ಕನ್ನಡ ಸುದ್ದಿ  /  Karnataka  /  Mangaluru Crime News Bjp Leader Lalitha Sundar Grandson Died In Road Accident In Mangaluru Nanthoor Accident Hsm

ಮಂಗಳೂರಲ್ಲಿ ಭೀಕರ ಅಪಘಾತ: ಡಿವೈಡರ್ ಮೇಲೇರಿ ತಡೆಬೇಲಿಗೆ ಸಿಲುಕಿಕೊಂಡ ಕಾರು; ಬಿಜೆಪಿ ನಾಯಕಿಯ ಮೊಮ್ಮಗ ಸಾವು

Road Accident in Mangaluru: ಹಿರಿಯ ಬಿಜೆಪಿ ನಾಯಕಿ ಲಲಿತಾ ಸುಂದರ್ ಅವರ ಮೊಮ್ಮಗ, ತೊಕ್ಕೊಟ್ಟು ನಿವಾಸಿ ಶಮಿತ್ ಶೆಟ್ಟಿ (29) ಮಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. (ವರದಿ: ಹರೀಶ ಮಾಂಬಾಡಿ)

ಮೃತ ಶಮಿತ್ ಶೆಟ್ಟಿ (ಬಲಚಿತ್ರ)
ಮೃತ ಶಮಿತ್ ಶೆಟ್ಟಿ (ಬಲಚಿತ್ರ)

ಮಂಗಳೂರು: ಮಂಗಳೂರಿನ ನಂತೂರಿನಲ್ಲಿ ಶುಕ್ರವಾರ (ಮಾರ್ಚ್​ 22) ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಬಿಜೆಪಿ ನಾಯಕಿಯೊಬ್ಬರ ಮೊಮ್ಮಗ ಸಾವನ್ನಪ್ಪಿದ್ದಾರೆ. ನಿಯಂತ್ರಣ ತಪ್ಪಿದ ಕಾರೊಂದು ಹೆದ್ದಾರಿಯ ಡಿವೈಡರ್ ಮೇಲೆ ಹತ್ತಿದ ಪರಿಣಾಮ ಘಟನೆ ನಡೆದಿದೆ. ಹಿರಿಯ ಬಿಜೆಪಿ ನಾಯಕಿ ಲಲಿತಾ ಸುಂದರ್ ಅವರ ಮೊಮ್ಮಗ, ತೊಕ್ಕೊಟ್ಟು ನಿವಾಸಿ ಶಮಿತ್ ಶೆಟ್ಟಿ (29) ಮೃತಪಟ್ಟ ಯುವಕ. ಶಮಿತ್ ಶುಕ್ರವಾರ ರಾತ್ರಿ ಮಂಗಳೂರಿನ ಸ್ನೇಹಿತನ ಮನೆಯಲ್ಲಿ ನಡೆದಿದ್ದ ದೈವದ ಕೋಲದಲ್ಲಿ ಭಾಗವಹಿಸಿ ತೊಕ್ಕೊಟ್ಟಿನ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ನಂತೂರಿನಲ್ಲಿ ನಿಯಂತ್ರಣ ತಪ್ಪಿದ ಕಾರು ಡಿವೈಡ‌ರ್ ಮೇಲೆ ಮೇಲೇರಿದೆ. ಪರಿಣಾಮ ಕಬ್ಬಿಣದ ತಡೆಬೇಲಿ ಮುರಿದು ಹೋಗಿದ್ದು, ಅಪಘಾತ ಸಂಭವಿಸಿದೆ.

ಅಪಘಾತದ ಭೀಕರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ತಡೆಬೇಲಿಯ ಮೇಲೆ ಸಿಕ್ಕಿಕೊಂಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಶಮಿತ್ ಮೃತಪಟ್ಟಿದ್ದಾರೆ. ಇಂದು (ಮಾರ್ಚ್​ 23, ಶನಿವಾರ) ಬೆಳಗ್ಗೆ ಜೆಸಿಬಿ ಮೂಲಕ ಕಾರನ್ನು ತೆರವುಗೊಳಿಸಲಾಯಿತು. ಈ ಕುರಿತು ಮಂಗಳೂರಿನ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿಗಳಿಗೆ ನುಗ್ಗಿ ನಗದು, ದಿನಸಿ ಸಾಮಾಗ್ರಿ ಕಳ್ಳತನ

