Independence day 2024: ಕಸದ ಗಾಡಿ ಓಡಿಸಿದ್ದ ದಕ್ಷಿಣ ಕನ್ನಡದ ಗ್ರಾಪಂ ಅಧ್ಯಕ್ಷೆಗೆ ದೆಹಲಿ ಕೆಂಪುಕೋಟೆ ಗೌರವ ; ಗಮನ ಸೆಳೆದ ನೆಫೀಸಾ ಕಾಯಕ-mangalore news dakshina kannada gp president nephisa participate in delhi red fort independence day 2024 celebration hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Independence Day 2024: ಕಸದ ಗಾಡಿ ಓಡಿಸಿದ್ದ ದಕ್ಷಿಣ ಕನ್ನಡದ ಗ್ರಾಪಂ ಅಧ್ಯಕ್ಷೆಗೆ ದೆಹಲಿ ಕೆಂಪುಕೋಟೆ ಗೌರವ ; ಗಮನ ಸೆಳೆದ ನೆಫೀಸಾ ಕಾಯಕ

Independence day 2024: ಕಸದ ಗಾಡಿ ಓಡಿಸಿದ್ದ ದಕ್ಷಿಣ ಕನ್ನಡದ ಗ್ರಾಪಂ ಅಧ್ಯಕ್ಷೆಗೆ ದೆಹಲಿ ಕೆಂಪುಕೋಟೆ ಗೌರವ ; ಗಮನ ಸೆಳೆದ ನೆಫೀಸಾ ಕಾಯಕ

Mangalore News ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಪಂ ಪಂಚಾಯತಿ ಅಧ್ಯಕ್ಷೆ ನೆಫೀಸಾ ಅವರು ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ (Independence day 2024) ಭಾಗಿಯಾಗಲು ಆಹ್ವಾನ ಪಡೆದಿದ್ದಾರೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ದೆಹಲಿ ಕೆಂಪುಕೋಟೆ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಲಿರುವ ದಕ್ಷಿಣ ಕನ್ನಡದ ನೆಫೀಸಾ.
ದೆಹಲಿ ಕೆಂಪುಕೋಟೆ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಲಿರುವ ದಕ್ಷಿಣ ಕನ್ನಡದ ನೆಫೀಸಾ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೆಫೀಸಾ ಸೇರಿದಂತೆ ರಾಜ್ಯದ ಒಟ್ಟು 6 ಮಂದಿ ಗ್ರಾಪಂ ಅಧ್ಯಕ್ಷರಿಗೆ ನವದೆಹಲಿಯ ಕೆಂಪುಕೋಟೆಯಲ್ಲಿ ಆ.15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲು ಅವಕಾಶ ದೊರಕಿದೆ.ಕರ್ನಾಟಕದ 6 ಪಂಚಾಯತ್ ಮಹಿಳಾ ಅಧ್ಯಕ್ಷರನ್ನು ಆಹ್ವಾನಿಸಲಾಗಿದ್ದು, ದ.ಕ.ಜಿಲ್ಲೆಯ ಪೆರುವಾಯಿ ಗ್ರಾಮ ಪಂ. ಅಧ್ಯಕ್ಷೆ ನೆಫೀಸಾ ಅವರಲ್ಲಿ ಒಬ್ಬರು. ಪೆರುವಾಯಿ ಗ್ರಾ.ಪಂ. ಅಧ್ಯಕ್ಷರಾಗಿ ಕಳೆದ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ನೆಫೀಸಾ, ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದರು.

