Tourism News: ಹೋಂಸ್ಟೇ, ರೆಸಾರ್ಟ್, ಹೋಟೆಲ್‍ಗಳ ನೋಂದಣಿ ಮಾಡಿಸಿಕೊಂಡಿಲ್ಲವೇ; ಮಾಲೀಕರ ವಿರುದ್ದ ಪ್ರವಾಸೋದ್ಯಮ ಇಲಾಖೆ ಕ್ರಮದ ಎಚ್ಚರಿಕೆ
Home Stays, Resorts ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು( Karntaka Tourism department) ಹೋಂಸ್ಟೇ, ರೆಸಾರ್ಟ್, ಹೊಟೇಲ್‌ಗಳ ಕಡ್ಡಾಯ ನೋಂದಣಿಗೆ ಸೂಚನೆಗಳನ್ನು ನೀಡಿದೆ.
ಬೆಂಗಳೂರು: ಸರ್ಕಾರದ ಆದೇಶದನ್ವಯ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂ-ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಈ ಸಂಬಂಧ ಹೋಂ-ಸ್ಟೇ ಮಾಲೀಕರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ಬಹಳಷ್ಟು ಹೋಂ-ಸ್ಟೇಗಳು ನೋಂದಣಿಯಾಗಿರುವುದಿಲ್ಲ. ಇದನ್ನು ಆಯಾ ಜಿಲ್ಲಾಡಳಿತಗಳು ಗಂಭೀರವಾಗಿ ಪರಿಗಣಿಸಿದ್ದು, ನೋಂದಣಿಯಾಗದ ಹೋಂ-ಸ್ಟೇಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಸೂಚಿಸಿದೆ. ಹಾಗೆಯೇ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿಗೊಳ್ಳದೆ ನಿಯಮ ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಹೋಂ-ಸ್ಟೇಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಪರವಾನಿಗೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ಮತ್ತು ಪರವಾನಿಗೆ ಅವಧಿಯು 5 ವರ್ಷಗಳಿಗೆ ಮುಕ್ತಾಯಗೊಳ್ಳುತ್ತಿರುವ ಹೋಂ-ಸ್ಟೇಗಳು ಪರವಾನಿಗೆಯನ್ನು ನವೀಕರಿಸುವಂತೆ ತಿಳಿಸಲಾಗಿದೆ.
ಹೋಂ-ಸ್ಟೇಗಳ ನೋಂದಣಿಗಾಗಿ ಪ್ರವಾಸೋದ್ಯಮ ಇಲಾಖೆಯು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಅಂತರ್ಜಾಲ ತಾಣ https://kttf.karnatakatourism.org/login ಮುಖಾಂತರ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೋಂ-ಸ್ಟೇ ಪರಿವೀಕ್ಷಣೆಗಾಗಿ ಅಧಿಕಾರಿಗಳು ಭೇಟಿ ನೀಡಿದಾಗ ಹೋಂ-ಸ್ಟೇ ಪ್ರಮಾಣಪತ್ರ ಅಥವಾ ಹೋಂ-ಸ್ಟೇ ನೋಂದಣಿಗಾಗಿ ಅರ್ಜಿ ಸಲ್ಲಿಸಿರುವ ದಾಖಲಾತಿಯನ್ನು ಹಾಜರುಪಡಿಸುವುದು. ಇಲ್ಲವಾದಲ್ಲಿ ಹೋಂ-ಸ್ಟೇ ಜಾಗದ ಮಾಲೀಕರ ಮೇಲೆ ಕ್ರಮ ಜರುಗಿಸಲಾಗುವುದು.
ಈ ಸಂಬಂಧ ಪ್ರವಾಸೋದ್ಯಮ ಇಲಾಖೆಯ ಆಯಾ ಜಿಲ್ಲೆಗಳ ಉಪನಿರ್ದೇಶಕರು ಇಲ್ಲವೇ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ಈ ಕುರಿತು ಮಾಹಿತಿಯನ್ನು ಪಡೆದುಕೊಂಡು ವಿವರಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ.
ಇವುಗಳಲ್ಲದೇ ಮಾಹಿತಿ ಇಲ್ಲದೆ ಅನಧೀಕೃತವಾಗಿ ನಡೆಸುತ್ತಿರುವಂತಹ ಹೋಂ-ಸ್ಟೇಗಳ ಬಗ್ಗೆ ಸಾರ್ವಜನಿಕರು ದೂರು/ ಮಾಹಿತಿ ಇದ್ದಲ್ಲಿ ಅವುಗಳ ವಿವರಗಳನ್ನು ಪತ್ರ ಮುಖೇನ ಉಪ ನಿರ್ದೇಶಕರ ಕಚೇರಿಗಳಿಗೆ ತಿಳಿಸಬಹುದು ಎಂದು ಸೂಚನೆ ನೀಡಲಾಗಿದೆ.
