ಬಸವಣ್ಣನ ಪುರುಷ ಅಹಂಕಾರ ವಿವಾದ; ಮಹಿಳೆಯರ ಮಟ್ಟಿಗೆ ಈ ಬಗೆಯ ಟೀಕೆಗಳು ಹೊಸತೇನೂ ಅಲ್ಲ- ಎನ್‌ಎಎಂ ಇಸ್ಮಾಯಿಲ್ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಬಸವಣ್ಣನ ಪುರುಷ ಅಹಂಕಾರ ವಿವಾದ; ಮಹಿಳೆಯರ ಮಟ್ಟಿಗೆ ಈ ಬಗೆಯ ಟೀಕೆಗಳು ಹೊಸತೇನೂ ಅಲ್ಲ- ಎನ್‌ಎಎಂ ಇಸ್ಮಾಯಿಲ್ ಬರಹ

ಬಸವಣ್ಣನ ಪುರುಷ ಅಹಂಕಾರ ವಿವಾದ; ಮಹಿಳೆಯರ ಮಟ್ಟಿಗೆ ಈ ಬಗೆಯ ಟೀಕೆಗಳು ಹೊಸತೇನೂ ಅಲ್ಲ- ಎನ್‌ಎಎಂ ಇಸ್ಮಾಯಿಲ್ ಬರಹ

ಬಸವಣ್ಣನ ಪುರುಷ ಅಹಂಕಾರ ವಿವಾದದ ಹಿನ್ನೆಲೆಯಲ್ಲಿ ಪರ ವಿರೋಧ ಚರ್ಚೆಗಳಾಗುತ್ತಿವೆ. ಈ ನಡುವೆ, ಚಿಂತಕಿ ಅವರು ತಮ್ಮ ಉಪನ್ಯಾಸಕ್ಕೆ ಸಂಬಂಧಿಸಿದ ಟೀಕೆಗಳಿಗೆ ಸಮರ್ಥವಾಗಿ ಉತ್ತರಿಸಿದ್ದಾರೆ. ಇದಕ್ಕೆ ಪೂರಕವಾಗಿ, ಮಹಿಳೆಯರ ಮಟ್ಟಿಗೆ ಈ ಬಗೆಯ ಟೀಕೆಗಳು ಹೊಸತೇನೂ ಅಲ್ಲ ಎಂದು ಪತ್ರಕರ್ತ ಎನ್‌ಎಂಎ ಇಸ್ಮಾಯಿಲ್ ತಮ್ಮ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.

ಬಸವಣ್ಣನ ಪುರುಷ ಅಹಂಕಾರ ವಿವಾದ; ಮಹಿಳೆಯರ ಮಟ್ಟಿಗೆ ಈ ಬಗೆಯ ಟೀಕೆಗಳು ಹೊಸತೇನೂ ಅಲ್ಲ ಎಂಬ ಚಿಂತನೆಯನ್ನು ಪತ್ರಕರ್ತ ಎನ್‌ಎಎಂ ಇಸ್ಮಾಯಿಲ್ ಮುಂದಿಟ್ಟಿದ್ದಾರೆ. (ಸಾಂಕೇತಿಕ ಚಿತ್ರ)
ಬಸವಣ್ಣನ ಪುರುಷ ಅಹಂಕಾರ ವಿವಾದ; ಮಹಿಳೆಯರ ಮಟ್ಟಿಗೆ ಈ ಬಗೆಯ ಟೀಕೆಗಳು ಹೊಸತೇನೂ ಅಲ್ಲ ಎಂಬ ಚಿಂತನೆಯನ್ನು ಪತ್ರಕರ್ತ ಎನ್‌ಎಎಂ ಇಸ್ಮಾಯಿಲ್ ಮುಂದಿಟ್ಟಿದ್ದಾರೆ. (ಸಾಂಕೇತಿಕ ಚಿತ್ರ)

ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ 12ನೇ ರಾಜ್ಯಮಟ್ಟದ ಕದಳಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡ ಚಿಂತಕಿ ವಿನಯಾ ಒಕ್ಕುಂದ ಅವರು, “ಒಳಗೆ ಸುಳಿವ ಆತ್ಮ” ಎಂಬ ವಿಷಯದ ಬಗ್ಗೆ ಮಾತನಾಡುತ್ತ, ಬಸವಣ್ಣನಿಗೆ ಪುರುಷಾಹಂಕಾರ ಮೀರಲಾಗಿಲ್ಲ ಎಂದು ಹೇಳಿದ್ದಾರೆ ಎಂಬುದು ಟೀಕೆಗೆ ಗುರಿಯಾಗಿತ್ತು. ಇದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದು, ಪರ ವಿರೋಧದ ಚರ್ಚೆ ನಡೆಯುತ್ತಿದೆ. ಹೀಗಿರುವಾಗಲೇ, ವಿನಯಾ ಒಕ್ಕುಂದ ಅವರು ತಮ್ಮ ಉಪನ್ಯಾಸಕ್ಕೆ ಸಂಬಂಧಿಸಿದ ಟೀಕೆಗೆ ಸುದೀರ್ಘ ಟಿಪ್ಪಣಿಯ ಸಮರ್ಥವಾಗಿ ಉತ್ತರಿಸಿದ್ದಾರೆ. ಆದಾಗ್ಯೂ ಕೆಲವು ವಿಚಾರಗಳು ಚಿಂತನೆಗೆ ಇಂಬು ನೀಡುವಂಥದ್ದಾಗಿರುವ ಕಾರಣ ಗಮನಸೆಳಯುತ್ತಿವೆ. ಪತ್ರಕರ್ತ ಎನ್‌ಎಎಂ ಇಸ್ಮಾಯಿಲ್ ಅವರು ಕೂಡ ಈ ವಿಚಾರವಾಗಿ ತಮ್ಮ ಚಿಂತನೆಯನ್ನು ಮಂಡಿಸಿದ್ದಾರೆ. ಆ ಪೋಸ್ಟ್ ಅನ್ನು ಇಲ್ಲಿ ಯಥಾವತ್ ಉಲ್ಲೇಖಿಸಲಾಗಿದೆ.

ಮಹಿಳೆಯರ ಮಟ್ಟಿಗೆ ಈ ಬಗೆಯ ಟೀಕೆಗಳು ಹೊಸತೇನೂ ಅಲ್ಲ: ಎನ್‌ಎಎಂ ಇಸ್ಮಾಯಿಲ್

ವಿನಯ ಒಕ್ಕುಂದ ತಮ್ಮ ಕಲಬುರಗಿ ಭಾಷಣದ ಟಿಪ್ಪಣಿ ಮತ್ತು ಈ ಹಿಂದೊಮ್ಮೆ ಇದೇ ವಿಚಾರವನ್ನು ಪ್ರಸ್ತಾಪಿಸಿದ ಲೇಖನವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇವು ವಿನಯಾ ಅವರ ಮಾತಿನ ಹಿನ್ನೆಲೆ ಮತ್ತು ಪ್ರತಿಪಾದಿಸಿದ ವಿಚಾರವನ್ನು ಸ್ಪಷ್ಟವಾಗಿ ಮಂಡಿಸುತ್ತವೆ. ಇವುಗಳನ್ನು ಓದಿದ ಮೇಲೆ ಕಳೆದೆರಡು ದಿನಗಳಿಂದ ವಿನಯ ಅವರ ಮೇಲೆ ವಾಗ್ದಾಳಿ ನಡೆಸಿದವರ (ನನ್ನ ಅನೇಕ ಗೆಳೆಯರು ಇವರಲ್ಲಿದ್ದಾರೆ) ಮಾತುಗಳು ನನಗೆ ಬೇರೆಯೇ ಬಗೆಯಲ್ಲಿ ಕಾಣಲಾರಂಭಿಸಿದವು. ಮಹಿಳೆಯರ ಮಟ್ಟಿಗೆ ಈ ಬಗೆಯ ಟೀಕೆಗಳು ಹೊಸತೇನೂ ಆಗಿರುವುದಿಲ್ಲ. ಏಕೆಂದರೆ ನಾವು ಗಂಡಸರು ಈ ಬಗೆಯ ಹೀಗಳಿಕೆಗಳನ್ನು ಅವರಿಗೆ ಬಹುಕಾಲದಿಂದ ಅಭ್ಯಾಸ ಮಾಡಿಸಿದ್ದೇವೆಲ್ಲಾ…!

