Krishnaraja Wadiyar: ಮರೆಯೋದುಂಟೆ ಮೈಸೂರು ದೊರೆಯ, ಕರುನಾಡು ಕಟ್ಟಿದ ಕೃಷ್ಣರಾಜ ಒಡೆಯರ್‌ ನೆನಪು ಅಜರಾಮರ
ಕನ್ನಡ ಸುದ್ದಿ  /  ಕರ್ನಾಟಕ  /  Krishnaraja Wadiyar: ಮರೆಯೋದುಂಟೆ ಮೈಸೂರು ದೊರೆಯ, ಕರುನಾಡು ಕಟ್ಟಿದ ಕೃಷ್ಣರಾಜ ಒಡೆಯರ್‌ ನೆನಪು ಅಜರಾಮರ

Krishnaraja Wadiyar: ಮರೆಯೋದುಂಟೆ ಮೈಸೂರು ದೊರೆಯ, ಕರುನಾಡು ಕಟ್ಟಿದ ಕೃಷ್ಣರಾಜ ಒಡೆಯರ್‌ ನೆನಪು ಅಜರಾಮರ

ಮೈಸೂರು,ಬೆಂಗಳೂರು ಕಟ್ಟಿದ ಮಹಾರಾಜ ಕೃಷ್ಣರಾಜ ಒಡೆಯರ್‌ ( Krishnaraja wadiyar) ಅವರ ಜನುಮ ದಿನ ಜೂನ್‌ 4. ಅವರ ಕೊಡುಗೆ ಏನು ಎನ್ನುವುದನ್ನು ಮೈಸೂರಿನ ವಿದ್ಯಾರ್ಥಿ ಮಣಿಕಂಠ ವಿವರಿಸಿದ್ದಾರೆ.

ಮೈಸೂರಿನ ಪ್ರಗತಿಪರ ಮಹಾರಾಜ ಕೃಷ್ಣರಾಜ ಒಡೆಯರ್‌.
ಮೈಸೂರಿನ ಪ್ರಗತಿಪರ ಮಹಾರಾಜ ಕೃಷ್ಣರಾಜ ಒಡೆಯರ್‌.

ಅಂದಿನ ಮೈಸೂರು ರಾಜ್ಯವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್..! ಜೂನ್ 4, ಗುರುವಾರ ಅವರ ವರ್ಧಂತಿ. ಇಡೀ ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿರಲು ಪ್ರಮುಖ ಕಾರಣ, ಇಲ್ಲಿನ ಭವ್ಯ ಇತಿಹಾಸ. ಇದಕ್ಕೆ ಅಡಿಪಾಯ ಹಾಕಿದವರೇ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಸ್ಮರಣೆಯೊಂದಿಗೆ ಅವರು ನಮಗಾಗಿ ನೀಡಿದ ಕೊಡುಗೆಗಳನ್ನೂ ಸ್ಮರಿಸಲೇಬೇಕಿದೆ.

ಆಳರಸರಿಗೆ ಮಾದರಿಯಾದ ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿಯವರು. 1894ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ನಾಲ್ವಡಿ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ಎಲ್ಲರೂ ಮೆಚ್ಚುವಂತೆ ವೈಭವೋಪೇತವಾಗಿ ನಡೆಯಿತು.

ತಮ್ಮ 38 ವರ್ಷಗಳ ಅವರ ಭವ್ಯ ಆಡಳಿತವನ್ನು ನೆನಪಿಸುವ ಸಾಕ್ಷಿಗಳು ಇಂದಿಗೂ ಮೈಸೂರಿನಲ್ಲಿವೆ. ಆಡಳಿತ ಚುಕ್ಕಾಣಿ ಹಿಡಿದ ರಾಜನೆಂದ ಮಾತ್ರಕ್ಕೆ ಇಡೀ ರಾಜ್ಯವೇ ನನ್ನ ಬಿಗಿಮುಷ್ಠಿಯಲ್ಲಿರಬೇಕು ಎಂದು ಭಾವಿಸಿದವರಲ್ಲ ನಾಲ್ವಡಿಯವರು..! ಬದಲಾಗಿ, ತಾನೊಬ್ಬ ಜನಸೇವಕ, ಜನ ಸೇವೆಯೇ ತನ್ನ ನೈಜ ಗುರಿಯೆಂದು ಪ್ರತಿಪಾದಿಸಿ ಪ್ರಜಾಪ್ರಭುತ್ವ ಸಿದ್ಧಾಂತವನ್ನು ಆಗಲೇ ಜನರಿಗೆ ಪರಿಚಯಿಸಿದ ಕೀರ್ತಿ ನಾಲ್ವಡಿ ಅವರಿಗೆ ಸಲ್ಲುತ್ತದೆ.

