ಬೆಳ್ತಂಗಡಿ ಬಳಿ ಸಂಭವಿಸಲಿದ್ದ ವಯನಾಡ್‍ ರೀತಿಯ ದುರಂತ ತಪ್ಪಿಸಿದ ಈಶ್ವರ ಮಲ್ಪೆ: ಈ ಸಾಹಸಿಗನ ಸಮಯಪ್ರಜ್ಞೆಗೆ ಶ್ಲಾಘನೆ ವ್ಯಕ್ತಪಡಿಸಿದ ಜನ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಳ್ತಂಗಡಿ ಬಳಿ ಸಂಭವಿಸಲಿದ್ದ ವಯನಾಡ್‍ ರೀತಿಯ ದುರಂತ ತಪ್ಪಿಸಿದ ಈಶ್ವರ ಮಲ್ಪೆ: ಈ ಸಾಹಸಿಗನ ಸಮಯಪ್ರಜ್ಞೆಗೆ ಶ್ಲಾಘನೆ ವ್ಯಕ್ತಪಡಿಸಿದ ಜನ

ಬೆಳ್ತಂಗಡಿ ಬಳಿ ಸಂಭವಿಸಲಿದ್ದ ವಯನಾಡ್‍ ರೀತಿಯ ದುರಂತ ತಪ್ಪಿಸಿದ ಈಶ್ವರ ಮಲ್ಪೆ: ಈ ಸಾಹಸಿಗನ ಸಮಯಪ್ರಜ್ಞೆಗೆ ಶ್ಲಾಘನೆ ವ್ಯಕ್ತಪಡಿಸಿದ ಜನ

ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಮಹಾ ದುರಂತಕ್ಕೆ ದೇಶವೇ ಮಮ್ಮಲ ಮರುಗಿದೆ. ಸಂತ್ರಸ್ತರಿಗಾಗಿ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳೂ ನೆರವಿನ ಹಸ್ತ ಚಾಚಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಇಂಥದ್ದೇ ರೀತಿಯ ಸಂಭವಿಸಲಿದ್ದ ದುರಂತ ಸ್ವಲ್ಪದರಲ್ಲೇ ತಪ್ಪಿದೆ. ಈ ಬಗ್ಗೆ ಇಲ್ಲಿದೆ ಸ್ಟೋರಿ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ವಯನಾಡ್ ರೀತಿಯ ದುರಂತ ಸ್ವಲ್ಪದರಲ್ಲೇ ತಪ್ಪಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ವಯನಾಡ್ ರೀತಿಯ ದುರಂತ ಸ್ವಲ್ಪದರಲ್ಲೇ ತಪ್ಪಿದೆ.

ಮಂಗಳೂರು: ವಯನಾಡ್‍ನಲ್ಲಿ ನಡೆದ ದುರಂತ ಇತಿಹಾಸ ಪುಟದಲ್ಲಿ ದಾಖಲಾಗಿರುವುದು ಗೊತ್ತೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಹಾಗೂ ಕೊಡಗು ಜಿಲ್ಲೆಯಲ್ಲಿ ಮೂರು ನಾಲ್ಕು ವರ್ಷಗಳ ಹಿಂದೆ ದುರಂತದ ಘಟನೆಗಳು ನಡೆದಿರುವುದು ಇನ್ನೂ ಕಣ್ಣಿಗೆ ಕಟ್ಟಿದಂತೆಯೇ ಇದೆ. ಥೇಟ್ ಅಂಥದ್ದೇ ಒಂದು ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಾದ ಬೆಳ್ತಂಗಡಿ ತಾಲೂಕಿನ ತೋಟತ್ತಡಿ ಎಂಬಲ್ಲಿ ನಡೆಯಲಿತ್ತು. ಅದನ್ನು ತಪ್ಪಿಸಿದವರು ಸಾಹಸಿಗ, ಮುಳುಗುತಜ್ಞ ಈಶ್ವರ ಮಲ್ಪೆ.

