ಶೋಭಾ ಕರಂದ್ಲಾಜೆ ಯಾವ ಕ್ಷೇತ್ರದಿಂದ ಕಣಕ್ಕೆ; ಬಿಎಸ್ವೈ ಜೊತೆ ಅಂತರ ಕಾಯ್ದುಕೊಂಡಿದ್ದೇಕೆ ಕೇಂದ್ರ ಸಚಿವೆ?
Shobha Karandlaje: ಲೋಕಸಭಾ ಚುನಾವಣೆ ಗರಿಗೆದರಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಲ್ಲದೆ, ಶೋಭಾ ಅವರು ವಿಜಯೇಂದ್ರ ಅವರನ್ನು ಇದುವರೆಗೂ ಅಭಿನಂದಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. (ವರದಿ: ಎಚ್.ಮಾರುತಿ)
ಬಿವೈ ವಿಜಯೇಂದ್ರ ಅವರು (BY Vijayendra) ರಾಜ್ಯ ಬಿಜೆಪಿ ಅಧ್ಯಕ್ಷರಾದ ನಂತರ ಪಕ್ಷದಲ್ಲಿ ಒಗ್ಗಟ್ಟಿಗಿಂತ ಬಿಕ್ಕಟ್ಟುಗಳೇ ಹೆಚ್ಚುತ್ತಿವೆ. ಪಕ್ಷದ ಆಂತರಿಕ ಬೆಳವಣಿಗೆಗಳನ್ನು ಅವಲೋಕಸಿದರೆ ಅವರ ಹಾದಿ ಸುಗಮವಲ್ಲ ಎನ್ನುವುದು ಕಂಡು ಬರುತ್ತಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಅನೇಕ ಹಿರಿಯ ಬಿಜೆಪಿ ನಾಯಕರು ಮತ್ತೆ ಸ್ಪರ್ಧಿಸುವ ಅನುಮಾನಗಳಿವೆ. ಅಲ್ಲದೆ, ಸುರಕ್ಷಿತ ಎನ್ನುವ ಕ್ಷೇತ್ರಗಳಲ್ಲಿಯೂ ಅನಿಶ್ಚತತೆ ತಲೆದೋರಿದೆ.
ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು (Shobha Karandlaje) ಮತ್ತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆಯೇ ಎಂಬ ಅನುಮಾನಗಳು ಉಂಟಾಗಿವೆ. ಸಚಿವೆಯಾದ ನಂತರ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಕಡಿಮೆ. ಅದರಲ್ಲೂ ಕಳೆದ ನವಂಬರ್ನಲ್ಲಿ ವಿಜಯೇಂದ್ರ ರಾಜ್ಯದ ಚುಕ್ಕಾಣಿ ಹಿಡಿದ ನಂತರ ಚಿಕ್ಕಮಗಳೂರಿಗೆ ಬಿಡಿ, ರಾಜ್ಯಕ್ಕೆ ನೀಡುತ್ತಿರುವ ಭೇಟಿಯೂ ಅಪರೂಪವಾಗಿದೆ.
ಪಟ್ಟು ಹಿಡಿದ ಬೆಂಬಲಿಗರು
ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಬಿಜೆಪಿಗೆ ಸುರಕ್ಷಿತ ಎನ್ನುವುದರಲ್ಲಿ ಅನುಮಾನಗಳಿಲ್ಲ. ಆದರೆ ಪಕ್ಷದೊಳಗೆ ನಡೆಯುತ್ತಿರುವ ಶೀತಲ ಸಮರದಿಂದ ಹಿರಿಯ ಮುಖಂಡರು ಶೋಭಾ ಅವರನ್ನು ಈ ಸುರಕ್ಷಿತ ಕ್ಷೇತ್ರದಿಂದ ವಲಸೆ ಕಳುಹಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರ ಬೆಂಬಲಿಗರು ಶೋಭಾ ಮತ್ತೆ ಇಲ್ಲಿಂದಲೇ ಮತ್ತೆ ಆರಿಸಿ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಶೋಭಾ ಕರಂದ್ಲಾಜೆ ವಲಸೆ?
ಪಕ್ಷದ ಹಿರಿಯ ನಾಯಕರು ಅವರನ್ನು ಬೆಂಗಳೂರು ಉತ್ತರ ಅಥವಾ ತುಮಕೂರು ಕ್ಷೇತ್ರಕ್ಕೆ ವಲಸೆ ಕಳುಹಿಸುವ ಮಾತುಗಳನ್ನಾಡುತ್ತಿದ್ದಾರೆ. ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂದು ಹೈಕಮಾಂಡ್ ಆದೇಶ ನೀಡಿದೆ. ಕೆಲವು ಕ್ಷೇತ್ರಗಳ ಅಭ್ಯರ್ಥಿಗಳು ಅದಲು ಬದಲಾದರೂ ಅಚ್ಚರಿಪಡಬೇಕಿಲ್ಲ. ಅಥವಾ ಹೊಸಮುಖಗಳನ್ನು ಪರಿಚಯಿಸಿದರೂ ಆಶ್ಚರ್ಯವೇನಿಲ್ಲ. ಒಟ್ಟಾರೆ ಗೆಲುವಷ್ಟೇ ಮುಖ್ಯವಾಗುತ್ತದೆ ಎಂದು ಮುಖಂಡರೊಬ್ಬರು ಹೇಳುತ್ತಾರೆ.
