Anna Bhagya: ಅಕ್ಕಿ ಸರಬರಾಜು ಒಪ್ಪಂದ ರದ್ದುಗೊಳಿಸಿದ ಕೇಂದ್ರ; ಅನ್ನಭಾಗ್ಯ ಯೋಜನೆ ವಿಫಲಗೊಳಿಸಲು ಸಂಚು ಎಂದು ಸಿದ್ದರಾಮಯ್ಯ ಕಿಡಿ
Anna Bhagya scheme: ಎಫ್‌ಸಿಐ ಅಧಿಕಾರಿಗಳು ಏಳು ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ ಎಂದು ಹೇಳಿದ್ದರು. ಆದರೆ ಈಗ ಕೇಂದ್ರದ ಸೂಚನೆ ಮೇರೆಗೆ ಹಿಂದೆ ಸರಿದಿದ್ದಾರೆ. ಬಡವರಿಗೆ ಅನುಕೂಲವಾಗುವ ಯೋಜನೆ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ಭಯದಿಂದ ಅಕ್ಕಿ ನೀಡದಿರಲು ಕೇಂದ್ರ ಈ ನಿರ್ಧಾರ ಕೈಗೊಂಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಬೆಂಗಳೂರು: ರಾಜ್ಯಗಳೊಂದಿಗಿನ ಅಕ್ಕಿ ಸರಬರಾಜು ಒಪ್ಪಂದವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ, ಜನರಿಗೆ ಹೆಚ್ಚುವರಿ ಅಕ್ಕಿಯನ್ನು ನೀಡುವ ಅನ್ನಭಾಗ್ಯ ಯೋಜನೆಯನ್ನು (Anna Bhagya scheme) ಜಾರಿಗೊಳಿಸಲು ಕೇಂದ್ರ ಸರ್ಕಾರ ಸಂಚು ರೂಪಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah), ದಾಸ್ತಾನು ಸಂಗ್ರಹ ಇದ್ದರೂ ಕೂಡ ಅನ್ನ ಭಾಗ್ಯ ಯೋಜನೆ ಜಾರಿಗೆ ತರಲು ಅಗತ್ಯವಿರುವ ಅಕ್ಕಿ ಸಿಗದಂತೆ ಕೇಂದ್ರ ಸರ್ಕಾರ ಮಾಡುತ್ತಿದೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಬಡವರಿಗೆ ಅನುಕೂಲ ಮಾಡಿಕೊಡುವ ಯೋಜನೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿರುವುದು ಬಡವರ ವಿರೋಧಿ ನೀತಿ ಎಂದರು.
ಅನ್ನಭಾಗ್ಯ ಯೋಜನೆಗಾಗಿ ತಿಂಗಳಿಗೆ 840 ಕೋಟಿ ಹಾಗೂ ಪ್ರತಿ ವರ್ಷ 10,092 ಕೋಟಿ ರೂ. ವೆಚ್ಚ ಆಗಲಿದೆ. ಹೆಚ್ಚುವರಿ ಅಕ್ಕಿ ವಿತರಣೆ ಬಗ್ಗೆ ಎಫ್‌ಸಿಐ ಡೆಪ್ಯುಟಿ ಮ್ಯಾನೇಜರ್ ಜೊತೆ ಚರ್ಚೆ ಮಾಡಿದ್ದೆ. ಜೂನ್ 12 ರಂದು ಪತ್ರ ಬರೆದು ಅವರು ಹೆಚ್ಚುವರಿ ಅಕ್ಕಿ ಪೂರೈಕೆ ಮಾಡುವುದಾಗಿ ಹೇಳಿದ್ದರು. ಆದರೆ ಜೂನ್ 13 ರಂದು ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ದೇಶದ ಯಾವುದೇ ರಾಜ್ಯಗಳಿಗೆ ಓಪೆನ್ ಮಾರ್ಕೆಟ್ ಸೇಲ್ಸ್ ಸ್ಕೀಮ್ ಡೊಮೆಸ್ಟಿಕ್ (ಒಎಂಎಸ್‌ಎಸ್) ಅಡಿಯಲ್ಲಿ ಅಕ್ಕಿ ಮತ್ತು ಗೋಧಿಗಳನ್ನು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಎಫ್‌ಸಿಐ ಅಧಿಕಾರಿಗಳು ತಮ್ಮ ಬಳಿ ಏಳು ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ ಎಂದು ಹೇಳಿದ್ದರು, ಆದರೆ ಈಗ ಕೇಂದ್ರದ ಸೂಚನೆ ಮೇರೆಗೆ ಹಿಂದೆ ಸರಿದಿದ್ದಾರೆ. ಬಡವರಿಗೆ ಅನುಕೂಲವಾಗುವ ಯೋಜನೆ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ಭಯದಿಂದ ಕರ್ನಾಟಕ ಸರ್ಕಾರಕ್ಕೆ ಅಕ್ಕಿ ನೀಡದಿರಲು ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದರು.