ಪ್ರಜೆಗಳ ಸಮಸ್ಯೆಯನ್ನು ಆಲಿಸಲು ಪ್ರಜಾಪ್ರತಿನಿಧಿ ಸಭೆಯನ್ನು ಬಲಗೊಳಿಸಿ, 1907ರಲ್ಲಿ ನ್ಯಾಯವಿಧಾಯಕ ಸಭೆಯನ್ನು ಸ್ಥಾಪಿಸಿದರು. ಸಾಮಾಜಿಕ ನ್ಯಾಯದ ಪರ ಮಹಾರಾಜರ ನಿಲುವು ಯಾವಾಗಲು ಹೆಚ್ಚಾಗಿತ್ತು. ಮೈಸೂರಿನಲ್ಲಿ ನಡೆದ ಮೀಸಲಾತಿ ಚಳುವಳಿ, ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. 1927ರಲ್ಲಿ ಮಿಲ್ಲರ್ ಆಯೋಗದ ಶಿಫಾರಸ್ಸಿನಂತೆ, ಬ್ರಾಹ್ಮಣೇತರರಿಗೆ ಶೇ 75% ಮೀಸಲಾತಿ ನೀಡಿ ಹೊಸ ಶಕೆಗೆ ಮುನ್ನುಡಿಯನ್ನಿಟ್ಟರು ನಾಲ್ವಡಿಯವರು.

ತಮ್ಮ ಕಾಲಾವಧಿಯನ್ನು ದೇವದಾಸಿ ಪದ್ದತಿಯನ್ನು ನಿರ್ಮೂಲನೆಗೊಳಿಸಿದ್ದು, ಗೆಜ್ಜೆಪೂಜೆ ಕಾರ್ಯಕ್ರಮವನ್ನು ನಿಷೇಧಿಸಿದ್ದು, ವಿಧವಾ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ್ದು, ಮಹಿಳೆಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಲು ಕಾನೂನು ರೂಪಿಸಿದ್ದು.. ಹೀಗೆ ಮಹಾರಾಜರು ಸಾಮಾಜಿಕ ಕಳಕಳಿಯಿಂದ ಕೈಗೊಂಡ ಕ್ರಮಗಳಿಗೆ ಭೇಷ್ ಎನ್ನದೆ ಮತ್ತೊಂದು ಪದವೇ ಇಲ್ಲವೇನೋ

ಅಸ್ಷೃಶ್ಯರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ ಅವರು, ಶಿಕ್ಷಣವೇ ಎಲ್ಲರ ಅಭಿವೃದ್ಧಿಗೂ ಮೂಲ ಎಂದು ಭಾವಿಸಿ, ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದರು. 1916 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಾರಂಭಿಸಿದರು. ಬೆಂಗಳೂರಿನಲ್ಲಿ ಕೃಷಿ ವಿ.ವಿ ಸ್ಥಾಪಿಸಿದರು. 1911 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಕ್ಕೆ ಕಾರಣೀಭೂತರಾದರು. ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆ ಜಾರಿ, ವಯಸ್ಕರಿಗಾಗಿ 7000 ವಯಸ್ಕರ ಶಾಲೆ.. ಹೀಗೆ ಒಂದರ ಹಿಂದೆ ಒಂದರಂತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆ ಅಪರಿಮಿತ.

