Mangalore Karavali Utsav: ಮಂಗಳೂರು ಕರಾವಳಿ ಉತ್ಸವ: ಹೆಲಿಕಾಪ್ಟರ್ ಸಂಚಾರದ ಸ್ಥಳ ಬದಲಾವಣೆ, ಏನು ಕಾರಣ?
ಕನ್ನಡ ಸುದ್ದಿ  /  ಕರ್ನಾಟಕ  /  Mangalore Karavali Utsav: ಮಂಗಳೂರು ಕರಾವಳಿ ಉತ್ಸವ: ಹೆಲಿಕಾಪ್ಟರ್ ಸಂಚಾರದ ಸ್ಥಳ ಬದಲಾವಣೆ, ಏನು ಕಾರಣ?

Mangalore Karavali Utsav: ಮಂಗಳೂರು ಕರಾವಳಿ ಉತ್ಸವ: ಹೆಲಿಕಾಪ್ಟರ್ ಸಂಚಾರದ ಸ್ಥಳ ಬದಲಾವಣೆ, ಏನು ಕಾರಣ?

ಮಂಗಳೂರು ಕರಾವಳಿ ಉತ್ಸವ ಪ್ರಯುಕ್ತ ಆರಂಭವಾಗಿದ್ದ ಹೆಲಿಕಾಪ್ಟರ್ ಸಂಚಾರದ ನಿಲ್ದಾಣವೀಗ ಮಂಗಳೂರು ಹೊರವಲಯದ ಅಡ್ಯಾರ್​​ನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನಕ್ಕೆ ಸ್ಥಳಾಂತರವಾಗಿದೆ.

ಮಂಗಳೂರು ಕರಾವಳಿ ಉತ್ಸವ: ಹೆಲಿಕಾಪ್ಟರ್ ಸಂಚಾರದ ಸ್ಥಳ ಬದಲಾವಣೆ, ಏನು ಕಾರಣ
ಮಂಗಳೂರು ಕರಾವಳಿ ಉತ್ಸವ: ಹೆಲಿಕಾಪ್ಟರ್ ಸಂಚಾರದ ಸ್ಥಳ ಬದಲಾವಣೆ, ಏನು ಕಾರಣ

ಮಂಗಳೂರು: ಕರಾವಳಿ ಉತ್ಸವ ಪ್ರಯುಕ್ತ ಸಾರ್ವಜನಿಕರ ಆಕರ್ಷಣೆಗೆಂದು ಆರಂಭಗೊಂಡಿದ್ದ ಹೆಲಿಕಾಪ್ಟರ್ ಸಂಚಾರದ ನಿಲ್ದಾಣವೀಗ ಮಂಗಳೂರು ಹೊರವಲಯದ ಅಡ್ಯಾರ್​​ನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನಕ್ಕೆ ಸ್ಥಳಾಂತರವಾಗಿದೆ. ಡಿಸೆಂಬರ್ 21ರ ಶನಿವಾರ ಬೆಳಗ್ಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಮತ್ತು ಮಹಾಲಿಂಗ ನಾಯ್ಕ ಅಮೈ ಉದ್ಘಾಟನಾ ಉಡ್ಡಯನ ಮಾಡಿದ್ದರು. ಹೆಲಿಕಾಪ್ಟರ್ ತಿರುಗಾಟಕ್ಕೆ ಆರಂಭದಲ್ಲೇ ತೊಡಕು ಉಂಟಾಗಿದ್ದರ ಕುರಿತು ಹೆಚ್​​ಟಿ ಕನ್ನಡ ಪ್ರಕಟಿಸಿತ್ತು. ‘ಕರಾವಳಿ ಉತ್ಸವ 2024: ಪ್ರಮುಖ ಆಕರ್ಷಣೆ ಹೆಲಿಕಾಪ್ಟರ್ ತಿರುಗಾಟಕ್ಕೆ ಆರಂಭದಲ್ಲೇ ತೊಡಕು, ಎಟಿಸಿ ಕ್ಲಿಯರೆನ್ಸ್ ಸಮಸ್ಯೆ, ಏನಿದು ಸಂಕಷ್ಟ’ ಎಂಬ ಶೀರ್ಷಿಕೆಯೊಂದಿಗೆ ವರದಿ ಪ್ರಕಟಿಸಲಾಗಿತ್ತು.