ಬಿಎಸ್ವೈ ಜೊತೆಗೆ ಅಂತರ ಕಾಯ್ದುಕೊಂಡ ಸಚಿವೆ
ತುಮಕೂರು ಕ್ಷೇತ್ರದಿಂದ ವೀರಶೈವ ಲಿಂಗಾಯತರಿಗೆ ಟಿಕೆಟ್ ನೀಡಲೇಬೇಕಾಗಿದ್ದು, ಅಲ್ಲಿ ಶೋಭಾ ಅವರಿಗೆ ಟಿಕೆಟ್ ಸಿಗುವುದು ಕಷ್ಟ. ಯಡಿಯೂರಪ್ಪ ಅವರು 2019ರಲ್ಲಿ ಮತ್ತೆ ಮುಖ್ಯಮಂತ್ರಿಯಾದಾಗಿನಿಂದಲೂ ಶೋಭಾ ಅಂತರ ಕಾಯ್ದುಕೊಂಡಿದ್ದಾರೆ. ವಿಜಯೇಂದ್ರ ಅಧ್ಯಕ್ಷರಾದ ನಂತರ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ. ವಿಜಯೇಂದ್ರ ಹಮ್ಮಿಕೊಳ್ಳುವ ಎಲ್ಲಾ ಸಮಾರಂಭಗಳಿಂದಲೂ ದೂರ ಉಳಿದಿದ್ದಾರೆ.
ವಿಜಯೇಂದ್ರರನ್ನು ಇನ್ನೂ ಭೇಟಿಯೇ ಆಗಿಲ್ಲ
ಅಷ್ಟೇ ಏಕೆ, ಇದುವರೆಗೂ ಪಕ್ಷದ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿಲ್ಲ ಎಂದರೆ ಅವರ ಸಂಬಂಧ ಎಂತಹುದು ಎಂದು ಅರ್ಥವಾದೀತು. ನಾನು ಕೇಂದ್ರ ಸಚಿವೆಯಾಗಿದ್ದು ದೇಶಾದ್ಯಂತ ಪ್ರವಾಸ ಕೈಗೊಳ್ಳಬೇಕಾಗಿರುತ್ತದೆ. ಪಕ್ಷದ ವರಿಷ್ಠರು ನೀಡಿರುವ ಅನೇಕ ಜವಬ್ಧಾರಿಗಳನ್ನು ನಿಭಾಯಿಸಬೇಕಿದೆ. ಆದ್ದರಿಂದ ನೂತನ ಅಧ್ಯಕ್ಷರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಸಮಯದ ಕೊರತೆ ಇದ್ದು ಬೇರೆ ಅರ್ಥಗಳನ್ನು ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ
2014 ಮತ್ತು 2019ರಲ್ಲಿ ಶೋಭಾ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಮತ್ತೆ ಇದೇ ಕ್ಷೇತ್ರದಿಂದ ಕಣಕ್ಕಿಳಿಯುವ ಆಸೆಯಿದ್ದು, ಅಂತಿಮವಾಗಿ ವರಿಷ್ಠರ ಅದೇಶಕ್ಕೆ ತಲೆಬಾಗುತ್ತೇನೆ ಎಂದು ಒಂದು ಕಡೆ ಹೇಳಿಕೊಂಡಿದ್ದಾರೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಗೆ ಈ ಬಾರಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಮಾಜಿ ಸಚಿವ ಡಿಎನ್ ಜೀವರಾಜ್, ಪ್ರಮೋದ್ ಮಧ್ವರಾಜ್ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.
ಗೆಲ್ಲುವ ಸಾಮರ್ಥ್ಯ ಇರುವವರಿಗೆ ಮಣೆ
ಮೇಲಾಗಿ ಶೋಭಾ ಅವರು ಕ್ಷೇತ್ರದ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿಲ್ಲ. ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ರವಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನಪ್ಪಿದ್ದು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ. ಈ ಕ್ಷೇತ್ರದ ಅಥವಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ವರಿಷ್ಠರ ಓಲೈಕೆಯಲ್ಲಿ ತೊಡಗಿದ್ದಾರೆ. ಈ ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗೆ ವರಿಷ್ಠರು ಮಣೆ ಹಾಕಲಿದ್ದಾರೆ ಎಂದು ಮುಖಂಡರೊಬ್ಬರು ಹೇಳುತ್ತಾರೆ.
ಸದಾನಂದಗೌಡರ ಕ್ಷೇತ್ರಕ್ಕೆ ಕಣ್ಣಿಟ್ಟಿದ್ದ ಶೋಭಾ
ರವಿ ಮತ್ತು ಶೋಭಾ ಇಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಬೆಂಗಳೂರು ಉತ್ತರ ಮತ್ತು ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಈ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ವಾಡಿಕೆಯಾಗಿದೆ. ಈ ಮಧ್ಯೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಿಎಂ ಡಿವಿ ಸದಾನಂದಗೌಡ ಘೋಷಿಸಿದ್ದರು. ಕೂಡಲೇ ಶೋಭಾ ಮತ್ತು ರವಿ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು.
ಇವರಿಗೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರವೇಶ ನೀಡಬಾರದೆಂದು ಅನೇಕ ಶಾಸಕರು ದುಂಬಾಲು ಬಿದ್ದ ನಂತರ ಸದಾನಂದ ಗೌಡರು ತಾವೇ ಅಖಾಡಕ್ಕಿಳಿಯುವುದಾಗಿ ತಮ್ಮ ಹಿಂದಿನ ನಿರ್ಧಾರವನ್ನು ಹಿಂಪಡೆದಿದ್ದಾರೆ. ಒಟ್ಟಿನಲ್ಲಿ ಎಲ್ಲವೂ ಆಯೋಮಯವಾಗಿದೆ. ಶೋಭಾ ಅವರ ರಾಜಕೀಯ ಭವಿಷ್ಯ ಮತ್ತೆ ಎಲ್ಲಿಂದ ಆರಂಭವಾಗಲಿದೆ ಎಂದು ಕಾದು ನೋಡಬೇಕಿದೆ.