ.ಸಿ.ಗದ್ದಿಗೌಡರ - ಬಿಜೆಪಿ

2014 - ಪಿ.ಸಿ.ಗದ್ದಿಗೌಡರ - ಬಿಜೆಪಿ

2019 - ಪಿ.ಸಿ.ಗದ್ದಿಗೌಡರ – ಬಿಜೆಪಿ

1962, 1967, 1971, 1977 ರ ಚುನಾವಣೆಯಲ್ಲಿ ಸಂಗನಗೌಡ ಬಸನಗೌಡ ಪಾಟೀಲ ಸತತ ನಾಲ್ಕು ಬಾರಿ ಆಯ್ಕೆಯಾದರು. ನಂತರ ಅವರ ದಾಖಲೆಯನ್ನು ಸರಿಗಟ್ಟಿರುವುದು ಪಿ.ಸಿ. ಗದ್ದಿಗೌಡರ. ಈ ಬಾರಿ ಪಿ.ಸಿ. ಗದ್ದಿಗೌಡರ ಗೆದ್ದರೆ ಐದು ಬಾರಿ ಗೆಲ್ಲುವ ಮೂಲಕ ಬಾಗಲಕೋಟೆ ಲೋಕಸಭೆ ಇತಿಹಾಸದಲ್ಲಿ ದಾಖಲೆ ಪರ್ವತ ಏರುವಲ್ಲಿ ಸಂದೇಹವಿಲ್ಲ. ಪಿ.ಸಿ. ಗದ್ದಿಗೌಡರ 2004, 2009, 2014, 2019 ರ ಚುನಾವಣೆಯಲ್ಲಿ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಈಗ ಐದನೇಯ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

(ವಿಶೇಷ ವರದಿ - ಸಮೀವುಲ್ಲಾ ಉಸ್ತಾದ)

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)