ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಪ್ರಜೆ ಬಂಧನ; ಪತ್ನಿ, ಮಕ್ಕಳೊಂದಿಗೆ ನೆಲೆಸಿದ್ದ ಆರೋಪಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಪ್ರಜೆ ಬಂಧನ; ಪತ್ನಿ, ಮಕ್ಕಳೊಂದಿಗೆ ನೆಲೆಸಿದ್ದ ಆರೋಪಿ

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಪ್ರಜೆ ಬಂಧನ; ಪತ್ನಿ, ಮಕ್ಕಳೊಂದಿಗೆ ನೆಲೆಸಿದ್ದ ಆರೋಪಿ

ಬೆಂಗಳೂರಿನ ಜಿಗಣಿಯಲ್ಲಿ ಅಕ್ರಮವಾಗಿ ನೆಲಸಿದ್ದ ಪಾಕಿಸ್ತಾನ ಪ್ರಜೆಯನ್ನು ಬಂಧಿಸಲಾಗಿದೆ. ದಶಕದ ಹಿಂದೆ ಭಾರತಕ್ಕೆ ನುಸುಳಿದ್ದ ಈಗ ಪತ್ನಿ, ಮಕ್ಕಳೊಂದಿಗೆ ನೆಲೆಸಿದ್ದ. ಸದ್ಯ ಬಂಧನಕ್ಕೆ ಒಳಗಾಗಿದ್ದು, ತನಿಖೆ ಮುಂದುವರೆದಿದೆ.

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಪ್ರಜೆ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಪ್ರಜೆ ಬಂಧನ

ಬೆಂಗಳೂರು: ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಪ್ರಜೆ ಮತ್ತು ಇತರ ಮೂವರು ವಿದೇಶೀಯರನ್ನು ಬೆಂಗಳೂರಿನ ಹೊರ ವಲಯದ ಜಿಗಣಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಈ ಪಾಕಿಸ್ತಾನ ಪ್ರಜೆಯು ತನ್ನ ಬಾಂಗ್ಲಾದೇಶ ಮೂಲದ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಜಿಗಣಿಯ ಅಪಾರ್ಟ್‌ ಮೆಂಟ್​ವೊಂದರಲ್ಲಿ ನೆಲಸಿದ್ದ. ಕಳೆದ ವಾರ ಬೆಂಗಳೂರಿನಲ್ಲಿ ಉಲ್ಫಾ ಸಂಘಟನೆಯ ಉಗ್ರನೊಬ್ಬನನ್ನು ಬಂಧಿಸಿದ ನಂತರ ಈ ಪಾಕ್‌ ಪ್ರಜೆಯೂ ಬೆಂಗಳೂರಿನಲ್ಲಿಯೇ ನೆಲೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನಾಧರಿಸಿ ಭಾನುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಲಾಗಿದೆ. ಪಾಕಿಸ್ತಾನ ಪ್ರಜೆಯು ಧರ್ಮದ ವಿಷಯದಲ್ಲಿ ಆ ದೇಶದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ. ಆದ್ದರಿಂದ ಪಾಕಿಸ್ತಾನದಲ್ಲಿ ನೆಲೆಸಲು ಸಾಧ್ಯವಾಗದೆ ಆತ ಬಾಂಗ್ಲಾದೇಶಕ್ಕೆ ತೆರಳಿದ್ದ. ನಂತರ ಅಲ್ಲಿಯೇ ಬಂಗ್ಲಾದೇಶದ ಯುವತಿಯೊಬ್ಬರನ್ನು ವಿವಾಹವಾಗಿ ಡಾಕಾದಲ್ಲಿ ನೆಲೆಸಿದ್ದ. ನಂತರ ೨೦೧೪ರಲ್ಲಿ ಪತ್ನಿಯೊಂದಿಗೆ ಭಾರತದ ದೆಹಲಿಗೆ ಆಗಮಿಸಿದ್ದ. ಅಲ್ಲಿ ಸ್ಥಳೀಯ ವ್ಯಕ್ತಿಯೊಬ್ಬನ ನೆರವಿನಿಂದ ಆಧಾರ್‌ ಕಾರ್ಡ್‌, ಚಾಲನಾ ಪತ್ರ ಮತ್ತು ಪಾಸ್‌ ಪೋರ್ಟ್‌ ಮಾಡಿಸಿಕೊಂಡಿದ್ದ.

ನಂತರ 2018ರಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದ. ಈತ ಜಿಗಣಿಯಲ್ಲಿ ಹೋಟೆಲ್‌ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನು ಈ ವಿಷಯ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ಹತ್ತು ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದರೂ ಕೇಂದ್ರ ಗುಪ್ತಚರ ಇಲಾಖೆಗೆ ತಿಳಿಯದಿರುವುದು ಅಚ್ಚರಿ ಮೂಡಿಸಿದೆ. ಸಧ್ಯ ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದಿದ್ದಾರೆ. ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ ವಾಪಸ್‌ ಕಳುಹಿಸಲಾಗುತ್ತಿದೆ. ಗಡಿ ಭದ್ರತಾ ಲೋಪದಿಂದ ಬಾಂಗ್ಲಾದೇಶದ ಪ್ರಜೆಗಳು ದೇಶದೊಳಗೆ ನುಸುಳುತ್ತಿದ್ದಾರೆ. ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಂಧಿತ ಶಂಕಿತ ಉಗ್ರನೂ ಇಲ್ಲೇ ನೆಲೆಸಿದ್ದ

ರಾಷ್ಟ್ರೀಯ ತನಿಖಾ ದಳ (‌ಎನ್​ಐಎ) ಕಳೆದ ವಾರ ನಿಷೇಧಿತ ಉಲ್ಫಾ ಸಂಘಟನೆಯ ಶಂಕಿತ ಉಗ್ರನೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಿತ್ತು. ಈತನನ್ನು ಗಿರೀಶ್ ಬೋರಾ ಎಂದು ಗುರುತಿಸಲಾಗಿದೆ. ಈತನೂ ತನ್ನ ಕುಟುಂಬದೊಂದಿಗೆ ಜಿಗಣಿಯಲ್ಲೇ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗಿರೀಶ್‌ ಬೋರಾ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಅಸ್ಸಾಂನಿಂದ ಆಗಮಿಸಿದ ಎನ್​ಐಎ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿ ಈತನನ್ನು ಬಂಧಿಸಿದ್ದರು. ಬಲ್ಲ ಮೂಲಗಳ ಪ್ರಕಾರ ಗಿರೋಶ್‌ ಬೋರಾ, ಅಸ್ಸಾಂ ರಾಜಧಾನಿ ಗೌಹಾಟಿಯ ಅನೇಕ ಪ್ರದೇಶಗಳಲ್ಲಿ ಸುಧಾರಿತ ಸ್ಫೋಟಕ ವಸ್ತುಗಳನ್ನು ಇರಿಸಿ ಅಲ್ಲಿಂದ ಪರಾರಿಯಾಗಿ ಬೆಂಗಳೂರಿಗೆ ಆಗಮಿಸಿ ತಲೆ ಮರೆಸಿಕೊಂಡಿದ್ದ. ಈತನ ಬಂಧನದ ನಂತರ ಪಾಕಿಸ್ತಾನದ ಪ್ರಜೆಯೂ ಬೆಂಗಳೂರಿನಲ್ಲಿ ನೆಲೆಸಿರುವ ವಿಚಾರ ತಿಳಿದು ಬಂದಿತ್ತು.

Whats_app_banner