ತ್ಯಾಜ್ಯ ಸಂಗ್ರಹ ವಾಹನ ಚಲಾಯಿಸಿ ಸುದ್ದಿಯಾಗಿದ್ದರು

ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ವಾಹನ ಚಲಾಯಿಸಿ ಕಸ ಮತ್ತು ತ್ಯಾಜ್ಯ ಸಂಗ್ರಹ ಮಾಡಿ, ಸೂಕ್ತ ಕ್ರಮಕೈಗೊಂಡ ಬಗ್ಗೆ ವಿಶೇಷವಾಗಿ ಗುರುತಿಸಲ್ಪಟ್ಟಿದ್ದರು. ಅವರ ಈ ಸೇವೆಯನ್ನು ಗುರುತಿಸಿ, ವರ್ಲ್ಡ್ ಯೂತ್ ಸ್ಕಿಲ್ ಡೇ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಗೌರವಿಸಿದ್ದರು. ಪಂಚಾಯತ್ ವ್ಯಾಪ್ತಿಯ ರಸ್ತೆ, ಎಡಬ್ಲ್ಯೂಸಿ, ನರೇಗ ಇತ್ಯಾದಿ ಅಭಿವೃದ್ಧಿ ಯೋಜನೆಗಳಲ್ಲಿ ಆಕೆ ಶ್ರಮಿಸಿದ್ದಾರೆ. ನೆಫೀಸಾ ಅವರು ಅನೇಕ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ಉದಾರವಾಗಿ ನೀಡಿದ್ದರು. ರಾಜ್ಯ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಡೆವೆಲಪ್‌ಮೆಂಟ್ ಇನ್ ಸಾಲಿಡ್ ವೇಸ್ಟ್ ಮೆನೇಜ್‌ಮೆಂಟ್‌ನ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.

ಇದೀಗ ಹಳ್ಳಿಯಿಂದ ದೆಹಲಿಗೆ ತೆರಳಿರುವ ನೆಫೀಸಾ, ದ.ಕ.ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಅಧ್ಯಕ್ಷೆ. ಪೆರುವಾಯಿ ಗ್ರಾ.ಪಂ. ಸದಸ್ಯರಾದ ಬಳಿಕ ಹಂತ ಹಂತವಾಗಿ ಉಪಾಧ್ಯಕ್ಷರಾಗಿ, ರಾಜ್ಯ ರಾಜಧಾನಿಯಲ್ಲಿ ಗುರುತಿಸಿ, ಗೌರವಿಸಲ್ಪಟ್ಟು, ಅಧ್ಯಕ್ಷರಾಗಿ ಇದೀಗ ದೇಶದ ರಾಜಧಾನಿಗೆ ತೆರಳುವ ಯೋಗ ಪಡೆದಿದ್ದಾರೆ.

ರಾಜ್ಯದ ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲೂ ಸ್ವಚ್ಛ ಸಂಕೀರ್ಣವನ್ನು ನಿರ್ಮಿಸಿ ವಾಹನದ ಮೂಲಕ ತ್ಯಾಜ್ಯ ಸಂಗ್ರಹಣಾ ಕಾರ್ಯ ಕಡ್ಡಾಯಗೊಳಿಸಲಾಗುತ್ತಿದ್ದು, ಪೆರುವಾಯಿಯಲ್ಲಿ ಸ್ವತಃ ವಾಹನ ಚಲಾಯಿಸುವ ಮೂಲಕ ಗಮನ ಸೆಳೆದಿದ್ದರು ನೆಫೀಸಾ.

ನಿರಂತರ ಚಟುವಟಿಕೆ

ಅವರು ಉಪಾಧ್ಯಕ್ಷರಾಗಿದ್ದ ಸಂದರ್ಭ, ಸ್ವಚ್ಛತೆಗಾಗಿ ಕಸ ಕೊಂಡೊಯ್ಯುವ ವಾಹನವನ್ನು ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಮನೆ, ಅಂಗಡಿಗಳಿಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಕಾರ್ಯಕ್ಕೆ ಪ್ರೇರಣೆ ನೀಡುವ ಮೂಲಕ ಇತರರಿಗೂ ಮಾದರಿ ಆಗಿದ್ದರು.