ಅದರಂತೆ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್, ಟೂರ್ಸ್ ಅಂಡ್ ಟ್ರಾವೆಲ್ ಏಜೆನ್ಸಿ ಹಾಗೂ ಮನರಂಜನಾ ಪಾರ್ಕ್‍ಗಳ ಉದ್ದಿಮೆದಾರರುಗಳು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್ http://kttf.karnatakatourism.org/ ನಲ್ಲಿ ತಮ್ಮ ಸಂಸ್ಥೆಯನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಕೊಡಗು ಜಿಲ್ಲೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಸೂಚಿಸಿದ್ದಾರೆ.
ಪ್ರವಾಸೋದ್ಯಮ ಸೌಲಭ್ಯಗಳ ಕಾಯ್ದೆ
ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ ಸೌಲಭ್ಯ ಕಾಯ್ದೆ, 2015 ರಾಜ್ಯದಲ್ಲಿ ಪ್ರವಾಸೋದ್ಯಮ ವ್ಯಾಪಾರವನ್ನು ಸುಗಮಗೊಳಿಸಲಿದೆ. ಈ ಕಾಯಿದೆಯು ಕರ್ನಾಟಕ ರಾಜ್ಯದಲ್ಲಿ ಪ್ರವಾಸೋದ್ಯಮ ವ್ಯಾಪಾರವನ್ನು ಸುಗಮಗೊಳಿಸಲು ಮತ್ತು ನಿಯಂತ್ರಿಸಲು ಅನುಕೂಲಕರವಾಗಿದೆ. ಈ ಕಾಯಿದೆಯು ಅರ್ಜಿದಾರರಿಗೆ ನೋಂದಾಯಿಸಲು, ನಿಗದಿತ ಪ್ರಾಧಿಕಾರದ ಅನುಮೋದನೆಗಳ ಮೂಲಕ ಪ್ರವಾಸೋದ್ಯಮ ತಾಣಗಳನ್ನು, ಸೇವೆಗಳನ್ನು ಗುರುತಿಸಲು ಸಹಾಯ ಮಾಡಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರವಾಸೋದ್ಯಮ ವ್ಯಾಪಾರ ಸಂಬಂಧಿತ ಚಟುವಟಿಕೆಗಳ ನೋಂದಣಿ, ಮಾನ್ಯತೆ ಮತ್ತು ವರ್ಗೀಕರಣ : ಪ್ರವಾಸೋದ್ಯಮ ವ್ಯಾಪಾರ ಸಂಬಂಧಿತ ಚಟುವಟಿಕೆಗಳ ನೋಂದಣಿ ಮತ್ತು ಮಾನ್ಯತೆಗಾಗಿ ಕೆಟಿಟಿಎಫ್ ಕಾಯ್ದೆ 2015 ರ ಅಧ್ಯಾಯ 3 ಅನ್ನು ಜಾರಿಗೊಳಿಸಲಾಗಿದೆ. ಇದರಡಿ ಪ್ರವಾಸೋದ್ಯಮ ವ್ಯಾಪಾರದ ನೋಂದಣಿ, ಮಾನ್ಯತೆ ಮತ್ತು ವರ್ಗೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಆವಕಾಶವಿದೆ ಎಂದು ತಿಳಿಸಲಾಗಿದೆ.
ಕಾಯ್ಡೆಯಡಿಯೇ ಪ್ರವಾಸೋದ್ಯಮ ವ್ಯಾಪಾರದ ನೋಂದಣಿ, ಮಾನ್ಯತೆ ಮತ್ತು ವರ್ಗೀಕರಣದ ವಿಧಾನ, ನೋಂದಣಿಯ ದಾಖಲೆಗಳನ್ನು ನಿರ್ವಹಿಸುವುದು, ನೋಂದಾಯಿತ ಅಥವಾ ಮಾನ್ಯತೆ ಪಡೆದ ಹೋಟೆಲ್‌ನ ಪ್ರಕಟಣೆ, ನೋಂದಣಿ ಮತ್ತು ಮಾನ್ಯತೆಯನ್ನು ರದ್ದುಪಡಿಸುವುದು, ಪ್ರವಾಸೋದ್ಯಮ ವ್ಯಾಪಾರದ ಮರುವರ್ಗೀಕರಣ, ಗುರುತಿಸುವಿಕೆ ಮತ್ತು ವರ್ಗೀಕರಣದ ನವೀಕರಣಕ್ಕೂ ಅವಕಾಶವಿದೆ ಎಂದು ತಿಳಿಸಲಾಗಿದೆ.
ವಿಭಾಗ