Shankarnag Natakotsava 2022: ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.26ರಿಂದ 30ರ ತನಕ ಶಂಕರ್‌ನಾಗ್ ನಾಟಕೋತ್ಸವ ಸಂಭ್ರಮ; ಯಾವ ದಿನ ಯಾವ ನಾಟಕ?
Shankarnag Natakotsava 2022: ರಾಜ್ಯ ರಾಜಧಾನಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.26ರಿಂದ 30ರ ತನಕ ಶಂಕರ್‌ನಾಗ್ ನಾಟಕೋತ್ಸವದ ಸಂಭ್ರಮ. ವಿವಿಧ ನಾಟಕ ತಂಡಗಳು ಐದು ದಿನ ನಿತ್ಯವೂ ಸಂಜೆ ದಿನಕ್ಕೆ ಒಂದರಂತೆ ನಾಟಕ ಪ್ರದರ್ಶಿಸಲಿವೆ. ಅವುಗಳ ವಿವರ ಇಲ್ಲಿದೆ.
ಬೆಂಗಳೂರು: ವರ್ಷಾಂತ್ಯದ ನಾಟಕ ಸಂಭ್ರಮಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಸಜ್ಜಾಗುತ್ತಿದೆ. ಇಲ್ಲಿ ಡಿ.26ರಿಂದ 30ರ ತನಕ ಶಂಕರ್‌ನಾಗ್ ನಾಟಕೋತ್ಸವ ನಡೆಯಲಿದೆ. ವಿವಿಧ ನಾಟಕ ತಂಡಗಳು ಐದು ದಿನ ನಿತ್ಯವೂ ಸಂಜೆ ದಿನಕ್ಕೆ ಒಂದರಂತೆ ನಾಟಕ ಪ್ರದರ್ಶಿಸಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ರಂಗಪಯಣ ಈ ನಾಟಕೋತ್ಸವವನ್ನು ಆಯೋಜಿಸಿದೆ. ಇದು ಐದನೇ ವರ್ಷದ ನಾಟಕೋತ್ಸವ.
ಡಿಸೆಂಬರ್ 26
ಸಂಜೆ 6ಕ್ಕೆ - ಉದ್ಘಾಟನಾ ಸಮಾರಂಭ. ರಂಗಗೀತೆಗಳ ಪ್ರಸ್ತುತಿ. ಅದಾದ ಬಳಿಕ ಶಂಕರ್‌ನಾಗ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ಸಲದ ಪ್ರಶಸ್ತಿಗೆ ರಂಗ ಕಲಾವಿದರಾದ ನರಸಿಂಹ ಮೂರ್ತಿ, ಕುಮಾರಿ ಉಮಾ ವೈ.ಜಿ., ತಾಯಿ ಲೋಕೇಶ್ ಭಾಜನರಾಗಿದ್ದಾರೆ.
ರಾತ್ರಿ 7.30ಕ್ಕೆ - ನಾಟಕ ನಿರಂಜನರ ʻಚಿರಸ್ಮರಣೆʼ - ಭೂಮಿಕ (ಜಿಕೆವಿಕೆ) ತಂಡ ಈ ನಾಟಕವನ್ನು ಪ್ರದರ್ಶಿಸಲಿದೆ. ಇದರ ವಿನ್ಯಾಸ ಮತ್ತು ನಿರ್ದೇಶನ ಮಾಲತೇಶ್ ಬಡಿಗೇರ್ ಅವರದ್ದು.
ಡಿಸೆಂಬರ್ 27
ಸಂಜೆ 5ಕ್ಕೆ - ʻಮಕ್ಕಳ ರಂಗಭೂಮಿʼ ಥೀಮ್‌ನ ಕಾರ್ಯಕ್ರಮ ನಡೆಯಲಿದೆ.
ಸಂಜೆ 6.05ಕ್ಕೆ - ಕಥನವಾಗದ ಸಂಕಥನ ಕಾರ್ಯಕ್ರಮದಲ್ಲಿ ಡಾ.ಜಿ.ಲಕ್ಷ್ಮೀಪ್ರಸಾದ್ ಅವರು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಭಾಗದ ಭೂತಾರಾಧನೆಯ ಚಿತ್ರಣ ನೀಡಲಿದ್ದಾರೆ. ತರುವಾಯ ಸಾತ್ವಿಕ ರಂಗತಂಡದಿಂದ ಎರಡು ಪಾಡ್ದನ ಹಾಡುವ ಕಾರ್ಯಕ್ರಮ ಇದೆ.
ರಾ್ 7.15ಕ್ಕೆ - ನಾಟಕ - ಹುಲಿ ಹಿಡಿದ ಕಡಸು. ಡಾ.ಡಿ.ಕೆ.ಚೌಟ ಅವರ ರಚನೆ ಇದಾಗಿದ್ದು, ದೃಶ್ಯ ಕಾವ್ಯ ತಂಡ ಇದನ್ನು ಪ್ರಸ್ತುತ ಪಡಿಸಲಿದೆ. ಇದರ ವಿನ್ಯಾಸ ಮತ್ತು ನಿರ್ದೇಶನ ನಂಜುಂಡೇ ಗೌಡ ಸಿ. ಅವರದ್ದು.
