Karnataka Rains: ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಇಂದು ಹಗುರ ಮಳೆ ಸಾಧ್ಯತೆ; ಕೆಲವೆಡೆ ಒಣಹವೆ ಮುಂದುವರಿಕೆ; ಹೀಗಿದೆ ಹವಾಮಾನ ವರದಿ
southern hinterlands Rain: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಅಲ್ಲಲ್ಲಿ ಒಣಹವೆ ಮುಂದುವರಿದಿದೆ. ಇಂದು (ಆಗಸ್ಟ್ 9) ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ಒಣಹವೆ ಮುಂದುವರಿಯಲಿದೆ.
ಬೆಂಗಳೂರು: ಈ ವರ್ಷ ಮುಂಗಾರು ತಡವಾಗಿ ಆರಂಭವಾಗಿದ್ದು, ಒಂದಿಷ್ಟು ದಿನ ಮಳೆಯ ಅಬ್ಬರ ಜೋರಾಗಿತ್ತು. ಆದರೆ ಕಳೆದೊಂದು ವಾರದಿಂದ ಮಳೆಯ ಪ್ರಮಾಣ ಪುನಃ ಕಡಿಮೆಯಾಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪವೂ ಜೋರಾಗಿದೆ. ಕೆಲವೆಡೆ ಒಣಹವೆ ಮುಂದುವರಿದಿದೆ. ಭಾರತೀಯ ಹವಾಮಾನ ಇಲಾಖೆಯ ಕರ್ನಾಟಕ ವಿಭಾಗವಾದ ಐಎಂಡಿ ಬೆಂಗಳೂರು ಪ್ರಕಟಿಸಿದ ವರದಿಯ ಪ್ರಕಾರ ಇಂದು (ಆಗಸ್ಟ್ 9) ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬಿರುಗಾಳಿ ಎಚ್ಚರಿಕೆ ನೀಡಲಾಗಿದೆ.
ಬುಧವಾರದ ಹವಾಮಾನ ವರದಿ
ಐಎಂಡಿ ವರದಿ ಪ್ರಕಾರ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಾವಣಗೆರೆ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ. ಇನ್ನು ಚಿಕ್ಕಮಗಳೂರು, ಹಾಸನ, ಕೊಡುಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ. ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
ನಾಳೆ ಮಳೆ ಬರುವ ಸಾಧ್ಯತೆ ಇದೆಯೇ?
ಗುರುವಾರ (ಆಗಸ್ಟ್ 10) ರಂದು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಹಗುರ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ. ಮಾತ್ರವಲ್ಲ ಈ ಎಲ್ಲಾ ಜಿಲ್ಲೆಗಳಿಗೂ ಬಿರುಗಾಳಿ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಆಗಸ್ಟ್ 11ರವರೆಗೆ ದಕ್ಷಿಣ ಒಳನಾಡಿನಲ್ಲಿ ಗಾಳಿಯ ವೇಗವು ಗಂಟೆಗೆ 30 ರಿಂದ 40 ಕಿಮೀ ಇರಲಿದೆ.
ಆಗಸ್ಟ್ ತಿಂಗಳ ಮೊದಲ ವಾರ ಕಳೆದಿದ್ದು, ಮಳೆಯ ಪ್ರಮಾಣ ಕ್ಷೀಣಿಸಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವೇ ಇದ್ದು, ಮಳೆಯ ಕೊರತೆಯಿಂದ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬೆಳೆಗಳಿಗೆ ಈ ಸಮಯದಲ್ಲಿ ಸಾಕಷ್ಟು ನೀರಿನ ಅವಶ್ಯವಿದ್ದು, ಮಳೆ ಕಾಣದೇ ರೈತರು ಕಂಗಾಲಾಗಿದ್ದಾರೆ. ಕರಾವಳಿ ಭಾಗದಲ್ಲಿ ದಿನದಲ್ಲಿ ಒಂದೆರಡು ಬಾರಿ ಸಾಧಾರಣ ಮಳೆಯಾಗುತ್ತಿದ್ದು, ಉಳಿದಂತೆ ಅಲ್ಲೂ ಮಳೆ ಕೊರತೆ ಕಾಡುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮಳೆಗಾಲದ ವಾತಾವರಣವಿಲ್ಲ. ಹಗಲಿನ ವೇಳೆ ಬಿಸಿಲಿನ ವಾತಾವರಣ ಇರಲಿದ್ದು, ರಾತ್ರಿ ವೇಳೆ ಸೆಖೆಯ ಅನುಭವವಾಗುತ್ತಿದೆ. ಆಗಾಗ ಮೋಡ ಕವಿದ ವಾತಾವರಣವಿದ್ದರೂ ಮಳೆ ಕೊರತೆ ಬೆಂಗಳೂರನ್ನೂ ಕಾಡುತ್ತಿದೆ.