Padma Vibhushan S.M.Krishna: ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಎಸ್.ಎಂ. ಕೃಷ್ಣರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ
ಕನ್ನಡ ಸುದ್ದಿ  /  ಕರ್ನಾಟಕ  /  Padma Vibhushan S.m.krishna: ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಎಸ್.ಎಂ. ಕೃಷ್ಣರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ

Padma Vibhushan S.M.Krishna: ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಎಸ್.ಎಂ. ಕೃಷ್ಣರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ

2023ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಸ್​.ಎಂ.ಕೃಷ್ಣ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ, ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿತು.

ಎಸ್.ಎಂ. ಕೃಷ್ಣರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ
ಎಸ್.ಎಂ. ಕೃಷ್ಣರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ

ಬೆಂಗಳೂರು: 2023ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಸ್​.ಎಂ.ಕೃಷ್ಣ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ, ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಎಸ್.ಎಂ. ಕೃಷ್ಣರಿಗೆ ಗೌರವ ಸಲ್ಲಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ನೀಡಿರುವ ಈ ಗೌರವವನ್ನು ಸಂತಸದಿಂದ ಸ್ವಿಕರಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನೀಡಿರುವ ಗೌರವವು ತವರು ಮನೆಯ ಗೌರವಕ್ಕೆ ಸರಿಸಮನಾಗಿದೆ. ಈ ಗೌರವ ಸಮಸ್ತ ಕನ್ನಡಿಗರಿಂದ ಪ್ರದಾನ ಮಾಡಲಾಗಿದೆ. 7 ಕೋಟಿ ಕನ್ನಡಿಗರನ್ನು ಪ್ರತಿನಿಧಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಇತ್ತೀಚಿನ ಬೆಳೆವಣಿಗೆಯನ್ನು ಗಮನಿಸುತ್ತಾ ಇದ್ದು, ಪ್ರಪಂಚದಾದ್ಯಂತ ಹರಡಿ ಹಂಚಿ ಹೋಗಿರುವ ಕನ್ನಡಿಗರನ್ನು ಒಂದು ಮಾಡಲು ನಾಡೋಜ ಡಾ. ಮಹೇಶ ಜೋಶಿ ಮುಂದಾಗಿರುವ ಕ್ರಮ ಸ್ವಾಗತಾರ್ಹವಾಗಿದ್ದು, ಅವರ ಕಾರ್ಯತತ್ಪರತೆ ಕಂಡಾಗ ಸಾಹಿತ್ಯ ಪರಿಷತ್ತಿಗೆ ಸೂಕ್ತ ಸಾರಥಿ ಸಿಕ್ಕಿದ್ದಾರೆ ಎನ್ನುವಲ್ಲಿ ಸಂಶಯವಿಲ್ಲ ಎಂದರು.

ಹಾವೇರಿಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾಖಲೆ ರೀತಿಯಲ್ಲಿ ಯಶಸ್ವಿಗೊಳಸಿದ್ದಾರೆ. ಅದೇ ರೀತಿಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಭರ್ಜರಿಯಾಗಿ ನಡೆಸುವ ಮೂಲಕ ದಾಖಲೆ ಸೃಷ್ಟಿಮಾಡುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ. ಅದನ್ನು ನಾಡೋಜ ಡಾ. ಮಹೇಶ ಜೋಶಿ ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ. ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಮ್ಮೇಳನಕ್ಕೆ ತಮ್ಮ ಸಲಹೆ ಸಹಕಾರ ಕಾಲ ಕಾಲಕ್ಕೆ ಇರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಭರವಸೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, ಹಿರಿಯರು ಹಾಗೂ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ಸಿಟಿ ಎನ್ನುವ ಹೆಗ್ಗಳಿಕೆಗೆ ಏರಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿರುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಹೆಮ್ಮೆಯಿಂದ ಅವರನ್ನು ಗೌರವಿಸುತ್ತಿದೆ ಎಂದು ನಾಡೋಜ ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಂದೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರ ಮಾರ್ಗದರ್ಶನದ ಅವಶ್ಯಕತೆ ಇದೆ. ಮಂಡ್ಯ ಸಮ್ಮೇಳನವನ್ನು ನ ಭೂತೋ ನ ಭವಿಷ್ಯತಿಃ ಎನ್ನುವ ರೀತಿಯಲ್ಲಿ ನಡೆಸುವ ಇಂಗಿತವನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದ್ದು, ಅದಕ್ಕೆ ಹಿರಿಯರು ಹಾಗೂ ನಾಡಿನ ಬಗ್ಗೆ ದೂರ ದೃಷ್ಟಿತ್ವವನ್ನು ಹೊಂದಿರುವ ಮಾನ್ಯ ಎಸ್.ಎಂ. ಕೃಷ್ಣ ಅವರ ಸಲಹೆ ಸೂಚನೆಗಳನ್ನು ಪರಿಷತ್ತು ನಿರೀಕ್ಷಿಸುತ್ತಿದೆ. ಅದಕ್ಕೆ ಅವರು ತುಂಬ ಹೃದಯದಿಂದ ಸಹಕರಿಸುವ ಭರವಸೆಯನ್ನು ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿರುವ ಅವರು ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ಯೋಜನೆ ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದ್ದಾರೆ ಎಂದು ಡಾ. ಮಹೇಶ ಜೋಶಿ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ. ಭ. ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಡಾ. ಬಿ. ಎಂ. ಪಟೇಲ್ ಪಾಂಡು ಈ ವೇಳೆ ಹಾಜರಿದ್ದರು.

ಎಸ್​.ಎಂ.ಕೃಷ್ಣ ಅವರು ಈ ಬಾರಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜಕಾರಣಿಯಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಇವರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಎಸ್ ಎಂ ಕೃಷ್ಣ ಅವರು 1999ರಿಂದ 2004ರ ಅವಧಿಗೆ ಕರ್ನಾಟಕದ ರಾಜ್ಯದ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದರು. ನಂತರ 2004ರಿಂದ 2008ರವರೆಗೆ ಮಹಾರಾಷ್ಟ್ರದ 19ನೇ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. 2009ರಿಂದ ಅಕ್ಟೋಬರ್ 2012ರವರೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2017ರ ಮಾರ್ಚ್ ನಲ್ಲಿ ಕಾಂಗ್ರೆಸ್ ತೊರೆದ ಎಂಎಸ್ ಕೃಷ್ಣ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಜನವರಿ ತಿಂಗಳ ಆರಂಭದಲ್ಲಿ ಅವರು ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದರು.

Whats_app_banner