ಡಿಸೆಂಬರ್ 28
ಸಂಜೆ 5ಕ್ಕೆ - ಪದ್ಯ ಓದು ಕಾರ್ಯಕ್ರಮವನ್ನು ಸಹ್ಯಾದ್ರಿ ನಾಗರಾಜ್ ಅವರ ತಂಡ ನಡೆಸಿಕೊಡಲಿದೆ. ನೃತ್ಯ ರೂಪಕದ ಮಾದರಿಯಲ್ಲಿ ವಿಶೇಷವಾದ ಪ್ರಸ್ತುತಿ ಇರಲಿದೆ.
ಸಂಜೆ 6.05ಕ್ಕೆ ನಾಗರಕಟ್ಟೆ ಕಾರ್ಯಕ್ರಮ. ನಾಗರಕಟ್ಟೆ ಶಂಕರ್‌ನಾಗ್ ಅವರ ಊರಾದ ಕಾರಣ ಅದನ್ನೆ ಈ ಕಾರ್ಯಕ್ರಮದ ಹೆಸರಾಗಿ ಇಡಲಾಗಿದೆ. ಶಂಕರ್‌ನಾಗ್ ಜತೆಗೆ ಒಡನಾಡಿದವರು ಅವರ ನೆನಪುಗಳನ್ನು ಶಂಕರ್‌ನಾಗ್ ವ್ಯಕ್ತಿತ್ವವನ್ನು ಇಲ್ಲಿ ಅನಾವರಣ ಮಾಡುತ್ತಾರೆ. ಇದಾಗಿ ಪುಸ್ತಕ ಬಿಡಗುಡೆ ಇರಲಿದೆ.
ರಾತ್ರಿ 7ಕ್ಕೆ - ನಾಟಕ ಚೋಮನ ದುಡಿ (ಡಾ.ಕೆ.ಶಿವರಾಮಕಾರಂತರ ಕಾದಂಬರಿ ಆಧಾರಿತ) ರೂಪಾಂತರ ತಂಡ ಇದನ್ನು ಪ್ರದರ್ಶಿಸಲಿದೆ. ರಂಗ ರೂಪ ಆರ್.ನಾಗೇಶ್ ಅವರದ್ದು. ಕೆ.ಎಸ್.ಡಿ.ಎಲ್.ಚಂದ್ರು ಅವರ ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶಿತವಾಗಲಿದೆ.
ಡಿಸೆಂಬರ್ 29
ಸಂಜೆ 5ಕ್ಕೆ - ಕಾರ್ಮಿಕ ರಂಗಭೂಮಿ ಥೀಮ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ರಸಋಷಿ ಕುವೆಂಪು ರಚನೆಯ ಜಲಗಾರ ನಾಟಕದ ತುಣುಕು ಪ್ರದರ್ಶನ ಇರಲಿದೆ.
ಸಂಜೆ 6ಕ್ಕೆ - ಕುವೆಂಪು ಜಯಂತಿ ಪ್ರಯುಕ್ತ ಅವರ ರಚನೆಯ ಆಯ್ದ ಭಾಗದ ರಂಗ ಪ್ರಯೋಗ ಇರಲಿದೆ. ಪದ್ಯ-ಗದ್ಯಗಳ ಕಾವ್ಯಾನುಸಂಧಾನ, ಹಾಡು ಹಬ್ಬ ನಡೆಯಲಿದೆ.
ಸಂಜೆ 7ಕ್ಕೆ - ನಾಟಕ ಪೂಲನ್ ದೇವಿ. ಇದರ ರಂಗರೂಪ, ವಿನ್ಯಾಸ, ನಿರ್ದೇಶನ, ಸಂಗೀತ ರಾಜ್ ಗುರು ಅವರದ್ದು.
ಡಿಸೆಂಬರ್ 30
ಸಂಜೆ 6ಕ್ಕೆ ಸಮಾರೋಪ ಸಮಾರಂಭ ಮತ್ತು ರಂಗಗೀತೆಗಳ ಕಾರ್ಯಕ್ರಮ ಆಯೋಜನೆ ಆಗಿದೆ.
ಅದಾದ ಬಳಿಕ, ಅರೆಹೊಳೆ ಪ್ರತಿಷ್ಠಾನ ಮತ್ತು ಕಲಾಬಿ ಥಿಯೇಟರ್ ತಂಡ ʻಧ್ವಯʼ ನಾಟಕವನ್ನು ಪ್ರದರ್ಶಿಸಲಿದೆ. ರಂಗ ಪಠ್ಯ ಮತ್ತು ನಿರ್ದೇಶನ ಪ್ರಶಾಂತ್ ಉದ್ಯಾವರ ಅವರದ್ದು.
ಹೆಚ್ಚಿನ ಮಾಹಿತಿಗೆ ಶಂಕರ್‌ನಾಗ್ ನಾಟಕೋತ್ಸವದ ಫೇಸ್‌ಬುಕ್ ಪುಟವನ್ನು ಗಮನಿಸಬಹುದು.