Madikeri Dasara 2024: ಮಡಿಕೇರಿ ದಸರಾಕ್ಕೂ ಇಂದೇ ಚಾಲನೆ; ಶತಮಾನದಷ್ಟು ಹಳೆಯದಾದ ಕೊಡಗಿನ ಕರಗ ಉತ್ಸವ ಹೀಗಿರಲಿದೆ
ಕನ್ನಡ ಸುದ್ದಿ  /  ಕರ್ನಾಟಕ  /  Madikeri Dasara 2024: ಮಡಿಕೇರಿ ದಸರಾಕ್ಕೂ ಇಂದೇ ಚಾಲನೆ; ಶತಮಾನದಷ್ಟು ಹಳೆಯದಾದ ಕೊಡಗಿನ ಕರಗ ಉತ್ಸವ ಹೀಗಿರಲಿದೆ

Madikeri Dasara 2024: ಮಡಿಕೇರಿ ದಸರಾಕ್ಕೂ ಇಂದೇ ಚಾಲನೆ; ಶತಮಾನದಷ್ಟು ಹಳೆಯದಾದ ಕೊಡಗಿನ ಕರಗ ಉತ್ಸವ ಹೀಗಿರಲಿದೆ

ಮಡಿಕೇರಿ ದಸರಾಕ್ಕೆ ತನ್ನದೇ ಆದ ಮಹತ್ವವಿದೆ. ದಸರಾ ವೇಳೆ ಕರಗ ಮಹೋತ್ಸವ ಹಾಗೂ ನಾಲ್ಕು ದೇವತೆಯರ ಮೆರವಣಿಗೆ ಇಲ್ಲಿನ ವಿಶೇಷ. ಈ ಕುರಿತ ಮಾಹಿತಿ ಇಲ್ಲಿದೆ.

ಮಡಿಕೇರಿ ದಸರಾ ಎಂದರೆ ಕರಗದ ಮೆರವಣಿಗೆ.
ಮಡಿಕೇರಿ ದಸರಾ ಎಂದರೆ ಕರಗದ ಮೆರವಣಿಗೆ.

ಮಡಿಕೇರಿ: ಮಡಿಕೇರಿ ದಸರಾಕ್ಕೂ ಗುರುವಾರವೇ ಚಾಲನೆ ದೊರಕಲಿದೆ. ಗುರುವಾರದಿಂದ ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.. ಈ ಬಾರಿಯ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯು ಸಿದ್ಧಗೊಳ್ಳುತ್ತಿದ್ದು, ಹತ್ತು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಡಿಕೇರಿ ದಸರಾ ಎಂದರೆ ಅದು ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಉತ್ಸವ. ಮೆರವಣಿಗೆಯ ಸಂಭ್ರಮ. ನಗರದ ಇತಿಹಾಸ ಪ್ರಸಿದ್ದ 4 ಶಕ್ತಿ ದೇವತೆಗಳ ಕರಗಗಳನ್ನು ಅಕ್ಟೋಬರ್ 03 ರಂದು ಸಂಜೆ 5 ಗಂಟೆಗೆ ಮಹದೇವಪೇಟೆಯ ಪಂಪಿನಕೆರೆ ಬಳಿ ನಗರ ದಸರಾ ಸಮಿತಿ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಗರ ಪ್ರದಕ್ಷಿಣೆಗೆ ಕರಗಗಳನ್ನು ಬರಮಾಡಿಕೊಂಡು ಮಡಿಕೇರಿ ದಸರಾಗೆ ಚಾಲನೆ ದೊರೆಯಲಿದೆ.

ಮಡಿಕೇರಿ ಪಂಪಿನ ಕೆರೆಯಲ್ಲಿ ಮಡಿಕೇರಿ ಶಕ್ತಿ ದೇವತೆಗಳಾದ ಕಂಚಿ ಕಾಮಾಕ್ಷಿಯಮ್ಮ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಚೌಟಿ ಮಾರಿಯಮ್ಮ ದೇವತೆಗಳ ಕರಗ ಉತ್ಸವಕ್ಕೆ ಕೊಡಗು ಉಸ್ತುವಾರಿ ಸಚಿವ ಬೋಸರಾಜು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡುವರು. ನಾಲ್ಕು ಶಕ್ತಿ ದೇವತೆಗಳ ಕರಗಳಿಗೆ ದೇವತೆಗಳ ಮುಖವಾಡಗಳನ್ನು ಧರಿಸಿ ಹೂವುಗಳಿಂದ ಅದ್ಭುತವಾಗಿ ಅಲಂಕಾರ ಮಾಡುವುದು ಇದರ ವಿಶೇಷ.ಬಳಿಕ ಕರಗ ಪ್ರದಕ್ಷಿಣೆ ನಡೆಯಲಿದೆ ಎನ್ನುವುದು ನಗರ ದಸರಾ ಸಮಿತಿಯ ಗೌರವ ಕಾರ್ಯದರ್ಶಿ ಹಾಗೂ ನಗರಸಭೆ ಪೌರಾಯುಕ್ತರಾದ ರಮೇಶ್ ನೀಡಿರುವ ಮಾಹಿತಿ.

