ದೇಶದ ವಿವಿಧೆಡೆ ಮತ್ತೆ ಮಳೆರಾಯನ ಆರ್ಭಟ ಶುರು; ಕೇರಳ, ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಯೆಲ್ಲೋ ಅಲರ್ಟ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೇಶದ ವಿವಿಧೆಡೆ ಮತ್ತೆ ಮಳೆರಾಯನ ಆರ್ಭಟ ಶುರು; ಕೇರಳ, ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಯೆಲ್ಲೋ ಅಲರ್ಟ್

ದೇಶದ ವಿವಿಧೆಡೆ ಮತ್ತೆ ಮಳೆರಾಯನ ಆರ್ಭಟ ಶುರು; ಕೇರಳ, ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಯೆಲ್ಲೋ ಅಲರ್ಟ್

Weather Forecast Today: ಮುಂದಿನ 5-6 ದಿನಗಳವರೆಗೆ ಈಶಾನ್ಯ ರಾಜ್ಯಗಳಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ದೇಶದ ವಿವಿಧೆಡೆ ಮತ್ತೆ ಮಳೆರಾಯನ ಆರ್ಭಟ ಶುರು
ದೇಶದ ವಿವಿಧೆಡೆ ಮತ್ತೆ ಮಳೆರಾಯನ ಆರ್ಭಟ ಶುರು

ನವದೆಹಲಿ: ದೇಶದಲ್ಲಿ ಮುಂಗಾರು ಮತ್ತೆ ಚುರುಕು ಪಡೆದಿದ್ದು, ಭಾರತೀಯ ಹವಾಮಾನ ಇಲಾಖೆ ಜನತೆಗೆ ಎಚ್ಚರಿಕೆ ನೀಡಿದೆ. ಮುಂದಿನ 5-6 ದಿನಗಳವರೆಗೆ ಈಶಾನ್ಯ ರಾಜ್ಯಗಳಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ. ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ ಮತ್ತು ತ್ರಿಪುರಾ ರಾಜ್ಯದಲ್ಲಿ ವರುಣನ ರುದ್ರನರ್ತನ ನಡೆಯಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಬಿಹಾರ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲೂ ರಣಭೀಕರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸೂಚಿಸಿದೆ. ಅಲ್ಲದೆ, ಕರ್ನಾಟಕ, ಕೇರಳ ಸೇರಿ ಈ ಮೇಲೆ ಉಲ್ಲೇಖಿಸಿದ ರಾಜ್ಯಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ರಾಜ್ಯಗಳಾದ ಕೇರಳ, ಕರಾವಳಿ ಕರ್ನಾಟಕ ಮತ್ತು ಲಕ್ಷದ್ವೀಪಗಳಲ್ಲಿ ವ್ಯಾಪಕ ಮಳೆಯಾಗಲಿದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ವಾರವಿಡೀ ಚದುರಿದ ಮಳೆಯಾಗುತ್ತದೆ. ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಅವಾಂತರ ಸೃಷ್ಟಿಸಿದೆ. ಕಳೆದ 72 ಗಂಟೆಗಳಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಿಸಿದೆ. ಐಎಂಡಿ ಅಂಕಿ-ಅಂಶಗಳ ಪ್ರಕಾರ, ಸೆಪ್ಟೆಂಬರ್​​ 30ರ ಭಾನುವಾರ 75 ಜಿಲ್ಲೆಗಳ ಪೈಕಿ 45ರಲ್ಲಿ ಅಧಿಕ ಮಳೆಯಾಗಿದೆ. 11 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳನ್ನು ತುರ್ತಾಗಿ ನಡೆಸಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಭೀಕರ ಮಳೆ

ಬಿಹಾರದಲ್ಲಿನ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಹಲವಾರು ನದಿಗಳು ಮಿತಿ ಮೀರಿ ಹರಿಯುತ್ತಿವೆ. ನಿರಂತರ ಮಳೆಯು ಇಂಡೋ-ನೇಪಾಳ ಗಡಿಯ ಸಮೀಪವಿರುವ ಜಿಲ್ಲೆಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಭಾರಿ ಮಳೆಯ ಮುನ್ಸೂಚನೆ ಮತ್ತು ರಾಜ್ಯದ ಕೆಲವು ಭಾಗಗಳಲ್ಲಿ ಸಂಭಾವ್ಯ ಹಠಾತ್ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಿದೆ. ಪಶ್ಚಿಮ ಮತ್ತು ಪೂರ್ವ ಚಂಪಾರಣ್, ಸಿತಾಮರ್ಹಿ, ಶಿಯೋಹರ್, ಮುಜಾಫರ್‌ಪುರ್, ಗೋಪಾಲ್‌ಗಂಜ್, ಸಿವಾನ್, ಸರನ್, ವೈಶಾಲಿ, ಪಾಟ್ನಾ, ಮಧುಬನಿ ಜೆಹಾನಾಬಾದ್ ಮತ್ತು ಭೋಜ್‌ಪುರ ಪ್ರದೇಶಗಳಲ್ಲಿ ಗಮನಾರ್ಹ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸೂಚಿಸಿದೆ.

ಹಿಮಾಚಲದ ಕೆಲವೆಡೆ ಲಘು ಮಳೆ

ಹಿಮಾಚಲ ಪ್ರದೇಶದ ಹಲವಾರು ಭಾಗಗಳಲ್ಲಿ ಭಾನುವಾರ ಲಘು ಮಳೆ ದಾಖಲಾಗಿದೆ. ಆದಾಗ್ಯೂ, ಸ್ಥಳೀಯ ಹವಾಮಾನ ಇಲಾಖೆಯು ಅಕ್ಟೋಬರ್ 5 ರವರೆಗೆ ಹವಾಮಾನ ಶುಷ್ಕವಾಗಿರುತ್ತದೆ ಎಂದು ಮುನ್ಸೂಚನೆ ನೀಡಿದೆ.

ಕೇರಳದಲ್ಲೂ ವರುಣನ ಆರ್ಭಟ

ಅಕ್ಟೋಬರ್ 5ರವರೆಗೆ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ರಣಭೀಕರ ಮಳೆಯ ಕಾರಣ ಅಕ್ಟೋಬರ್ 1 ರವರೆಗೆ 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಿದೆ. ಸೆಪ್ಟೆಂಬರ್ 30ರಂದು ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಕೋಝಿಕ್ಕೋಡ್, ವಯನಾಡ್ ಮತ್ತು ಕಣ್ಣೂರು ಅಲರ್ಟ್‌ನಲ್ಲಿದೆ. ಅಕ್ಟೋಬರ್ 1ರಂದು ಪತ್ತನಂತಿಟ್ಟ, ಎರ್ನಾಕುಲಂ ಮತ್ತು ಇಡುಕ್ಕಿಯಲ್ಲಿ ಯಲ್ಲೋ ಅಲರ್ಟ್ ಇರುತ್ತದೆ. ಈ ಅವಧಿಯಲ್ಲಿ ಕೇರಳದ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಇಲಾಖೆ ಎಚ್ಚರಿಸಿದೆ.

ಗುಜರಾತ್‌ನ ಹಲವೆಡೆ ಭಾರೀ ಮಳೆ

ದಕ್ಷಿಣ ಗುಜರಾತ್‌ನ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ, ನವರಾತ್ರಿ ಮೊದಲ 3 ದಿನಗಳಲ್ಲಿ ಹೆಚ್ಚಿನ ಭಾಗದಲ್ಲಿ ಒಣ ಹವಾಮಾನ ಇರುತ್ತದೆ ಎಂದು ಸೂಚಿಸುತ್ತದೆ. ಸೌರಾಷ್ಟ್ರದ ಖೇಡಾ, ಆನಂದ್, ಪಂಚಮಹಲ್, ದಾಹೋದ್, ವಡೋದರಾ, ನರ್ಮದಾ, ಭರೂಚ್, ಛೋಟೌಡೆಪುರ್, ಅಮ್ರೇಲಿ ಮತ್ತು ಭಾವನಗರ ಜಿಲ್ಲೆಗಳ ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ವಾರದಲ್ಲೂ ಇಂತಹದ್ದೇ ಮಳೆಯನ್ನು ನಿರೀಕ್ಷಿಸಲಾಗಿದೆ. ಅಕ್ಟೋಬರ್ 3-5 ರಿಂದ ಸೂರತ್, ಡ್ಯಾಂಗ್, ತಾಪಿ, ನವಸಾರಿ, ವಲ್ಸಾದ್, ದಮನ್ ಮತ್ತು ದಾದ್ರಾ ನಗರ ಹವೇಲಿ ಸೇರಿದಂತೆ ಹಲವೆಡೆ ಸಾಧಾರಣ ಅಥವಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಭಾನುವಾರ, ವಡೋದರಾದಲ್ಲಿ ಕೇವಲ ಎರಡು ಗಂಟೆಗಳಲ್ಲಿ 76 ಮಿಮೀ ಮಳೆಯಾಗಿದೆ. ಇದರಿಂದ ಹಲವು ಪ್ರದೇಶಗಳು ಜಲಾವೃತವಾಗಿದ್ದು ಜನ ಜೀವನ ಅಸ್ತವ್ಯಸ್ತಗೊಳಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.