ಕನ್ನಡ ಸುದ್ದಿ  /  Karnataka  /  Uttara Kannada News Rumors Of Chinese Boat Raoming In Uttara Kannada Coast Created Anxiety Investigation Going On Hsm

ಆತಂಕ ಸೃಷ್ಟಿಸಿದ ಉತ್ತರ ಕನ್ನಡ ಕಡಲ ತೀರದಲ್ಲಿ ಚೀನಾ ಬೋಟ್ ಸಂಚಾರ ವದಂತಿ!

Uttara Kannada News: BVKY5 ಎಂಬ ಹೆಸರಿನ ಚೀನಾ ಬೋಟ್ ಒಂದು ಮೀನುಗಾರಿಕೆ ಮಾಡುತ್ತಿದೆ ಎಂಬ ವಿಚಾರವನ್ನು ಹೊನ್ನಾವರದ ಮೀನುಗಾರರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. (ವರದಿ: ಹರೀಶ ಮಾಂಬಾಡಿ)

ಉತ್ತರ ಕನ್ನಡ ಕಡಲ ತೀರದಲ್ಲಿ ಚೀನಾ ಬೋಟ್ ಸಂಚಾರ ವದಂತಿ (ಸಾಂದರ್ಭಿಕ ಚಿತ್ರ)
ಉತ್ತರ ಕನ್ನಡ ಕಡಲ ತೀರದಲ್ಲಿ ಚೀನಾ ಬೋಟ್ ಸಂಚಾರ ವದಂತಿ (ಸಾಂದರ್ಭಿಕ ಚಿತ್ರ)

ಕಾರವಾರ: ಚೀನಾದ ಬೋಟ್ ಒಂದು ಉತ್ತರ ಕನ್ನಡ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಮೀನುಗಾರಿಕೆ ಮಾಡಿಕೊಂಡಿದೆ ಎಂಬ ವಿಚಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ. ಈ ವಿಷಯವನ್ನು ಯಾವುದೇ ಅಧಿಕಾರಿಗಳು, ಪೊಲೀಸರು ಖಚಿತಪಡಿಸಿಲ್ಲ. ಕೇವಲ ಓರ್ವ ಮೀನುಗಾರ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟ ವಿಚಾರವೀಗ ಆತಂಕ ಸೃಷ್ಟಿಸಿದೆ.

BVKY5 ಎಂಬ ಹೆಸರಿನ ಬೋಟ್ ಒಂದು ಮೀನುಗಾರಿಕೆ ಮಾಡುತ್ತಿದೆ ಎಂಬ ವಿಚಾರವನ್ನು ಹೊನ್ನಾವರದ ಮೀನುಗಾರರೊಬ್ಬರು ಸೋಶಿಯಲ್ ಮೀಡಿಯದಲ್ಲಿ ಹಂಚಿಕೊಂಡಿದ್ದು, ಈ ಬೋಟ್ ಚೀನಾದ್ದೇ ಅಥವಾ ಬೇರಾವುದೇ ದೇಶದ್ದೇ ಅಥವಾ ನಿಜವಾಗಲೂ ಈ ಬೋಟ್ ಇಲ್ಲಿಗೆ ಬಂದಿತ್ತೇ ಎಂಬ ಕುರಿತು ತನಿಖೆಯನ್ನು ಮಾಡಲಾಗುತ್ತಿದೆ.

ಭಾರತದ ಆಳ ಸಮುದ್ರ ಪ್ರದೇಶದಲ್ಲಿ ಚೀನಾ ಮೀನುಗಾರಿಕೆ ಬೋಟ್ ಕಂಡಿರುವುದಾಗಿ ವಿಡಿಯೋ ಮಾಡಿಕೊಂಡಿರುವ ಹೊನ್ನಾವರದ ಪರ್ಶಿಯನ್ ಬೋಟ್ ನ ಕಾರ್ಮಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಕರಾವಳಿ ಕಾವಲು ಪಡೆ ಜಾಗೃತವಾಗಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದೆ.

ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆ ಇದೆ. ಅಂತಾರಾಷ್ಟ್ರೀಯ ನಿಯಮ ಉಲ್ಲಂಘಿಸಿ ಈ ಬೋಟ್ ಇಲ್ಲಿಗೆ ಬಂದಿತೇ ಎಂಬ ಕುರಿತು ಸಂಶಯವನ್ನು ಇದು ಹುಟ್ಟುಹಾಕಿದೆ. ನೌಕಾದಳ ಕೋಸ್ಟ್ ಗಾರ್ಡ್ ಗಳ ಕಣ್ಣು ತಪ್ಪಿಸಿ ಒಳ ಬಂದಿತೇ ಎಂಬ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಬೋಟ್ ಅನ್ನು ಗೂಢಚರ್ಯೆಗೆ ಬಳಸಾಗುತ್ತಿತ್ತೇ ಎಂಬ ವಿಚಾರದ ಕುರಿತು ಎದ್ದಿರುವ ಅನುಮಾನವೂ ತನಿಖೆಯಿಂದ ಬೆಳಕಿಗತೆ ಬರಬೇಕಿದೆ.