ಇದುವರೆಗೆ ಮೇರಿಹಿಲ್ ಹೆಲಿಪ್ಯಾಡ್​ನಿಂದ ಹೆಲಿಕಾಪ್ಟರ್ ಸಂಚಾರ ನಡೆಯುತ್ತಿತ್ತು. ತಾಂತ್ರಿಕ ಕಾರಣಗಳಿಂದ ಇದನ್ನು ಅಡ್ಯಾರಿಗೆ ಸ್ಥಳಾಂತರಿಸಲಾಗಿದೆ. ಸಾರ್ವಜನಿಕರು ಹೆಲಿಕಾಪ್ಟರ್​​ನಲ್ಲಿ ನಗರ ದರ್ಶನ ಮತ್ತು ಕಡಲ ಕಿನಾರೆಯ ಸೌಂದರ್ಯವನ್ನು ವೀಕ್ಷಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಲಿಕಾಪ್ಟರ್ ಪ್ರಯಾಣದ ಪ್ರತಿ ಟ್ರಿಪ್‍ನಲ್ಲಿ 6 ಜನರಿಗೆ ಸಂಚರಿಸಲು ಅವಕಾಶವಿದ್ದು, ಪ್ರತಿ ವ್ಯಕ್ತಿಗೆ ರೂ. 4,500 ದರ ನಿಗದಿಪಡಿಸಲಾಗಿದೆ. ಹೆಲಿಕಾಫ್ಟರ್​​ನಲ್ಲಿ ಸಂಚರಿಸಲು ಆಸಕ್ತರು ಬುಕ್ಕಿಂಗ್‍ಗಾಗಿ ವೆಬ್‍ಸೈಟ್ www.helitaxii.com (ಮೊಬೈಲ್ ಸಂಖ್ಯೆ:- 9400399999 / 7483432752) ಸಂಪರ್ಕಿಸಬಹುದಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಮಂಗಳೂರು ಮಹಾನಗರ ಪಾಲಿಕೆ ಸಹಕಾರದೊಂದಿಗೆ ಕರಾವಳಿ ಉತ್ಸವ ನಡೆಯುತ್ತಿದೆ. ಇದಕ್ಕೊಂದು ಮೆರುಗು ನೀಡಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಾದ ಹೆಲಿಕಾಪ್ಟರ್ ಮೂಲಕ ನಗರ ಪ್ರದಕ್ಷಿಣೆಗೆ ಆರಂಭದಲ್ಲೇ ತೊಡಕು ಎದುರಾಗಿತ್ತು. ಪ್ರತಿಯೊಂದು ಹಾರಾಟಕ್ಕೂ ATC (Air Traffic Control) ಕ್ಲಿಯರೆನ್ಸ್ ದೊರಕಬೇಕಾಗಿದ್ದು, ಇದಕ್ಕೆ ಮೇರಿಹಿಲ್ ಸೂಕ್ತ ಸ್ಥಳವಾಗದ ಕಾರಣ ಅಡ್ಯಾರ್​​ಗೆ ಸ್ಥಳಾಂತರಿಸಲಾಯಿತು.