ವಚನಗಳಲ್ಲಿರುವ ವಿಚಾರ ಮತ್ತು ವಚನ ಚಳವಳಿಯ ಇತಿಹಾಸದ exegesis (ವಿಮರ್ಶಾತ್ಮಕ ವ್ಯಾಖ್ಯಾನ?) ಇಲ್ಲಿಯ ತನಕವೂ ಬಸವಣ್ಣನೂ ಸೇರಿದಂತೆ ಪುರುಷ ವಚನಕಾರರ ಚಿಂತನೆಗಳನ್ನು ಪ್ರಧಾನ ಪಾತಳಿಯಲ್ಲಿಟ್ಟುಕೊಂಡಿವೆ. ಅಕ್ಕಮಹಾದೇವಿಯೂ ಸೇರಿದಂತೆ ಅನೇಕಾನೇಕ ವಚನಕಾರ್ತಿಯರ ವಿಚಾರಗಳ ಪ್ರಸ್ತಾಪವು ಈ exegesisನಲ್ಲಿ ಆಗುತ್ತದೆಯಾದರೂ ವಚನಕಾರ್ತಿಯರ ಕಾಣಿಕೆ ಮತ್ತು ಕಾಣ್ಕೆ ಎರಡನ್ನೂ ಪರಿಧಿಯಲ್ಲಷ್ಟೇ ಪರಿಗಣಿಸುತ್ತವೆ. ಅರ್ಥಾತ್ ಮಹಿಳೆಯರೂ ಚಳವಳಿಯಲ್ಲಿದ್ದರು, ಸಕ್ರಿಯ ಪಾತ್ರವಹಿಸಿದ್ದರು ಎಂಬುದನ್ನು ಸಾಬೀತು ಮಾಡುವುದಕ್ಕೆ ಬೇಕಾದ ಪರಿಕರ ಮತ್ತು ಸಾಕ್ಷ್ಯವಾಗಿ ಬಳಕೆಯಾಗುತ್ತವೆ. ಇವೆಲ್ಲವೂ ಯಾವುದೋ ಸಂಚಿನ ಭಾಗವಾಗಿ ಅಥವಾ ಪೂರ್ವಗ್ರಹದಿಂದ ಸಂಭವಿಸಿವೆ ಎಂದು ಭಾವಿಸುವ ಅಗತ್ಯವಿಲ್ಲ. ಬಸವಣ್ಣನೂ ಸೇರಿದಂತೆ ಪುರುಷ ವಚನಕಾರರು ಚಳವಳಿಯ ನಾಯಕತ್ವ ಸ್ಥಾನದಲ್ಲಿ ಇದ್ದದ್ದು, ವಚನಗಳ ಸಂಗ್ರಹ ಮತ್ತು ವ್ಯಾಖ್ಯಾನದಂಥ ಕೆಲಸದಲ್ಲಿ ಗಂಡಸರೇ ಮೊದಲಿಗೆ ಹೆಚ್ಚು ತೊಡಗಿಸಿಕೊಂಡದ್ದು ಮುಂತಾದ ಅನೇಕ ಸಂಗತಿಗಳು ಇದಕ್ಕೆ ಕಾರಣವಾಗಿರಬಹುದು.