ವಿಷಯವೇನು?

ಜನವರಿ 30ರಂದು ಹೊನ್ನಾವರದಿಂದ ಹೊರಟ ಪರ್ಶಿಯನ್ ಬೋಟ್ ಮೀನುಗಾರಿಕೆಗೆ 200 ನಾಟಿಕಲ್ ಮೈಲು ದೂರ ದಾಟಿ, 500 ನಾಟಿಕಲ್ ಮೈಲು ತಲುಪಿತ್ತು. ಇದೇ ವೇಳೆ ಸಮುದ್ರದಲ್ಲಿ ಫೆ.7ರಂದು ಚೀನಾದ ಅತ್ಯಾಧುನಿಕ ಯಾಂತ್ರಿಕ ಆಳ ಸಮುದ್ರ ಮೀನುಗಾರಿಕೆ ಬೋಟ್ ಮೀನುಗಾರಿಕೆಯಲ್ಲಿ ನಿರತವಾಗಿತ್ತು ಎಂದು ಹೇಳಲಾಗಿದ್ದು, ಅದನ್ನು ವಿಡಿಯೋ ಮಾಡಿಕೊಂಡ ಹೊನ್ನಾವರದ ಮೀನುಗಾರ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಗಿ ಹೇಳಲಾಗಿದೆ.

ಈ ಮಾಹಿತಿ ಅರಿತ ಕರಾವಳಿ ಕಾವಲು ಪಡೆ, 18 ನಾಟಿಕಲ್ ಮೈಲಿ ವರೆಗೆ ಚೀನಾ ಬೋಟ್ ಗೆ ಹುಡುಕಾಟ ನಡೆಸಿದ್ದು, ಬಳಿಕ ಸೀಬರ್ಡ್ ನೌಕಾನೆಲೆ ಸಿಬಂದಿ ಶೋಧ ಕಾರ್ಯ ನಡೆಸಿದರು. ಆದರೆ ಯಾವುದೇ ಅನುಮಾನಾಸ್ಪದ ಚೀನಾ ಬೋಟ್ ಭಾರತದ ಸಮುದ್ರ ಗಡಿ ಪ್ರವೇಶಿಸಿಲ್ಲ ಎನ್ನಲಾಗಿದ್ದು, ಇದೀಗ ವಿಡಿಯೋ ಮಾಡಿದಾತನನ್ನೂ ಕರಾವಳಿ ಕಾವಲು ಪಡೆ ವಿಚಾರಣೆ ನಡೆಸಿದೆ. ಕೆಲ ದಿನಗಳ ಹಿಂದೆ ಕುಮಟಾ ಬಳಿಯ ಆಳಸಮುದ್ರದಲ್ಲಿ ಚೀನಾ ಬೋಟ್ ಬಂದಿದೆ ಎಂಬ ವದಂತಿ ಇತ್ತು. ಆಳ ಕಡಲಲ್ಲಿ ಕದಂಬ ನೌಕಾಪಡೆ ಯುದ್ಧನೌಕೆಗಳು ಕಾರವಾರದಿಂದ ನೇತ್ರಾಣಿವರೆಗೆ ಆಳ ಸಮುದ್ರದಲ್ಲಿ ಗಸ್ತು ತಿರುಗುತ್ತಿರುವ ಕಾರಣ, ಇಲ್ಲಿಗೆ ಚೀನಾ ಬೋಟ್ ಬಂದಿರುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗಿದೆ.

ಆದರೆ ಬಿವಿಕೆವೈ5 ಬೋಟ್ ಚೀನಾದ ಪುಝುವಾ ಬಂದರಿನಲ್ಲಿ ನೋಂದಣಿ ಆಗಿರುವುದು ಎನ್ನಲಾಗಿದ್ದು, ಮೀನುಗಾರಿಕಾ ಬೋಟ್​​ಗಳು ಭಾರತದ ಗಡಿದಾಟಿ ಬಂದವೇ ಎಂಬ ಕುರಿತು ತನಿಖೆ ನಡೆಯುತ್ತಿದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

ವಿಭಾಗ