ಬೆಂಗಳೂರಿನ ತುಂಬಿ ಏವಿಯೇಶನ್ ಎಂಬ ಖಾಸಗಿ ಸಂಸ್ಥೆಯ ಹೆಲಿಕಾಪ್ಟರ್ ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್​ಗೆ ಶುಕ್ರವಾರ ಮಧ್ಯಾಹ್ನ ಬಂದಿಳಿದಿತ್ತು. ಶುಕ್ರವಾರ ಸಂಜೆ ವೇಳೆ ಪ್ರಾಯೋಗಿಕವಾಗಿ 2 ಸುತ್ತು ನಗರಪ್ರದಕ್ಷಿಣೆ ಹಾಕಿ, ಪತ್ರಕರ್ತರಿಗೆ ಆಕಾಶದಿಂದ ನಗರ ನೋಡುವ ಅವಕಾಶ ಕಲ್ಪಿಸಿತು. ಸಾರ್ವಜನಿಕರಿಗೆ ಡಿಸೆಂಬರ್ 21ರಂದು ಅಂದರೆ ಶನಿವಾರ ಆರಂಭಗೊಂಡು, ಡಿಸೆಂಬರ್ 29ರವರೆಗೆ ಅಂದರೆ 9 ದಿನಗಳ ಕಾಲ ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್​ನಿಂದ ಹೆಲಿಕಾಪ್ಟರ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದೀಗ ಅಡ್ಯಾರ್​​ಗೆ ಸ್ಥಳಾಂತರಗೊಂಡಿದೆ. ಪ್ರತಿದಿನ ಬೆಳಗ್ಗೆ 9ರಿಂದ 1 ಗಂಟೆವರೆಗೆ ಹಾಗೂ ಮಧ್ಯಾಹ್ನ 2ರಿಂದ 5 ಗಂಟೆವರೆಗೆ ಹೆಲಿಕಾಪ್ಟರ್ ನಲ್ಲಿ ತಿರುಗಾಡಬಹುದು.

ಸಮಸ್ಯೆ ಏನು?

ಮೇರಿಹಿಲ್ ಹೆಲಿಪ್ಯಾಡ್ ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೆಚ್ಚು ದೂರವಿಲ್ಲ. ಹೀಗಾಗಿ ಇಲ್ಲಿಂದ ಹೆಲಿಕಾಪ್ಟರ್ ಹೊರಡುವ ಮೊದಲು ಏರ್ ಟ್ರಾಫಿಕ್ ಕಂಟ್ರೋಲ್​​​ನ ಅನುಮತಿಯನ್ನು ಪಡೆಯಬೇಕಾಗುತ್ತದೆ. ಆಗಸದಲ್ಲಿ ವಿಮಾನ ಗಳು ಹಾರಾಡುವಾಗ ಹೆಲಿಕಾಪ್ಟರ್ ಅದರೊಟ್ಟಿಗೆ ಹಾರಲು ಸಾಧ್ಯವಿಲ್ಲ. ಹೀಗಾಗಿ ಎಟಿಸಿ ಕ್ಲಿಯರೆನ್ಸ್ ದೊರಕಿದ ಬಳಿಕವಷ್ಟೇ ಹಾರಾಟ ಮಾಡಬೇಕು. ಸುಮಾರು ಐದರಿಂದ ಏಳು ನಿಮಿಷಗಳ ಹಾರಾಟಕ್ಕೆ ಕ್ಲಿಯರೆನ್ಸ್ ಬೇಕಾಗುತ್ತದೆ. ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ದಿನವಿಡೀ ವಿಮಾನಗಳ ಹಾರಾಟವಿರುತ್ತದೆ. ಒಂದೊಮ್ಮೆ ಮೇರಿಹಿಲ್ ನಿಂದ ಹೆಲಿಕಾಪ್ಟರ್ ಹಾರುವುದಾದರೂ ಈ ವಿಮಾನಗಳ ಹಾರಾಟದ ಸಮಯದ ಮಧ್ಯೆ ಅವಕಾಶ ಕಲ್ಪಿಸಿಕೊಳ್ಳಬೇಕಾಗಿತ್ತು. ಹೀಗಾಗಿ ಅಡ್ಯಾರ್​​ಗೆ ಸ್ಥಳಾಂತರ ಮಾಡಲಾಗಿದೆ.

Whats_app_banner