ನಾಲ್ವಡಿಯವರ ಒಡೆತನಲ್ಲಿದ್ದ 1,20,000 ಎಕರೆ ಭೂಮಿಗೆ ನೀರಾವರಿ ಕಲ್ಪಿಸಲಾಯಿತು. ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ ಜಲ ವಿದ್ಯುತ್ ಯೋಜನೆ ಪ್ರಾರಂಭವಾಯಿತು. 1902ರಲ್ಲಿ ಕಾವೇರಿ ನದಿಗೆ ಶಿವನಸಮುದ್ರದಲ್ಲಿ ಅಡ್ಡಲಾಗಿ ಜಲ ವಿದ್ಯುತ್ ಉತ್ಪಾದನಾ ಕಾರ್ಯ ಪ್ರಾರಂಭವಾಗಿಯ್ತು. 30,000 ವೋಲ್ಟ್ ವಿದ್ಯುತ್ತನ್ನು ಕೋಲಾರ ಚಿನ್ನದ ಗಣಿಗೆ ವರ್ಗಾಯಿಸಿದ್ದು ಅಚ್ಚರಿಯೆನಿಸಿದರೂ ಸತ್ಯ. ಭಾರತದಲ್ಲಿ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ವಿದ್ಯುತ್ ದೀಪಗಳು ಬೆಳಗಿದ್ದು, ಮೈಸೂರು ಸೇರಿದಂತೆ ಇತರ ನಗರ, ಹಳ್ಳಿಗಳಲ್ಲಿ ವಿದ್ಯುತ್ ದೀಪ ಬೆಳಗಿದೆ.

ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ, ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ, ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ನಾಲ್ವಡಿಯವರ ಕಾಲದಲ್ಲಿ ಜಾರಿಗೆ ತರಲಾಯ್ತು. ಭದ್ರಾವತಿಯ ಮೈಸೂರು ಕಬ್ಬಿಣದ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದೆಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಂಪನಿ, ಮೈಸೂರು ಪೇಪರ್ ಮಿಲ್, ಹೀಗೆ ಹಲವಾರು ಕಾರ್ಖಾನೆಗಳು ಪ್ರಾರಂಭಗೊಂಡವು. ಕೊಡಗಿನ ಕಾಫಿ ಸಂಶೋಧನಾ ಕೇಂದ್ರಗಳು ಇವರ ಕಾಲದಲ್ಲಿಯೇ ಪ್ರಾರಂಭಗೊಂಡವು.

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳು, ಬೆಂಗಳೂರಿನ ಮಿಂಟೊ ಕಣ್ಣಿನ ಆಸ್ಪತ್ರೆ, ಮೈಸೂರಿನಲ್ಲಿ ಕ್ಷಯರೋಗ ಆಸ್ಪತ್ರೆ ಉತ್ತಮದ ಜತೆಗೆ ಪ್ರಸಿದ್ದಿಯಾಗಿತ್ತು. ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಖಾಸಗೀ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿತು. 1906ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು. ರೈತರಿಗಾಗಿ ಜಮೀನು ಅಡಮಾನ ಬ್ಯಾಂಕುಗಳು ಆರಂಭವಾದವು.

ಮೈಸೂರು, ಬೆಂಗಳೂರು ನಗರಗಳಲ್ಲಿ ನಿರ್ಮಾಣವಾದ ಶ್ರೇಷ್ಠ ಕಟ್ಟಡಗಳು, ರಸ್ತೆಗಳು, ವಿದ್ಯುತ್ ದೀಪಗಳು, ಉದ್ಯಾನ ವನಗಳು, ಜಲ ಕಾರಂಜಿಗಳು, ವಿಹಾರಿ ಧಾಮಗಳು, ಶ್ರೇಷ್ಠ ವಿದ್ಯಾ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಅನಾಥಾಶ್ರಮಗಳು, ಛತ್ರಗಳು ಹೀಗೆ ಹತ್ತು ಹಲವು ಕಟ್ಟಡಗಳ ನಿರ್ಮಾತೃ ಇವರೇ ಆಗಿದ್ದಾರೆ. ಆಗಸ್ಟ್ 3, 1940ರಲ್ಲಿ ನಿಧನರಾದ ನಾಲ್ವಡಿಯವರ ಸಾಧನೆ ಅವರ್ಣನೀಯ.

ಹಾಗಾಗಿಯೇ ಕವಿ ಹನಸೋಗೆ ಸೋಮಶೇಖರ್ ಅವರ ಕವನದ “ಮರೆಯೋದುಂಟೆ ಮೈಸೂರು ದೊರೆಯ… ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ..” ಸಾಲನ್ನು ಮರೆಯಲು ಸಾಧ್ಯವೇ ಇಲ್ಲ.

(ಲೇಖನ: ಮಣಿಕಂಠ ತ್ರಿಶಂಕರ್, ಮೈಸೂರು)

Whats_app_banner