ಹೇಗಿರಲಿದೆ ಅಲಂಕಾರ

ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ, ಕುಂದೂರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ಮತ್ತು ಕೋಟೆ ಮಾರಿಯಮ್ಮ. ಈ ಪ್ರತಿಯೊಂದು ಮಾರಿಯಮ್ಮ ದೇವಾಲಯವು ಕರಗವನ್ನು ಹೊಂದಿದೆ, ಇದು ನವರಾತ್ರಿಯ ಮೊದಲ ದಿನದಂದು ಪ್ರಾರಂಭವಾಗುತ್ತದೆ. ಈ ನಾಲ್ಕು ಕರಗಗಳು ಪಟ್ಟಣದ ಶಕ್ತಿ ದೇವತೆಗಳನ್ನು ಪ್ರತಿನಿಧಿಸುತ್ತವೆ. ಈ ವೇಳೆ ಎಲ್ಲಾ ದೇವಾಲಯಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ ಮತ್ತು ಈ 10 ದಿನಗಳಲ್ಲಿ ಇಡೀ ಮಡಿಕೇರಿ ಹೆಚ್ಚು ಸುಂದರವಾದ ಸನ್ನಿವೇಶ ನೋಡುವುದೇ ಚಂದ.

120 ವರ್ಷಗಳ ಇತಿಹಾಸ ಹೊಂದಿರುವ ಮಡಿಕೇರಿ ದಸರಾ ಮೈಸೂರು ದಸರಾದಷ್ಟು ಜನಪ್ರಿಯವಾಗಿದೆ. ಮಡಿಕೇರಿ ದಸರಾ ವಿಶಿಷ್ಟ ಆಚರಣೆ ಎಂದು ಗುರುತಿಸಲ್ಪಟ್ಟಿದೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಇದು ಅಂತಿಮ ದಿನದಂದು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. 40 ವರ್ಷಗಳ ಹಿಂದೆ ನಾಲ್ಕು ಮಂಟಪಗಳಿದ್ದ ಮಡಿಕೇರಿ ದಸರಾದಲ್ಲಿ ಈಗ 10 ಮಂಟಪಗಳು ಮೆರವಣಿಗೆಯಲ್ಲಿದ್ದು, ದಸರಾದ ಕೊನೆಯ ದಿನವಾದ ವಿಜಯದಶಮಿಯಂದು ಎಲ್ಲಾ ಮಂಟಪಗಳನ್ನು ಪ್ರತಿ ದೇವಸ್ಥಾನದ ಸಮಿತಿಯಿಂದ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಗಂಧದಲ್ಲಿ ಸಮಾವೇಶ ಮಾಡಲಾಗುತ್ತದೆ. ಪ್ರತಿ ವರ್ಷವೂ ಮಡಿಕೇರಿ ದಸರಾ ಹೊಸತನಕ್ಕ ತೆರೆದುಕೊಳ್ಳುತ್ತಿದೆ.

ಕರಗ ನೃತ್ಯದ ನೋಟ

ನವರಾತ್ರಿಯ ಮೊದಲ ದಿನದಂದು, ಈ ನಾಲ್ಕು ದೇವಾಲಯಗಳ ಅರ್ಚಕರು ಕರಗವನ್ನು ನಿರ್ಮಿಸಲು ಬೇಕಾದ ಸಾಧನಗಳನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಮಡಿಕೇರಿಯ ಪಂಪಿನ ಕೆರೆ ಎಂಬ ಸ್ಥಳಕ್ಕೆ ಹೋಗುತ್ತಾರೆ. ಮಡಿಕೇರಿಯ ಪಂಪಿನ ಕೆರೆಯಲ್ಲಿ ನಡೆಯುವ ಈ ಪೂಜೆಯಲ್ಲಿ ದೇವಸ್ಥಾನ ಸಮಿತಿಯ ಸದಸ್ಯರು ಕೂಡ ಸೇರುತ್ತಾರೆ. ಈ ಕರಗಗಳ ಜೊತೆಯಲ್ಲಿ ಕೊಡಗಿನ ಒಂದು ರೀತಿಯ ಬ್ಯಾಂಡ್ ವೋಲಗದತಂಡವೂ ಇರುತ್ತದೆ. ವೋಲಗವು ಕರಗ ಬರುವ ಸೂಚನೆಯನ್ನು ಜನರಿಗೆ ನೀಡುತ್ತದೆ. ಕರಗ ನೃತ್ಯಕ್ಕೆ ಲಯವನ್ನು ನೀಡುತ್ತದೆ. ಕರಗ ಎತ್ತುವ ಪೂಜಾರಿ ಹಳದಿ ಬಣ್ಣದ ಕಚ್ಚೆ ತೊಟ್ಟಿರುತ್ತಾರೆ. ಆತ ಒಂದು ಕೈಯಲ್ಲಿ ಚಾಕು ಮತ್ತು ಇನ್ನೊಂದು ಕೈಯಲ್ಲಿ ಮರದ ಕೋಲನ್ನು ಹಿಡಿದಿರುತ್ತಾರೆ. ಈ ಅರ್ಚಕರು ಮಲ್ಲಿಗೆ, ಕನಕಾಂಬರ, ಸೇವಂತಿಗೆ ಮುಂತಾದ ಹೂವುಗಳನ್ನು ಬಳಸಿ ಕರಗವನ್ನು ನಿರ್ಮಿಸಲು ಪ್ರಾರಂಭಿಸುತ್ತಾರೆ.

