ಕನ್ನಡ ಸುದ್ದಿ  /  Karnataka  /  Today News Karnataka Govt Guidlines On Yuva Nidhi Annabhagya Scheme Congress Guarantee Cm Siddaramaiah Mgb

Yuva Nidhi, Annabhagya: ಯುವನಿಧಿ, ಅನ್ನಭಾಗ್ಯ ಯೋಜನೆಗಳ ಮಾರ್ಗಸೂಚಿ ಪ್ರಕಟ; ನಿರುದ್ಯೋಗ ಭತ್ಯೆ ಯಾರಿಗೆ ಸಿಗಲ್ಲ?

Congress guarantee: ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿವೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್​ ನೀಡಿದ್ದ ಐದು ಗ್ಯಾರಂಟಿಗಳನ್ನು (Congress guarantee) ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ​ ಸರ್ಕಾರ ಈಡೇರಿಸುತ್ತಿದೆ. ಈ ಬಗ್ಗೆ ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಇದೀಗ ಯುವನಿಧಿ (Yuva Nidhi) ಹಾಗೂ ಅನ್ನಭಾಗ್ಯ (Annabhagya) ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿವೆ.

ಯುವನಿಧಿ

2022-23 ರಲ್ಲಿ ತೇರ್ಗಡೆ ಹೊಂದಿದ ವೃತ್ತಿಶಿಕ್ಷಣವೂ ಸೇರಿ ಎಲ್ಲ ಪದವೀಧರರು ನೋಂದಣಿ ಮಾಡಿಕೊಂಡ ದಿನದಿಂದ 24 ತಿಂಗಳ (2 ವರ್ಷ) ವರೆಗೆ ಪ್ರತಿ ತಿಂಗಳು 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿ ನೀಡಲಾಗುವುದು. ಅಷ್ಟರೊಳಗೆ ಉದ್ಯೋಗ ಪಡೆದವರು ಘೋಷಿಸಿಕೊಳ್ಳಬೇಕು. ಉದ್ಯೋಗ ಸಿಕ್ಕರೆ ನಿಧಿ ಸ್ಥಗಿತವಾಗಲಿದೆ. ಯುವಕ, ಯುವತಿ + ತೃತೀಯಲಿಂಗಿಗಳಿಗೂ ಅನ್ವಯ. ಜಾಯಿ, ಧರ್ಮ , ಲಿಂಗ ಬೇಧವಿಲ್ಲದೇ ಸಹಾಯನಿಧಿ ನೀಡಲಾಗುತ್ತದೆ. ಇದಕ್ಕೆ ಅರ್ಜಿ ಹಾಕಬೇಕು ಎಂದು ಸಿದ್ದರಾಮಯ್ಯ ನಿನ್ನೆ (ಜೂನ್​ 2) ತಿಳಿಸಿದ್ದರು.

ಯುವನಿಧಿ ಸಂಬಂಧ ಮಾರ್ಗಸೂಚಿಗಳು

• ಪದವಿ ಅಥವಾ ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ದೊರಕದ ಕನ್ನಡಿಗರು ಮಾತ್ರ ಯುವ ನಿಧಿ ಯೋಜನೆಗೆ ಅರ್ಹರು

• ಎರಡು ವರ್ಷಗಳವರೆಗೆ ಇವರು ನಿರುದ್ಯೋಗ ಭತ್ಯೆ ಪಡೆಯಬಹುದು. 2 ವರ್ಷದೊಳಗೆ ಉದ್ಯೋಗ ಸಿಕ್ಕರೆ ಭತ್ಯೆ ಪಾವತಿ ಸ್ಥಗಿತ

• ಉದ್ಯೋಗ ದೊರಕಿದ ಬಗ್ಗೆ ತಪ್ಪು ಮಾಹಿತಿ ನೀಡಿದರೆ ಅಥವಾ ಉದ್ಯೋಗ ಸಿಕ್ಕಿದೆ ಎಂದು ಘೋಷಣೆ ಮಾಡದಿದ್ದರೆ ದಂಡ

• ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು

• ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಯುವ ನಿಧಿ ಯೋಜನೆ ಭತ್ಯೆ ಪಾವತಿ

• ಪದವಿ ಅಥವಾ ಡಿಪ್ಲೋಮಾ ಬಳಿಕ ಉನ್ನತ ವ್ಯಾಸಂಗ ಮುಂದುವರಿಸಿದರೆ ಭತ್ಯೆ ಇಲ್ಲ

• ಅಪ್ರೆಂಟಿಸ್ ವೇತನ ಪಡೆಯುತ್ತಿರುವವರಿಗೆ ಭತ್ಯೆ ಇಲ್ಲ

• ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ಪಡೆದವರಿಗೆ ಭತ್ಯೆ ಇಲ್ಲ

• ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಹಾಗೂ ಬ್ಯಾಂಕ್​​ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಮಾಡುತ್ತಿರುವವಿಗೂ ಯುವ ನಿಧಿ ಯೋಜನೆಯಡಿ ಭತ್ಯೆ ಸಿಗುವುದಿಲ್ಲ