ನಮ್ಮ ಸರ್ಕಾರವು ಇತರ ಮೂಲಗಳಿಂದ ಮತ್ತು ಅಕ್ಕಿ ಉತ್ಪಾದಿಸುವ ರಾಜ್ಯಗಳಿಂದ ಅಕ್ಕಿಯನ್ನು ಪಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಭತ್ತ ಬೆಳೆಯುವ ರಾಜ್ಯಗಳಾದ ಛತ್ತೀಸ್‌ಗಢ, ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸಿದ್ದೇನೆ. ಸ್ವತಃ ಅಲ್ಲಿನ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದು, ನಾಳೆ ತೆಲಂಗಾಣಕ್ಕೆ ತೆರಳಿ ಅಲ್ಲಿಂದ ಅಕ್ಕಿ ತರಲು ಸಚಿವ ಕೆ.ಎಚ್.ಮುನಿಯಪ್ಪ ತೆರಳುತ್ತಿದ್ದಾರೆ. ಪಂಜಾಬ್ ಅನ್ನು ಸಹ ಸಂಪರ್ಕಿಸಲಾಗಿದೆ, ಆದರೆ ಅವರು ಈಗ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ. ನಾವು ಅಕ್ಕಿ ನೀಡಲು ನಮ್ಮ ಪ್ರಯತ್ನ ಮಾಡುತ್ತೇವೆ, ಅಕಸ್ಮಾತ್ ವಿಳಂಬವಾದರೆ ಅದಕ್ಕೆ ಭಾರತ ಸರ್ಕಾರವೇ ಹೊಣೆ ಎಂದರು.
ಈಗಾಗಲೇ ಕೇಂದ್ರ ಸರ್ಕಾರ ಬಡವರಿಗೆ 5 ಕೆಜಿ ಅಕ್ಕಿ ನೀಡುತ್ತಿದೆ. ಇದಕ್ಕೆ ಮತ್ತೈದು ಕೆಜಿ ಅಕ್ಕಿ ಸೇರಿಸಿ, ವಿಧಾನಸಭೆ ಚುನಾವಣೆ ವೇಳೆ ಪ್ರತಿ ಮನೆಯ ಸದಸ್ಯರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಇದಕ್ಕೆ ಅನ್ನಭಾಗ್ಯ ಯೋಜನೆ ಎಂದು ಹೆಸರಿಟ್ಟಿದೆ. ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಮಾಡುವುದಾಗಿ ತಿಳಿಸಿತ್ತು. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದವರು ಅಕ್ಕಿ ಪಡೆಯಲು ಅರ್ಹರು ಎಂದು ತಿಳಿಸಿತ್ತು. ಇದಕ್ಕಾಗಿಯೇ ಭಾರತೀಯ ಆಹಾರ ನಿಗಮ(ಎಫ್‌ಸಿಐ) ಜೊತೆ ಒಪ್ಪಂದ ಕೂಡ ಮಾಡಿಕೊಂಡಿತ್ತು.