ಬೆಂಗಳೂರು ಟು ಮುಂಬೈ 14 ಪಥದ ರಸ್ತೆ ಯೋಜನೆ; ಇನ್ನು ಆರೇ ತಿಂಗಳಲ್ಲಿ ಕಾಮಗಾರಿ ಶುರು, ಈ ಹೈವೇಯಿಂದಾಗುವ ಲಾಭವೇನು?
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಟು ಮುಂಬೈ 14 ಪಥದ ರಸ್ತೆ ಯೋಜನೆ; ಇನ್ನು ಆರೇ ತಿಂಗಳಲ್ಲಿ ಕಾಮಗಾರಿ ಶುರು, ಈ ಹೈವೇಯಿಂದಾಗುವ ಲಾಭವೇನು?

ಬೆಂಗಳೂರು ಟು ಮುಂಬೈ 14 ಪಥದ ರಸ್ತೆ ಯೋಜನೆ; ಇನ್ನು ಆರೇ ತಿಂಗಳಲ್ಲಿ ಕಾಮಗಾರಿ ಶುರು, ಈ ಹೈವೇಯಿಂದಾಗುವ ಲಾಭವೇನು?

Nitin Gadkari: ಬೆಂಗಳೂರು, ಪುಣೆ ಮತ್ತು ಸಂಭಾಜಿನಗರ ನಡುವೆ 14 ಪಥದ ಎಕ್ಸ್​ಪ್ರೆಸ್ ಹೈವೆ ನಿರ್ಮಿಸುವ ಮಹತ್ವದ ಯೋಜನೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.

ಬೆಂಗಳೂರು ಟು ಪುಣೆ 14 ಪಥದ ರಸ್ತೆ ಯೋಜನೆ
ಬೆಂಗಳೂರು ಟು ಪುಣೆ 14 ಪಥದ ರಸ್ತೆ ಯೋಜನೆ

ಬೆಂಗಳೂರು: ಬೆಂಗಳೂರು, ಪುಣೆ ಮತ್ತು ಸಂಭಾಜಿನಗರ ಮೂಲಕ ಮುಂಬೈ ಸಂಪರ್ಕಿಸುವ 14 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಮಹತ್ವಕಾಂಕ್ಷೆಯ ಯೋಜನೆಯ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ಈಗಾಗಲೇ ಟೆಂಡರ್ ಪ್ರಕ್ರಿಯೆಯೂ ಆರಂಭವಾಗಿದ್ದು, ಇನ್ನು 6 ತಿಂಗಳಲ್ಲಿ ಕಾಮಗಾರಿ ಶುರುವಾಗಲಿದೆ ಎಂದು ಹೇಳಿದ್ದಾರೆ. ಈ ಎಕ್ಸ್​ಪ್ರೆಸ್ ಹೈವೇ ನಿರ್ಮಾಣದಿಂದ ಮುಂಬೈ-ಪುಣೆ ಎಕ್ಸ್​ಪ್ರೆಸ್​​ವೇಯಲ್ಲಿ ಶೇ 50ರಷ್ಟು ಸಂಚಾರ ಕಡಿಮೆ ಆಗಲಿದ್ದು, ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಮಾಡುವವರಿತೆ ಸಮಯದ ಉಳಿತಾಯವಾಗಲಿದೆ.

ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ಗ್ರಾಮೀಣ ಮತ್ತು ನಗರ ಸಮುದಾಯಗಳ ಜೀವನದ ಗುಣಮಟ್ಟ ಹೆಚ್ಚಿಸುವುದರ ಜೊತೆಗೆ ಭಾರತದ ಮೂಲ ಸೌಕರ್ಯವನ್ನು ಆಧುನೀಕರಿಸುವ ಕುರಿತು ಒತ್ತಿ ಹೇಳಿದ್ದಾರೆ. ಆರು ತಿಂಗಳಲ್ಲಿ ಶುರುವಾಗುವ ಈ ಹೆದ್ದಾರಿಯು ಮುಂಬೈನ ಅಟಲ್ ಸೇತುವೆಯಿಂದ ಪ್ರಾರಂಭವಾಗಲಿದೆ. ಇದು ಪುಣೆ ರಿಂಗ್‌ ರಸ್ತೆಯ ಮೂಲಕ ಹಾದುಹೋಗಲಿದೆ. ಬೆಂಗಳೂರು-ಮುಂಬೈ 14 ಪಥದ ಎಕ್ಸ್‌ಪ್ರೆಸ್‌ ವೇ ನಿರ್ಮಾಣದಿಂದ ಇದೀಗ ಮುಂಬೈ ಎಕ್ಸ್‌ಪ್ರೆಸ್‌ ವೇನಲ್ಲಿ 50ರಷ್ಟು ಸಂಚಾರ ದಟ್ಟಣೆ ತಗ್ಗಲಿದೆ ಎಂಬ ಮಾಹಿತಿ ನೀಡಿದ್ದಾರೆ.

