ಕನ್ನಡ ಸುದ್ದಿ  /  ಕರ್ನಾಟಕ  /  ಮೊದಲ ಹಂತದ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯ; ಬೆಂಗಳೂರು ಗ್ರಾಮಾಂತರ, ಮೈಸೂರು ಕ್ಷೇತ್ರದ ಮತದಾನ ಸಂಪೂರ್ಣ ವೆಬ್ ಕಾಸ್ಟ್

ಮೊದಲ ಹಂತದ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯ; ಬೆಂಗಳೂರು ಗ್ರಾಮಾಂತರ, ಮೈಸೂರು ಕ್ಷೇತ್ರದ ಮತದಾನ ಸಂಪೂರ್ಣ ವೆಬ್ ಕಾಸ್ಟ್

ಲೋಕಸಭೆ ಚುನಾವಣೆಗೆ ಕರ್ನಾಟಕದ ಮೊದಲ ಹಂತಕ್ಕೆ ಬಹಿರಂಗ ಪ್ರಚಾರ ಮುಗಿದಿದ್ದು. ಮತದಾನಕ್ಕೆ ಚುನಾವಣೆ ಆಯೋಗದಿಂದ ಸಿದ್ದತೆ ಮಾಡಿಕೊಳ್ಳಲಾಗಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ  ಮನೋಜ್‌ ಕುಮಾರ್‌ ಮೀನಾ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ.

ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಏಪ್ರಿಲ್ 26ರಂದು ಮತದಾನ ನಡೆಯಲಿದ್ದು ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಾಜ್ಯದ ಮಟ್ಟಿಗೆ ಮೊದಲ ಹಂತದ ಚುನಾವಣೆಯ ವಿಶೇಷ ಎಂದರೆ ಹೈ ವೋಲ್ಟೇಜ್ ಕ್ಷೇತ್ರಗಳು ಎಂದು ಬಿಂಬಿಸಲ್ಪಟ್ಟಿರುವ ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಕ್ಷೇತ್ರದ ಮತದಾನವನ್ನು ಸಂಪೂರ್ಣವಾಗಿ ವೆಬ್ ಕಾಸ್ಟ್ ಮಾಡಲಾಗುತ್ತದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಚುನಾವಣಾ ಸಿದ್ಧತೆಗಳ ವಿವರ ಒದಗಿಸಿದರು.

ಜೊತೆಗೆ ಇದುವರೆಗೂ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ವಿರುದ್ಧ 189 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಲ್ಲ 2,829 ಮತಗಟ್ಟೆಗಳನ್ನು ಶೇ. ನೂರರಷ್ಟು ವೆಬ್ ಕಾಸ್ಟ್ ಮಾಡಲಾಗುತ್ತದೆ. ಮತಗಟ್ಟೆ ಅಧಿಕಾರಿಗಳು ಮತ್ತು ವೀಕ್ಷಕರ ಮನವಿ ಬೇರೆಗೆ ಈ ಕ್ರಮ ಕೈಗೊಂಡಿದ್ದು, ಈ ಕ್ಷೇತ್ರಕ್ಕೆ ಎರಡರಷ್ಟು ಪಡೆಗಳನ್ನು ನಿಯೋಜಿಸಲಾಗುತ್ತದೆ.

ವೆಬ್ ಕಾಸ್ಟ್ ಅನ್ನು ಸರಳವಾಗಿ ಹೇಳುವುದಾದರೆ ಎಲ್ಲಾ ಮತಗಟ್ಟೆಗಳ ಮತದಾನ ಪ್ರಕ್ರಿಯೆಯನ್ನು ಚಿತ್ರೀಕರಿಸಿ ಅಂತರ್ಜಾಲದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದರಿಂದ ಮತಗಟ್ಟೆಗಳಲ್ಲಿ ಅಕ್ರಮಗಳು ನಡೆಯಲು ಅವಕಾಶಗಳಿರುವುದಿಲ್ಲ. ಏಪ್ರಿಲ್ 22ರಿಂದಲೇ ಕೇಂದ್ರ ಅರೆ ಮಿಲಿಟರಿ ಪಡೆಗಳ ಏಳು ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಮೊದಲ ಹಂತದಲ್ಲಿ ಚುನಾವಣೆ ನಡೆಯುವ 14 ಕ್ಷೇತ್ರಗಳು

ಮೈಸೂರು, ಚಾಮರಾಜನಗರ (ಎಸ್ ಸಿ), ಮಂಡ್ಯ, ಉಡುಪಿ ಚಿಕ್ಕಮಗಳೂರು, ತುಮಕೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್ ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ಕೋಲಾರ (ಎಸ್ ಸಿ)

ಮೊದಲ ಹಂತದಲ್ಲಿ ಮತದಾನ ನಡೆಯುವ 14 ಕ್ಷೇತ್ರಗಳಲ್ಲಿ 2.88,19,342 ಅರ್ಹ ಮತದಾರರು ಇದ್ದಾರೆ. ಇವರಲ್ಲಿ 1,44,28,099 ಪುರುಷ,1,43,88,176 ಮಹಿಳಾ ಮತ್ತು 3,067 ತೃತೀಯ ಲಿಂಗಿ ಮತದಾರರಿದ್ದಾರೆ.