ಪಂಚಾಯಿತಿಯಲ್ಲಿ ಸುಮಾರು 600 ಮನೆಗಳಿದ್ದು, ಪ್ರತಿ ಮನೆಯಿಂದ ವಾರಕ್ಕೆ ಎರಡು ಬಾರಿಯಾದರೂ ತ್ಯಾಜ್ಯ ಸಂಗ್ರಹವಾಗುವಂತೆ ಮಾರ್ಗಸೂಚಿ ಸಿದ್ಧಪಡಿಸಿದ್ದರು. ಗ್ರಾಮದ ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕು ಎಂಬ ಉದ್ದೇಶದಿಂದ ಮಹಿಳಾ ಚಾಲಕರನ್ನು ನೇಮಿಸಲು ತೀರ್ಮಾನಿಸಲಾಗಿತ್ತು. ಅದರಂತೆ ನಿಯೋಜಿತಳಾಗಿರುವ ಚಾಲಕಿ ಸಮರ್ಪಕ ತರಬೇತಿ ಪಡೆದಿರಲಿಲ್ಲ. ಈ ಸಂದರ್ಭ ಡ್ರೈವಿಂಗ್ ನನಗೆ ಗೊತ್ತಿರುವ ಕಾರಣ ನಾನೇ ಏಕೆ ಇದನ್ನು ನಿರ್ವಹಿಸಬಾರದು ಎಂದು ಯೋಚಿಸಿದ ನೆಫೀಸಾ, ಪಿಡಿಒ ಮತ್ತು ಇತರ ಸದಸ್ಯರ ಪ್ರೋತ್ಸಾಹದಿಂದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.

ಪ್ರೋತ್ಸಾಹಕದಾಯಕ

ಈ ರೀತಿ ಗೌರವ ಸಿಕ್ಕಿರುವುದಕ್ಕೆ ಅವರಿಗೆ ಸಂತಸವೂ ಆಗಿದೆ.ಒಳ್ಳೆಯ ಕೆಲಸ ಮಾಡಿದರೆ, ಮಾದರಿಯಾಗಿ ಏನನ್ನಾದರೂ ಮಾಡಿದರೆ ಸಮಾಜ ಮಾತ್ರವಲ್ಲದೇ ಸರ್ಕಾರಗಳು ಗುರುತಿಸುತ್ತವೆ. ಇಂತಹ ಸೇವೆಯನ್ನು ಮುಂದುವರೆಸಲು ಇದು ಪ್ರೋತ್ಸಾಹಕ ಎನ್ನುವುದು ಅವರ ಬಂಟ್ವಾಳ ತಾಲ್ಲೂಕು ಪೆರುವೈ ಗ್ರಾಪಂ ಅಧ್ಯಕ್ಷರಾಗಿರುವ ನೆಫೀಸಾ ಅವರ ಸಂತಸದ ನುಡಿ.

ಆಯ್ಕೆಯಾದ ಇತರರು

ಕರ್ನಾಟಕದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಗೆದರೆ ಗ್ರಾಪಂ ಅಧ್ಯಕ್ಷ ಜಿ.ಲಕ್ಷ್ಮೀ ನರಸಮ್ಮ, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಕಮಟನೂರು ಗ್ರಾಪಂ ಅಧ್ಯಕ್ಷೆ ರಾಜೇಶವರಿ ವೀರಭದ್ರ ಗೋತಿ, ಕಲಬುರಗಿ ಜಿಲ್ಲೆ ತಾಜ್‌ ಸುಲ್ತಾನ್‌ ಪುರ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ, ಕೊಡಗು ಜಿಲ್ಲೆ ಕಾನೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ಪಿ.ಟಿ.ದೇವಿ, ಚಾಮರಾಜನಗರ ಜಿಲ್ಲೆ ಅಟ್ಟುಗೂಳಿಪುರ ಗ್ರಾಪಂ ಅಧ್ಯಕ್ಷೆ ಶಿವಮ್ಮ ದೆಹಲಿ ಕೆಂಪುಕೋಟೆ ಕಾರ್ಯಕ್ರಮಕ್ಕೆ ಆಯ್ಕೆಯಾದ ಇತರರು.

ವರದಿ: ಹರೀಶ ಮಾಂಬಾಡಿ, ಮಂಗಳೂರು