ಆರ್ಥಿಕ ಸಂಬಂಧ ಬಲಪಡುತ್ತದೆಂದ ಗಡ್ಕರಿ

ಈ ಹೆದ್ದಾರಿ ಯೋಜನೆಯು ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಲ್ಲದೆ ಭಾರತದ ರಸ್ತೆ ಜಾಲವನ್ನು ಪರಿವರ್ತಿಸುವ ವಿಶಾಲ ದೃಷ್ಟಿಕೋನವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಪ್ರಮುಖ ನಗರಗಳ ನಡುವಿನ ಸಂಪರ್ಕವನ್ನು ಸುಧಾರಿಸಲು, ಸುಗಮ ಪ್ರಯಾಣಕ್ಕೆ ನಮ್ಮ ಸರ್ಕಾರ ಬದ್ಧ ಎಂದು ಹೇಳಿದ್ದಾರೆ. ಹೊಸ ಹೆದ್ದಾರಿ ಪೂರ್ಣಗೊಂಡ ನಂತರ, ಪುಣೆ, ಸಂಭಾಜಿನಗರ ಮತ್ತು ಬೆಂಗಳೂರು ನಡುವೆ ಸಂಪರ್ಕ ಸುಗಮಗೊಳಿಸುತ್ತದೆ, ಆರ್ಥಿಕ ಸಂಬಂಧಗಳನ್ನು ಬಲಪಡಿಸುತ್ತದೆ ಮತ್ತು ಪ್ರಾದೇಶಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.

ಎಂಟು ಮಿಲಿಯನ್ ತ್ಯಾಜ್ಯ ಮರು ಬಳಕೆ

ರಸ್ತೆ ನಿರ್ಮಾಣದಲ್ಲಿ ಸುಸ್ಥಿರತೆಯ ಮಹತ್ವ ಪ್ರಸ್ತಾಪಿಸಿದ ಗಡ್ಕರಿ, ಹೊಸ ರಸ್ತೆಗಳಿಗಾಗಿ ಈಗಾಗಲೇ ಎಂಟು ಮಿಲಿಯನ್ ಟನ್ ತ್ಯಾಜ್ಯವನ್ನು ಮರುಬಳಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಜಿಎಸ್​ಟಿ ಸಂಗ್ರಹದ ವಿಷಯದಲ್ಲಿ ಭಾರತವು 3ನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಟ್ಟಿದೆ, ನಾವೀನ್ಯತೆ ಮತ್ತು ಸಂಶೋಧನೆಯನ್ನು ಈ ಆರ್ಥಿಕ ಯಶಸ್ಸಿಗೆ ಸಂಪರ್ಕಿಸುತ್ತದೆ ಎಂದು ಅವರು ಗಮನಸೆಳೆದರು. ಸಾಕಷ್ಟು ಧನಸಹಾಯ ಮತ್ತು ಬಲವಾದ ನಾಯಕತ್ವದೊಂದಿಗೆ, ಮೂಲಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ತಲುಪಿಸಬಹುದು ಎಂದು ಗಡ್ಕರಿ ಹೇಳಿದ್ದಾರೆ.

ಬೆಂಗಳೂರು ಮೂಲಕ 2 ಮಾರ್ಗಗಳಾಗಿ ಮುಂಬೈಯನ್ನು ಸಂಪರ್ಕ ಸಾಧಿಸಬಹುದು. ನೂತನವಾಗಿ ನಿರ್ಮಿಸಲಿರುವ 14 ಪಥದ ಎಕ್ಸ್​​ಪ್ರೆಸ್​ವೇಯನ್ನು ಪುಣೆ, ಸಂಭಾಜಿನಗರದ ಮೂಲಕ ಮುಂಬೈಗೆ ಸಂಪರ್ಕಿಸಲಿದೆ. ಒಂದು ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರು-ಹುಬ್ಬಳ್ಳಿ-ಬೆಳಗಾವಿ-ಪುಣೆ-ಮುಂಬೈಗೆ ಹೋಗಬಹುದು. ಆದರೆ ಇದು 986 ಕಿಲೋ ಮೀಟರ್‌ ಉದ್ದದ ಮಾರ್ಗವಾಗಿದೆ. ಮತ್ತೊಂದು ಮಾರ್ಗ ಬೆಂಗಳೂರು-ತುಮಕೂರು-ಚಿತ್ರದುರ್ಗ-ವಿಜಯನಗರ ಮತ್ತು ಬಾಗಲಕೋಟೆ ಮೂಲಕ ಹಾದು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸಲಿದೆ. ಇದು ಸುಮಾರು 900 ಕಿಮೀ ಉದ್ದ ಇರಲಿದೆ.

Whats_app_banner