ಬಂಟ್ವಾಳ ತಾಲೂಕಿನ ವಿಟ್ಲ ಪೇಟೆಯ ಎರಡು ಅಂಗಡಿಗಳಿಗೆ ಮತ್ತು ವಿಟ್ಲದ ಮೇಗಿನ ಪೇಟೆಯ ಒಂದು ಅಂಗಡಿಗೆ ಶುಕ್ರವಾರ ರಾತ್ರಿ ಕಳ್ಳರು ನುಗ್ಗಿ ಹಣ ಹಾಗೂ ದಿನಸಿ ಸಾಮಾಗ್ರಿ ಕಳ್ಳತನ ಮಾಡಿರುವ ಬಗ್ಗೆ ವರದಿಯಾಗಿದೆ. ಚುನಾವಣೆ ಹಿನ್ನಲೆ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜನೆಗೊಳಿಸಲಾದ ಪೊಲೀಸರು ತಡ ರಾತ್ರಿ ಹೊತ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಕಳ್ಳರು ಸಲೀಸಾಗಿ ಬಂದು ಕಳ್ಳತನ ನಡೆಸಿ ತಪ್ಪಿಸಿಕೊಂಡಿದ್ದಾರೆ. ವಿಟ್ಲ ಪೊಲೀಸ್ ಠಾಣೆಯ ಹಿಂಭಾಗ, ವಶ ಪಡಿಸಿಕೊಂಡ ವಾಹನಗಳನ್ನು ಸಂಗ್ರಹಿಸಿಡುವ ಸ್ಥಳಕ್ಕೆ ಹೋಗುವ ರಸ್ತೆಯಲ್ಲಿರುವ ಮಹಮ್ಮದ್ ಹಾಜಿ ಮಾಲೀಕತ್ವದ ದಿನಸಿ ಅಂಗಡಿಗೆ ನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್ ನಲ್ಲಿದ್ದ ರೂ 8೦೦೦ ಮತ್ತು ಕಟ್ಟಿಟ್ಟಿದ್ದ ದಿನಸಿ ಸಾಮಾಗ್ರಿಯನ್ನು ಹೊತ್ತೊಯ್ದಿದ್ದಾರೆ.

ದಿನಸಿ ಅಂಗಡಿಯಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಕಳ್ಳರ ಕೃತ್ಯ ಹಾಗೂ ಮುಖ ಚಹರೆ ಪತ್ತೆಯಾಗಿದೆ. ಅಂಗಡಿಯ ಹಿಂಭಾಗದ ಛಾವಣಿಯ ಹಂಚು ತೆಗೆದು ಒಳ ನುಗ್ಗಿರುವ ಕಳ್ಳರು, ಕೃತ್ಯ ಎಸಗುತ್ತಿರುವುದು ಸಿಸಿಟಿವಿಯಲ್ಲಿ ಕಾಣಿಸುತ್ತಿದೆ. ದೀಪಕ್ ಬೀಡಿ ಕಂಟ್ರಾಕ್ಟರ್ ನಿಸಾರ್ ವಿ.ಎಸ್. ಅವರ ಬೀಡಿ ಬ್ರಾಂಚ್​​ನ ಹಿಂಬದಿ ಬಾಗಿಲು ಮುರಿದು, ಒಳ ನುಗ್ಗಿದ ಕಳ್ಳರು, ಅಲ್ಲಿದ್ದ ಚಿಲ್ಲರೆ ಹಣವನ್ನು ಕದ್ದಿದ್ದಾರೆ. ಬಳಿಕ ಸಮೀಪದ ಮೇಗಿನ ಪೇಟೆಯಲ್ಲಿರುವ ಫೆಲಿಸ್ ಪಾಯಸ್ ಅವರಿಗೆ ಸೇರಿದ ಕೋಳಿಯ ಅಂಗಡಿಯ ಕಿಟಕಿ ಕಿತ್ತು ತೆಗೆದು ಒಳ ನುಗ್ಗಿದ ಕಳ್ಳರು, ಅಲ್ಲಿ ಕೂಡ ಒಂದಷ್ಟು ನಗದು ದೋಚಿದ್ದಾರೆ ಎಂದು ತಿಳಿದು ಬಂದಿದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

IPL_Entry_Point