ಒಟ್ಟು 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1.40 ಲಕ್ಷ ಮತಗಟ್ಟೆ ಅಧಿಕಾರಿಗಳು, 5 ಸಾವಿರ ಮೈಕ್ರೋ ವೀಕ್ಷಕರು, 50 ಸಾವಿರ ಪೊಲೀಸರು, 65 ಸಿ ಆರ್ ಪಿ ಎಫ್ ತೂಕಡಿಗಳು ವಿವಿಧ ರಾಜ್ಯಗಳ ಮೀಸಲು ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ಮತದಾರರ ಸಂಖ್ಯೆಯನ್ನು ಹೆಚ್ಚಿಸಲು ನಗರ ಪ್ರದೇಶದ ಬಿಬಿಎಂಪಿ ವ್ಯಾಪ್ತಿಯ 28 ಮತ್ತು ಮೈಸೂರಿನ 3, ಮಂಗಳೂರು ಮತ್ತು ತುಮಕೂರಿನ ತಲಾ ಒಂದು ಕ್ಷೇತ್ರ ಸೇರಿದಂತೆ 33 ವಿಧಾನಸಭಾ ಕ್ಷೇತ್ರಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಬಿಸಿಲಿನ ಝಳಕ್ಕೆ ಹೆದರಿ ಮತದಾನ ಕಡಿಮೆಯಾಗುವುದನ್ನು ತಪ್ಪಿಸಲು ಆಯೋಗ ಹಲವಾರು ಕ್ರಮಗಳನ್ನು ಕೈಗೊಳ್ಳಲಿದೆ. ಮತಗಟ್ಟೆಗಳಲ್ಲಿ ನೆರಳಿಗಾಗಿ ಶಾಮಿಯಾನ, ಕುರ್ಚಿಗಳ ವ್ಯವಸ್ಥೆ ಮಾಡಿದೆ. ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ನಿರ್ಜಲೀಕರಣ ಹಾಗೂ ಸನ್ ಸ್ಟ್ರೋಕ್ ಸಂಬಂಧ ವೈದ್ಯಕೀಯ ಕಿಟ್ ವ್ಯವಸ್ಥೆಯನ್ನು ಮಾಡಲಾಗಿದೆ.

ಪ್ರಚಾರ ಅಂತ್ಯ

ಬುಧವಾರ ಸಂಜೆ 6 ಗಂಟೆಯಿಂದಲೇ ಬಹಿರಂಗ ಪ್ರಚಾರ ಕೊನೆಗೊಂಡಿದ್ದು, ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಕೈಗೊಂಡಿದ್ದಾರೆ.

ಬುಧವಾರ ಸಂಜೆಯಿಂದ ಮಧ್ಯ ಮಾರಾಟ ನಿಷೇಧ ಮಾಡಲಾಗಿದೆ. ಮತದಾರ ಅಲ್ಲದೇ ಇರುವವರು ಕ್ಷೇತ್ರ ಬಿಟ್ಟು ಹೋಗಲು ಸೂಚನೆ ನೀಡಲಾಗಿದೆ.

ಮಾಧ್ಯಮಗಳು ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ. ರಾಜಕೀಯ ಪಕ್ಷಗಳು ಜಾಹಿರಾತು ನೀಡುವಂತಿಲ್ಲ. ಮತಗಟ್ಟೆಯಿಂದ 200 ಮೀಟರ್ ದೂರದಲ್ಲಿ ಏಜೆಂಟ್ ಗಳು ಕೂರಬಹುದು. ಆದರೆ ಅಭ್ಯರ್ಥಿ, ಪಕ್ಷವನ್ನು ಸೂಚಿಸುವ ಚೀಟಿಗಳನ್ನು ವಿತರಿಸುವ ಹಾಗಿಲ್ಲ. ಯಾವುದೇ ಗುರುತಿನ ಚೀಟಿ ತೋರಿಸಿ ಮತ ಚಲಾಯಿಸಬಹುದು. ಈ ಬಾರಿ ಎಡಗೈ 4ನೇ ಬೆರಳಿಗೆ ಶಾಹಿ ಹಾಕಲಾಗುತ್ತದೆ.

(ವರದಿ: ಎಚ್. ಮಾರುತಿ,ಬೆಂಗಳೂರು)

IPL_Entry_Point