ಹೆಬ್ರಿಯಲ್ಲಿ ಮೇಘಸ್ಫೋಟಕ್ಕೆ ಕೊಚ್ಚಿಹೋದ ಕಾರು, ವೃದ್ಧೆ ಸಾವು; ಪೆರುವಾಜೆ ದೇವಾಲಯ ಜಲಾವೃತ
ಕನ್ನಡ ಸುದ್ದಿ  /  ಕರ್ನಾಟಕ  /  ಹೆಬ್ರಿಯಲ್ಲಿ ಮೇಘಸ್ಫೋಟಕ್ಕೆ ಕೊಚ್ಚಿಹೋದ ಕಾರು, ವೃದ್ಧೆ ಸಾವು; ಪೆರುವಾಜೆ ದೇವಾಲಯ ಜಲಾವೃತ

ಹೆಬ್ರಿಯಲ್ಲಿ ಮೇಘಸ್ಫೋಟಕ್ಕೆ ಕೊಚ್ಚಿಹೋದ ಕಾರು, ವೃದ್ಧೆ ಸಾವು; ಪೆರುವಾಜೆ ದೇವಾಲಯ ಜಲಾವೃತ

ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟಗೊಂಡು ಭಾರಿ ಪ್ರವಾಹ ಸೃಷ್ಟಿಯಾಗಿದೆ. ಇದರಿಂದಾಗಿ ಕಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಅತ್ತ, ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪೆರುವಾಜೆ ಜಲದುರ್ಗಾದೇವಿ ದೇವಾಲಯ ಅಂಗಣ ಜಲಾವೃತಗೊಂಡಿದೆ.

ಹೆಬ್ರಿಯಲ್ಲಿ ಮೇಘಸ್ಫೋಟಕ್ಕೆ ಕೊಚ್ಚಿಹೋದ ಕಾರು; ಪೆರುವಾಜೆ ದೇವಾಲಯ ಜಲಾವೃತ
ಹೆಬ್ರಿಯಲ್ಲಿ ಮೇಘಸ್ಫೋಟಕ್ಕೆ ಕೊಚ್ಚಿಹೋದ ಕಾರು; ಪೆರುವಾಜೆ ದೇವಾಲಯ ಜಲಾವೃತ

ಉಡುಪಿ/ದಕ್ಷಿಣ ಕನ್ನಡ: ಭಾರಿ ಮಳೆಗೆ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬಲ್ಲಾಡಿ ಎಂಬಲ್ಲಿ ಹಠಾತ್ ಜಲ ಪ್ರವಾಹ ಸೃಷ್ಟಿಯಾಗಿದೆ. ಅಕ್ಟೋಬರ್‌ 7ರ ಭಾನುವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ಮನೆಗಳು ಹಾಗೂ ಕೃಷಿ ಜಮೀನಿಗೆ ನೀರು ನುಗ್ಗಿ ಭಾರಿ ಆವಾಂತರ ಸೃಷ್ಟಿಸಿದೆ. ಮೇಘಸ್ಫೋಟದಿಂದಾಗಿ ಜನಜೀವನ ಅಸ್ತವ್ಯಸ್ತವಾಯ್ತು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಭಾರಿ ಮೇಘ ಸ್ಫೋಟದಿಂದ ಬಲ್ಲಾಡಿಯ ಈಶ್ವರನಗರ ಸಮೀಪದ ಬಮ್ಮಗುಂಡಿ ಹೊಳೆ ಉಕ್ಕಿ ಹರಿದ ಪರಿಣಾಮವಾಗಿ ಜಲಪ್ರವಾಹ ನೇರವಾಗಿ ಮನೆಗೆ ನುಗ್ಗಿದೆ. ನೆರೆಯಿಂದ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಕಾರು ಹಾಗೂ ಎರಡು ಬೈಕ್‌ಗಳು ಕೊಚ್ಚಿಕೊಂಡು ಹೋಗಿವೆ. ಕೇರಳ ಮೂಲದ ವ್ಯಕ್ತಿಗೆ ಸೇರಿದ್ದ ರಬ್ಬರ್ ತೋಟಕ್ಕೆ ನುಗ್ಗಿದ ನೀರು ಅಲ್ಲಿಂದ ಮನೆಗೆ ನುಗ್ಗಿ ಅಂಗಳದಲ್ಲಿ ನಿಲ್ಲಿಸಿದ್ದ ಆಲ್ಟೋ ಕಾರು ಹಾಗೂ ಎರಡು ಬೈಕ್‌ಗಳನ್ನು ಹೊತ್ತೊಯ್ದಿದೆ. ಮನೆಯವರು ಹಾಗೂ ಗ್ರಾಮಸ್ಥರ ಕಾರು ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋ ಮಾಡಿದ್ದು ಪ್ರವಾಹದ ಭೀಕರತೆಗೆ ಸಾಕ್ಷಿಯಾಗಿದೆ. ಇದಲ್ಲದೆ ಹೊಸಕಂಬ್ಳ ಕೃಷ್ಣ ಪೂಜಾರಿ ಎಂಬವರ ಮನೆಯಲ್ಲಿ ನಿಲ್ಲಿಸಿದ್ದ ಓಮ್ನಿ ಕಾರು ಕೂಡಾ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ಕಬ್ಬಿನಾಲೆ ಭಾಗದ ಪರ್ವತ ಸಾಲಿನಲ್ಲಿ ಮೇಘ ಸ್ಫೋಟವಾಗಿ ಈ ಭೀಕರ ಪ್ರವಾಹ ಸೃಷ್ಟಿಯಾಗಿದೆ. ಜೀವಮಾನದಲ್ಲಿ ಇಂತಹ ಭೀಕರ ಪ್ರವಾಹ ನಾವು ನೋಡಿಲ್ಲವೆಂದು ಹಿರಿಯ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ‌ದ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಪೆರುವಾಜೆ ಜಲದುರ್ಗಾದೇವಿ ದೇವಾಲಯ ಜಲಾವೃತ; ನವರಾತ್ರಿ ಸಂಭ್ರಮದಲ್ಲೇ ದೇವಿಗೆ ಜಲಾಭಿಷೇಕ