ವಚನಕಾರ್ತಿಯರ ಒಳನೋಟಗಳು ವಚನ ಚಳವಳಿಯ ವಿಕಾಸದಲ್ಲಿ ಪ್ರಮುಖ ಪಾತ್ರವಹಿಸಿರುವ ಸಾಧ್ಯತೆಯೊಂದನ್ನು ವಿನಯಾ ಶೋಧಿಸುತ್ತಿದ್ದಾರೆ. ಈ ಹುಡುಕಾಟದ ಫಲಿತಾಂಶವನ್ನು ಮಂಡಿಸಲು ಒಂದು ವಿಚಾರ ಸಂಕಿರಣದ ಪ್ರಬಂಧ ಸಾಕಾಗಲಾರದು. ಬಹುಶಃ ಆ ಕಾರಣದಿಂದಲೇ ಅವರ ಚಿಂತನೆಯ ಪ್ರಾಥಮಿಕ ಪ್ರಮೇಯವಷ್ಟೇ ಮುಂದಿಟ್ಟಿದ್ದಾರೆ ಎಂದು ನನಗನ್ನಿಸಿತು. ಈ ವಿಚಾರ ಪತ್ರಿಕೆಯಲ್ಲಿ ವರದಿಯಾಗುವ ಹೊತ್ತಿಗೆ ತೀರಾ ಸರಳೀಕರಣಗೊಂಡಿತು. ಆ ವರದಿಯನ್ನು ಮುಕ್ತ ಮನಸ್ಸಿನಿಂದ ಓದಿದರೆ ಅದು ಬಸವಣ್ಣನ ಟೀಕೆಯಂತೇನೂ ಕಾಣಿಸುವುದಿಲ್ಲ. ಸಾಮಾಜಿಕ ಮಾಧ್ಯಮದೊಳಕ್ಕೆ ಬಂದದ್ದೇ ತಡ ಇದು ವಿವಾದವಾಯಿತು. ಚರ್ಚೆಯೊಂದು ‘ಮಾಧ್ಯಮೀಕರಣಗೊಂಡ’ ತಕ್ಷಣ ಅದು ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತದೆ. ಈ ವಿಚಾರದಲ್ಲಿ ಸಂಭವಿಸಿರುವುದೂ ಅದುವೇ.

ಬಸವಣ್ಣನೂ ಸೇರಿದಂತೆ ಎಲ್ಲಾ ಪುರುಷ ವಚನಕಾರರು ಸಮಕಾಲೀನರಾದ ವಚನಕಾರ್ತಿಯರಿಂದ ಲಿಂಗ ಸಮಾನತೆಯ ಪಾಠವನ್ನು ಕಲಿತು ಅಳವಡಿಸಿಕೊಂಡರು ಎಂಬ ತರ್ಕವನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿರುವುದು ಏಕೆ? ವಿನಯಾ ಅವರ ಮೇಲೆ ದಾಳಿ ನಡೆಸುತ್ತಿರುವ ಎಲ್ಲರೂ ‘ಬಸವಣ್ಣನಲ್ಲಿ ತಪ್ಪಿಲ್ಲ’ ಎಂಬ ನಿಲುವಿನಲ್ಲಿದ್ದಾರೆ. ವಾಸ್ತವದಲ್ಲಿ ಸ್ವತಃ ಬಸವಣ್ಣನೇ ತನ್ನನ್ನು ತಾನು ನಿರಚಿಸಿಕೊಂಡವನಲ್ಲವೇ? ಈ ಸತತ ನಿರಚನೆಯ ಪ್ರಕ್ರಿಯೆಯಲ್ಲಿ ತಾನೇ ವಚನ ಚಳವಳಿ ವಿಕಾಸ ಹೊಂದಿದ್ದು. ಈ ನಿರಚನೆಯ ಪ್ರಕ್ರಿಯೆಗೆ ವಚನಕಾರ್ತಿಯರ ಕಾಣಿಕೆ ಮುಖ್ಯವಾದುದು ಎಂದು ಒಪ್ಪಿಕೊಂಡರೆ ಅದರಿಂದ ಕುಂದುವ ಗಂಡಸುತನವಾದರೂ ಯಾರದ್ದು?

ವಿನಯಾ ಅವರು ಈ ವಿವಾದದಿಂದ ವಿಚಲಿತರಾಗುವ ವಿದ್ವಾಂಸೆಯಲ್ಲ ಎಂಬುದು ನನ್ನ ನಂಬಿಕೆ. ಅವರು ವಚನಗಳು ಮತ್ತು ವಚನಚಳವಳಿಯ ಸ್ತ್ರೀ ಕೇಂದ್ರಿತ (ಪ್ರಧಾನ) exegesis ಅನ್ನು ವಿವರಣಾತ್ಮವಾಗಿಯೇ ಮಂಡಿಸಲಿ. ಈ ವಿವಾದವನ್ನೆಬ್ಬಿಸಿದವರಿಗೆ ಅದುವೇ ಸರಿಯಾದ ಉತ್ತರ. More power to you Vinaya Okkund madam.

ಪತ್ರಕರ್ತ ಎನ್‌ಎಎಂ ಇಸ್ಮಾಯಿಲ್ ಅವರ ಫೇಸ್‌ಬುಕ್ ಪೋಸ್ಟ್ ಇಲ್ಲಿದೆ.

Whats_app_banner