ಬೆಳ್ತಂಗಡಿಯ ಚಾರ್ಮಾಡಿಯ ಅರಣ್ಯ ತಪ್ಪಲಿನ ತೋಟತ್ತಾಡಿ ಗ್ರಾಮದಲ್ಲಿ 27.42 ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆಗೆ ಪೆರ್ನಾಳೆ ಕೆರೆ ಎಂದೇ ಹೆಸರು. ಬ್ರಿಟೀಷರ ಕಾಲದ ಈ ಕೆರೆಗೆ ಗೇಟ್ ಕೂಡಾ ಇದೆ. ಬೇಸಿಗೆಯಲ್ಲಿ ನೀರು ಹೊರ ಹೋಗದಂತೆ ಗೇಟ್‍ಗೆ ಗೋಣಿಚೀಲಗಳನ್ನು ಹಾಕಿ ಭದ್ರ ಮಾಡಲಾಗಿತ್ತು. ಆದರೆ, ಈ ಬಾರಿ ಮಳೆಗಾಲದ ಭಾರಿ ಮಳೆಗೆ ಗೇಟ್ ತೆರೆಯದೆ ಊರವರಿಗೆ ಸಮಸ್ಯೆ ಉಂಟಾಗಿತ್ತು. ಆಗ ನೆನಪಾದವರು ಈಶ್ವರ್ ಮಲ್ಪೆ.

ಮಹಾಮಳೆಯಿಂದ ತುಂಬಿದ್ದ ಕೆರೆ

ಊರ ಜನರ ನೀರಿನ ದಾಹ ನೀಗಿಸುತ್ತಿದ್ದ ಕೆರೆ, ಮಹಾ ಮಳೆಯಿಂದ ತುಂಬಿ ತುಳುಕುತ್ತಿತ್ತು. ಕಟ್ಟೆ ಒಡೆದರೆ ಊರೇ ಮುಳುಗುವ ದೊಡ್ಡ ಆತಂಕ ಎದುರಾಗಿತ್ತು. ಕೆರೆಯ ಗೇಟ್ ತೆರೆಯಲಾಗದೇ ಇದ್ದಿದ್ದು ಊರವರ ನಿದ್ದೆ ಕೆಡಿಸಿತ್ತು. ಈ ವೇಳೆ ಆಪತ್ಭಾಂಧವರಾಗಿ ಬಂದ ಮುಳುಗುತಜ್ಞ ಈಶ್ವರ ಮಲ್ಪೆ ಅವರು ಊರಿನ ಜನರ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಬೇಸಿಗೆಯಲ್ಲಿ ಕೆರೆ ಕೆಳಭಾಗದ ಜನರ ಪಾಲಿಗೆ ದಾಹ ನೀಗಿಸುವ ಅಮೃತ. ಬ್ರಿಟೀಷರ ಕಾಲದ ಕೆರೆಗೆ ಗೇಟ್ ಇದ್ದು, ಬೇಸಿಗೆಯಲ್ಲಿ ನೀರು ಹೊರ ಹೋಗದಂತೆ ಗೇಟ್‍ಗೆ ಗೋಣಿಚೀಲಗನ್ನು ಹಾಕಿ ಭಧ್ರ ಮಾಡಲಾಗಿತ್ತು.