ಭಾನುವಾರ ಸಂಜೆ ಸುರಿದ ಭಾರಿ ಮಳೆಯಿಂದ ನವರಾತ್ರಿ ಉತ್ಸವದ ಸಂಭ್ರಮದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ದ ಪೆರುವಾಜೆ ಜಲದುರ್ಗಾದೇವಿ ದೇವಾಲಯ ಅಂಗಣ, ಗರ್ಭಗುಡಿ ಜಲಾವೃತಗೊಂಡಿತು.

ಬೆಳ್ಳಾರೆಯ ಹೌರಿ ಹೊಳೆ ತುಂಬಿ ಹರಿದ ಕಾರಣ ದೇವಾಲಯದ ಅಂಗಣಕ್ಕೆ ಪ್ರವೇಶಿಸಿದ ನೀರು ಆ ಬಳಿಕ ಗರ್ಭಗುಡಿಯ ಸುತ್ತ ಆವರಿಸಿಕೊಂಡಿತ್ತು. ಕೆಲ ತಾಸಿನ ಬಳಿಕ ನೀರಿನ ಮಟ್ಟ ಇಳಿಕೆ ಕಂಡಿತು. ಸ್ವಚ್ಛತಾ ಕಾರ್ಯದ ಬಳಿಕ ನವರಾತ್ರಿ ಉತ್ಸವದ ಐದನೇ ದಿನದ ಕಾರ್ಯಕ್ರಮ ನಡೆಯಿತು. ಇಲ್ಲಿ ವರ್ಷಕೊಮ್ಮೆ ಜಲದುರ್ಗಾದೇವಿ ದೇವಾಲಯ ಜಲಾವೃತವಾಗುವುದು ವಾಡಿಕೆ. ಭಕ್ತರು ಈ ಅಪೂರ್ವ ಕ್ಷಣ ಕಣ್ತುಂಬಿಕೊಂಡರು.

ಮೃತದೇಹ ಪತ್ತೆ

ಮುದ್ರಾಡಿ ಗ್ರಾಮದ ಕಬ್ಬಿನಾಲೆ ಸಮೀಪದ ಬಲ್ಲಾಡಿ ಎಂಬಲ್ಲಿ ನಿನ್ನೆ ಸಂಭವಿಸಿದ ಭೀಕರ ಮೇಘಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ ಕಬ್ಬಿನಾಲೆಯ ವೃದ್ದೆಯೊಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದು ಅವರ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ. ಚಂದ್ರಾಗೌಡ್ತಿ (85) ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು.

ಕಬ್ಬಿನಾಲೆ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಬಮ್ಮಗುಂಡಿ ಹೊಳೆಯು ಉಕ್ಕಿ ಹರಿದು ಬಲ್ಲಾಡಿ ಈಶ್ವರನಗರದ ಆಸುಪಾಸಿನ ನಾಲ್ಕೈದು ಮನೆಗಳಿಗೆ ಹಾಗೂ ಅಡಿಕೆ ತೋಟ, ರಬ್ಬರ್ ತೋಟ ಹಾಗೂ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಈ ಸಂದರ್ಭದಲ್ಲಿ ಮನೆಯಂಗಳದಲ್ಲಿ ನಿಲ್ಲಿಸಿದ್ದ 2 ಕಾರು ಮತ್ತು ಬೈಕ್ ಪ್ರವಾಹದ ಪಾಲಾಗಿದೆ.

Whats_app_banner