ಕೆಆರ್ಎಸ್ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ರೇವ್ ಪಾರ್ಟಿ; 50ಕ್ಕೂ ಹೆಚ್ಚು ಮಂದಿ ಬಂಧನ, ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ
Mysore Rave Party: ಮೈಸೂರಿನ ಮೀನಾಕ್ಷಿಪುರದ ಖಾಸಗಿ ಜಮೀನಿನಲ್ಲಿ ಶನಿವಾರ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಕೆಆರ್ಎಸ್ ಹಿನ್ನೀರಿನ ಬಳಿ ರೇವ್ ಪಾರ್ಟಿ ನಡೆಸಲಾಗಿದೆ.
ಮೈಸೂರು: ಕೆಆರ್ಎಸ್ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, 50ಕ್ಕೂ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಯುವತಿಯರು ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಯುವತಿಯರು ಮಾದಕ ವಸ್ತುಗಳನ್ನು ಸೇವಿಸಿ ನಶೆಯಲ್ಲಿ ತೇಲಾಡುತ್ತಿದ್ದರು.
ಮೈಸೂರು ತಾಲೂಕಿನ ಮೀನಾಕ್ಷಿಪುರದ ಬಳಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿದ ಪರಿಣಾಮ 15ಕ್ಕೂ ಹೆಚ್ಚು ಯುವತಿಯರು ಖಾಸಗಿ ಜಮೀನಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎನ್ನಲಾಗಿದೆ. ಕೆಆರ್ಎಸ್ ಜಲಾಶಯದ ಹಿನ್ನೀರು ಪ್ರದೇಶದಲ್ಲಿರುವ ಮೀನಾಕ್ಷಿಪುರ ಇದೆ.
ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಇಲವಾಲ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ನಾಯಕ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಇಲವಾಲ ಪೊಲೀಸ್ ಠಾಣೆಗೆ ಎಫ್ಎಸ್ಎಲ್ ತಂಡ ಆಗಮಿಸಿದ್ದು, ರೇವ್ ಪಾರ್ಟಿ ವೇಳೆ ಬಳಸಿರುವ ಮಾದಕ ವಸ್ತುಗಳ ಪರಿಶೀಲನೆ ನಡೆಸಿದ್ದಾರೆ. ಒಟ್ಟು 54 ಮಂದಿ ಬಂಧನ. ಎಸ್ಎಫ್ಎಲ್ ತಂಡದ ಅಧಿಕಾರಿಗಳು ಬಂಧಿತರ ರಕ್ತದ ಸ್ಯಾಂಪಲ್ ಕಲೆ ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ
ಮೈಸೂರು ಹೊರವಲಯದಲ್ಲಿ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಜಿಲ್ಲಾ ಎಸ್ಪಿ ನನಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅದರ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಕೆಡಿಪಿ ಸಭೆಯಲ್ಲಿಯೂ ಇದರ ಬಗ್ಗೆ ಚರ್ಚೆ ಮಾಡಿದ್ದೆವು. ರೇವ್ ಪಾರ್ಟಿ ನಡೆದಿರುವ ಬಗ್ಗೆ ಅಗತ್ಯ ಕ್ರಮ ಆಗುತ್ತದೆ ಎಂದು ಹೇಳಿದ್ದಾರೆ.