ಅನ್ನಭಾಗ್ಯ

ಜುಲೈ 1 ರಿಂದ ಬಿಪಿಎಲ್​ ಮತ್ತು ಅಂತ್ಯೋದಯ ಕಾರ್ಡ್​ದಾರರಿಗೆ ‘ಅನ್ನಭಾಗ್ಯ’ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸುತ್ತೇವೆ. ನಾವು 7 ಕೆ.ಜಿ. ಕೊಡುತ್ತಿದ್ದೆವು. ಈಗ ಅದನ್ನು 5 ಕೆ.ಜಿ.ಗೆ ಇಳಿಸಿದ್ದಾರೆ. 10 ಕೆ.ಜಿ. ಆಹಾರಧಾನ್ಯ ಕೊಡುವುದಾಗಿ ನಾವೀಗ ಹೇಳಿದ್ದೆವು. ಈಗಾಗಲೇ ಆಹಾರಧಾನ್ಯ ಸರಬರಾಜಾಗಿದ್ದು, ದಾಸ್ತಾನು ಇಲ್ಲ. ಹೀಗಾಗಿ ಜು.1 ರಿಂದ ಬಿಪಿಎಲ್ + ಅಂತ್ಯೋದಯ ಅನ್ನ ಕಾರ್ಡುದಾರರಿಗೆ ತಲಾ 10 ಕೆ.ಜಿ. ಅಕ್ಕಿ ಕೊಡುತ್ತೇವೆ. ನ್ಯಾಫೆಡ್ ಕೇಂದ್ರ, ಎನ್ ಸಿಸಿಎಫ್ ಎಲ್ಲಿಂದಲಾದರೂ ಸರಿ ತಂದು ಕೊಡುತ್ತೇವೆ ಎಂದು ಸಿಎಂ ನಿನ್ನೆ ತಿಳಿಸಿದ್ದರು.

ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳು

• ಅಂತ್ಯೋದಯ ಪಡಿತರ ಕಾರ್ಡ್​ ಹೊಂದಿರುವ ಕುಟುಂಬಗಳಲ್ಲಿ ಮೂವರು ಸದಸ್ಯರಿದ್ದರೆ ತಿಂಗಳಿಗೆ ಕೇಂದ್ರ ಸರ್ಕಾರ ಈವರೆಗೆ ನೀಡುತ್ತಿದ್ದಂತೆ 35 ಕೆ.ಜಿ. ಆಹಾರಧಾನ್ಯ ಉಚಿತ

• ಅಂತ್ಯೋದಯ ಪಡಿತರ ಕಾರ್ಡ್​ ಹೊಂದಿರುವ ಕುಟುಂಬಗಳಲ್ಲಿ ನಾಲ್ಕು ಜನರಿದ್ದರೆ ತಲಾ 10 ಕೆ.ಜಿ.ಯಂತೆ ಒಟ್ಟು 40 ಕೆ.ಜಿ., ಐವರು ಇದ್ದರೆ ಒಟ್ಟು 50 ಕೆ.ಜಿ. ಪ್ರತಿ ವ್ಯಕ್ತಿಗೆ 10 ಕೆ.ಜಿ.ಯಂತೆ ಆಹಾರಧಾನ್ಯ ನೀಡಲಾಗುವುದು.

• ಬಿಪಿಎಲ್‌ ಕಾರ್ಡ್​ ಹೊಂದಿರುವ ಕುಟುಂಬಗಳಲ್ಲಿ ಪ್ರತಿ ಸದಸ್ಯರಿಗೆ 10 ಕೆ.ಜಿ.ಯಂತೆ ಉಚಿತ ಆಹಾರ ಧಾನ್ಯ

• ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರವು ಈಗಾಗಲೇ ಅಂತ್ಯೋದಯ ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ತಲಾ 35 ಕೆ.ಜಿ. ಹಾಗೂ ಬಿಪಿಎಲ್‌ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ ಐದು ಕೆ.ಜಿ. ಆಹಾರ ಧಾನ್ಯವನ್ನು ಒದಗಿಸುತ್ತಿದೆ. ಹೆಚ್ಚುವರಿ ಆಹಾರ ಧಾನ್ಯದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

IPL_Entry_Point