ಕರಗವನ್ನು ನಿರ್ಮಿಸಿದ ನಂತರ ಈ ನಾಲ್ಕು ಕರಗಗಳಿಗೆ ಪೂಜೆ ನಡೆಯಲಿದೆ. ದೇವಾಲಯದ ಅರ್ಚಕರು ಈ ಪೂಜೆಯ ನಂತರ ಕರಗವನ್ನು ತಮ್ಮ ತಲೆಯ ಮೇಲೆ ತೆಗೆದುಕೊಂಡು ತಮ್ಮ ದೇವಾಲಯಗಳ ಕಡೆಗೆ ಹೋಗುತ್ತಾರೆ. ಹೀಗೆ ಅಣಿಯಾದ ಕರಗ ನಗರದಾದ್ಯಂತ ಪ್ರದಕ್ಷಿಣಿ ಹಾಕಲಾಗಿದೆ. ಹೀಗೆ ಮನೆ ಎದುರು ಬರುವ ಕರಗಕ್ಕೆ ಮಡಿಕೇರಿ ಜನತೆ ಪೂಜೆ ಸಲ್ಲಿಸುತ್ತಾರೆ. ಆಯುಧ ಪೂಜೆಯವರೆಗೂ ಈ ಕರಗಗಳು ಮಡಿಕೇರಿಯ ಪ್ರತಿಯೊಂದು ಮನೆಗೂ ಭೇಟಿ ನೀಡಿ ಪೂಜೆ ಸಲ್ಲಿಸುವುದು ಒಟ್ಟಾರೆ ಆಚರಣೆಯ ಭಾಗ.

ತಾತ್ಕಾಲಿಕವಾಗಿ ವಾಹನ ನಿಲುಗಡೆ ನಿಷೇಧ

ಅ.3 ರಂದು ಮಡಿಕೇರಿಯಲ್ಲಿ ನಾಡ ಹಬ್ಬ ದಸರಾ ಪ್ರಯುಕ್ತ ವಿಶ್ವ ಪ್ರಖ್ಯಾತ 4 ಶಕ್ತಿ ದೇವತೆಗಳ ಕರಗ ಮಹೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಈ ಕರಗ ಮಹೋತ್ಸವಕ್ಕೆ ಅತೀ ಗಣ್ಯರು ಸೇರಿದಂತೆ ಸಾವಿರಾರು ಭಕ್ತಾದಿಗಳು / ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ, ಈ ಸಂಬಂಧ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮತ್ತು ವಾಹನ ಸುಗಮ ಸಂಚಾರಕ್ಕೆ ಅನವು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ2024ರ ಅಕ್ಟೋಬರ್‌ ಬೆಳಿಗ್ಗೆಯಿಂದಲೇ ಪಂಪ್ ಕೆರೆಯಿಂದ ( ಕರಗ ಹೋರಡುವ ಸ್ಥಳ) ಎವಿ ಶಾಲೆ ಜಂಕ್ಷನ್ ವರೆಗೆ ರಸ್ತೆಯ ಎರಡು ಬದಿಯಲ್ಲಿ ಯಾವುದೇ ವಾಹನ ನಿಲುಗಡೆಯನ್ನು ತಾತ್ಕಾಲಿಕವಾಗಿ ಸಂಪೂರ್ಣ ನಿಷೇಧಿಸಲಾಗಿದೆ. ಹಾಗೂ ಎವಿ ಶಾಲಾ ಜಂಕ್ಷನ್ ನಿಂದ ಇಂದಿರಾಗಾಂಧಿ ವೃತ್ತದವರಗೆ ರಸ್ತೆಯ ಒಂದು ಭಾಗದಲ್ಲಿ ಅಂದರೆ ರಸ್ತೆಯ ಎಡ ಭಾಗದಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ನಂತರದಲ್ಲಿ ಇಂದಿರಾಗಾಂಧಿ ವೃತ್ತದಿಂದ ಕಾಲೇಜು ರಸ್ತೆ ಮಾರ್ಗವಾಗಿ ರಾಮಮಂದಿರ ದೇವಾಲಯದವರೆಗೆ ಸಂಜೆ 6 ಗಂಟೆಯ ನಂತರ ರಸ್ತೆಯ ಎರಡು ಭಾಗದಲ್ಲಿಯೂ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮಡಿಕೇರಿ ನಗರ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

Whats_app_banner