ಗೇಟ್ ತೆರೆಯಲು ಆಗದೆ ಸಮಸ್ಯೆ

ಈ ಬಾರಿ ಮಳೆಗಾಲದ ಭಾರಿ ಮಳೆಗೆ ಗೇಟ್ ಓಪನ್ ಆಗದೇ ಸಮಸ್ಯೆ ಉಂಟಾಗಿತ್ತು. ಕೆರೆ ಪೂರ್ಣವಾಗಿ ತುಂಬಿ ಕೆರೆ ಕಟ್ಟೆ ಒಡೆಯುವ ಭೀತಿ ಗ್ರಾಮದಲ್ಲಿ ಆವರಿಸಿತ್ತು. ತೋಟತ್ತಾಡಿ ಗ್ರಾಮದ ಮುನ್ನೂರಕ್ಕೂ ಅಧಿಕ ಕುಟುಂಬಗಳಿಗೆ ಈ ಕೆರೆಯೇ ಅಪಾಯವಾಗಿ ಮಾರ್ಪಾಟಾಗಿತ್ತು. ನೀರು ಹೊರಬಿಡದಿದ್ದಲ್ಲಿ ಕೆರೆ ಒಡೆದು ಕೆರೆ ಕೆಳಭಾಗದ ನೆಲ್ಲಿಗುಡ್ಡೆ, ಕಂಚಾರಿ ಕಂಡ, ಬೆಂದ್ರಾಳ ಮುಂತಾದ ಪರಿಸರಗಳು ನಾಶವಾಗುವ ಭೀತಿ ಎದುರಾಗಿತ್ತು. ಮುಳುಗು ತಜ್ಞರಿಂದ ಈ ಸಮಸ್ಯೆ ಗೆ ಪರಿಹಾರ ಸಿಗಬಹುದು ಎಂದು ಗ್ರಾಮದ ಜನ ಮುಳುಗು ತಜ್ಞ ಉಡುಪಿಯ ಈಶ್ವರ್ ಮಲ್ಪೆ ಅವರ ಮೊರೆ ಹೋದರು.

ಇಪ್ಪತ್ತಡಿ ಆಳಕ್ಕೆ ಜಿಗಿದ ಈಶ್ವರ್

ತನ್ನ ತಂಡದ ಜೊತೆಗೆ ಬಂದ ಈಶ್ವರ್ ಮಲ್ಪೆ ಆಕ್ಸಿಜನ್ ಸಿಲಿಂಡರ್ ಬೆನ್ನಿಗೇರಿಸಿ ಕೆರೆಯ ಇಪ್ಪತ್ತಡಿ ಆಳಕ್ಕೆ ಇಳಿದಿದ್ದಾರೆ. ನೀರು ಸಂಗ್ರಹಿಸಲು ಗೇಟ್‍ಗೆ ಹಾಕಿದ್ದ ಮರಳಿನ ಗೋಣಿಗಳನ್ನು ತೆರವು ಗೊಳಿಸಿ ನೀರು ಸರಾಗವಾಗಿ ಹೋಗವಂತೆ ವ್ಯವಸ್ಥೆ ಮಾಡಿದ್ದಾರೆ. ನೀರಿನ ರಭಸಕ್ಕೆ ಈಶ್ವರ್ ಮಲ್ಪೆಯೇ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್, ಏಣಿಯ ಸಹಾಯದಿಂದ ಗೋಣಿಗಳನ್ನು ಯಶಸ್ವಿಯಾಗಿ ಹೊರ ತೆಗೆದದ್ದಲ್ಲದೇ, ಅವರೂ ಸುರಕ್ಷಿತವಾಗಿ ಮೇಲೆ ಬಂದಿದ್ದಾರೆ.

ಈಶ್ವರ್ ಮಲ್ಪೆಯ ಸಾಹಸದಿಂದ ಗ್ರಾಮವೇ ಉಳಿದಿದೆ. ನೀರು ಸರಾಗವಾಗಿ ಹರಿದು ಹೋಗುತ್ತಿದೆ. ಈಶ್ವರ್ ಮಲ್ಪೆಯವರ ಪ್ರಯತ್ನದಿಂದ ವಯನಾಡ್ ನಂತಹ ದುರಂತ ಚಾರ್ಮಾಡಿಯಲ್ಲಿ ಆಗುವುದು ತಪ್ಪಿ ಹೋಯಿತು ಎಂದು ಜನ ನಿಟ್ಟುಸಿರು ಬಿಟ್ಟಿದ್ದಾರೆ.

Whats_app_banner